More

    ಇಹಲೋಕದ ತಿರುಗಾಟ ಮುಗಿಸಿದ ರಂಗ ಮಾಂತ್ರಿಕ

    ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ — ಕರಾವಳಿಯ ಕೋಗಿಲೆ ನಿಧನಕ್ಕೆ ಯಕ್ಷ ಪ್ರೇಮಿಗಳ ಕಂಬನಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಕರಾವಳಿಯ ಗಾನ ಕೋಗಿಲೆ ಖ್ಯಾತಿಯ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಅನಾರೋಗ್ಯದಿಂದಾಗಿ ಗುರುವಾರ ನಸುಕಿನಲ್ಲಿ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ವಿಧಿವಶರಾಗಿದ್ದು, ಅವರಿನ್ನು ಶಾಶ್ವತ ನೆನಪು ಮಾತ್ರ.

    ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ ಧಾರೇಶ್ವರ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರದಲ್ಲಿ ನಡೆದಿದ್ದು, ಅಪಾರ ಅಭಿಮಾನಿಗಳು ಸೇರಿದ್ದರು.

    ಕರಾವಳಿಯ ಕೋಗಿಲೆ

    ಬಡಗು ತಿಟ್ಟಿನ ಯಕ್ಷಗಾನ ಮೇಳಗಳಲ್ಲಿ 47 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು, ಪೆರ್ಡೂರು ಮೇಳದಲ್ಲಿ 28 ವರ್ಷ ಪ್ರಮುಖ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಆರಂಭಿಸಿದ್ದು, ಹಿರೇ ಮಹಾಲಿಂಗೇಶ್ವರ ಮೇಳ ಮತ್ತು ಶಿರಸಿ ಮೇಳದಲ್ಲೂ ಭಾಗವತರಾಗಿದ್ದರು. ನಂತರ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಸೇರಿ ಉತ್ತುಂಗಕ್ಕೇರಿದ್ದರಲ್ಲದೆ, ಯಕ್ಷಗಾನದ ಕೋಗಿಲೆ ಎಂದೇ ಖ್ಯಾತರಾಗಿದ್ದರು. ಸಂಗೀತವನ್ನೂ ಅಭ್ಯಾಸ ಮಾಡಿದ್ದ ಅವರು ಕಾರ್ಯಕ್ರಮವನ್ನೂ ನೀಡುತ್ತಿದ್ದರು.

    ಹೊಸ ರಾಗಗಳ ಪ್ರಯೋಗ

    400ಕ್ಕೂ ಹೆಚ್ಚು ಯಕ್ಷಗಾನ ಪದ್ಯಗಳ ಕ್ಯಾಸೆಟ್​ಗಳಿಗೆ ಧ್ವನಿಯಾಗಿದ್ದ ಅವರು, 300ಕ್ಕೂ ಅಧಿಕ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಪ್ರಸಂಗ ನಿರ್ದೇಶನ ಮಾಡಿದ್ದರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳ ಪ್ರಯೋಗ ಮಾಡಿ ಯಶಸ್ವಿಯೂ ಆಗಿದ್ದರು. ತಮ್ಮ ಅಪ್ರತಿಮ ಕಂಚಿನ ಕಂಠದ ಮೂಲಕವೇ ಹೆಸರು ಮಾಡಿದ್ದ ಅವರು, ಯಕ್ಷಗಾನ ಪ್ರೇಮಿಗಳ ಮನ ಗೆದ್ದಿದ್ದರು. ಚಿಟ್ಟಾಣಿ ಪ್ರಶಸ್ತಿ, ಉಪ್ಪೂರು ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನಾರಗಿದ್ದರು.

    ಹಾಡುವಿಕೆಯಲ್ಲಿ ವಿಶೇಷತೆ

    ಪುರಂದರದಾಸ, ಕನಕದಾಸ, ಬಸವಣ್ಣ, ಚನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆ ಅವರ ಹಾಡುಗಳನ್ನೂ ಯಕ್ಷಗಾನದ ಹಾಡುಗಳಾಗಿ ಧಾರೇಶ್ವರರ ಕಂಠದಲ್ಲಿ ಹೊರಹೊಮ್ಮಿತ್ತು. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ಹೀಗೆ ಅವರು ನಿರ್ದೇಶಿಸಿದ ಎಲ್ಲ ಯಕ್ಷಗಾನ ಪ್ರಸಂಗಗಳೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

    ಭಾಗವತಿಕೆಗೆ ತಾರಾ ಮೌಲ್ಯ

    ಸಜ್ಜನ, ಸದ್ಗುಣಿ, ಮಿತಭಾಷಿಯಾಗಿದ್ದ ಧಾರೇಶ್ವರರು ಯಕ್ಷಗಾನಕ್ಕೆ ಕಾಳಿಂಗ ನಾವಡರ ಅನಂತರ ಭಾಗವತಿಕೆಗೆ ತಾರಾ ಮೌಲ್ಯ ತಂದಿದ್ದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ “ರಂಗಮಾಂತ್ರಿಕ’ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಅಪಾರ ಅಭಿಮಾನಿಗಳು, ಯಕ್ಷಗಾನ ಕಲಾವಿದರು ಕಂಬನಿ ಮಿಡಿದಿದ್ದಾರೆ.

    ಕಂಚಿನ ಕಂಠದ ಸುಮಧುರ ಗಾಯಕ

    ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 1957ರ ಸೆಪ್ಟೆಂಬರ್​ 5ರಂದು ಜನಿಸಿದ್ದ ಧಾರೇಶ್ವರ್​ ಅವರು, ಬಳಿಕ ಗೋಕರ್ಣದಲ್ಲಿಯೇ ಇಲೆಕ್ಟ್ರಿಕ್​ ಅಂಗಡಿ ಹಾಕಿದ್ದರು. ಭಾಗವತರಾಗುವುದಕ್ಕೂ ಪೂರ್ವದಲ್ಲಿ ಅವರು, ಯಕ್ಷಗಾನ ಮೇಳಕ್ಕೆ ಲೈಟಿಂಗ್​ ವ್ಯವಸ್ಥೆ ಮಾಡಿಕೊಡುವ ಕೆಲಸಕ್ಕೆ ಸೇರಿದ್ದರು. ಬಳಿಕ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ಎಂ.ನಾರಣಪ್ಪ ಉಪ್ಪೂರು ಅವರ ಶಿಷ್ಯರಾಗಿ, ರಂಗಸ್ಥಳದಲ್ಲಿ ಉನ್ನತ ಸ್ಥಾನಕ್ಕೆ ಏರಿದರು. ಪೆರ್ಡೂರು ಮೇಳ ಬಿಟ್ಟು, ಹತ್ತು ವರ್ಷದ ಬಳಿಕವೂ ಅನಿವಾರ್ಯ ಸಂದರ್ಭದಲ್ಲಿ ಮತ್ತೆ ಅದೇ ಮೇಳಕ್ಕೆ ಸೇರಿ ಒಂದು ವರ್ಷ ತಿರುಗಾಟ ಮಾಡಿದ್ದರು. ‘ಧಾರೇಶ್ವರ ಯಕ್ಷ ಬಳಗ’ದ ಮೂಲಕ ಯಕ್ಷಗಾನ ಸಂಯೋಜಿಸಿ, ಕಲಾ ಸೇವೆ ಮಾಡಿ ಕಲಾವಿದರ ಮನ ಗೆದ್ದಿದ್ದರು.

    ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆಯುವ ಅವರು, ಕಾಳಿಂಗ ನಾವಡ ಅವರ ಅಗಲುವಿಕೆಯ ಬಳಿಕ ಉಂಟಾಗಿದ್ದ ನಿರ್ವಾತ ತುಂಬಬಲ್ಲರು ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದು ಇತಿಹಾಸ. ಸುಬ್ರಹ್ಮಣ್ಯ ಅವರೊಂದಿಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಶಕಗಳ ಕಾಲ ‘ಧಾರೇಶ್ವರ ಯಕ್ಷ ಅಷ್ಟಾಹ’ ನಡೆಸಿದ ಸಂತ್ರಪ್ತಿ ಇದೆ. ಅವರಿಂದ ಯಕ್ಷಗಾನ ಲೋಕಕ್ಕೆ ಇನ್ನಷ್ಟು ಸೇವೆ, ಕೊಡುಗೆ ಹರಿದುಬರುವ ಸಂದರ್ಭದಲ್ಲಿಯೇ ಅವರ ಹಠಾತ್​ ಅಗಲುವಿಕೆ ನಮಗೂ, ಯಕ್ಷ ಪ್ರೇಮಿಗಳಿಗೂ ಅಪಾರ ನೋವು ತಂದಿದೆ.

    ಡಾ.ತಲ್ಲೂರು ಶಿವರಾಮ ಶೆಟ್ಟಿ.
    ಅಧ್ಯಕ್ಷ, ಕರ್ನಾಟಕ ಯಕ್ಷಗಾನ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts