More

    ಗ್ರಾಮದೇವತೆಗೆ ಭಕ್ತರ ಉಘೇ

    ಯಡ್ರಾಮಿ: ಪಟ್ಟಣದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ಅಸಂಖ್ಯಾತ ಭಕ್ತರು ದೇವಿಗೆ ಭಕ್ತಿಯಿಂದ ಉಘೇ ಎಂದು ಆಶೀರ್ವಾದ ಪಡೆದರು.

    ಗುರುವಾರ ಸಂಜೆ ೭ಕ್ಕೆ ಹನುಮಾನ ಮಂದಿರದಿಂದ ಗ್ರಾಮ ದೇವತೆ ದೇವಸ್ಥಾನಕ್ಕೆ ದೇವಿಯನ್ನು ಕರೆತರಲಾಯಿತು. ಬಳಿಕ ಅಲಂಕಾರಗೊಂಡ ಮಹಾನ್ ಮಾತೆಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ ೧೨.೨೦ಕ್ಕೆ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುರಪುರದ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಅದ್ದೂರಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಮಂಗಲೆಯರು ಕಳಸ ಹೊತ್ತು ರಥದ ಮುಂದೆ ಹೆಜ್ಜೆ ಹಾಕಿದರು. ರಾತ್ರಿಯಿಡೀ ಸಂಭ್ರಮದಿಂದ ರಥೋತ್ಸವ ನೆರವೇರಿತು. ಜನರು ಗ್ರಾಮ ದೇವತೆಗೆ ಜೈ… ಉಘೇ, ಉಘೇ ಗ್ರಾಮ ದೇವತೆ ಸೇರಿ ಇನ್ನಿತರ ಘೋಷಣೆ ಮೊಳಗಿದವು. ಹಳೆ ಬಜಾರ್, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಶುಕ್ರವಾರ ನಸುಕಿನ ಜಾವ ಬಸವೇಶ್ವರ ದೇವಸ್ಥಾನಕ್ಕೆ ರಥ ತಲುಪಿತು.

    ಶುಕ್ರವಾರ ಬೆಳಗ್ಗೆ ಡೊಳ್ಳಿನ ವಾಲಗ, ವೀರಕಾರರಿಂದ ಹೇಳಿಕೆಯೊಂದಿಗೆ ಬಸವೇಶ್ವರ ದೇವಸ್ಥಾನದ ಬಳಿ ದೇವಿಗೆ ಗಂಗಾಸ್ನಾನ ನೆರವೇರಿಸಲಾಯಿತು. ಬಳಿಕ ನಡುಗಟ್ಟೆ ಶ್ರೀ ಲಕ್ಷ್ಮೀ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ದೇವಿ ಮೂರ್ತಿ ತರಲಾಯಿತು. ಯಡ್ರಾಮಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರು ಮಾತೆಗೆ ನೈವೇದ್ಯ ಅರ್ಪಿಸಿ, ಉಡಿ ತುಂಬಿ ಹರಕೆ ತೀರಿಸಿದರು. ಸಂಜೆ ೪ಕ್ಕೆ ಸಂಭ್ರಮದ ಮೆರವಣಿಗೆಯೊಂದಿಗೆ ಮೂರ್ತಿಯನ್ನು ಮೂಲ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಯಿತು. ರಾತ್ರಿ ೮ಕ್ಕೆ ಮೂಲ ದೇಗುಲದಲ್ಲಿ ದೇವಿಗೆ ಮೂರ್ತಿ ವಿಶೇಷ ಮಂಗಳಾರತಿ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ, ಉತ್ಸವಕ್ಕೆ ತೆರೆ ಎಳೆಯಲಾಯಿತು.

    ಮೆರವಣಿಗೆಗೆ ಮೆರಗು ತಂದ ಕಲಾ ತಂಡಗಳು: ಯಡ್ರಾಮಿಯ ಗ್ರಾಮ ದೇವತೆ ಜಾತ್ರೆಯಲ್ಲಿ ವಿಶೇಷ ಕಲಾ ತಂಡಗಳು ಹೆಜ್ಜೆ ಹಾಕುವ ಮೂಲಕ ಗಮನಸೆಳೆದವು. ಪುತ್ತೂರಿನ ಹುಲಿ ವೇಷಧಾರಿಗಳು, ನಾಸಿಕ್ ಬ್ಯಾಂಜೊ ಪಾರ್ಟಿ, ಡೊಳ್ಳು ಕುಣಿತ, ಕುದುರೆ ಕುಣಿತ, ನಂದಿ ಧ್ವಜ ಕುಣಿತ, ಬೊಂಬೆ ಮೆರವಣಿಗೆ, ಕರಡಿ ಮಜಲು, ಹಲಗೆ ಸದ್ದು ಭಕ್ತರ ಮನಸೂರೆಗೊಂಡಿತು. ಇದಲ್ಲದೆ ಬಸವೇಶ್ವರ ವೃತ್ತದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣಕುಮಾರ ಮತ್ತು ಆರ್ಕೆಸ್ಟ್ರಾ ತಂಡಗಳು ಜನರನ್ನು ರಂಜಿಸಿದವು.

    ದಾರಿಯುದ್ದಕ್ಕೂ ಅನ್ನ ದಾಸೋಹ: ಎರಡು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೋತ್ಸವದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವುದರಿಂದ ಜನರಿಗೆ ತೊಂದರೆ ಆಗದಂತೆ ದೇವಸ್ಥಾನ ಸೇರಿ ಖಾಸಗಿ ಸಂಘ- ಸಂಸ್ಥೆಗಳಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ವಿರಕ್ತಮಠ, ಬಸವೇಶ್ವರ ವೃತ್ತ, ಕೆನರಾ ಬ್ಯಾಂಕ್ ಮುಂಭಾಗ, ಹಳೆಯ ಬಜಾರ್ ಸೇರಿ ವಿವಿಧೆಡೆ ಪ್ರಸಾದ ವಿತರಿಸುವ ಕಾರ್ಯ ನಡೆಯಿತು. ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೂ ನಾಗಲಿಂಗೇಶ್ವರ ಕಾಲನಿ ಯುವಕರು ಸಾವಿರಾರು ಭಕ್ತರಿಗೆ ಬಿಸಿ-ಬಿಸಿ ಚಹಾ ವಿತರಣೆ ಮಾಡಿ, ಭಕ್ತಿ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts