More

    ತುಮಕೂರು ಜಿಲ್ಲೆಯ 61 ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ

    ತುಮಕೂರು: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದ್ದು, 61 ಹಳ್ಳಿಗಳಲ್ಲಿ ಕುಡಿಯಲಿಕ್ಕೆ ಹನಿನೀರು ಇಲ್ಲ ! ಈ ಹಳ್ಳಿಗಳಿಗೆ ಪ್ರತಿನಿತ್ಯ ಟ್ಯಾಂಕರ್‌ಗಳಲ್ಲಿ ಪೂರೈಸಲಾಗುತ್ತಿದೆ.

    ಹಳ್ಳಿಗಾಡಿನಲ್ಲಿ ದಿನೇದಿನೆ ಸಮಸ್ಯೆ ಉಲ್ಬಣಿಸುತ್ತಿದೆ. ಜಿಲ್ಲೆಯಲ್ಲಿ ಬೇಸಿಗೆ ರಣಬಿಸಿಲಿನ ಜತೆಗೆ ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪುತ್ತಿದೆ. ಜಿಲ್ಲೆಯ 7 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಮೇವಿನ ಕೊರತೆ ದೊಡ್ಡಮಟ್ಟದಲ್ಲಿ ಕಾಡುತ್ತಿಲ್ಲ.
    61 ಹಳ್ಳಿಗಳಿಗೆ ಟ್ಯಾಂಕರ್ ನೀರು: ಈ ಬಾರಿ ಬೇಸಿಗೆ ತಾಪ ಹೆಚ್ಚಿಗೆ ಸುಡಲಾರಂಭಿಸಿದೆ. ಏಪ್ರಿಲ್ ಆರಂಭದಲ್ಲೇ ಸಮಸ್ಯೆ ಕಾಣಿಸತೊಡಗಿದೆ. ತಾಲೂಕು ಆಡಳಿತವು ಸಮಸ್ಯಾತ್ಮಕ ಹಳ್ಳಿಗಳನ್ನು ಈಗಾಗಲೇ ಗುರುತಿಸುವ ಕಾರ್ಯ ಆರಂಭಿಸಿದ್ದು, 29 ಗ್ರಾಪಂ ವ್ಯಾಪ್ತಿಯ 61 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ.

    ಕುಣಿಗಲ್ ತಾಲೂಕಿನ -9 ಗ್ರಾಪಂ, ಕೊರಟಗೆರೆ – 4, ಮಧುಗಿರಿ-7, ಪಾವಗಡ-4 ಹಾಗೂ ತುಮಕೂರು ತಾಲೂಕಿನ 5 ಗ್ರಾಪಂ ಸೇರಿ ಒಟ್ಟು 29 ಗ್ರಾಪಂ ವ್ಯಾಪ್ತಿಯಲ್ಲಿ 61 ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಈ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇರುವ 61 ಗ್ರಾಮಗಳಿಗೆ ದಿನಕ್ಕೆ 172 ಟ್ರಿಪ್ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

    563 ಸಮಸ್ಯಾತ್ಮಕ ಹಳ್ಳಿಗಳು: ಜಿಲ್ಲೆಯಲ್ಲಿ 563 ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದ್ದು ಈ ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬೋರ್‌ವೆಲ್‌ಗಳನ್ನು ಕೊರೆಸುವುದು ಅಥವಾ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲು ಕ್ರಮವಹಿಸಲಾಗಿದೆ. ಇಂತಹ 69 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

    7 ತಾಲೂಕುಗಳು ಬರಪಟ್ಟಿಗೆ: ಶಿರಾ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ಹೊರತುಪಡಿಸಿ 7 ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಲಾಗಿದೆ. ಈ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಪೋರ್ಸ್‌ಗೆ ತಲಾ 1 ಕೋಟಿ ರೂ.ಅನುದಾನ ನೀಡಲಾಗುವುದು. 50 ಲಕ್ಷ ರೂಪಾಯಿಯನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲು ಬಿಡುಗಡೆ ಮಾಡಲಾಗಿದೆ. 2ನೇ ಕಂತಿನಲ್ಲಿ 25 ಲಕ್ಷ ರೂ., ಜತೆಗೆ ತೀವ್ರ ಸಮಸ್ಯೆ ಇರುವ ತಾಲೂಕುಗಳಿಗೆ ಸಿಇಒ ವಿವೇಚನಾ ಬಳಸಿ 25 ಲಕ್ಷ ರೂ., ವೆಚ್ಚ ಮಾಡಬಹುದಾಗಿದೆ. ಇನ್ನೂ ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಶಿರಾ ತಾಲೂಕುಗಳಿಗೆ 25 ಲಕ್ಷ ರೂ., ಅನುದಾನ ನೀಡಲಾಗುವುದು. ನೀರಿನ ಸಮಸ್ಯೆ ತಲೆದೋರುವ ಗ್ರಾಮಗಳಲ್ಲಿ ಟಾಸ್ಕ್‌ಪೋರ್ಸ್ ಅನುದಾನ, 14ನೇ ಹಣಕಾಸು ಯೋಜನಾ ಅನುದಾನ ಹಾಗೂ ಗ್ರಾಪಂ ಸಂಪನ್ಮೂಲ ಬಳಸಿಕೊಂಡು ಕೊಳವೆ ಬಾವಿಗಳನ್ನು ಕೊರೆದು ಪೈಪ್‌ಲೈನ್ ಹಾಗೂ ಮೋಟಾರ್ ಪಂಪುಗಳನ್ನು ಅಳವಡಿಸಿ ನೀರು ಪೂರೈಕೆ ಮಾಡಲು ಈಗಾಗಲೇ ಕ್ರಿಯಾಯೋಜನೆಗಳನ್ನೂ ಸಹ ಸಿದ್ಧಪಡಿಸಲಾಗಿದೆ. ಕರೊನಾ ವಿರುದ್ಧ ಸಮರ ನಡೆಸುತ್ತಿರುವ ಜಿಲ್ಲಾಡಳಿತಕ್ಕೆ ಈಗ ಕುಡಿಯುವ ನೀರಿನ ದಾಹ ತೀರಿಸುವ ಸವಾಲು ಎದುರಾಗಿದೆ.

    ಮೇವಿನ ಕೊರತೆ ಇಲ್ಲ : ಜಿಲ್ಲೆಯಲ್ಲಿ ಈ ಬಾರಿ ಮೇವಿನ ಕೊರತೆ ಅಷ್ಟಾಗಿ ಕಾಡುತ್ತಿಲ್ಲ. 26 ವಾರಗಳಿಗಾಗುವಷ್ಟು ಮೇವಿನ ಪ್ರಮಾಣ ಲಭ್ಯವಿದೆ. ಕಳೆದ ಹಿಂಗಾರಿನಲ್ಲಿ ಅಕಾಲಿಕವಾಗಿ ಮಳೆಬಿದ್ದರೂ ಉತ್ತಮ ಮಳೆಯಿಂದ ಇಳುವರಿ ಕಡಿಮೆಯಾದರೂ ಹೆಚ್ಚು ಮೇವು ರೈತನಿಗೆ ಸಿಕ್ಕಿದೆ. 2012ರ ಜನಗಣತಿ ಪ್ರಕಾರ 5 ಲಕ್ಷ 27 ಸಾವಿರ ದನ-ಕರುಗಳು, 1 ಲಕ್ಷ 81 ಸಾವಿರ ಎಮ್ಮೆಗಳು, 10ಲಕ್ಷ 56 ಸಾವಿರ ಕುರಿಗಳು ಹಾಗೂ 3 ಲಕ್ಷ 25 ಸಾವಿರ ಮೇಕೆಗಳಿವೆ. ಕಳೆದ ಬಾರಿ ಮೇವು ಬ್ಯಾಂಕ್ ತೆರೆಯಲಾಗಿತ್ತು. ಈ ವರ್ಷ ಮೇವು ಲಭ್ಯವಿದ್ದು ಅದರ ಅವಶ್ಯಕತೆ ಕಾಣುತ್ತಿಲ್ಲ.

    ಜಿಲ್ಲೆಯಲ್ಲಿ 26 ವಾರಕ್ಕಾಗುವಷ್ಟು ಮೇವು ಲಭ್ಯತೆ ಇದೆ. ಎಲ್ಲ ತಾಲೂಕಿನ ಪ್ರತೀ ಹಳ್ಳಿಯಲ್ಲೂ ಸರ್ವೇ ಮಾಡಿಸಿ ವರದಿ ಪಡೆಯಲಾಗಿದೆ. ಗಂಭೀರ ಸಮಸ್ಯೆ ಎಲ್ಲೂ ತಲೆದೋರಿಲ್ಲ. ಕಳೆದ ಬಾರಿ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು ರೈತರ ಬಳಿ ಮೇವಿನ ಸಂಗ್ರಹ ಇದೆ. ಈಗಾಗಲೇ ಮೇವಿನ ಬೀಜಗಳನ್ನೂ ಸಹ ರೈತರಿಗೆ ವಿತರಿಸಲಾಗಿದೆ. ಮೇವು ಬ್ಯಾಂಕ್ ಸ್ಥಾಪಿಸುವ ಚಿಂತನೆ ಸದ್ಯಕ್ಕಿಲ್ಲ.
    ಡಾ.ನಂದೀಶ್ ಪ್ರಭಾರ ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ

    ಜಿಲ್ಲೆಯಾದ್ಯಂತ 61 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 563 ಸಮಸ್ಯಾತ್ಮಕ ಗ್ರಾಮಗಳನ್ನು ಸಹ ಗುರುತಿಸಲಾಗಿದೆ. ಬರಪೀಡಿತ 7 ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗಾಗಿ ಟಾಸ್ಕ್‌ಫೋರ್ಸ್ ಅನುದಾನ 50 ಲಕ್ಷ ರೂ., ಮಂಜೂರು ಮಾಡಲಾಗಿದೆ. ನೀರಿನ ಅಭಾವ ಕಂಡುಬರುವ ಹಳ್ಳಿಗಳಲ್ಲಿ ತಕ್ಷಣವೇ ಕೊಳವೆ ಬಾವಿಗಳನ್ನು ಕೊರೆಸಿ ನೀರು ಪೂರೈಸುವಂತೆ ಪಿಡಿಒಗಳಿಗೆ ಸೂಚಿಸಿದ್ದೇನೆ. ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
    ಶುಭಾಕಲ್ಯಾಣ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts