More

    ಯುದ್ಧದಿಂದ ವಿಶ್ವದ ಏಕತೆಗೆ ಹೊಡೆತ: ಕೇಂದ್ರ ಸಚಿವಾಲಯದ ನಿವೃತ್ತ ಜೆಡಿ ರವಿಜೋಷಿ ಹೇಳಿಕೆ

    ಮೈಸೂರು: ಇತ್ತೀಚಿನ ದಿನಗಳಲ್ಲಿ ಲಾಭ ಗಳಿಕೆಗಾಗಿಯೂ ಯುದ್ಧ ನಡೆಸಲಾಗುತ್ತಿದ್ದು, ಇಂತಹ ಪ್ರವೃತ್ತಿಯಿಂದ ವಿಶ್ವದ ಏಕತೆ, ಸಮಗ್ರತೆಗೆ ಭಾರಿ ಹೊಡೆತ ಬೀಳುತ್ತದೆ ಎಂದು ಕೇಂದ್ರ ಸಚಿವಾಲಯದ ನಿವೃತ್ತ ಜಂಟಿ ನಿರ್ದೇಶಕ ರವಿಜೋಷಿ ಎಚ್ಚರಿಸಿದರು.
    ಮೈಸೂರು ಓಪನ್ ಫೋರಂ(ಎಂಓಎಫ್)ನಿಂದ ವಿಜಯನಗರ 3ನೇ ಹಂತದಲ್ಲಿರುವ ಕಲ್ಪಕ್ಷೇತ್ರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮದ್ಯ ಪ್ರಾಚ್ಯ ಯುದ್ಧ ವಿಶೇಷಣೆಯಲ್ಲಿ ಇಸ್ರೇಲ್-ಇರಾನ್ ಬಿಕ್ಕಟ್ಟು ಯುದ್ಧದತ್ತ ಸಾಗಿದೆ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಲಾಭ ಗಳಿಕೆಗಾಗಿಯೂ ಯುದ್ಧ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಯಿಂದ ವಿಶ್ವದ ಏಕತೆ, ಸಮಗ್ರತೆಗೆ ಭಾರಿ ಹೊಡೆತ ಬೀಳುತ್ತದೆ. ಇಸ್ರೇಲ್ ಮೇಲೆ ಇನ್ನಿತರ ರಾಷ್ಟ್ರಗಳು ದಾಳಿ ಮಾಡಿದಲ್ಲಿ ಇಸ್ರೇಲ್ ಬೆಂಬಲಕ್ಕೆ ಅಮೆರಿಕ ನಿಲ್ಲುತ್ತದೆ. ಆಗ ಬೇರೆ ರಾಷ್ಟ್ರಗಳು ಒಂದು ಪಕ್ಷ ನಿಂತರೆ ಮೂರನೇ ವಿಶ್ವಯುದ್ಧಕ್ಕೆ ನಾಂದಿಯಾಗಲಿದೆೆ ಎಂದರು.
    ಅಮೆರಿಕಾವು ಟರ್ಕಿ, ಸೌದಿ ಅರೇಬಿಯ ಮತ್ತು ಕುವೈತ್‌ನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ಅಫ್ಘಾನಿಸ್ತಾನ, ಇರಾಕ್ ಮತ್ತು ಸಿರಿಯಾಗಳಲ್ಲಿ ಯುದ್ಧಗಳನ್ನು ನಡೆಸಿದೆಯಾದರೂ ಅದು ಜಯ ಗಳಿಸಲಿಲ್ಲ. ಆದರೆ ಅದು ಆ ಪ್ರದೇಶಗಳನ್ನು ವಿನಾಶಗೊಳಿಸಿತು. ಸೌದಿ ಅರೇಬಿಯಾ ಮತ್ತು ಏಮೆನ್ ಹಾಗೂ ಇರಾನ್-ಇರಾಕ್ ನಡುವಿನ ಯುದ್ಧಗಳನ್ನು ಸಹ ತಡೆಯಲಿಲ್ಲ. ಇಸ್ರೇಲ್ ಮೇಲಿನ ಇರಾನ್ ದಾಳಿಯು ನಿಜವಾಗಲೂ ಅಮೆರಿಕಾಗೆ ಸಂಕಷ್ಟ ಉಂಟು ಮಾಡಿದೆ ಎಂದು ಹೇಳಿದರು.
    ಪ್ಯಾಲೆಸ್ಟೈನ್‌ಗಳ ಸಂಕಷ್ಟಗಳಿಗೆ ಎಲ್ಲ ಗಲ್ಫ್ ದೇಶಗಳು ನಿರ್ಲಕ್ಷ್ಯ ಧೋರಣೆ ತಾಳಿವೆ. ಅಲ್ಲದೆ ಇರಾಕ್-ಇರಾನ್ ಮತ್ತು ಸಿರಿಯಾ ದೇಶಗಳ ಬೆಂಬಲವು ಪ್ಯಾಲೆಸ್ಟೈನಿಗಳನ್ನು ಇಸ್ರೇಲಿನ ಶಾಶ್ವತ ಶತ್ರುಗಳನ್ನಾಗಿ ಮಾಡಿವೆ. ಇದು ಅಮೆರಿಕಾಗೆ ಈ ಪ್ರದೇಶದಲ್ಲಿ ಶಾಶ್ವತವಾಗಿ ಮಿಲಿಟರಿ ನೆಲೆ ಹೊಂದಲು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
    ಇತ್ತೀಚಿನ ದಿನಗಳಲ್ಲಿ ರಷ್ಯಾದ ಪ್ರಭಾವ ಈ ಪ್ರದೇಶದಲ್ಲಿ ಕುಗ್ಗುತ್ತಿದ್ದು, ಚೀನಾ ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಅಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಇರಾನ್ ಮುಖವಾಡದತ್ತ 3 ಪಡೆಗಳಾದ ಸೌದಿ ಅರೇಬಿಯಾದ ಹಮಾಸ್, ಹಿಸ್ಬುಲ್ಲಾ ಮತ್ತು ಹೌತಿ ಹಾಗೂ ತನ್ನದೇ ಆದ ಅಲ್-ಖುದ್ಸ್ ಪಡೆಗಳು ನಿರಂತರವಾಗಿ ಇರಾನ್ ರಾಷ್ಟ್ರವನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಅವರು ಹೇಳಿದರು.
    ಯುದ್ಧಗಳು ಅಪಾರ ಆರ್ಥಿಕ ನಷ್ಟ ಉಂಟು ಮಾಡುತ್ತವೆ. ಅಲ್ಲದೆ ಯುದ್ಧ ಪೀಡಿತ ರಾಷ್ಟ್ರಗಳು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಬಹಳ ಕಷ್ಟ ಪಡಬೇಕಾಗುತ್ತದೆ. ಇದನ್ನು ಯುದ್ಧ ಪೀಡಿತ ಹಾಗೂ ಯುದ್ಧಕ್ಕೆ ಸಿದ್ಧವಾಗಿರುವ ದೇಶಗಳು ಗಮನ ಹರಿಸಬೇಕಿದೆ ಎಂದು ಹೇಳಿದರು.
    ಹಿರಿಯ ಪತ್ರಕರ್ತರಾದ ಡಾ.ಕೆ.ಬಿ.ಗಣಪತಿ, ಕೃಷ್ಣಪ್ರಸಾದ್, ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೇರೆ, ವಿವಿಧ ಕ್ಷೇತ್ರದ ಗಣ್ಯರಾದ ಡಾ.ವಿ.ಆರ್.ಅನಿಲ್ಕುಮಾರ್, ಪ್ರೊ.ಉಮಾಪತಿ, ಡಾ.ಮಂಜುಳಾ, ಬದರಿನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts