More

    ರಂಗಭೂಮಿ ಭಾರತೀಯ ಸಂಸ್ಕೃತಿ ಅವಿಭಾಜ್ಯ ಅಂಗ : ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ ಅಭಿಪ್ರಾಯ

    ಚಿಕ್ಕಬಳ್ಳಾಪುರ : ಆಧುನಿಕ ದೃಶ್ಯ ಮಾಧ್ಯಮಗಳ ಪ್ರಭಾವದ ನಡುವೆಯೂ ರಂಗಭೂಮಿ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ ಸಲಹೆ ನೀಡಿದರು.

    ನಗರದ ಕೈಗಾರಿಕೆ ಪ್ರದೇಶದಲ್ಲಿನ ಶ್ರಿ ಕೃಷ್ಣ ರುಕ್ಮಿಣಿ ಪದವಿ ಪೂರ್ವಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಐಶ್ವರ್ಯ ಕಲಾ ನಿಕೇತನ ಸಂಸ್ಥೆ ಶನಿವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಕಲೆಯು ಹಲವು ವರ್ಷಗಳ ಇತಿಹಾಸ, ಪರಂಪರೆ ಹೊಂದಿದೆ. ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗ. ಒಳ್ಳೆಯ ಸಂದೇಶಾತ್ಮಕ ತತ್ವಗಳ ಪ್ರತಿಪಾದನೆಯ ಜತೆಗೆ ಜನರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

    ದೂರದರ್ಶನ, ಸಾಮಾಜಿಕ ಜಾಲತಾಣ, ಇಂಟರ್‌ನೆಟ್ ಬಳಕೆ ಹೆಚ್ಚಳ, ಸಿನಿಮಾಗಳಿಂದ ರಂಗಭೂಮಿ ಕಲೆಗೆ ಪೆಟ್ಟು ಬಿದ್ದಿದೆ. ಇದು ನಿಧಾನವಾಗಿ ಒಲವನ್ನು ಕಳೆದುಕೊಳ್ಳುತ್ತ ಮರೆಯಾಗುವ ಆತಂಕ ಮೂಡಿಸಿದೆ. ಹಿಂದೆ ಹೆಸರು ಗಳಿಕೆಯಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ವಿಷಾಧಿಸಿದರು. ನಾಟಕ ಮತ್ತು ರಂಗ ಗೀತೆಗಳ ಗಾಯನ, ಯಕ್ಷಗಾನ ಸೇರಿ ದೇಶೀಯ ಕಲೆಗಳ ಬಗ್ಗೆ ಯುವ ಜನತೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

    ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ವಕೀಲ ಉನ್ನತಿ ವಿಶ್ವನಾಥ ಮಾತನಾಡಿ, ದೇಶೀಯ ಜಾನಪದ ಕಲೆ ನಮ್ಮೆಲರ ಜೀವನಾಡಿ. ರಂಗಭೂಮಿಯ ಮೇಲಿನ ಪ್ರತಿಯೊಂದು ಪಾತ್ರ, ಸನ್ನಿವೇಶಗಳು ಬದುಕಿನಲ್ಲಿ ನಿರಂತರವಾಗಿ ಕಂಡು ಬರುತ್ತವೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅಮೃತ್‌ಕುಮಾರ್ ಮಾತನಾಡಿ, ಯುವ ಜನತೆಗೆ ಪ್ರತಿಭೆ ನಿರೂಪಿಸುವ ಹೆಚ್ಚು ಅವಕಾಶಗಳು ದೊರೆಯಬೇಕು ಎಂದು ತಿಳಿಸಿದರು.

    ಸನ್ಮಾನ, ನಾಟಕ ಪ್ರದರ್ಶನ : ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಗಾನ ಅಶ್ವತ್ಥ ಮತ್ತು ಬೆಂಗಳೂರಿನ ಆನಂದ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ರಾಜೇಶ್‌ಕಶ್ಯಪ್, ಅನಂತಕೃಷ್ಣ, ರಾಘವೇಂದ್ರ ನಾಡಿ, ರೋಹಿಣಿ, ವೆಂಕಟೇಶ್, ಗೀತಾ, ರಾಘವೇಂದ್ರ ಕಶ್ಯಪ್, ರಜಿನಿಕುಮಾರ್ ನೇತೃತ್ವದ ತಂಡದಿಂದ ಸನ್ಮಾನ್ಯ ಸುಖ ಹಾಸ್ಯ ನಾಟಕ ಮತ್ತು ಐಶ್ವರ್ಯ ಕಲಾನಿಕೇತನ ಸಂಸ್ಥೆಯಿಂದ ರಂಗ ಗೀತೆಗಳ ಗಾಯನ ಪ್ರದರ್ಶನ ನಡೆಯಿತು.

    ಶ್ರೀ ಕೃಷ್ಣ ರುಕ್ಮಿಣಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಎನ್.ಪ್ರವೀಣ್, ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಪ್ರಸನ್ನಕುಮಾರ್, ಕಾರ್ಯಕ್ರಮದ ವ್ಯವಸ್ಥಾಪಕ ಬೀಚಗಾನಹಳ್ಳಿ ಸಿದ್ದಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts