More

    ಜರೂರ್​ ಮಾತು: ಜಗತ್ತು ಸಂತೋಷವಾಗಿ ಇರೋದು ಹೃದಯಸಂಪನ್ನರಿಂದಲೇ…

    ಜರೂರ್​ ಮಾತು: ಜಗತ್ತು ಸಂತೋಷವಾಗಿ ಇರೋದು ಹೃದಯಸಂಪನ್ನರಿಂದಲೇ...

    ‘ಒಂದ್ ರೊಟ್ಟಿ ಇದ್ರ ಏನಾತು, ಅದನ್ನ ಹಸಕೊಂಡವರ ಜತಿ ಹಂಚಕೊಂಡ ತಿಂದ್ರ ಬರೀ ಹೊಟ್ಟಿಯಲ್ಲ, ಮನಸೂ ತುಂಬತದ್… ಬದುಕು ನಾಲ್ಕ್ ದಿನದ ಸಂತಿ. ಒಬ್ಬರಿಗೊಬ್ಬರು ಆಸ್ರಿ (ನೆರವು) ಆಕೊಂಡ್ ಹೋದ್ರ ಎಲ್ಲ ಛಲೋನೇ ಇರ್ತದ್…’ ಹೀಗೆ ಹಿರಿಯರು ಎರಡೇ ವಾಕ್ಯದಲ್ಲಿ ಜೀವನದ ಸಾರವನ್ನೇ ಹೇಳಿ, ಬದುಕಿನ ಹಾದಿಯನ್ನು ಎಷ್ಟು ಸರಳಗೊಳಿಸಿದ್ದಾರೆ. ನೂರೆಂಟು ಲೆಕ್ಕಾಚಾರಗಳಿಂದ ಲೈಫ್ ಅನ್ನು ಕ್ಲಿಷ್ಟವಾಗಿಸಿಕೊಂಡವರು ನಾವೇ. ಇರಲಿ. ನಮ್ಮಲ್ಲಿ ಶ್ರೀಮಂತರು ಎಂದಾಕ್ಷಣ ಭಾರಿ ದುಡ್ಡು, ಆಸ್ತಿ, ಒಡವೆ, ವಾಹನ ಮತ್ತೊಂದು ಇರುವವರು ಎಂಬ ಚಿತ್ರಣವಿದೆ. ಆದರೆ ಜಗತ್ತು ನಿಜವಾಗಿ ಸಂತೋಷದಿಂದ ಇರುವುದು ಹೃದಯಶ್ರೀಮಂತರಿಂದ! ಇವರ ಬಳಿ ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಇರುವುದಿಲ್ಲ, ಆದರೇನಂತೆ ಹೃದಯದಲ್ಲಿ ಸಂವೇದನೆಯ ದೊಡ್ಡ ಬುತ್ತಿಯೇ ಇರುತ್ತದೆ. ಅದನ್ನು ಹಂಚಿ ಬೇರೆಯವರ ಕಣ್ಣೀರು ಒರೆಸುತ್ತಾರೆ, ನಾಲ್ಕು ತುತ್ತು ನೀಡಿ ತಾವೂ ಸಂತೃಪ್ತಿಯ ಕಣ್ಣೀರು ಹಾಕುತ್ತಾರೆ.

    ಕರೊನಾ ಉಪಟಳದಿಂದ ದಿಗ್ಬಂಧನ ಶುರುವಾಯ್ತಲ್ಲ, ಬದುಕಿನ ಬಂಡಿಯೇ ದಿಕ್ಕು ತಪ್ಪಿತು. ಅಸಂಖ್ಯ ಜನರು ಅಧೀರರಾದರು. ಸರ್ಕಾರ ಅದರ ಕೆಲಸ ಮಾಡಿತು. ಆದರೆ, ಇಷ್ಟು ದೊಡ್ಡ ರಾಜ್ಯ, ದೇಶದಲ್ಲಿ ಬರೀ ಸರ್ಕಾರವನ್ನು ನೆಚ್ಚಿಕೊಂಡು ಕುಳಿತರೆ ಆದೀತೆ? ಬೇರೆ ಸಂದರ್ಭಗಳಲ್ಲಿ ಮಾಡಿದಂತೆ ದಿಢೀರೆಂದು ಸಹಾಯಕ್ಕೆ ಧಾವಿಸುವಂತೆಯೂ ಇಲ್ಲ; ಏಕೆಂದರೆ ಕರೊನಾಕ್ಕೆ ಮನುಷ್ಯರೇ ವಾಹಕರು! ಆದರೂ, ಇತರರ ಕಷ್ಟ, ಕಾರ್ವಿುಕರು ಹಸಿವಿನಿಂದ ಪಡುತ್ತಿರುವ ಪಾಡು ನೋಡಲಾಗದೆ ಎಚ್ಚರಿಕೆಯ ಕ್ರಮ ವಹಿಸಿ ಸೇವೆಗೆ ನಿಂತ ಕೈಗಳು, ಅದೆಷ್ಟು ಜನರ ಹಸಿವನ್ನು ನೀಗಿಸಿದವು, ನಿಮ್ಮ ಜತೆ ನಾವಿದ್ದೇವೆ ಎಂಬ ಧೈರ್ಯ ತುಂಬಿದವು ಎಂದರೆ ನೋಡುನೋಡುತ್ತಿದ್ದಂತೆ ಸೇವೆಯ ಪರಂಪರೆ ಮತ್ತಷ್ಟು ಗಟ್ಟಿಯಾಯಿತು. ವಿಶೇಷ ಎಂದರೆ, ಹೀಗೆ ಮಾನವೀಯತೆಯ ಲಾಕ್ ಅನ್ನು ಓಪನ್ ಮಾಡಿ, ಪ್ರೀತಿ ಉಣಬಡಿಸಿದವರು ನಮ್ಮ-ನಿಮ್ಮ ನಡುವಿನ ಶ್ರೀಸಾಮಾನ್ಯರೇ!

    ಸಂಧ್ಯಾ ಶ್ರೀನಿವಾಸ್. ಇವರದ್ದು ಮೈಸೂರಿನಲ್ಲಿ ಕ್ಯಾಟರಿಂಗ್ ನಡೆಸುವ ವೃತ್ತಿ. ಮನೆ ಬಳಿಯೇ ದಿನಗೂಲಿ ಕಾರ್ವಿುಕರು ದೊಡ್ಡ ಸಂಖ್ಯೆಯಲ್ಲಿದ್ದರು. ದಿನದ ದುಡಿಮೆಯನ್ನೇ ಆಧರಿಸಿದ್ದ ಆ ಶ್ರಮಿಕ ವರ್ಗ ಈ ದಿನಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿತು. ಆಗ ಯೂತ್ ಫಾರ್ ಸೇವಾ ಮತ್ತು ‘ರೌಂಡ್ ಟೇಬಲ್’ ಸ್ವಯಂಸೇವಾ ಸಂಸ್ಥೆಯ ನೆರವಿನಿಂದ ದಿನಕ್ಕೆ 80-100 ಜನರಿಗೆ ಊಟ ನೀಡತೊಡಗಿದರು ಸಂಧ್ಯಾ. ಬಳಿಕ ರಾತ್ರಿ ಊಟವನ್ನೂ ಒದಗಿಸಿದರು. ಕೆಲವೊಮ್ಮೆ ಅವರ ಅಡುಗೆಮನೆಯಲ್ಲೇ ಆಹಾರ ಪದಾರ್ಥ ತಯಾರಿಸಿ, ಪ್ಯಾಕ್ ಮಾಡಿ, ಹಂಚಿದರು. ಕಾರ್ವಿುಕರಿಗೆಲ್ಲ ದೊಡ್ಡ ಸಮಸ್ಯೆಯೊಂದು ಬಗೆಹರಿದ ಸಮಾಧಾನ. ಅಷ್ಟೇ ಅಲ್ಲ, ಅವರಲ್ಲಿ ಕರೊನಾ ಬಗ್ಗೆ ಜಾಗೃತಿ ಮೂಡಿಸಿ, ಎಲ್ಲ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಮಾಡಿದರು. ‘ಇರೋದರಲ್ಲಿ ಹಂಚಿ ತಿನ್ನಬೇಕು ಎಂದು ಮನೆಹಿರಿಯರು ಹೇಳುತ್ತಿದ್ದರು. ಇಂಥ ಕಷ್ಟದ ಹೊತ್ತಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು ಅನಿಸಿತು. ಅಷ್ಟಕ್ಕೂ, ಸಮಾಜದಿಂದ ಎಲ್ಲವನ್ನೂ ಪಡೆಯುವ ನಾವು ಕಿಂಚಿತ್ತಾದರೂ ಮರಳಿಸಬೇಕಲ್ಲವೆ?’ ಎನ್ನುವ ಸಂಧ್ಯಾ ಈ ಕೆಲಸದಲ್ಲಿ ತಮ್ಮ 12 ವರ್ಷದ ಮಗಳು ಲಕ್ಷ್ಮಿಯೂ ಜತೆಯಾಗಿ ಖುಷಿ ಅನುಭವಿಸಿದ್ದನ್ನು ಹೇಳಿದಾಗ ಅವರ ಸ್ವರದಲ್ಲಿ ಸಾರ್ಥಕತೆಯ ಸವಿಯಿತ್ತು.

    ಐತಿಹಾಸಿಕ ಕ್ಷೇತ್ರ ಹಂಪಿ ಆಂಜನೇಯನ ನಾಡು. ಅವನ ಪ್ರತಿನಿಧಿಗಳಾಗಿ ಈಗಲೂ ಅಲ್ಲಿ ವಾನರ ಸಾಮ್ರಾಜ್ಯವೇ ಇದೆ. ಈ ಕೋತಿಗಳಿಗೆ ಯಾತ್ರಿಕರು ನೀಡುವ ಆಹಾರವೇ ಹೊಟ್ಟೆ ತುಂಬಿಸುತ್ತಿತ್ತು. ಲಾಕ್​ಡೌನ್​ನಲ್ಲಿ ಎಲ್ಲ ಸ್ತಬ್ಧವಾದ ಬಳಿಕ ಅವು ತಿನ್ನಲು ಏನೂ ಸಿಗದೆ, ಮಂಕಾಗಿ ಬಿಟ್ಟವು. ಹಂಪಿಯ ಸುಂದರ ಚಿತ್ರಗಳನ್ನು ಕ್ಯಾಮರಾ ಕಣ್ಣುಗಳಲ್ಲಿ ಅರಳಿಸುವ ಸೃಜನಾತ್ಮಕ ಫೋಟೋಗ್ರಾಫರ್ ರಾಚಯ್ಯ ಸ್ಥಾವಿರಮಠ ತಡಮಾಡದೆ ಛಾಯಾಚಿತ್ರಗ್ರಾಹಕರ ಪುಟ್ಟ ತಂಡ ಕಟ್ಟಿಕೊಂಡರು. ಪ್ರತಿನಿತ್ಯ 300-350 ಮಂಗಗಳಿಗೆ ಈ ತಂಡ ಹಣ್ಣು, ಬಿಸ್ಕತ್ತು ವಿತರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. 40-50 ದನಗಳಿಗೆ ಪ್ರತಿನಿತ್ಯ 1 ಟನ್ ಮೇವು ಒದಗಿಸಲಾಗುತ್ತಿದೆ. ಈ ಕೆಲಸ ಮಾಡುವಾಗ ಕಣ್ಣಿಗೆ ಬಿದ್ದವರು ಭಿಕ್ಷುಕರು. ‘ನಮಗೆ ಏನೂ ಬೇಡ, ಎರಡು ಹೊತ್ತು ತುತ್ತು ಅನ್ನ ನೀಡಿ’ ಎನ್ನುತ್ತಿದ್ದಂತೆ ದಿನವೂ 30 ನಿರ್ಗತಿಕರಿಗೆ ಪೌಷ್ಟಿಕ ಊಟ ಒದಗಿಸಲಾಗುತ್ತಿದೆ. ಮೊನ್ನೆಯ ಮಳೆಗೆ ಮಹಿಳೆಯ ಗುಡಿಸಲೊಂದು ಕುಸಿದು ಬಿದ್ದಾಗ ದಾನಿಗಳ ನೆರವಿನಿಂದ ಅದನ್ನು ಪುನರ್ ನಿರ್ವಿುಸಿ ಕೊಟ್ಟಿರುವ ರಾಚಯ್ಯ ಮಂಗಗಳಿಂದ ಹಿಡಿದು ನಿರ್ಗತಿಕರವರೆಗೂ ಎಲ್ಲರಿಗೂ ಜಿಗರಿ ದೋಸ್ತ್ ಆಗಿಬಿಟ್ಟಿದ್ದಾರೆ. ಲಾಕ್​ಡೌನ್ ಸಂಕಷ್ಟದಿಂದ ಫೋಟೋಗ್ರಾಫರ್​ಗಳೇ ಕೆಲಸ ಇಲ್ಲದೆ ಮುಂದೇನು ಎಂಬ ಚಿಂತೆಯಲ್ಲಿ ಇದ್ದಾರೆ. ಆದರೆ, ರಾಚಯ್ಯ ಇಂಥ ಕಷ್ಟದ ದಿನಗಳಲ್ಲೂ ಎದ್ದುನಿಂತು ಸೇವೆಗೆ ಮುಂದಾಗಿರುವುದು ಮಾನವೀಯತೆಯ ವೈಶಿಷ್ಟ್ಯ.

    ವೃತ್ತಿಯಲ್ಲಿ ಅರ್ಚಕರಾಗಿರುವ ಮೈಸೂರಿನ 41 ವರ್ಷದ ಮುರಳೀಧರ್ ದೇವಸ್ಥಾನ ಬಂದ್ ಆದ ಬಳಿಕ ಯಾತ್ರಿಕರು, ಇತರರು ಪಡುತ್ತಿರುವ ಕಷ್ಟವನ್ನು ಗಮನಿಸಿದರು. ದೇವರಿಗೆ ನಿತ್ಯವೂ ನೈವೇದ್ಯ ಅರ್ಪಿಸುವ ಈ ಕೈಗಳು ಹಸಿದ ಹೊಟ್ಟೆಗಳಿಗೆ ನೈವೇದ್ಯ ನೀಡತೊಡಗಿದವು. 15 ಜನರ ತಂಡವನ್ನು ಕಟ್ಟುಕೊಂಡ ಮುರಳೀಧರ್ ತಾವಿರುವ ಸ್ಥಳದಿಂದ ಇಪ್ಪತ್ತು ಕಿ.ಮೀ. ವ್ಯಾಪ್ತಿಯಲ್ಲಿನ 150 ವಲಸೆ ಕಾರ್ವಿುಕರಿಗೆ ನಿತ್ಯ ಊಟ ನೀಡುತ್ತಿದ್ದಾರೆ. ನಿಜವಾದ ದೇವರನ್ನು ಈಗ ಕಂಡಂತೆ ಆಗಿದೆ ಎಂಬ ಅವರ ಉದ್ಗಾರ ಸೇವೆಯ ಶಕ್ತಿ ಮತ್ತು ಅವಶ್ಯಕತೆಯನ್ನು ದರ್ಶಿಸುತ್ತದೆ.

    ಇದನ್ನೂ ಓದಿ: ತರಕಾರಿ ಮತ್ತು ಹಣ್ಣುಗಳನ್ನು ಸ್ಯಾನಿಟೈಸರ್​ನಲ್ಲಿ ಸ್ವಚ್ಛಗೊಳಿಸಬೇಡಿ

    ಲಾಕ್​ಡೌನ್ ಅವಧಿಯಲ್ಲಿ ಎಲ್ಲರೂ ಭಯ ಬಿದ್ದಿರುವಾಗ, ನೊಂದವರ ನೆರವಿಗೆ ಬರಬೇಕು ಎಂಬ ತುಡಿತ ಕೀರ್ತನಾ ಹೆಗಡೆ ಅವರಿಗೆ. ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಇವರು ಅದಮ್ಯ ಚೇತನ ಸಂಸ್ಥೆಯಲ್ಲಿ ಸ್ವಯಂಸೇವಕರ ಅಗತ್ಯ ಇದೆ ಎಂದು ಗೊತ್ತಾದಾಗ, ಯೂತ್ ಫಾರ್ ಸೇವಾದ ಹದಿನೈದು ಜನರ ತಂಡದೊಂದಿಗೆ ಇವರೂ ಹೋಗಿ ಆಹಾರ ಪೊಟ್ಟಣಗಳನ್ನು ಪ್ಯಾಕ್ ಮಾಡಿದರು. ಇದೊಂದು ವಿನೂತನ ಅನುಭವವಾಗಿತ್ತು. ಹೀಗೆ ಸ್ವಚ್ಛತೆ ಮತ್ತು ಅಷ್ಟೇ ನಿಷ್ಠೆಯಿಂದ ಪ್ಯಾಕ್ ಮಾಡಿದ ಆಹಾರ ಪೊಟ್ಟಣ ಬಡವರ ಹಸಿವು ನೀಗಿಸುತ್ತಿದೆ ಎಂಬ ಸಂಗತಿಯೇ ಕೀರ್ತನಾರಿಗೆ ದೊಡ್ಡ ಸಮಾಧಾನವನ್ನು ಒದಗಿಸಿತು.

    ಇದಂತೂ ಎಂಥವರ ಹೃದಯವನ್ನೂ ಅರಳಿಸುವ ನಿದರ್ಶನ. ಉಡುಪಿಯ ಮಲ್ಪೆ ಬಳಿಯ ಸಣ್ಣ ಗುಡಿಸಲಿನಲ್ಲಿ ವಾಸವಾಗಿರುವ ಶಾರದಾ ಕೂಲಿ ಮಾಡಿ ಜೀವನ ನಡೆಸುತ್ತಾರೆ. ದಿನಕ್ಕೆ ಹೆಚ್ಚೆಂದರೆ 400 ರೂ. ಗಳಿಕೆ. ತಮ್ಮ ಸುತ್ತಮುತ್ತಲಿನವರೇ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಗೊತ್ತಾದಾಗ ಈ ಶಾರದೆಯಲ್ಲಿ ಅನ್ನಪೂರ್ಣೆ ಜಾಗೃತಗೊಂಡಳು. ಕಷ್ಟಕಾಲಕ್ಕೆ ಅಂತ ನೂರು ನೂರು ರೂಪಾಯಿ ಸೇರಿಸಿ ಉಳಿತಾಯ ಮಾಡಿದ್ದ -ಠಿ; 30 ಸಾವಿರ ಹಣದಲ್ಲೇ 700 ಕೆಜಿ ಅಕ್ಕಿ ಖರೀದಿಸಿ, ಮಲ್ಪೆಯ ನೆರ್ಗಿ ಪ್ರದೇಶದ ಅಂಬೇಡ್ಕರ ಕಾಲನಿಯ ನಿವಾಸಿಗಳಿಗೆ ಮನೆಗೆ 5 ಕೆಜಿಯಂತೆ ಹಂಚಿಬಿಟ್ಟರು ಈ ಮಹಾತಾಯಿ! ‘ನಾಳೆ ನನಗೆ ಕಷ್ಟ ಬಂದರೆ ಹೇಗೆ’ ಎಂದು ಯೋಚಿಸದೆ ಜತೆಗಿರುವವರ ದುಃಖ ಮೊದಲು ನಿವಾರಿಸಬೇಕು ಅಂತ ಸಂಕಲ್ಪಿಸಿದರು. ‘ದುಡ್ಡೆಲ್ಲ ಖಾಲಿ ಆಯಿತು. ಇನ್ನಷ್ಟು ದುಡ್ಡು ಇದ್ದಿದ್ದರೆ ಮತ್ತಷ್ಟು ಬಡಮನೆಗಳಿಗೆ ಅಕ್ಕಿ ಕೊಡುತ್ತಿದ್ದೆ’ ಎನ್ನುವ ಶಾರದಾರ ಹೃದಯಸಂಪನ್ನತೆ ಕುರಿತು ಗೆಳೆಯ ಶ್ರೀಕಾಂತ್ ಶೆಟ್ಟಿ ‘ದಿಗ್ವಿಜಯ’ ವಾಹಿನಿಗೆ ವಿಶೇಷ ವರದಿ ಮಾಡಿದ್ದು, ಕಣ್ಣಿಗೆ ಕಟ್ಟುವಂತಿದೆ.

    ಬೆಂಗಳೂರಿನ ರಾಜಾಜಿನಗರದಲ್ಲಿ ಒಂದಷ್ಟು ಸಹೃದಯಿಗರು ಕಟ್ಟಡ ಕಾರ್ವಿುಕರಿಗೆ ಊಟ ಒದಗಿಸುತ್ತಿದ್ದರು. ಇದಕ್ಕಾಗಿ ಬಡಾವಣೆಯ ಶ್ರೀರಾಮ ಮಂದಿರದ ಬಳಿ ತರಕಾರಿ ಖರೀದಿಸಲು ಹೋದಾಗ ಇವರ ಉದ್ದೇಶವನ್ನು ಅರಿತ ಆ ಅಂಗಡಿಯ ಮಮತಾ ಎಂಬ ಮಹಿಳೆ ಹೆಸರಿಗೆ ತಕ್ಕಂತೆ ಮಮತೆಯನ್ನೇ ಹರಿಸಿ, ತರಕಾರಿಯನ್ನು ಉಚಿತವಾಗಿ ನೀಡಿ, ಒಳ್ಳೆದಾಗಲಿ ಎಂದು ಹರಸಿ ಕಳುಹಿಸಿದರು!

    ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆ ಹಾಸನದ ಸಂಜೀವಾಂಜನೇಯ ದೇವಸ್ಥಾನದ ಬಳಿ ಭಿಕ್ಷುಕನೊಬ್ಬ ‘ಸ್ವಾಮಿ ತಿನ್ನಲು ಏನಾದರೂ ಕೊಡಿ, ಸುತ್ತಮುತ್ತ ಏನೂ ಇಲ್ಲ’ ಎಂದಾಗ ಒಬ್ಬ ಯುವಕ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಬಂದು, ಆತನಿಗೆ ಊಟ ನೀಡಿದ. ಈ ಘಟನೆಯೇ ಪ್ರೇರಣೆ ಆದಾಗ ಅರ್ಚಕರ ತಂಡವನ್ನೇ ಕಟ್ಟಿಕೊಂಡು ದಿನವೂ 300ಕ್ಕಿಂತ ಹೆಚ್ಚಿನ ಜನರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ, ರಾತ್ರಿ ಊಟ ಒದಗಿಸಿದ ಕಳಕಳಿಯ ವ್ಯಕ್ತಿ ಹಾಸನದ ಅರ್ಚಕ ಮತ್ತು ಸಾಮಾಜಿಕ ಕಾರ್ಯಕರ್ತ ರಕ್ಷಿತ್ ಭಾರದ್ವಾಜ್. ಇವರ ಈ ಕಾರ್ಯದಿಂದ ಪ್ರೇರಣೆ ಪಡೆದ ಯುವಕರು ಇತರೆಡೆಯೂ ಇದೇ ಮಾದರಿಯಲ್ಲಿ ಅನ್ನದಾನವನ್ನು ನೆರವೇರಿಸಿರುವುದು ವಿಶೇಷ. ಹಾಗೆಯೇ, ವಿಜಯಪುರದಲ್ಲಿ ರೋಹನ್ ಆಪ್ಟೆ ಮತ್ತು ಆದಿತ್ಯ ಎಂಬ ತರುಣರು ಪೊಲೀಸರಿಗೆ ಊಟ, ಉಪಾಹಾರ ಒದಗಿಸಿದರು. ಗರ್ಭಿಣಿಯರಿಗೆ ಔಷಧ, ಬಡವರಿಗೆ ಆಹಾರಸಾಮಗ್ರಿ ತಲುಪಿಸಿದರು.

    ಈ ಪ್ರತಿಯೊಂದು ಘಟನೆಗಳೂ ಶ್ರೀಸಾಮಾನ್ಯರ ಶಕ್ತಿಯನ್ನು ದರ್ಶಿಸುತ್ತವೆ. ಇವರ್ಯಾರೂ ಉಳ್ಳವರಲ್ಲ, ಹಲವು ಅನುಕೂಲ ಹೊಂದಿದವರಲ್ಲ. ಆದರೆ, ಕಷ್ಟದ ಗಳಿಗೆಯಲ್ಲಿ ಕೈಲಾದಷ್ಟು ನೆರವಿಗೆ ನಿಲ್ಲಬೇಕು ಎಂಬ ತುಡಿತವೇ ಇವರನ್ನು ಅಸಾಧಾರಣ ಕೆಲಸಗಳಿಗೆ ಪ್ರೇರೇಪಿಸಿದ್ದು. ಹಾಗಾಗಿ, ಇವರೇ ಸಮಾಜದ ನಿಜವಾದ ಹೀರೋಗಳು. ಎಲ್ಲಕ್ಕಿಂತಲೂ ದೊಡ್ಡದು ಇಚ್ಛಾಶಕ್ತಿ. ಅದನ್ನು ಸಮರ್ಥವಾಗಿ ಬಳಸಿಕೊಂಡರೆ ಎಂಥ ಆಪತ್ತಿನ ಮೋಡವನ್ನೂ ಚದುರಿಸಬಹುದು. ಲಾಕ್​ಡೌನ್ ಹೀಗೆ ಮಾನವೀಯತೆಯ ಹೊಸ ದರ್ಶನವನ್ನೂ ಮಾಡಿಸಿದೆ. ನೆರವಿಗೆ ನಿಲ್ಲುವ ಸಾರ್ಥಕತೆಯನ್ನು ಮನದಟ್ಟು ಮಾಡಿಸಿದೆ. ಇದು ಸೇವೆಯ ಶಕ್ತಿಯೂ ಹೌದು. ಅದನ್ನೇ ಸಂಸ್ಕೃತಿಯ ಭಾಗವಾಗಿಸಿಕೊಂಡಿರುವ ಈ ಮಣ್ಣಿನ ತಾಕತ್ತೂ ಹೌದು. ಇಂಥ ಕಾರ್ಯಗಳು ಸ್ವಾರ್ಥಮನಸುಗಳನ್ನು ಬಡಿದೆಬ್ಬಿಸಲಿ. ಬದುಕಿನ ಪಯಣದಲ್ಲಿ ಎಲ್ಲರೂ ನಲಿವನ್ನು ಹಂಚಿಕೊಂಡು ಖುಷಿಯ ಮೈಲಿಗಲ್ಲನ್ನು ತಲುಪುವಂತಾಗಲಿ. ಏಕೆಂದರೆ, ‘ಸಂಬಂಜ ಅನ್ನೋದು ದೊಡ್ಡದು ಕಣಾ’!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts