More

    ವಿಶ್ವ ಏಡ್ಸ್ ದಿನ : ರಾಜ್ಯದಲ್ಲಿ ಏಡ್ಸ್ ಸೋಂಕು ಗಣನೀಯ ಇಳಿಕೆ

    ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಗರ್ಭಿಣಿಯರಲ್ಲಿ ಎಚ್‌ಐವಿ/ಏಡ್ಸ್ ಸೋಂಕು ಪ್ರಮಾಣ ಶೇ. 0.03ಕ್ಕೆ ಇಳಿಕೆಯಾಗಿದ್ದರೆ, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ ಶೇ. 0.36ಕ್ಕೆ ಇಳಿದಿದೆ.

    ಪಂಕಜ ಕೆ.ಎಂ. ಬೆಂಗಳೂರು


    ರಾಜ್ಯದಲ್ಲಿ ಎಚ್‌ಐವಿ ಹರಡುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಮುಖವಾಗಿ ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಇಳಿದಿರುವುದು ಗಮನಾರ್ಹ.

    ರಾಜ್ಯಾದ್ಯಂತ ಇರುವ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಪ್ರಸಕ್ತ ಸಾಲಿನ ಅಂಕಿ ಆಂಶಗಳಿಂದ ಇದು ರುಜುವಾತಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಸಾಪ್ಸ್) 2023 -24ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯದ ಎಲ್ಲ ಐಸಿಟಿಸಿ ಕೇಂದ್ರಗಳಿಂದ 12 ಲಕ್ಷ ಗರ್ಭಿಣಿರನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹಾಕಿಕೊಂಡಿತ್ತು. ಆರು ತಿಂಗಳಲ್ಲಿ 8.55 ಲಕ್ಷ ಜನರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 338 ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಕಂಡು ಬಂದಿದ್ದು, ಸೋಂಕಿತರ ಪ್ರಮಾಣ ಶೇ. 0.03ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಶೇ. 61 ಪ್ರಗತಿ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಕೆಸಾಪ್ಸ್ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿನ ಎಲ್ಲ 475 ಐಸಿಟಿಸಿ ಕೇಂದ್ರಗಳಿಂದ 35,94,055 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಿತ್ತು. ಅದರಂತೆ 6 ತಿಂಗಳಲ್ಲಿ 21,81,824 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಶೇ. 61ರಷ್ಟು ಪ್ರಗತಿ ಸಾಧಿಸಿದೆ. ಪರೀಕ್ಷೆಗೆ ಒಳಗಾದ 7,930 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿನ ಪ್ರಮಾಣ ಶೇ. 0.36ಕ್ಕೆ ಇಳಿದಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸೋಂಕು ಪ್ರಮಾಣ 0.39 ಇತ್ತು.

    ಒಂದು ಲಕ್ಷ ಮಂದಿ ಬಲಿ: ರಾಜ್ಯದಲ್ಲಿ ಒಟ್ಟು 71 ಎಅರ್‌ಟಿ ಕೇಂದ್ರಗಳು ಹಾಗೂ 294 ಉಪ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಡಿ ಪತ್ತೆ ಹಚ್ಚಲಾದ ಸೋಂಕಿತರಲ್ಲಿ 3.86 ಲಕ್ಷ ಸೋಂಕಿತರು ಎಆರ್‌ಟಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. 3.19 ಲಕ್ಷ ಮಂದಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಇವರಲ್ಲಿ ಮಕ್ಕಳು, ವಯಸ್ಕರು ಸೇರಿ ಎಲ್ಲ ವಯೋಮಾನದವರೂ ಇದ್ದಾರೆ. ಇದುವರೆಗೂ ಚಿಕಿತ್ಸೆ ಲಿಸದೆ 3,036 ಮಕ್ಕಳು ಸೇರಿ ಸುಮಾರು 1 ಲಕ್ಷ ಮಂದಿ ಮೃತಪಟ್ಟಿದ್ದಾರೆ.

    ಸೌಲಭ್ಯ ವಿತರಣೆ: ಎಚ್‌ಐವಿ/ಏಡ್ಸ್ ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ಇಲಾಖೆಯು ಅಂತ್ಯೋದಯ ಯೋಜನೆಯಡಿ 30 ಕೆ.ಜಿ. ಆಹಾರ ಧಾನ್ಯ ವಿತರಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆಯಡಿ 25 ಸಾವಿರ ರೂ. ಹಾಗೂ ಬಾಧಿತ ಮಕ್ಕಳಿಗೆ ಮಾಸಿಕ 1000 ರೂ. ನೆರವು ನೀಡಲಾಗುತ್ತಿದೆ. ಮಕ್ಕಳಿಗೆ ಆರ್‌ಟಿಇ ಅಡಿ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೌಲಭ್ಯಗಳೂ ಇವೆ. ಸೋಂಕಿತರಿಗೆ ಕಾನೂನು ಸೇವೆ ಸೇರಿದಂತೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಕೆಸಾಪ್ಸ್ ತಿಳಿಸಿದೆ.

    9ನೇ ಸ್ಥಾನದಲ್ಲಿ ಕರ್ನಾಟಕ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (ಎನ್‌ಎಸಿಪಿ – 5) ಪ್ರಕಾರ ಭಾರತದಲ್ಲಿ ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳು ಹೆಚ್ಚು ಎಚ್‌ಐವಿ/ಏಡ್ಸ್ ಇರುವ ರಾಜ್ಯಗಳಾಗಿವೆ. ಕರ್ನಾಟಕ 9ನೇ ಸ್ಥಾನದಲ್ಲಿದೆ.

    ಎಚ್‌ಐವಿ ಮುಕ್ತ ಗ್ರಾಮಪಂಚಾಯಿತಿ: ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿನ ಪ್ರಮಾಣ ಶೇ. 0.36ಕ್ಕೆ ಇಳಿದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಚ್‌ಐವಿ ಮುಕ್ತ ಗ್ರಾಮಪಂಚಾಯಿತಿ ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಮಾಹಿತಿ ನೀಡುವ ಅಂದೋಲನ ಕೈಗೊಳ್ಳಲಾಗುವುದು ಎಂದು ರಾಜ್ಯ ಏಡ್ಸ್ ನಿಯಂತ್ರಣಾ ಸಂಸ್ಥೆ ( ಐಇಸಿ ) ಉಪನಿರ್ದೇಶಕ ಟಿ. ಗೋವಿಂದರಾಜು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts