More

    ಜಗತ್ತಿನಲ್ಲಿ ವಾರ್ಷಿಕ 8 ಲಕ್ಷ ಜನರ ಆತ್ಮಹತ್ಯೆ: ದಾವಣಗೆರೆ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಗಂಗಂ ಸಿದ್ದಾರೆಡ್ಡಿ ಹೇಳಿಕೆ

    ಹರಿಹರ: ಪ್ರತಿ ವರ್ಷ ಪ್ರಪಂಚದಲ್ಲಿ 8 ಲಕ್ಷ ಜನ, ದೇಶದಲ್ಲಿ 90 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಗಂಗಂ ಸಿದ್ದಾರೆಡ್ಡಿ ಹೇಳಿದರು.

    ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಉಪನ್ಯಾಸ ನೀಡಿ, 15 ರಿಂದ 29 ವರ್ಷ ವಯಸ್ಸಿನವರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ಮನೋ ವೈದ್ಯಕೀಯ ಶಿಕ್ಷಣದ ಮೂಲಕ ಆತ್ಮಹತ್ಯೆ ಪಿಡುಗು ಹೋಗಲಾಡಿಸಬೇಕಿದೆ. ಮಾನಸಿಕ ರೋಗ, ಹಠಾತ್ ನಿರ್ಧಾರ, ಮೆದುಳಿನಲ್ಲಾಗುವ ಬದಲಾವಣೆ, ನಕಾರಾತ್ಮಕ ಆಲೋಚನೆ, ವ್ಯಕ್ತಿತ್ವ ದೋಷ, ಮಾದಕ ಮತ್ತು ಮದ್ಯ ವ್ಯಸನ, ಸಾಮಾಜಿಕ ಸಮಸ್ಯೆ, ತೀವ್ರತರ ದೈಹಿಕ ಕಾಯಿಲೆಗಳು ಆತ್ಮಹತ್ಯೆಗೆ ಕಾರಣಗಳಾಗಿರುತ್ತವೆ ಎಂದರು.

    ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಪಿ.ಡಿ.ಮುರುಳೀಧರ ಮಾತನಾಡಿ, ಮನುಷ್ಯ ಜೀವವನ್ನು ಆತ್ಮಹತ್ಯೆ ಮೂಲಕ ಕೊನೆಗೊಳಿಸುವುದು ದೌರ್ಬಲ್ಯವೇ ಹೊರತು ಶೌರ್ಯವಲ್ಲ. ಒಬ್ಬ ಮನುಷ್ಯ ವಿದ್ಯೆ, ಬುದ್ಧಿ, ಸಂಸ್ಕಾರ ಪಡೆದು ಬೆಳೆಯಲು ಕುಟುಂಬ, ಸಮಾಜ, ದೇಶದ ಶ್ರಮ ಅಡಗಿದೆ. ಸಮಸ್ಯೆಗಳನ್ನು ಎದುರಿಸಿ ಪರಿಹರಿಸಿಕೊಳ್ಳಬೇಕು ಎಂದರು.

    ಪ್ರಾಚಾರ್ಯ ಪ್ರೊ.ವಿರೂಪಾಕ್ಷಪ್ಪ ಮಾತನಾಡಿ, ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾ ಅಪರಾಧವೆಂದು ಸಂವಿಧಾನ ಹಾಗೂ ಎಲ್ಲ ಧರ್ಮಗಳು ಬೋಧಿಸಿವೆ. ಆತ್ಮಹತ್ಯೆ ಯೋಚನೆ ಮಾಡುತ್ತಿದ್ದರೆ, ಅಂಥವರಿಗೆ ಸೂಕ್ತ ಸಲಹೆ ನೀಡಿ ಜೀವನೋತ್ಸಾಹ ತುಂಬಬೇಕು ಎಂದು ಹೇಳಿದರು.

    ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ವಿ.ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ಆರೋಗ್ಯ ಸುರಕ್ಷಣಾಧಿಕಾರಿ ಸುಧಾ ಸುಲಾಕೆ, ಸಿಬ್ಬಂದಿ ದಾದಾಪೀರ್, ಮಹೇಶ್, ಸುಧಾ, ರೆಡ್‌ಕ್ರಾಸ್ ಸಂಚಾಲಕ ಡಾ.ಬಿ.ಕೆ.ಮಂಜುನಾಥ್, ಜಿ.ಎಸ್.ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts