More

    ಟೆಂಡರ್​ಗೂ ಮುನ್ನವೇ ಕಾಮಗಾರಿ!

    ರಾಣೆಬೆನ್ನೂರ: ಇಲ್ಲಿಯ ನಗರಸಭೆ ವತಿಯಿಂದ ವಿವಿಧೆಡೆ ಚರಂಡಿ, ಸಿಸಿ ರಸ್ತೆ, ಪುಟ್​ಪಾತ್​ಗೆ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಅದಾಗಲೇ ಕಾಮಗಾರಿ ಶುರುವಾಗಿದೆ. ಇದು ನಗರಸಭೆ ಸದಸ್ಯರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳನ್ನು ನಗರಸಭೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ಆರಂಭಿಸಬೇಕು. ಆದರೆ, 2020-21ನೇ ಸಾಲಿನ ನಗರಸಭೆ ನಿಧಿಯಲ್ಲಿ ಮಾ. 2ರಂದು ಇ-ಪ್ರಕ್ಯೂರ್​ವೆುಂಟ್ ಪೋರ್ಟಲ್ ಮೂಲಕ ಒಟ್ಟು 6.66 ಕೋಟಿ ರೂಪಾಯಿ ವೆಚ್ಚದಲ್ಲಿ 40 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.

    ಮಾ. 18 ಟೆಂಡರ್​ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಮಾ. 20ರಂದು ಟೆಂಡರ್ ಅರ್ಜಿಗಳನ್ನು ಪರಿಶೀಲಿಸಿ ಗುತ್ತಿಗೆದಾರರಿಗೆ ಕಾಮಗಾರಿ ಪರವಾನಗಿ ನೀಡಲಾಗುತ್ತದೆ. ಆದರೆ, ನಗರಸಭೆ ಟೆಂಡರ್ ಕರೆದಿರುವ 40 ಕಾಮಗಾರಿ ಪೈಕಿ ಈಗಾಗಲೇ 5ಕ್ಕೂ ಅಧಿಕ ಕಾಮಗಾರಿಗಳನ್ನು ಆಡಳಿತಾತ್ಮಕ ಮಂಜೂರಾತಿ ಪಡೆಯದೆ ನಡೆಸಲಾಗುತ್ತಿದೆ.

    ಅದರಲ್ಲಿ ಸಿದ್ದೇಶ್ವರ ನಗರದ 4ನೇ ಕ್ರಾಸ್​ನಲ್ಲಿ ಸಿಸಿ ರಸ್ತೆ ನಿರ್ವಣ, ಮೃತ್ಯುಂಜಯ ನಗರದ ಗ್ಯಾಸ್ ಗೋದಾಮು ಹತ್ತಿರ ಚರಂಡಿ ನಿರ್ವಣ, 12ನೇ ವಾರ್ಡ್​ನ ಜುಮ್ಮಾ ಮಸೀದಿ ಬಳಿ ಪುಟ್​ಪಾತ್​ಗೆ ಪೇವರ್ಸ್ ಅಳವಡಿಸುವುದು, ಗಾಂಜಿ ಗಲ್ಲಿ ಚರಂಡಿ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಸುವುದು, ಮೃತ್ಯುಂಜಯ ನಗರದ ಹೊಸಮನಿ ಅವರ ಮನೆ ಹತ್ತಿರ ಚರಂಡಿ ನಿರ್ವಣ, ವಸ್ತ್ರದವರ ಓಣಿಯಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿ ಒಳಗೊಂಡಿದೆ.

    ಟೆಂಡರ್​ನಲ್ಲಿ ಭಾಗವಹಿಸಿ ಕಡಿಮೆ ದರ ನಮೂದಿಸಿದ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕು. ಆದರೆ, ಸರ್ಕಾರದ ಯಾವ ನಿಯಮಗಳನ್ನೂ ಪಾಲಿಸದ ನಗರಸಭೆ ಅಧಿಕಾರಿಗಳು, ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ್ದಾರೆ. ಅಲ್ಲದೆ, ಕಾಮಗಾರಿ ಆರಂಭಿಸುವ ಮೂಲಕ ನಗರಸಭೆ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಜತೆಗೆ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಆದ್ದರಿಂದ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಕೋಶಾಧಿಕಾರಿ, ಪೌರಾಡಳಿತ ನಿರ್ದೇಶಕರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಗರಸಭೆ ಸದಸ್ಯರ ಆಗ್ರಹಿಸಿದ್ದಾರೆ.

    ನಗರಸಭೆ 6.66 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲು ಟೆಂಡರ್ ಕರೆದಿದೆ. ಟೆಂಡರ್ ಅರ್ಜಿ ಸಲ್ಲಿಸಲು ಮಾ. 18 ಕೊನೆಯ ದಿನ ಆಗಿತ್ತು. ನಿಯಮಾವಳಿ ಅರ್ಹ ಗುತ್ತಿಗೆದಾರರಿಗೆ ಟೆಂಡರ್ ನೀಡಿದ ಬಳಿಕ ಕಾಮಗಾರಿ ಆರಂಭಿಸಬೇಕು. ಆದರೆ, ನಗರಸಭೆ ಆಯುಕ್ತರು ಹಾಗೂ ಅಧ್ಯಕ್ಷರು ನಿಯಮ ಗಾಳಿಗೆ ತೂರಿ ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ಅವರು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ.
    | ನಿಂಗರಾಜ ಕೋಡಿಹಳ್ಳಿ, ನಗರಸಭೆ ಸದಸ್ಯ

    6.66 ಕೋಟಿ ರೂಪಾಯಿಯಲ್ಲಿ 40 ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮಾ. 20ರಂದು ಅರ್ಜಿದಾರರಿಗೆ ಗುತ್ತಿಗೆ ನೀಡಿ, ಕೆಲಸ ಮಾಡಿಸುತ್ತೇವೆ. ಆದರೆ, ಕೆಲವೊಂದು ಕಾಮಗಾರಿ ತುರ್ತು ಇರುವ ಕಾರಣ ಈಗಾಗಲೇ ಆರಂಭಿಸಿದ್ದಾರೆ. ಸಂಪೂರ್ಣ ಟೆಂಡರ್​ಗಿಂತ ಹೊರಗೆ ಯಾವುದಾರೂ ಕಾಮಗಾರಿ ನಡೆಯುತ್ತಿದ್ದರೆ, ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts