More

    ದುಡಿದ ಸಂಬಳಕ್ಕೂ ‘ಕರೊನಾ’ ಕನ್ನ

    ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಕೂಲಿಕಾರ್ಮಿಕರು ಈ ಹಿಂದೆ ದುಡಿದ ಕೆಲಸಕ್ಕೆ ಸಂಬಳ ಪಡೆಯಲು ಸಾಧ್ಯವಾಗದೆ, ಕೈಯಲ್ಲಿ ಹಣವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಜಿಲ್ಲೆಯ ಸವದತ್ತಿ, ಗೋಕಾಕ, ಬೈಲಹೊಂಗಲ, ರಾಮದುರ್ಗ, ಅಥಣಿ ಸೇರಿ ಹಲವು ತಾಲೂಕುಗಳ ಗ್ರಾಮೀಣ ಭಾಗದಿಂದ ಹಲವಾರು ಕಟ್ಟಡ ಕೂಲಿ, ಕೃಷಿ, ತೋಟದ ಕೂಲಿಗಾಗಿ ಕಾರ್ಮಿಕರು 25 ರಿಂದ 30 ಕಿ.ಮೀ. ದೂರದ ಪ್ರದೇಶಕ್ಕೆ ತೆರಳಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಲಾಕ್‌ಡೌನ್ ಆಗಿದ್ದರಿಂದ ಕೆಲಸವೇ ಇಲ್ಲದಂತಾಗಿ ತುತ್ತಿನ ಚೀಲಕ್ಕೆ ತಣ್ಣೀರು ಪಟ್ಟಿಯೇ ಗತಿ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಇದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

    ಭವಿಷ್ಯದ ಚಿಂತೆ: ಲಾಕ್‌ಡೌನ್ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಕುಟುಂಬದವರ ಜೀವನೋಪಾಯಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ 21 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ 1,000 ರೂ. ಸಹಾಯ ಧನ ನೀಡಲು, 2.10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ, ಲೇಬರ್ ಕಾರ್ಡ್ ಪಡೆದುಕೊಂಡಿಲ್ಲ. ಹೀಗಾಗಿ ಅವರು ಸಹಾಯಧನದಿಂದ ವಂಚಿತರಾಗಿದ್ದು, ಭವಿಷ್ಯದ ಚಿಂತೆಯಲ್ಲಿ ದಿನ ಕಳೆಯುತ್ತಿದ್ದಾರೆ.

    ಖರೀದಿಸಲೂ ಇಲ್ಲ ಹಣ: ಇಷ್ಟು ದಿನ ವಾರಕ್ಕೊಮ್ಮೆ ಸಂಬಳ ಪಡೆದು, ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಕಿರಾಣಿ ಅಂಗಡಿಗಳ ಸಾಲ ತೀರಿಸುತ್ತಿದ್ದೆವು. ಈ ಹಿಂದೆ ಖರೀದಿಸಿ ಸಂಗ್ರಹಿಸಿದ್ದ ದಿನಸಿ ಇದೀಗ ಖಾಲಿಯಾಗಿದೆ. ತರೋಣ ಎಂದರೆ, ನಿಗದಿತ ಬೆಲೆಗಿಂತ ಹೆಚ್ಚಿನ ದರ ಪಡೆಯುವ ಮೂಲಕ ದಿನಸಿ ಅಂಗಡಿಗಳು ಸುಲಿಗೆಗೆ ಮುಂದಾಗಿವೆ. ಅಕ್ಕಿ ಕೊಂಡರೆ ತರಕಾರಿಗೆ ಕಾಸಿಲ್ಲ. ಉಪ್ಪು ಕೊಂಡರೆ ಸಕ್ಕರೆಗೆ ಕಾಸಿಲ್ಲ. ದಿನಸಿ ಅಂಗಡಿಯವರು ಹಳೇ ಬಾಕಿ ತಿರಿಸಿದ ನಂತರವೇ ಹೊಸ ಸಾಲ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕೂಲಿಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.

    ದುಡಿದ ಹಣ ತರಲು ಹೊರಗೆ ಬಿಡಿ: ಕೆಲಸ ಮಾಡಿರುವ ಮನೆಯ ಮಾಲೀಕರು, ಗುತ್ತಿಗೆದಾರರಿಂದ ಹಣ ಪಡೆಯಲು ಒಂದು ದಿನ ಹೊರಗೆ ಹೋಗಲು ಅವಕಾಶ ಮಾಡಿಕೊಡಬೇಕು. ಅವಕಾಶ ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಇದು ಕೇವಲ ಕಟ್ಟಡ, ಕೃಷಿ ಹಾಗೂ ಇನ್ನಿತರ ಕೂಲಿಕಾರ್ಮಿಕರ ಸಮಸ್ಯೆಯಲ್ಲ. ಬಹುತೇಕ ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡವರ ಸಮಸ್ಯೆ ಎನ್ನುತ್ತಾರೆ ಬೈಲಹೊಂಗಲದ ಕಟ್ಟಡ ಕಾರ್ಮಿಕ ಇರ್ಫಾನ್ ಹಾವೇರಿಪೇಟ್

    ನಾವು ವಾರದ ಸಂತೆಯ ದಿನ 6 ದಿನದ ಸಂಬಳ ಪಡೆದು, ಕಿರಾಣಿ ಸಂತೆ ಮಾಡಿ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಉಳಿತಾಯದ ಹಣವೂ ಖರ್ಚಾಗಿದೆ. ಲಾಕ್‌ಡೌನ್ ಅವಧಿ ಮುಗಿಯುವವರೆಗೂ ಮನೆ ಮಂದಿಯ ಊಟೋಪಚಾರಕ್ಕಾಗಿ ಕೈ ಖಾಲಿಯಾಗಿದೆ.
    |ಬಸವರಾಜ ದೊಡಮನಿ, ಕೂಲಿ ಕಾರ್ಮಿಕ

    ಜಿಲ್ಲೆಯಲ್ಲಿ ಅಂದಾಜು 4 ಲಕ್ಷ ಜನ ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲಿ ಕೇವಲ 80 ಸಾವಿರ ಕಾರ್ಮಿಕರು ಮಾತ್ರ ಲೇಬರ್ ಕಾರ್ಡ್ ಹೊಂದಿದ್ದಾರೆ. ಕೆಲಸ ಇಲ್ಲದಿರುವ ಈ ಸಂದರ್ಭದಲ್ಲಿ ಕಾರ್ಡ್ ಇಲ್ಲದವರು ಪರದಾಡುವಂತಾಗಿದೆ. ಸರ್ಕಾರ ಸಾವಿರ ರೂ. ಸಹಾಯ ಧನ ಘೋಷಿಸಿದ ನಂತರ ಸರ್ಕಾರಕ್ಕೆ ಈಗಾಗಲೇ ಕಾರ್ಡ್ ಇದ್ದರೂ ಬ್ಯಾಂಕ್ ಖಾತೆ ನೀಡಿರದ 20 ಸಾವಿರ ಕಾರ್ಮಿಕರ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
    | ಎನ್.ಆರ್. ಲಾತೂರ್
    ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts