More

    ಊರು ಬಿಡಲೊಲ್ಲದ ಕಾರ್ಮಿಕರು

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ಕರೊನಾ ಸಂದರ್ಭ ನೂರಾರು ಕಿ.ಮೀ. ನಡೆದು, ಸಿಕ್ಕಿದ ರೈಲು, ಬಸ್‌ಗಳನ್ನೇರಿ ತವರು ಸೇರಿದ ವಲಸೆ ಕಾರ್ಮಿಕರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ, ಜನಜೀವನ ಸಹಜಸ್ಥಿತಿಗೆ ಮರಳಿದರೂ ಕರಾವಳಿ ಜಿಲ್ಲೆಗಳಿಗೆ ವಾಪಸ್ ಬಂದಿಲ್ಲ.

    ಸಾರ್ವಜನಿಕ ಹಾಗೂ ಖಾಸಗಿ ಸಂಚಾರಿ ವ್ಯವಸ್ಥೆಗಳ ಮೇಲಿನ ನಿರ್ಬಂಧಗಳು ಬಹುತೇಕ ತೆರವುಗೊಂಡಿವೆ. ಕೈಗಾರಿಕೆ, ವ್ಯಾಪಾರಗಳು ಕಾರ್ಯಾರಂಭ ಮಾಡಿವೆ. ಶಾಲಾ ಕಾಲೇಜುಗಳು ಪುನರಾರಂಭವಾಗಿವೆ. ಬಹುತೇಕ ಜನಜೀವನ ಹಿಂದಿನಂತೆಯೇ ಆಗಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ನೆಲೆ ಕಂಡುಕೊಂಡಿದ್ದ ಕಾರ್ಮಿಕರು ಮಾತ್ರ ತಮ್ಮೂರು ಬಿಟ್ಟು ಬರಲು ಒಪ್ಪುತ್ತಿಲ್ಲ. ಕಾರ್ಮಿಕ ಇಲಾಖೆ ಅಂದಾಜಿಸಿರುವ ಪ್ರಕಾರ ದ.ಕ. ಜಿಲ್ಲೆಗೆ ಶೇ.70 ಹಾಗೂ ಉಡುಪಿ ಜಿಲ್ಲೆಗೆ ಶೇ.50ರಷ್ಟು ಕಾರ್ಮಿಕರು ವಾಪಸ್ ಬಂದಿಲ್ಲ.

    * ತೆರೆದಿಲ್ಲ ಅವಕಾಶದ ಬಾಗಿಲು: ಕರಾವಳಿಯಲ್ಲಿ ಉದ್ಯೋಗ ಅವಕಾಶಗಳು ಸಹಜಸ್ಥಿತಿಗೆ ಮರಳಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಬಹುಪಾಲು ನೆಲ ಕಚ್ಚಿದೆ. ಅನೇಕ ಕೈಗಾರಿಕೆಗಳು ಉತ್ಪಾದನೆ ಕಡಿಮೆಗೊಳಿಸಿದೆ. ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಗಳು ಕೆಲಸದ ಅವಧಿಯನ್ನು ಎರಡು ಅಥವಾ ಒಂದು ಪಾಳಿಗೆ ಇಳಿಸಿವೆ. ಕೆಲ ಕಂಪನಿಗಳು ಕಡಿಮೆ ನೌಕರರಿಂದಲೇ ಕೆಲಸ ಮಾಡಿಸಿಕೊಳ್ಳುತ್ತಿವೆ. ಸುಸ್ಥಿತಿಯಲ್ಲಿರುವ ಕಂಪನಿಗಳಲ್ಲಿ ದುಡಿಯುತ್ತಿದ್ದ ನೌಕರರು ಮತ್ತೆ ಎಂದಿನಂತೆ ವಾಪಸಾಗಿ ಕೆಲಸದಲ್ಲಿ ತೊಡಗಿದ್ದಾರೆ.

    ಎಂಆರ್‌ಪಿಎಲ್ ಕಂಪನಿಯಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 3,000 ಕಾರ್ಮಿಕರು ವಾಪಸ್ ಆಗಿದ್ದಾರೆ. ಮಂಗಳೂರಿನ ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಕಾರ್ಮಿಕರಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಜಾರ್ಖಂಡ್ ನಿವಾಸಿಗಳೇ ಹೆಚ್ಚಿದ್ದರು. ಕರೊನಾ ಸಂದರ್ಭ 8,000 ಜನರು ಊರುಗಳಿಗೆ ಹೋಗಿದ್ದು, ಇವರಲ್ಲಿ ಶೇ.90 ಮಂದಿ ವಾಪಸ್ ಬಂದಿದ್ದಾರೆ.

    ದ.ಕ. 80 ಸಾವಿರ ಕಾರ್ಮಿಕರಿದ್ದರು!: ಕರೊನಾ ಕಾಟದ ಮೊದಲು ಹೊರ ರಾಜ್ಯ/ಜಿಲ್ಲೆಗಳ 80 ಸಾವಿರ ಕಾರ್ಮಿಕರು ದ.ಕ. ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಲ್ಲಿ ಶೇ.30 ಕಾರ್ಮಿಕರು ಮಾತ್ರ ವಾಪಸ್ ಬಂದಿದ್ದಾರೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಢ ರಾಜ್ಯಗಳ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಕಾರ್ಮಿಕರು ಇಲ್ಲಿದ್ದರು. ಅಧಿಕೃತ ಅಂಕಿ ಅಂಶ ಪ್ರಕಾರ ಜಿಲ್ಲಾಡಳಿತದ ನೆರವು ಪಡೆದು ದಕ್ಷಿಣ ಕನ್ನಡದಿಂದ 30,428 ವಲಸೆ ಕಾರ್ಮಿಕರು ರೈಲುಗಳಲ್ಲಿ ಹೊರ ರಾಜ್ಯಗಳಿಗೆ ಹೋಗಿದ್ದರು. 13,000 ಮಂದಿ ಬಸ್‌ಗಳಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳಿದ್ದರು. ಇಷ್ಟೇ ಪ್ರಮಾಣದ ಅಥವಾ ಇದಕ್ಕಿಂತಲೂ ಅಧಿಕ ಮಂದಿ ಸ್ವಂತ ವ್ಯವಸ್ಥೆಗಳಲ್ಲೇ ತಮ್ಮ ಊರು ಸೇರಿದ್ದರು.

    ಉಡುಪಿಯಲ್ಲಿದ್ರು 15 ಸಾವಿರ ಮಂದಿ: ಉಡುಪಿ ಜಿಲ್ಲೆಯಿಂದ ಹೊರ ರಾಜ್ಯಗಳ 6,484 ಕಾರ್ಮಿಕರು ವಿಶೇಷ ರೈಲುಗಳ ಮೂಲಕ ತವರೂರಿಗೆ ತೆರಳಿದ್ದರು. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶೆಲ್ಟರ್ ರೂಂ ಹಾಗೂ ಬಾಡಿಗೆ ಮನೆ, ಟೆಂಟ್‌ಗಳಲ್ಲಿ ವಾಸವಾಗಿದ್ದ 7,805 ಮಂದಿಯನ್ನು ಜಿಲ್ಲಾಡಳಿತ ವಿಶೇಷ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ವಂತ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿತ್ತು. ಒಟ್ಟು 14,289 ಮಂದಿ ಕಾರ್ಮಿಕರು ಅಧಿಕೃತವಾಗಿ ಊರುಗಳಿಗೆ ತೆರಳಿದ್ದರು. ಇದಕ್ಕಿಂತ ಹೆಚ್ಚಿನ ಕಾರ್ಮಿಕರು ಜಿಲ್ಲೆಯಲ್ಲಿ ಇದ್ದು, ಅವರು ತಮ್ಮದೇ ಖರ್ಚಿನಲ್ಲಿ ಊರುಗಳಿಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ. ಶೇ.50ರಷ್ಟು ಕಾರ್ಮಿಕರು ವಾಪಸ್ಸಾಗಿದ್ದಾರೆ. ರೈಲು ಸೇವೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲದ ಕಾರಣ ಹೊರ ರಾಜ್ಯದ ಕಾರ್ಮಿಕರು ಶೇ.20ರಷ್ಟು ಮಾತ್ರ ಆಗಮಿಸಿದ್ದಾರೆ.

    ಕರೊನಾ ಬಳಿಕ ಕರಾವಳಿಯಲ್ಲಿ ಕೆಲಸದ ಸ್ವರೂಪ ಬದಲಾಗಿದೆ. ಕರೊನಾ ಸಂಕಷ್ಟದ ನೆಪದಲ್ಲಿ ಕನಿಷ್ಠ ನೌಕರರನ್ನು ಇಟ್ಟುಕೊಂಡು ಗರಿಷ್ಠ ಗಟ್ಟದಲ್ಲಿ ನೌಕರರನ್ನು ದುಡಿಸಿಕೊಳ್ಳುವ ದೂರುಗಳಿವೆ. ಬೇಡಿಕೆ ಕೊರತೆ ಇರುವ ಕಡೆ ಸಹಜವಾಗಿಯೇ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ.

    – ವಿಶ್ವನಾಥ ಶೆಟ್ಟಿ, ರಾಜ್ಯಾಧ್ಯಕ್ಷ, ಬಿಎಂಎಸ್

    ನಿರ್ಮಾಣ ಕಾಮಗಾರಿಗಳು ಭಾಗಶಃ ಸ್ಥಗಿತಗೊಂಡಿದೆ. ಕೈಗಾರಿಕೆಗಳು, ವಿವಿಧ ಕಂಪನಿಗಳು ಉತ್ಪಾದನೆ ಕಡಿತಗೊಳಿಸಿದೆ. ಕಾರ್ಮಿಕರು ದುಡಿಯುವ ಪಾಳಿಗಳನ್ನೂ ಕಡಿತಗೊಳಿಸಿವೆ. ಹೆಚ್ಚುವರಿ ಅವಧಿ ದುಡಿದು ಅಧಿಕ ಆದಾಯ ಗಳಿಸುವ ಅವಕಾಶಗಳು ಇಲ್ಲ. ಇದರಿಂದ ಹೆಚ್ಚಿನ ಕಾರ್ಮಿಕರಿಗೆ ಮಂಗಳೂರಿಗೆ ವಾಪಸಾಗಲು ಧೈರ್ಯವಿಲ್ಲ.

    – ವಸಂತ ಆಚಾರಿ
    ಸಿಐಟಿಯು ಉಪಾಧ್ಯಕ್ಷ, ದ.ಕ.

    ಕರೊನಾ ಪ್ರಕರಣ ಉಡುಪಿಯಲ್ಲಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಕಾರ್ಮಿಕರು ಆಗಮಿಸುತ್ತಿದ್ದಾರೆ. ಬೆಳಗ್ಗೆ ವಿವಿಧ ನಗರ/ಪಟ್ಟಣಗಳಲ್ಲಿ ಕೂಲಿಗಾಗಿ ತೆರಳುವವರನ್ನು ಗಮನಿಸಿದರೆ ಶೇ.50ಕ್ಕಿಂತ ಅಧಿಕ ಮಂದಿ ವಾಪಸಾಗಿರುವುದನ್ನು ಗಮನಿಸಬಹುದು.

    – ಬಾಲಕೃಷ್ಣ ಶೆಟ್ಟಿ
    ಸಿಐಟಿಯು ಜಿಲ್ಲಾಧ್ಯಕ್ಷ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts