More

    ಕಾರ್ಮಿಕರನ್ನು ಗುಲಾಮರಾಗಿ ಬದುಕುವಂತೆ ಮಾಡಿದ ಸರ್ಕಾರ; ಮಾಲಿನಿ ಮೇಸ್ತಾ ಕಿಡಿ

    ಶಿವಮೊಗ್ಗ: ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಮಾಲೀಕರಿಗೆ ಲಾಭ ಬರುವಂತೆ ಮಾಡಿದೆ. ಈ ಮೂಲಕ ಕಾರ್ಮಿಕರು ಗುಲಾಮರಾಗಿ ಬದುಕುವಂತೆ ಮಾಡಿದೆ ಎಂದು ಸಿಐಟಿಯು ನಾಯಕಿ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಕಿಡಿಕಾರಿದರು.
    ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಸಿಐಟಿಯು ಜಿಲ್ಲಾ ಸಮಿತಿಯಿಂದ ಭಾನುವಾರ ಕೋಮು ಸಾಮರಸ್ಯಕ್ಕಾಗಿ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗಾಗಿ ನಡೆದ ಸಿಐಟಿಯು 13ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ಮತ್ತು ನೌಕರರ ಪರಿಸ್ಥಿತಿಯನ್ನು ಅವಲೋಕಿಸಿದಾಗ ನ್ಯಾಯ ಕೊಡಿಸಲು ಹೋರಾಟವನ್ನು ಮತ್ತಷ್ಟು ಬಲಗೊಳಿಸುವ ಅಗತ್ಯತೆ ಇದೆ ಎಂದರು.
    ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಬದುಕು ತಳಮಟ್ಟಕ್ಕೆ ಕುಸಿದಿದೆ. ಜನಸಾಮಾನ್ಯರು ಪರಿತಪಿಸುವಂತಾಗಿದೆ. ಇಲ್ಲಿಯೂ ಜಾತಿ, ಧರ್ಮದ ಸಂಘರ್ಷಗಳು ಸೃಷ್ಟಿಯಾಗುತ್ತಿದ್ದು ಸಾಮರಸ್ಯದ ಜೀವನ ಅಧೋಗತಿಗೆ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಕರೊನಾ ಬಂದ ಬಳಿಕ 2.5 ಲಕ್ಷ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸರ್ಕಾರಗಳು ಕಾಮಿಕರ ಬದುಕಿನ ಬಗ್ಗೆ ಚಿಂತಿಸದೇ ಚುನಾವಣೆ ದೃಷ್ಟಿಯಿಂದ ಮಾತ್ರ ನೋಡುತ್ತಿವೆ. ನಿರುದ್ಯೋಗ ತಾಂಡವವಾಡುತ್ತಿದ್ದು ಭವಿಷ್ಯದಲ್ಲಿ ಆಹಾರದ ಕೊರತೆಯೂ ಎದುರಾಗಲಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಬೆಂಗಳೂರಿನಲ್ಲಿ ಅಖಿಲ ಭಾರತ ಮಟ್ಟದ ಕಾರ್ಮಿಕರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
    ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದು ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನವನ್ನು ಜಾರಿಗೊಳಿಸುತ್ತಿಲ್ಲ. ಹಾಗಾಗಿ ಕನಿಷ್ಠ 26 ಸಾವಿರ ರೂ. ವೇತನ ಜಾರಿಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜತೆಗೆ ಮಹಿಳೆಯರ ಆರೋಗ್ಯ, ಬಾಣಂತಿಯರ ಆರೈಕೆ, ಶಾಲಾ ಮಕ್ಕಳಿಗೆ ಬಿಸಿಯೂಟ, ಮಹಿಳೆಯ ಆರೋಗ್ಯ ತಪಾಸಣೆ ಸೇರಿದಂತೆ ಹಲವು ರೀತಿಯಿಂದ ದುಡಿಯುತ್ತಿರುವ ಅಂಗನವಾಡಿ ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
    ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ಸಿಐಟಿಯು ಜಿಲ್ಲಾ ಖಜಾಂಚಿ ಕೆ.ಪ್ರಭಾಕರನ್ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ್, ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಂಗಾರಪ್ಪ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಹನುಮಮ್ಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts