More

    ಕಾರ್ಮಿಕರು ಮಕ್ಕಳ ಪಾಲನೆಗೆ ಕೂಸಿನ ಮನೆ

    ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ ಮತ್ತು ಉಪಾಧ್ಯಕ್ಷೆ ನಂದಾ ಬಾಗೇವಾಡಿ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನಿರ್ಮಿಸಿರುವ ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಉದ್ಘಾಟಿಸಿದರು.

    ನಂದಾ ಬಾಗೇವಾಡಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸಕ್ಕೆ ಹೋದಾಗ ಚಿಕ್ಕಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಕೆಲ ತಾಯಂದಿರಿಗೆ ಇರುತ್ತದೆ. ಆದರೆ ಅವರನ್ನು ಕೂಲಿ ಮಾಡುವ ಸ್ಥಳದಲ್ಲಿ ಕರೆದೊಯ್ದು ಲಾಲನೆ, ಪಾಲನೆ ಮಾಡುವುದು ಕಷ್ಟಕರ. ಇಂಥ ಸಂದರ್ಭಕ್ಕೆ ನೆರವಾಗಲು ಕೂಸಿನ ಮನೆ ಯೋಜನೆ ಜಾರಿಗೊಳಿಸಲಾಗಿದೆ. ದುಡಿಯುವ ಮಹಿಳಾ ಕಾರ್ಮಿಕರು ತಮ್ಮ ಶಿಶುಗಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಅಕ್ಕಪಕ್ಕದರಿಗೂ ಈ ಸೌಲಭ್ಯದ ಮಾಹಿತಿ ನೀಡಬೇಕು. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

    ತಾಪಂ ಸಹಾಯಕ ನಿರ್ದೇಶಕ (ಉದ್ಯೋಗ ಖಾತ್ರಿ) ಪಿ.ಎಸ್. ಕಸನಕ್ಕಿ ಮಾತನಾಡಿ, ಮಕ್ಕಳ ಲಾಲನೆ, ಪಾಲನೆಗಾಗಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಸ್ಥಾಪನೆ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ 17 ಗ್ರಾಪಂಗಳನ್ನು ಕೂಸಿನ ಮನೆ ಪ್ರಾರಂಭಿಸಲು ಆಯ್ಕೆ ಮಾಡಲಾಗಿದೆ. ಸರ್ಕಾರದ ಉದ್ದೇಶ ಸಫಲವಾಗಬೇಕು. ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗಬೇಕು. ತಾಯಂದಿರು ಸ್ವತಂತ್ರವಾಗಿ ಕೆಲಸ ಮಾಡಲು ತಮ್ಮ 0-3 ವರ್ಷದೊಳಗಿನ ಮಕ್ಕಳ ಲಾಲನೆ, ಪಾಲನೆಗಾಗಿ ಶಿಶು ಪಾಲನಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಇವರು ಮಕ್ಕಳ ಪಾಲನೆ, ಪೋಷಣೆ ನೋಡಿಕೊಳ್ಳುತ್ತಾರೆ. ಈ ಮಕ್ಕಳಿಗೆ ಪೌಷ್ಠಿಕ ಆಹಾರ ದೊರಕಿಸಿಕೊಡಲು ಕ್ರಮ ಕೈಕೊಳ್ಳುತ್ತಾರೆ. ಈ ಕಾರ್ಯಕರ್ತೆಯರು ತಾಯಿಯಂತೆ ಕಾಳಜಿ ಮಾಡುವ ಮನೋಭಾವ ಹೊಂದಿರಬೇಕು ಎಂದರು.

    ಪಿಡಿಒ ಪಿ.ಎಸ್. ನಾಯ್ಕೋಡಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಸರ್ಕಾರಗಳು ರೂಪಿಸಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಇಂದಿನ ಅಗತ್ಯವಾಗಿದೆ. ಗ್ರಾಮೀಣ ಜನರನ್ನು ಎತ್ತಿ ಹಿಡಿಯಲು ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಇವುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಹತ್ವದ್ದಾಗಿದೆ. ಕೂಲಿ ಕಾರ್ಮಿಕರನ್ನು ಗ್ರಾಪಂ ಕೇಂದ್ರ ಸ್ಥಾನದಿಂದ ಕೆಲಸದ ಸ್ಥಳಕ್ಕೆ ಕಳಿಸಲು ಅವಕಾಶವಿದೆ. ಕೂಸಿನ ಮನೆ ದುಡಿಯುವ ಕೂಲಿ ಕಾರ್ಮಿಕ ಮಹಿಳೆಗೆ ಅತ್ಯುಪಯುಕ್ತವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ತಾಪಂ ತಾಂತ್ರಿಕ ಸಂಯೋಜಕ ಶಂಕರಗೌಡ ಯಾಳವಾರ, ತಾಪಂ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಪಂ ಕಾರ್ಯದರ್ಶಿ ಗಿರೀಶ ಬಿರಾದಾರ, ಗ್ರಾಪಂ ಸಿಬ್ಬಂದಿ, ಕೂಲಿ ಕಾರ್ಮಿಕ ತಾಯಂದಿರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts