More

    ಆತ್ಮಸಾಕ್ಷಿಯಿಂದ ಕೆಲಸ ಮಾಡಿ ; ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕರಿಗೆ ಸಂಸದ ಸುರೇಶ್ ತರಾಟೆ

    ಚನ್ನಪಟ್ಟಣ : ‘ವೈದ್ಯರಾಗಿ ನಿಮಗೆ ನಾಚಿಕೆಯಾಗಲ್ವೇ… ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೇಗೆ ರೋಗಿಗಳನ್ನು ನೋಡಿಕೊಳ್ಳುತ್ತಿದ್ದೀರಾ ಎಂಬುದು ತಿಳಿದಿದೆ, ಇದನ್ನು ನೋಡಿದವರು ನಿಮ್ಮ ಆಸ್ಪತ್ರೆಗೆ ಬರಬೇಕಾ? ರೋಗಿಗಳನ್ನು ನೋಡಿಕೊಳ್ಳುವುದಕ್ಕೂ ಒಂದು ರೀತಿ ನೀತಿ ಇರುತ್ತದೆ. ಮೊದಲು ಕಾಮನ್‌ಸೆನ್ಸ್ ಕಲಿಯಿರಿ…’

    ಇದು ಸಂಸದ ಡಿ.ಕೆ. ಸುರೇಶ್ ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕ ಡಾ. ವಿಜಯನರಸಿಂಹಗೆ ಕ್ಲಾಸ್ ತೆಗೆದುಕೊಂಡ ಪರಿ.
    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳಿಂದ ವಿವಿಧ ಮಾಹಿತಿ ಕಲೆಹಾಕಿದರು.

    ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕ ಡಾ. ವಿಜಯನರಸಿಂಹ ಅವರು ಆಸ್ಪತ್ರೆಯಲ್ಲಿರುವ ಕೇರ್ ಸೆಂಟರ್ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಂಸದ, ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಹೀನಾಯ ಸ್ಥಿತಿಯಲ್ಲಿದ್ದ ಬಗ್ಗೆ ನಿಮಗೆ ಫೋಟೋ ಕಳುಹಿಸಿಕೊಟ್ಟಿದ್ದೆ. ಅದನ್ನು ಕೇಳುತ್ತೇನೆ ಎಂದು ತಾವು ಸುತ್ತಿ ಬಳಸಿ ಮಾತನಾಡುತ್ತಿರುವುದು ನನಗೆ ತಿಳಿದಿದೆ. ಜನಕ್ಕೆ ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಇಲ್ಲದಿರುವುದು ನಿಮ್ಮಂತವರಿಂದಲೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಸ್ಪತ್ರೆಯಲ್ಲಿ ಆಕ್ಸಿಜನ್ ರೋಗಿಗಳಿಗೆ ಯಾವ ಔಷಧ ನೀಡುತ್ತಿದ್ದೀರಿ, ರೆಮ್‌ಡೆಸಿವಿರ್ ಇಂಜೆಕ್ಷನ್ ಎಷ್ಟು ಜನಕ್ಕೆ ಕೊಡುತ್ತಿದ್ದೀರಿ, ಡಿಮಾಂಡ್ ಇದೆ ಅಂಥ ನೀನೆ ಮಾರಿಕೊಂಡೆಯಾ? ಎಂದು ಪ್ರಶ್ನಿಸಿದರು. ಈ ವೇಳೆ ಖಾಲಿಯಾದ ಇಂಜೆಕ್ಷನ್‌ಗಳನ್ನು ದಾಸ್ತಾನು ಮಾಡಿದ್ದೇವೆ ಎಂಬ ಉತ್ತರಕ್ಕೆ ಪ್ರತಿಕ್ರಿಯಿಸಿದ ಸಂಸದ, ಖಾಲಿ ಬಾಟಲಿಗಳು ಎಷ್ಟು ಬೇಕು ಹೇಳಿ, ನಾನೇ ಕೊಡಿಸುತ್ತೇನೆ. ಈ ಸಂದರ್ಭದಲ್ಲಿ ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ತಪ್ಪುಗಳು ನಿಮ್ಮ ಕಡೆಯಿಂದ ನಡೆಯಬಾರದು ಎಂದು ತಾಕೀತು ಮಾಡಿದರು.

    ಸಿಬ್ಬಂದಿ ಕೊರತೆಯಿದೆ : ಸಾರ್ವಜನಿಕ ಆಸ್ಪತ್ರೆಯಲ್ಲಿ 53 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯಿದೆ. ಆಕ್ಸಿಜನ್ ಸೇರಿದಂತೆ ಯಾವುದೇ ಸಮಸ್ಯೆಗಳಿಲ್ಲ. ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ನಲ್ಲಿ 27 ಮಂದಿ ಆಕ್ಸಿಜನ್ ಬೆಡ್‌ನಲ್ಲಿದ್ದಾರೆ. 6 ವೆಂಟಿಲೇಟರ್‌ಗಳಿದ್ದು, ಅವುಗಳನ್ನು ಆಳವಡಿಸಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರೂಷಕರ ಕೊರತೆಯಿದ್ದು, ಇರುವುದರಲ್ಲೇ ನಿಭಾಯಿಸಿಕೊಂಡು ಹೋಗಲಾಗುತ್ತಿದೆ. ಆಸ್ಪತ್ರೆಯಲ್ಲಿ ತುರ್ತು ಹೆರಿಗೆ ಮಾಡಲು ಮಾತ್ರ ಸಾಧ್ಯವಾಗುತ್ತಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯನರಸಿಂಹ ಸಂಸದರ ಗಮನಕ್ಕೆ ತಂದರು. ವಿಧಾನಪರಿಷತ್ ಸದಸ್ಯ ಎಸ್.ರವಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಎಲ್. ನಾಗೇಶ್, ತಾಪಂ ಇಒ ಚಂದ್ರು ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರು ಹಾಗೂ ಗ್ರಾಪಂಗಳ ಪಿಡಿಒಗಳು ಇದ್ದರು.

    ರಿಯಾಲಿಟಿ ಚೆಕ್ ನಡೆಸಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ನೀಡುತ್ತಿರುವ ಆಹಾರ ಪದಾರ್ಥ ಹಾಗೂ ಪಡಿತರ ವಿತರಣೆ ಬಗ್ಗೆ ತಹಸೀಲ್ದಾರ್ ಮತ್ತು ಇಒ ರಿಯಾಲಿಟಿ ಚೆಕ್ ನಡೆಸಬೇಕು ಎಂದ ಡಿ.ಕೆ.ಸುರೇಶ್, ಕೆಲ ತಿಂಗಳಿಂದ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಿಸದೇ ಇರುವುದನ್ನು ಕೇಳಿ ಕೆಂಡಾಮಂಡಲವಾಗಿ, ಏಕೆ, ದಿನಸಿ ಹುಳ ತಿನ್ನಲಿ ಎಂದು ದಾಸ್ತಾನು ಇಟ್ಟುಕೊಂಡಿದ್ದೀರಾ? ನಾಳೆಯೇ ಮಕ್ಕಳಿಗೆ ಈ ಪದಾರ್ಥಗಳು ತಲುಪುವ ವ್ಯವಸ್ಥೆಯಾಗಬೇಕು. ಇಲ್ಲವಾದರೆ, ನಿಮ್ಮ ಮೇಲೆ ಕ್ರಮ ಜರುಗಿಸಲು ಶಿಾರಸು ಮಾಡಲಾಗುವುದು ಎಂದು ಅಕ್ಷರ ದಾಸೋಹ ಉಪನಿರ್ದೇಶಕ ಸಿದ್ದರಾಜುಗೆ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಾಲೂಕಿನ ಕರೊನಾ ಸಂಬಂಧಿತ ವರದಿಯನ್ನು ಸಂಸದರಿಗೆ ಒಪ್ಪಿಸಿದರು.

    ಮನೆಮನೆ ಸರ್ವೇ ನಡೆಸಿ : ನಗರಸಭೆ ಹಾಗೂ ಗ್ರಾಪಂಗಳು ತಮ್ಮಲ್ಲಿರುವ ಸಿಬ್ಬಂದಿ ಜತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಬೇಕು. 7 ದಿನಗಳ ಒಳಗೆ ವರದಿ ನೀಡಬೇಕು. ಅತಿಹೆಚ್ಚು ಸೋಂಕಿತರು ಇರುವ ಕಡೆ ನಿಗಾ ವಹಿಸಬೇಕು. ಹೊರಗಡೆಯಿಂದ ಬಂದವರ ಮಾಹಿತಿ ಸಂಗ್ರಹಿಸಬೇಕು. ಸ್ಥಳೀಯ ಸಂಸ್ಥೆಗಳು ಕೇವಲ ಸ್ಯಾನಿಟೈಸರ್ ಸಿಂಪಡಿಸಿದರೆ ಕೆಲಸ ಮುಗಿಯಿತು ಎಂಬುದನ್ನು ಬಿಟ್ಟು ಜನಪ್ರತಿನಿಧಿಗಳು ಒಳಗೊಂಡಂತೆ ತಳಮಟ್ಟದಲ್ಲಿ ಕೋವಿಡ್ ನಿಗ್ರಹಕ್ಕೆ ಕಾರ್ಯನಿರ್ವಹಿಸಬೇಕು ಎಂದು ಡಿ.ಕೆ. ಸುರೇಶ್ ಕರೆ ನೀಡಿದರು.

    ಪರೀಕ್ಷೆ ಕಡಿಮೆ ಮಾಡಬಾರದು : ಯಾವುದೇ ಕಾರಣಕ್ಕೂ ಕರೊನಾ ಪರೀಕ್ಷೆಯನ್ನು ಕಡಿಮೆಗೊಳಿಸಬಾರದು. ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಪರೀಕ್ಷೆ ಮಾಡುವುದನ್ನು ಕಡಿಮೆಗೊಳಿಸಿದರೆ, ಆಗುವ ಅನಾಹುತಗಳಿಗೆ ಆರೋಗ್ಯ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಸಂಸದರು ಎಚ್ಚರಿಸಿದರು.

    ಅಂಗಡಿಗಳನ್ನು ಸೀಜ್ ಮಾಡಿ : ಗ್ರಾಮಾಂತರ ಪ್ರದೇಶದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುತ್ತಿರುವ ಮಾಹಿತಿ ಬಂದಿದೆ. ಪೊಲೀಸರು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು. ಬೆಳಗ್ಗೆ 10 ಗಂಟೆ ನಂತರ ವ್ಯಾಪಾರ ವಹಿವಾಟು ನಡೆಸುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು. ಕೇವಲ ದಂಡ ವಿಧಿಸದೆ ಅಂಗಡಿಗಳನ್ನು ಸೀಜ್ ಮಾಡುವ ಮೂಲಕ ಎಚ್ಚರಿಕೆ ರವಾನಿಸಬೇಕು ಎಂದು ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್‌ಗೆ ಡಿ.ಕೆ. ಸುರೇಶ್ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts