More

    ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ?

    ಚನ್ನಪಟ್ಟಣ: ಬಿಜೆಪಿ ಸರ್ಕಾರದ ಕಮಿಷನ್ ಕಾಟದಿಂದಾಗಿ ರಾಜ್ಯದ ಎಷ್ಟೋ ಕುಟುಂಬಗಳು ಅನಾಥವಾಯಿತು. ನಿಮಗೆ ಬರಬೇಕಾದ ಕಮಿಷನ್ ನೀಡುತ್ತೇವೆ. ಆದರೆ, ಕಳೆದುಕೊಂಡ ಮಾಂಗಲ್ಯ ಮರಳಿ ಕೊಡುತ್ತೀರಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದರು.

    ತಾಲೂಕಿನ ಕೆಂಗಲ್ ಬಳಿ ಭಾನುವಾರ ನಡೆದ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ 40% ಸರ್ಕಾರ ಇದೆ. ಸಿಎಂ ಹೋದ ಕಡೆಯೆಲ್ಲ 40% ಸಿಎಂ ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತಿದೆ. ಕರ್ನಾಟಕ ಸಿಎಂ ಪೇಸಿಎಂ ಎಂದು ಖ್ಯಾತರಾಗಿರುವುದು ಮೋದಿಗೆ ನಾಚಿಕೆ ತರಬೇಕು. ರಾಜ್ಯದಲ್ಲಿರುವುದು 40% ಸರ್ಕಾರ ಎಂದು ನಾವು ಹೇಳುತ್ತಿಲ್ಲ, ರಾಜ್ಯದ ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. ಈ ಮಧ್ಯೆ ಪ್ರಧಾನಿಗಳು ರಾಜ್ಯಕ್ಕೆ 8 ಬಾರಿ ಬಂದರೂ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಗುತ್ತಿಗೆದಾರರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಟೀಕಿಸಿದರು.

    ರಾಜ್ಯ ಸರ್ಕಾರದ ಕಮಿಷನ್ ಕಾಟಕ್ಕೆ ಅವರದೇ ಪಕ್ಷದ ಕಾರ್ಯಕರ್ತನೊಬ್ಬ ಬಲಿಯಾದ. ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ ಸುರ್ಜೇವಾಲಾ, ಕೇವಲ ಕಾರ್ಯಕರ್ತನೊಬ್ಬನೇ ಅಲ್ಲ ರಾಜ್ಯದ ಹಲವರು ಬಿಜೆಪಿ ಸರ್ಕಾರದ ಕಮಿಷನ್ ಕಾಟಕ್ಕೆ ಬಲಿಯಾಗಿದ್ದಾರೆ. ಶಾಲೆ ಅನುದಾನಕ್ಕೆ ಕಮಿಷನ್ ಇರಲಿ, ಇದೀಗ ಮಠದ ಅನುದಾನಕ್ಕೂ ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿಯೋಬ್ಬರೇ ಆರೋಪಿಸಿದ್ದಾರೆ. ರಾಜ್ಯದ ಮಂತ್ರಿಗಳು ಸೇರಿ 17 ಶಾಸಕರ ವಿರುದ್ಧ ಕಮಿಷನ್ ಆರೋಪವಿದೆ. ಆದರೆ, ಯಾರ ವಿರುದ್ಧವೂ ಕ್ರಮವಿಲ್ಲ ಎಂದರು.
    ವರ್ಗಾವಣೆ ಸೇರಿ ಯಾವುದರಲ್ಲೂ ಬಿಜೆಪಿ ಸರ್ಕಾರ ಕಮಿಷನ್ ಬಿಡುತ್ತಿಲ್ಲ. ಇದೀಗ, ಸೋಪ್ ಕಾರ್ಖಾನೆಯನ್ನು ತೊಳೆಯಲು ನಿಂತಿದ್ದಾರೆ. 20 ರೂ. ಸಾಬೂನಿನಲ್ಲಿ ಇಷ್ಟು ಹಗರಣ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅಮಿತ್ ಶಾ ಸಾಕ್ಷಿ ಕೇಳುತ್ತಾರೆ. ಜನ ಒಗ್ಗಟ್ಟಾಗದಿದ್ದರೆ ಬಿಜೆಪಿಯವರು ರಾಜ್ಯವನ್ನೇ ಮಾರುತ್ತಾರೆ ಎಂದು ಕುಟುಕಿದರು. ರಾಜ್ಯದಲ್ಲಿ ಇನ್ನೊಂದು ಪಕ್ಷವಿದೆ. ಅದು ಬಿಜೆಪಿ ತೊಡೆ ಮೇಲೆ ಇಷ್ಟ ಬಂದಾಗ ಕೂರುತ್ತದೆ. ಅದು ಬಿಜೆಪಿ ಬಿ ಟೀಂ ಅಲ್ಲ. ಎ ಟು ಝಡ್ ಟೀಂ. ಕಾಲಕ್ಕೆ ತಕ್ಕಂತೆ ಬದಲಾಗುವ ಪಕ್ಷ. ಜೆಡಿಎಸ್ ಬೆಂಬಲಿಸಿದರೆ ಮತ್ತೆ ಬಿಜೆಪಿಗೆ ಅಧಿಕಾರ ನೀಡಿದಂತೆ ಎಂದು ಅಭಿಪ್ರಾಯಪಟ್ಟರು.

    ಬೆಲೆ ಏರಿಕೆಗೆ ವಿರೋಧವಿಲ್ಲ: ಬಿಜೆಪಿ ಸರ್ಕಾರದಲ್ಲಿ ಅನೇಕ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಡುವ ಸಮಯ ಬಂದಿದೆ. ರಾಜ್ಯದಲ್ಲಿ ಸಿಡಿಗೆ ಮಾತ್ರ ಬಿಜೆಪಿ ಸರ್ಕಾರ ಹೆಸರುವಾಸಿಯಾಗಿದೆ. ಇದರ ಮಧ್ಯೆ ಜನತಾ ದಳದವರು ಒಂದೇ ಒಂದು ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿದ್ದಾರಾ? ಹಿಂದೆ ಜನತಾ ದಳದವರು ಬೆಲೆ ಏರಿಕೆ ಖಂಡಿಸಿ ಸೀಮೆಎಣ್ಣೆ ಡಬ್ಬ ತಲೆಮೇಲೆ ಹೊತ್ತು ಪ್ರತಿಭಟಿಸಿದರು. ಇವತ್ತು ಗ್ಯಾಸ್ ಬೆಲೆ ಏರಿಕೆ ಬಗ್ಗೆ ಒಂದೇ ಒಂದು ಹೋರಾಟ ಸಹ ಮಾಡಲಿಲ್ಲ. ಬೆಲೆ ಏರಿಕೆ ಬಗ್ಗೆ ಯಾಕೋ ದೇವೇಗೌಡರ ಪಾರ್ಟಿ ಸಹ ಮಾತನಾಡುತ್ತಿಲ್ಲ ಎಂದು ಡಿ.ಕೆ. ಸುರೇಶ್ ಆರೋಪಿಸಿದರು. ಜಿಲ್ಲೆಯ ಜನತೆ ಕೆಂಗಲ್ ಹನುಮಂತಯ್ಯ, ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಸಿಎಂ ಸ್ಥಾನ ಕೊಡಿಸಿದ್ದೀರಿ. ಈ ಬಾರಿ ನಾಲ್ಕೂ ಸ್ಥಾನ ಗೆಲ್ಲಿಸುವ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸಬೇಕು ಎಂದು ಡಿ.ಕೆ. ಸುರೇಶ್ ಮನವಿ ಮಾಡಿದರು.

    ಕಾಂಗ್ರೆಸ್ ಎಂದಿಗೂ ಜನಪರ: ನೆಹರು ಕಾಲದಿಂದಲೂ ಬಡವರು, ಮಹಿಳೆಯರನ್ನು ಗಮನದಲ್ಲಿಟ್ಡುಕೊಂಡು ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಮತಕ್ಕಾಗಿ ಎಂದೂ ಕಾರ್ಯಕ್ರಮ ನೀಡುವುದಿಲ್ಲ. ಜನರ ಹಿತಕ್ಕಾಗಿ ಕಾರ್ಯಕ್ರಮ ನೀಡುತ್ತೇವೆ. ಜನಸಾಮಾನ್ಯರ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಧ್ಯೇಯ. ಅದರ ಭಾಗವೇ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು. 450 ರೂ. ಇದ್ದ ಗ್ಯಾಸ್ ಬೆಲೆ ಇಂದು 2200 ರೂ. ಆಗಿದೆ. ರೈತಪರ, ಬಡವರ ಪರ ಎನ್ನುವವರು ಯಾರು ಸಹ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಸಂಸದ ಟಿ.ಕೆ. ಸುರೇಶ್ ಟೀಕಿಸಿದರು. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಪ್ರಚಾರಕ್ಕೆ ಹೊರಟಿವೆ. ಜೆಡಿಎಸ್ ಪಂಚರತ್ನ ಯಾತ್ರೆ ಮಾಡುತ್ತಿದ್ದರೆ, ಬಿಜೆಪಿಯವರು ವಿಜಯಸಂಕಲ್ಪ ಯಾತ್ರೆ ಮೂಲಕ 40% ಸರ್ಕಾರ ಕೊಡುವುದಾಗಿ ಹೊರಟಿದ್ದಾರೆ. ಆದರೆ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಬೇಕು ಎಂದು ಕಾಂಗ್ರೆಸ್ ಪ್ರಜಾಧ್ವನಿ ನಡೆಸುತ್ತಿದೆ ಎಂದರು.

    ವಿಜಯವಾಣಿ ಸುದ್ದಿಜಾಲ ಚನ್ನಪಟ್ಟಣ: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಚುನಾವಣೆಗಾಗಿ ಅವರು ಪ್ರಚಾರ ನಡೆಸುತ್ತಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಪ್ರಚಾರದ ಜತೆಗೆ ಈ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಗ್ಗೆ ಪ್ರಧಾನಮಂತ್ರಿ ಹಾಗೂ ಆ ಪಕ್ಷದ ನಾಯಕರು ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ಒತ್ತಾಯಿಸಿದರು.

    ತಾಲೂಕಿನ ಕೆಂಗಲ್ ಬಳಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದ ಸಂಕಲ್ಪ ಯಾತ್ರೆಯ ಬಗ್ಗೆ ಲೇವಡಿ ಮಾಡಿದರು. ಬಿಜೆಪಿ ಸರ್ಕಾರದ 40% ಕಮಿಷನ್ ಸಾಬೀತಾಗುತ್ತಿದೆ. ಉದ್ಯೋಗಕ್ಕೋಸ್ಕರ ಹಣ ವಸೂಲಿ ಮಾಡಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ. ಎಲ್ಲ ಉದ್ಯೋಗಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಕುರಿತು ವಿಜಯಸಂಕಲ್ಪ ಯಾತ್ರೆಯಲ್ಲಿ ಆ ಪಕ್ಷದ ನಾಯಕರು ಸತ್ಯ ಹೇಳಬೇಕು ಎಂದು ಆಗ್ರಹಿಸಿದರು.

    ಅವರ ಡಬಲ್ ಇಂಜಿನ್ ಸರ್ಕಾರ ಇದ್ದರೂ ಬೆಲೆ ಏರಿಕೆ ಯಾಕೆ ತಡೆಯಲಿಲ್ಲ. ಜೀವನ ನಡೆಸುವುದು ಹೇಗೆಂದು ಜನ ಆತಂಕದಲ್ಲಿದ್ದಾರೆ. ಅದಕ್ಕೆ ಬಿಜೆಪಿಯ ಪರಿಹಾರ ಏನು ಅಂತ ಸಹ ಜನರಿಗೆ ತಿಳಿಸಬೇಕು. ಅವರು ರಾಜಕೀಯವಾಗಿ ಏನೇ ಮಾತಾಡಿದರೂ ನಮಗೆ ಲೆಕ್ಕ ಇಲ್ಲ. ನಾವು ಸಹ ಚುನಾವಣೆಗೆ ಸಿದ್ಧವಾಗಿದ್ದೇವೆ. ಶೀಘ್ರದಲ್ಲೇ ಜನ ತೀರ್ಪು ಕೊಡುತ್ತಾರೆ. ಬಿಜೆಪಿಯ ವಿಜಯದ ಸಂಕೇತ ಎಲ್ಲವೂ ಮುಗಿದಿದೆ. ಮುಂದಿನ ದಿನಗಳಲ್ಲಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಜನ ಬುದ್ದಿ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.

    ಕುಂಟುವವರು ಅವರೇ: ಡಿಕೆಶಿ ಹಾಗೂ ಎಚ್‌ಡಿಕೆ ಈಗ ಜೋಡೆತ್ತುಗಳಲ್ಲ, ಕುಂಟೆತ್ತು ಎಂಬ ಕಂದಾಯ ಸಚಿವ ಆರ.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಅಶೋಕ್ ಜತೆಯಲ್ಲಿರುವವರೆಲ್ಲಾ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ ಎಲ್ಲ ವಿಚಾರದಲ್ಲೂ ಕುಂಟುತ್ತಲೇ ಬಂದಿದೆ. ಮಾಧ್ಯಮದಲ್ಲಿ ದಿನ ತೋರಿಸುವುದಿಲ್ಲವೇ? ಯಾರು ಯಾರ ಸಿಡಿ ಬಂತು, ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು? ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ? ಸುಮಾರು ಎಂಟು ಕೋಟಿ ವಿಚಾರದಲ್ಲಿ ಅವರ ಕುಂಟೆತ್ತು.. ಜೋಡೆತ್ತು ಹೇಳಬೇಕೇ ಹೊರತು ಬೇರೆಯವರಲ್ಲ ಎಂದು ಕುಟುಕಿದರು. ಜಿಲ್ಲೆ ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಎಂಬ ಆರ್.ಅಶೋಕ್ ಅವರ ಮತ್ತೊಂದು ಹೇಳಿಕೆಗೆ ಕೆಂಡಾಮಂಡಲರಾದ ಸುರೇಶ್, ಅಶೋಕ್ ಅವರಿಗೆ ಅಭಿವೃದ್ಧಿ ಅಂದರೆ ಗೊತ್ತಿದ್ಯಾ? ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರವನ್ನು ಮೊದಲು ತಡೆಯಲಿ. ನಂತರ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದರು.

    ಬಿಜೆಪಿಯವರಿಗೆ ಭಯ: ಮುಂಬರುವ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ನಿರುದ್ಯೋಗಿಗಳಾಗುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ರಾಜ್ಯದ ಹಾಗೂ ದೇಶದ ಜನರನ್ನು ನಿರುದ್ಯೋಗಿಗಳಾಗಿ ಮಾಡಿದ್ದೇವೆ ಎಂದು ಬಿಜೆಪಿಯವರಿಗೆ ಭಯ ಇದೆ. ಈಗ ಯುವಕರು ಬುದ್ಧಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗದ ಟೋಪಿಯನ್ನು ಚುನಾವಣೆಯಲ್ಲಿ ನಿಮಗೆ ಹಾಕುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts