More

    ಅಮ್ಮನ ನಿದ್ದೆ ಕಸಿದ ಕರೊನಾ; ಮನೆಯಿಂದಲೂ ಕೆಲಸ, ಮನೆಯಲ್ಲೂ ಕೆಲಸ..

    ಇದು ಲಾಕ್​ಡೌನ್ ಸಂದರ್ಭ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಜನರನ್ನು ನಿಯಂತ್ರಿಸುವುದು ರಾಜ್ಯದ ಹೋಮ್ ಮಿನಿಸ್ಟರ್​ಗೆ ಮಾತ್ರವಲ್ಲ, ಪ್ರತಿಯೊಂದು ಮನೆಯ ಹೋಮ್ ಮಿನಿಸ್ಟರ್​ಗೂ ತಲೆನೋವೇ. ಉದ್ಯೋಗಸ್ಥ ಅಮ್ಮಂದಿರಿಗಂತೂ ಈ ಸಮಯ ಸಂಕಟಮಯ. ಅವರ ನಿದ್ದೆಯ ಬಹುಪಾಲನ್ನು ಕರೊನಾ ಕಸಿದುಕೊಂಡಿದೆ. ಈ ಕುರಿತು ಅಧ್ಯಯನ ಏನು ಹೇಳಿದೆ ನೋಡಿ.

    | ರವಿಕಾಂತ ಕುಂದಾಪುರ

    ‘ತಗೋ ಟೀ..’ ಎಂದು ಬೇಡ ಬೇಡವೆಂದರೂ ತಿಂಡಿತಿನಿಸು ತಂದು ಕೊಡುವ ಅಮ್ಮ; ‘ಅಮ್ಮಾ.. ಒಂದು ಟೀ..’ ಎಂದು ಮೇಲಿಂದ ಮೇಲೆ ಎಲ್ಲವನ್ನೂ ತರಿಸಿಕೊಳ್ಳುವ ಮಕ್ಕಳು.. ಇದೀಗ ಕರೊನಾ ಕಾಲಘಟ್ಟದಲ್ಲಿ ನಡೆಯುತ್ತಿರುವ ವರ್ಕ್ ಫ್ರಮ್ ಹೋಮ್ ವಾತಾವರಣದಲ್ಲಿ ಇಂಥ ಸನ್ನಿವೇಶಗಳು ಸರ್ವೆ ಸಾಮಾನ್ಯ.

    ಆದರೆ ಸ್ವತಃ ವರ್ಕಿಂಗ್ ವುಮನ್ ಎನಿಸಿಕೊಂಡಿರುವ ಅಮ್ಮಂದಿರಿಗೆ ಈ ಪರಿಸ್ಥಿತಿ ಒಂಥರಾ ನುಂಗಲೂ ಆಗದ ಉಗಿಯಲೂ ಆಗದ ತುತ್ತಿನಂತೆ ಆಗಿದೆ. ಉದ್ಯೋಗಸ್ಥ ಅಮ್ಮಂದಿರಿಗೆ ಇದರಿಂದಾಗಿ ‘ಮನೆಯಿಂದಲೂ ಕೆಲಸ, ಮನೆಯಲ್ಲೂ ಕೆಲಸ’ ಎಂಬಂತಾಗಿದ್ದು, ಅವರ ದೈನಂದಿನ ಜೀವನದ ಒತ್ತಡ ಹೆಚ್ಚಾಗಿದೆ.

    ಕಳೆದೊಂದು ವರ್ಷದಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಸ್ಥ ಮಹಿಳೆಯರು ಹೈರಾಣಾಗಿರುವ ಕುರಿತಂತೆ ಬಂದಿರುವ ಸುದ್ದಿಗಳು, ವರದಿಗಳು, ಅಧ್ಯಯನಗಳಿಗೆ ಲೆಕ್ಕವೇ ಇಲ್ಲ. ಅದರ ಮಧ್ಯೆಯೇ ಇದೀಗ ಇನ್ನೊಂದು ಅಧ್ಯಯನ ವರದಿ ಬಂದಿದ್ದು, ಕರೊನಾ ಎಂಬ ಹೆಮ್ಮಾರಿ ಹೇಗೆ ಅಮ್ಮಂದಿರ ನಿದ್ದೆಯನ್ನು ಕಸಿದುಕೊಂಡಿದೆ ಎಂಬ ಬಗ್ಗೆ ವಿವರಣೆ ನೀಡಿದೆ. ಅದರಲ್ಲೂ ವರ್ಕಿಂಗ್ ಅಮ್ಮಂದಿರ ನಿದ್ದೆಯ ಮೇಲಾಗಿರುವ ದುಷ್ಪರಿಣಾಮಗಳನ್ನು ಈ ವರದಿ ಬಹಿರಂಗಗೊಳಿಸಿದೆ.

    ಮಾರುಕಟ್ಟೆ ಅಧ್ಯಯನ ಏಜೆನ್ಸಿ ಆಗಿರುವ ‘ಮಾರ್ಕೆಟ್ ಎಕ್ಸೆಲ್ ಡೇಟಾ ಮ್ಯಾಟ್ರಿಕ್ಸ್’ ಎಂಬ ಸಂಸ್ಥೆ ಕರೊನಾ ಬಂದ ನಂತರದ ಅವಧಿಯಲ್ಲಿ ರ್ವಂಗ್ ಅಮ್ಮಂದಿರ ಜೀವನದಲ್ಲಿ ಆಗಿರುವ ಏರುಪೇರುಗಳ ಕುರಿತು ರಾಷ್ಟ್ರಮಟ್ಟದ ಒಂದು ಸಮೀಕ್ಷೆಯನ್ನು ನಡೆಸಿದೆ. ಒಂದು ವರ್ಷದಲ್ಲಿ ಉದ್ಯೋಗಸ್ಥ ಅಮ್ಮಂದಿರ ನಿದ್ರೆ ಗಣನೀಯವಾಗಿ ಕಡಿಮೆಯಾಗಿದ್ದರೆ, ಕುಟುಂಬಸ್ಥರನ್ನು ಹಿರಿಯರನ್ನು ಆರೈಕೆ ಮಾಡುವ ಜವಾಬ್ದಾರಿ ಗಣನೀಯವಾಗಿ ಏರಿರುವುದನ್ನು ಸಮೀಕ್ಷೆಯ ಅಂಶಗಳು ತಿಳಿಸಿವೆ.

    ವಿರಾಮವೇ ಇಲ್ಲ, ಇನ್ನೆಲ್ಲಿ ಆರಾಮ?

    ಉದ್ಯೋಗಸ್ಥ ಅಮ್ಮಂದಿರ ದೈನಂದಿನ ಸರಾಸರಿ ನಿದ್ರೆ ಕೋವಿಡ್ ಮುಂಚಿನ ವರ್ಷದಲ್ಲಿ ಅಂದರೆ 2020ಕ್ಕೂ ಮುನ್ನ ದಿನಕ್ಕೆ 6.50 ಗಂಟೆ ಇದ್ದಿದ್ದು ಈಗ 5.50 ಗಂಟೆಗೆ ಇಳಿದಿದೆ. ಈ ಮೂಲಕ ಅವರ ನಿದ್ರೆಯಲ್ಲಿ ಶೇ. 17 ಇಳಿಕೆ ಕಂಡುಬಂದಿದೆ. ಇನ್ನು ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಅವರು ಹಿರಿಯರು ಹಾಗೂ ಕುಟುಂಬಸ್ಥರನ್ನು ನೋಡಿಕೊಳ್ಳುವ ಕೆಲಸದ ಸಮಯ ದಿನಕ್ಕೆ ಒಂದೂವರೆ ಗಂಟೆಯಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಈ ತಾಯಂದಿರ ವ್ಯಾಯಾಮ ಹಾಗೂ ಮನೋರಂಜನೆಗೆ ಸಿಗುತ್ತಿದ್ದ ಸಮಯದಲ್ಲೂ ತೀವ್ರ ಕಡಿತವಾಗಿದೆ. ಹೀಗೆ ವಿರಾಮವೇ ಇರದೆ ಕೆಲಸ ಮಾಡುತ್ತಿರುವ ಉದ್ಯೋಗಸ್ಥ ಅಮ್ಮಂದಿರಿಗೆ ಒಂಚೂರೂ ಆರಾಮ ಇಲ್ಲದಂತಾಗಿದೆ.

    ವೃತ್ತಿ ನಿರ್ವಹಣೆಯ ಸಂಕಷ್ಟ

    ಮನೆಗೆಲಸದ ಜತೆಗೇ ಮನೆಯಿಂದಲೂ ಕೆಲಸ ಮಾಡಬೇಕಾಗಿರುವುದರಿಂದ ಈ ಅಮ್ಮಂದಿರ ವೃತ್ತಿ ನಿರ್ವಹಣೆಯೂ ಕಷ್ಟಕರವಾಗಿ ಪರಿಣಮಿಸಿದೆ. ಹೊರಗೆ ಕಚೇರಿಗೆ ಹೋಗುತ್ತಿದ್ದ ಸಮಯದಲ್ಲಿ ಸಲೀಸಾಗಿ ಕೆಲಸ ಮಾಡುತ್ತಿದ್ದ ಇವರು ಇದೀಗ ಮನೆಯಲ್ಲಿ ಅದೇ ಕೆಲಸ ಮಾಡಲು ಪರದಾಡುವಂತಾಗಿದೆ. ಮಾತ್ರವಲ್ಲ ಮೊದಲು 6 ಗಂಟೆ 50 ನಿಮಿಷಗಳಲ್ಲಿ ನಿಭಾಯಿಸುತ್ತಿದ್ದ ಅದೇ ಕೆಲಸವನ್ನು ಪೂರ್ಣಗೊಳಿಸಲು ಈಗ 8 ಗಂಟೆ 55 ನಿಮಿಷ ತಗಲುತ್ತಿದೆ.

    ಕೆಲಸ-ಮಕ್ಕಳ ಜವಾಬ್ದಾರಿ

    ಶಾಲೆಕಾಲೇಜುಗಳು ಇಲ್ಲವಾದ್ದರಿಂದ ಮಕ್ಕಳು ಮನೆಯಲ್ಲೇ ಇದ್ದಾರೆ. ಅವರ ಆನ್​ಲೈನ್ ಕ್ಲಾಸ್​ಗೆ ಅಮ್ಮನೇ ಸಹಾಯ ಮಾಡಬೇಕಿದೆ. ಉದ್ಯೋಗಸ್ಥ ತಾಯಂದಿರ ಮನೆಗೆಲಸ ಶೇ. 30 ಹೆಚ್ಚಾಗಿದ್ದು, ಅದರಲ್ಲಿ ಶೇ. 26 ಮಕ್ಕಳ ಆರೈಕೆಗೆ ಸಂಬಂಧಿಸಿದ್ದು. ಶಾಲೆಗಳಿಂದ ಸರಿಯಾದ ಮಾಹಿತಿ ಸಿಗದ್ದರಿಂದ ಅಮ್ಮಂದಿರೇ ಎಲ್ಲವನ್ನೂ ನಿಭಾಯಿಸಬೇಕಿದೆ. ಇನ್ನು ಕರೊನಾ ಕಾರಣಕ್ಕೆ ಮನೆಗೆಲಸದವರು ಕೂಡ ಬರುತ್ತಿಲ್ಲವಾದ್ದರಿಂದ ಆಕೆ ಮಾಡುತ್ತಿದ್ದ ಕೆಲಸಗಳನ್ನೂ ಅಮ್ಮಂದಿರೇ ಮಾಡಬೇಕಾಗಿದೆ. ಇವು ಕೂಡ ಅಮ್ಮಂದಿರ ನಿದ್ದೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ.

    1200 ಅಮ್ಮಂದಿರು ಭಾಗಿ

    ದೇಶದ17 ರಾಜ್ಯಗಳಲ್ಲಿ ಈ ಸರ್ವೆ ನಡೆಸಲಾಗಿದೆ. 25ರಿಂದ 45 ವರ್ಷ ವಯೋಮಾನದ ಉದ್ಯೋಗಸ್ಥ ಅಮ್ಮಂದಿರನ್ನು ಮಾತ್ರ ಪರಿಗಣಿಸಲಾಗಿದ್ದು, ಇದರಲ್ಲಿ ಉದ್ಯೋಗದಲ್ಲಿರುವ ಒಟ್ಟು 1,200 ಅಮ್ಮಂದಿರು ಭಾಗವಹಿಸಿದ್ದಾರೆ.

    ಬ್ಲ್ಯಾಕ್ ​ಫಂಗಸ್ ಔಷಧ; ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಶೋಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts