More

    ತಾಳೆಗರಿ ಗ್ರಂಥಗಳ ವಿಸ್ಮಯಲೋಕ

    ನಮ್ಮ ಹಿಂದಿನವರಿಗೆ ಇಂದಿನ ಹಾಗೆ ಕಂಪ್ಯೂಟರಿನ ಸವಲತ್ತು ಇದ್ದಿದ್ದರೆ ಇನ್ನೂ ಹೆಚ್ಚಿನ ಕೃತಿಗಳು ಸೃಷ್ಟಿಯಾಗುತ್ತಿದ್ದವೇನೋ? ಯಾವುದೇ ಸೌಕರ್ಯ ಇಲ್ಲದ ಕಾಲದಲ್ಲೂ, ಕಷ್ಟಪಟ್ಟು ಅಮೂಲ್ಯ ಕೃತಿಗಳನ್ನು ರಚಿಸಿದ ಪೂರ್ವಜರ ಶ್ರಮವನ್ನು ನಾವು ಪ್ರಶಂಸಿಸಲೇಬೇಕು.

    ತಾಳೆಗರಿ ಗ್ರಂಥಗಳ ವಿಸ್ಮಯಲೋಕಈ ಸಲ ಕೋವಿಡ್​ನಿಂದಾಗಿ ಹೆಚ್ಚು ದಿನ ಮನೆಯಲ್ಲೇ ಉಳಿಯಬೇಕಾದ ಸಂದರ್ಭ ಬಂದಿತ್ತು. ಹೀಗಾಗಿ ಬಿಡುವಿನ ವೇಳೆ ಕಳೆಯುವುದಕ್ಕಾಗಿ ಮತ್ತು ಸದುಪಯೋಗಕ್ಕಾಗಿ ನಮ್ಮ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ. ಇಲ್ಲಿ ಬಹುಭಾಷೆಯ, ಬಹುಲಿಪಿಯ ಬಹುಮೂಲ್ಯ ಗ್ರಂಥಗಳ ಸಂಗ್ರಹವಿದೆ. ಇಲ್ಲಿ ಸುಮಾರು 24,000ಕ್ಕಿಂತ ಹೆಚ್ಚು ಮುದ್ರಿತಗ್ರಂಥಗಳು ಮತ್ತು ಆರು ಸಾವಿರಕ್ಕೂ ಮಿಕ್ಕಿದ ತಾಳೆಗರಿ ಗ್ರಂಥಗಳಿವೆ. ಇವೆಲ್ಲವನ್ನೂ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಸಂರಕ್ಷಿಸಿಡಲಾಗಿದೆ.

    ತಾಳೆಗರಿ ಗ್ರಂಥಗಳನ್ನು ಅವಲೋಕಿಸುವಾಗ ಅಂದಿನ ಗ್ರಂಥಕರ್ತರು ಇವನ್ನು ಹೇಗೆ ರಚನೆ ಮಾಡಿರಬಹುದು ಎಂಬ ಕುತೂಹಲ ಸಹಜ. ಅಂದು ಕಾಗದಗಳೇ ಇಲ್ಲದಿದ್ದ ಕಾಲದಲ್ಲಿ ತಮ್ಮ ಸಾಹಿತ್ಯವನ್ನು ಬೇರೆ ಓಲೆಗರಿಗಳ ಮೇಲೆ ಬರೆದು ಮತ್ತೆ ಪ್ರತಿತೆಗೆಯುತ್ತಿದ್ದರೋ ಗೊತ್ತಿಲ್ಲ. ನಮ್ಮಲ್ಲಿರುವ ಯಾವ ತಾಳೆಗರಿ ಗ್ರಂಥ ಅವಲೋಕಿಸಿದರೂ ಎಲ್ಲಿಯೂ ತಿದ್ದಿ ಸರಿಪಡಿಸಿದ ಕುರುಹು ಕಂಡುಬರುವುದಿಲ್ಲ. ತಾಳೆಗರಿಗಳ ಮೇಲೆ ಕಂಟಕದಿಂದ ಅಕ್ಷರಗಳು ಸ್ಪುಟವಾಗಿ ಮೂಡುವಂತೆ ಒತ್ತಿ ಬರೆಯುವುದೂ ಒಂದು ಅದ್ಭುತ ಕಲೆ.

    ಈ ಸಂಗ್ರಹಾಲಯದಲ್ಲಿ 7ಘಿ2 ಸೆಂಟಿಮೀಟರ್ ಗಾತ್ರದ, ವೈದ್ಯಕೀಯಕ್ಕೆ ಸಂಬಂಧಿಸಿದ ‘ವೈದ್ಯ ಸಂಗ್ರಹ’ ಎಂಬ ಗ್ರಂಥವಿದೆ. ವಿಷಯವನ್ನು ಸಂಕ್ಷಿಪ್ತವಾಗಿ ಬರೆದು, ಬೇಕಾದ ಔಷಧ ತಕ್ಷಣ ಸಿಗುವಂತೆ ಮತ್ತು ದೂರ ಪ್ರವಾಸದ ವೇಳೆ ಒಯ್ಯಲು ಅನುಕೂಲವಾಗಲೆಂದು ಬಹುಶಃ ಸಣ್ಣ ಓಲೆಗರಿಯಲ್ಲಿ ಸಂಗ್ರಹಿಸಿರಬೇಕು. ಹಿಂದೂ, ಜೈನ, ಬೌದ್ಧ ಧರ್ಮಗಳು, ಗುರುಗಳು, ವಿದ್ವಾಂಸರು ಬರೆದ ರೋಗಿಗಳ ಲಕ್ಷಣಗಳು, ರೋಗಕಾರಣಗಳು ಮತ್ತು ಸೂಕ್ತ ಔಷಧಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲಿದೆ.

    ತಾಳೆಗರಿ ಗ್ರಂಥಗಳು ನಮ್ಮ ಹಿಂದಿನವರ ಶ್ರದ್ಧೆ, ತಿಳಿವಳಿಕೆ ಮತ್ತು ವಿಷಯವೈವಿಧ್ಯವನ್ನು ತೋರಿಸುತ್ತವೆ. ವೈದ್ಯಕೀಯ ಗ್ರಂಥಗಳ ಜತೆಗೆ ಜ್ಯೋತಿಷ ಶಕುನ, ಇತಿಹಾಸ ಪುರಾಣ ಮತ್ತು ಸಾಧನೆಗೆ ಸೋಪಾನಗಳಾದ ಮಂತ್ರ, ತಂತ್ರ ಯಂತ್ರಗಳ ನಿರೂಪಣೆಯ ಗ್ರಂಥಗಳಿವೆ. ಈ ಪೈಕಿ ಹಲವು ಪ್ರಕಟಣೆಯ ಯೋಗ ಪಡೆಯಲಿಲ್ಲ. ಈ ವೈಜ್ಞಾನಿಕ ಯುಗದಲ್ಲೂ ನಮ್ಮ ಅರಿವಿಗೆ ಬಾರದ ಅನೇಕ ವಿಷಯಗಳು ಈ ತಾಳೆಗರಿ ಗ್ರಂಥಗಳಲ್ಲಿ ಅಡಕವಾಗಿವೆ.

    ಈ ಗ್ರಂಥಾಲಯದಲ್ಲಿ ತಾಳೆಮರದಿಂದ ಸಂಗ್ರಹಿಸಿದ ಅತಿಸಣ್ಣ ಮತ್ತು ಅತಿ ದೊಡ್ಡ ಗರಿಗಳಿವೆ. ಭಾರತದಲ್ಲಿ ಮತ್ತು ನೆರೆ ರಾಷ್ಟ್ರಗಳಾದ ಭೂತಾನ್, ಬರ್ವ, ಶ್ರೀಲಂಕಾ ಹಾಗೂ ಇತರ ದೇಶಗಳಲ್ಲಿ ಹಿಂದೂ, ಜೈನ, ಬೌದ್ಧ ಧರ್ಮೀಯರು ಮಠಗಳಲ್ಲಿ ಸಂಗ್ರಹಿಸಿರುವ ಅಪಾರ ಗ್ರಂಥಗಳ ಸಂಗ್ರಹವಿದೆ. ಸಾಮಾನ್ಯವಾಗಿ ಭಾರತದ ಎಲ್ಲಾ ಸಾಂಪ್ರದಾಯಿಕ ಮಠಗಳಲ್ಲಿಯೂ ತಾಡಪ್ರತಿಗಳ ಅಮೂಲ್ಯ ಸಂಗ್ರಹವಿರುತ್ತದೆ.

    ಅಂದು, ಸುಮಾರು 250 ವರ್ಷಗಳ ಹಿಂದೆ ಕನ್ನಡಕಗಳ ಬಳಕೆ ಇರಲಿಲ್ಲ. ಹಾಗಾಗಿ, ಕಂಟಕಗಳನ್ನು ಸ್ವಲ್ಪ ಮೆದುವಾಗಿ ಒತ್ತಿ ತಾಳೆಗರಿಯ ಮೇಲೆ ಬರೆಯುವುದಕ್ಕೆ ಎಷ್ಟು ಸಹನೆ, ಏಕಾಗ್ರತೆ ಬೇಕು ಅನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಗರಿಗಳ ಸಂಗ್ರಹ ಕೂಡ ಸಾಮಾನ್ಯ ಕೆಲಸವಲ್ಲ. ಏಕೆಂದರೆ ಸಾವಿರಾರು ವರ್ಷ ಉಳಿಯಬೇಕಾದಂತಹ ಗರಿಗಳನ್ನೆ ಆಯ್ಕೆ ಮಾಡಿ ಅದನ್ನು ಒಣಗಿಸಿ, ಗಾತ್ರಕ್ಕೆ ಸರಿಯಾಗಿ ಕತ್ತರಿಸಿ ಜೋಡಿಸಬೇಕಿತ್ತು. ಈ ಗ್ರಂಥಗಳಲ್ಲಿ ನಮಗೆ ವಿಶೇಷವಾಗಿ ಕಂಡುಬರುವುದು ಅಕ್ಷರಗಳ ಸೂಕ್ಷ್ತ್ರ್ಮೆ ಮತ್ತು ಬಳಕೆ. ಸಂಸ್ಕೃತ ಮತ್ತು ಇತರ ಅನೇಕ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಒಂದು ಸಲ ಕಂಟಕವನ್ನು ಇಟ್ಟರೆ ಶಬ್ದವನ್ನು ಒಂದೇ ಬಾರಿಗೆ ಬರೆಯುವಂತಹುದು, ಕೆಲವೊಂದು ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆದಿದ್ದನ್ನು ಕಾಣಬಹುದು. ಈ ಅಕ್ಷರಗಳನ್ನು ಜೋಡಿಸುತ್ತ ಒಂದು ಪುಟವನ್ನೂ ತುಂಬಿಸಿದ್ದಿದೆ. ಒಟ್ಟಿನಲ್ಲಿ ಆ ಸುರುಳಿ ಸುರುಳಿಯಾದ ಮೋಹಕ ಅಕ್ಷರಗಳು ನಮ್ಮನ್ನು ಆಕರ್ಷಿಸುತ್ತವೆ.

    ದಾನಚಿಂತಾಮಣಿ ಅತ್ತಿಮಬ್ಬೆ ರನ್ನನ ‘ಅಜಿತ ಪುರಾಣ’ ಗ್ರಂಥದ ಸಾವಿರ ಪ್ರತಿಯನ್ನು ಮಾಡಿಸಿ ವಿತರಣೆ ಮಾಡಿದ್ದಳು. ಆಕೆಗೆ ಶಾಸ್ತ್ರದಾನದ ಮಹತ್ವ ತಿಳಿದಿತ್ತು. ಶ್ರೇಷ್ಠವಾದ ಸಾಹಿತ್ಯ ಮರೆಯಾಗಬಾರದು, ಮುಂದಿನ ತಲೆಮಾರಿನಲ್ಲಿ ಜನ ಅದನ್ನು ಓದುವಂತಾಗಲು ರಕ್ಷಿಸಿಡಬೇಕೆಂಬುದು ಪ್ರತಿಗಳನ್ನು ಮಾಡಿಸುವ ಉದ್ದೇಶ.

    ನಮ್ಮ ಗ್ರಂಥಾಲಯದಲ್ಲಿ ಕೆಲವೊಂದು ಮೂಲ ಗ್ರಂಥಗಳು ಇದ್ದರೆ, ಒಂದೇ ಗ್ರಂಥದ 20 ರಿಂದ 50 ಪ್ರತಿಗಳೂ ಇವೆ. ಒಂದೇ ಗ್ರಂಥದ ಪ್ರತಿಗಳು ಹೆಚ್ಚು ಇದ್ದಾಗ ಅದನ್ನು ಏಕೆ ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂಬ ಪ್ರಶ್ನೆಗೂ ಉತ್ತರ ಇದೆ. ಅನೇಕ ಗ್ರಂಥಗಳ ಪ್ರತಿ ಮಾಡುವ ಕಾಲದಲ್ಲಿ ಲಿಪಿಕಾರನು ಕಣ್ಣಿನ ಆಯಾಸದಿಂದ ಅಥವಾ ಕುಳಿತು ಬರೆದು ಆಯಾಸದಿಂದ ಅಥವಾ ಇನ್ಯಾವುದೋ ಅನ್ಯಮನಸ್ಕತೆಯಿಂದ ಕೆಲವು ವಾಕ್ಯ, ಶಬ್ದಗಳನ್ನು ಬಿಟ್ಟುಬಿಡಬಹುದು. ಎರಡು ಅಥವಾ ನಾಲ್ಕು ಪ್ರತಿಗಳನ್ನು ಇಟ್ಟುಕೊಂಡು ನಾವು ಓದಿಕೊಂಡು ಹೋದರೆ ಒಂದೊಂದು ಗೆರೆಯಲ್ಲಿ ಬರುವಂತಹ, ಸಾಲಿನಲ್ಲಿ ಬರುವಂತಹ ಕೆಲವು ಶಬ್ದಗಳು ತಪ್ಪಿರುವುದು ಮತ್ತು ಶಬ್ದಗಳ ರಚನೆಯಲ್ಲಿ ತಪ್ಪಾಗಿರುವುದು ಕೂಡ ಗಮನಕ್ಕೆ ಬರುವುದು. ಆದ್ದರಿಂದ ಅನೇಕ ಗ್ರಂಥಗಳ ಪ್ರತಿಗಳನ್ನು ಒಟ್ಟಿಗೆ ಇಟ್ಟು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಪುಣೆಯ ಭಂಡಾರ್ಕರ್ ಸಂಸ್ಥೆಯವರು ಪರಿಶ್ರಮಪಟ್ಟು ಮಹಾಭಾರತದ ಶುದ್ಧಪ್ರತಿಯನ್ನು ತಯಾರಿಸಿದ್ದಾರೆ.

    ಈ ರೀತಿ ಪ್ರತಿ ಮಾಡಿ ದಾನ ಕೊಡುತ್ತಿದ್ದುದು ಸಾಮಾನ್ಯವಾಗಿ ಧಾರ್ವಿುಕ ಗ್ರಂಥಗಳೇ. ವೈದ್ಯಕೀಯ, ಜ್ಯೋತಿಷ, ಕೆಲವು ಆಚರಣೆಗಳು ಅಂದರೆ ವರಮಹಾಲಕ್ಷ್ತ್ರಿ್ಮ ಪೂಜೆಯಿಂದ ಹಿಡಿದು ನೊಂಪಿಗಳು, ಮತ್ತಿತರ ಆಚರಣೆಗಳ ಗ್ರಂಥಗಳೂ ಇರುತ್ತಿದ್ದವು.

    ಈ ರೀತಿಯ ಗ್ರಂಥಗಳನ್ನು ರಚಿಸಲು ಮೂಲ ಕರ್ತವಿಗೆ ಎಷ್ಟು ಸಹನೆ ಇದ್ದಿರಬೇಕು!. ಈಗಿನ ಆಧುನಿಕತೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಂತೂ ಕಂಪ್ಯೂಟರ್ ಮುಂದೆ ಕುಳಿತು ಸಾಹಿತಿ ವಿಷಯಗಳನ್ನು ಹೇಳುತ್ತಾ ಹೋದ ಹಾಗೆ ಸ್ವಾಭಾವಿಕವಾಗಿ ಕಂಪ್ಯೂಟರಿನ ಸ್ಕ್ರೀನ್​ನಲ್ಲಿ ಮೂಡುತ್ತವೆ. ಮತ್ತು ಲಿಪಿರೂಪದಲ್ಲಿ ಅದೇ ಬರೆಯುತ್ತದೆ. ಇಂತಹ ಸಾಲಿನ ಇಂತಹ ಅಕ್ಷರ ಅಥವಾ ವಾಕ್ಯವನ್ನು ಬದಲಾಯಿಸು ಅಂದರೆ ಅದು ಬದಲಾಯಿಸುತ್ತದೆ.

    ನಮ್ಮ ಹಿಂದಿನವರಿಗೆ ಇಂತಹ ಲಿಪಿಯ ಅನುಕೂಲ ಇದ್ದಿದ್ದರೆ ಇನ್ನೂ ಹೆಚ್ಚು ಸಾಹಿತ್ಯ ಸೃಷ್ಟಿಯಾಗುತ್ತಿತ್ತೇನೋ?. ಇಂದಿನ ಕಂಪ್ಯೂಟರಿಗೆ ಮೂಲ ಪ್ರೇರಣೆ ವ್ಯಾಸಭಾರತವೆ ಇರಬೇಕು. ತಮ್ಮ ಚಿಂತನೆ ಅತಿವೇಗದಲ್ಲಿರುತ್ತದೆ ಮತ್ತು ಇದರ ಅಧ್ಯಾಯಗಳ ಗಾತ್ರ ಹೆಚ್ಚಿರುತ್ತದೆ. ಹಾಗಾಗಿ ತಾವೇ ಬರೆಯುತ್ತ ಹೋದರೆ ದೀರ್ಘ ಕಾಲ ಆಗಬಹುದು ಎಂದೋ ಏನೋ, ಶೀಘ್ರಲಿಪಿಕಾರನಾಗಿ ಬರಬೇಕೆಂದು ವ್ಯಾಸರು ಗಣಪತಿಯನ್ನು ಕೇಳಿಕೊಳ್ಳುತ್ತಾರೆ. ಗಣಪತಿ ಬಹುಶಃ ಈಗಿನ ಕಂಪ್ಯೂಟರ್​ಗಿಂತಲೂ ವೇಗದ ಶೀಘ್ರ ಲಿಪಿಕಾರನಾಗಿರಬೇಕು. ಹಾಗಾಗಿ ‘ನಾನು ಬರೆಯುವ ವೇಗಕ್ಕೆ ಧಕ್ಕೆ ಬಾರದಂತೆ ನೀವು ಹೇಳುತ್ತಾ ಹೋಗಬೇಕು’ಎಂದು ಸವಾಲು ಹಾಕುತ್ತಾನೆ. ಅಂದರೆ ವ್ಯಾಸರು ಹೇಳುವ ವೇಗ ಕಮ್ಮಿಯಾದರೆ ಗಣಪತಿ ಲೇಖನಿ ಅಥವಾ ಕಂಟಕವನ್ನು ಕೆಳಗಿಡುವ ಸಂದರ್ಭ ಇತ್ತು. ವ್ಯಾಸರೂ ಕರಾರು ಹಾಕುತ್ತಾರೆ- ‘ನಾನು ಹೇಳುವ ಪ್ರತಿ ಶ್ಲೋಕವನ್ನೂ ಅರ್ಥೈಸಿಕೊಂಡು ಬರೆಯಬೇಕು’ಎಂದು. ವ್ಯಾಸರು ಪ್ರತೀ ಶ್ಲೋಕದಲ್ಲೂ ಕೆಲವು ಕ್ಲಿಷ್ಟ ಶಬ್ದಗಳನ್ನು ಬಳಸುತ್ತಿದ್ದರಂತೆ. ಅಂತೂ ಈ ಇಬ್ಬರ ಒಪ್ಪಂದದ ಪ್ರಕಾರ ಹೇಳುವ ಮತ್ತು ಬರೆಯುವ ವೇಗ ಎರಡೂ ಸರಿಹೊಂದಿಕೊಂಡು ಹೋಗಬೇಕು.

    ಇವತ್ತಿನ ಕಂಪ್ಯೂಟರ್​ನ ಕಲ್ಪನೆ ಸೃಷ್ಟಿಯಾಗಿರುವುದು ಹೀಗೆಯೇ ಎಂದು ನನಗನಿಸುತ್ತದೆ. ಯಾಕೆಂದರೆ ಅದು ಅಂತಹ ಒಂದು ಶೀಘ್ರಲಿಪಿ ಮತ್ತು ಶೀಘ್ರಲಿಪಿಕಾರ. ಶೀಘ್ರ ಲಿಪಿಕಾರನಿಗೆ ಕೊಡುವಂತಹ ವಿಚಾರಗಳ ಮೊತ್ತ ಹೇಗೆ ಇರಬೇಕು, ಹೇಗೆ ಬರಬೇಕು, ಹೇಗೆ ಆಗಿರಬೇಕು ಅನ್ನುವಂಥದನ್ನು ಆವತ್ತೇ ಅವರು ಕಂಡುಹುಡುಕಿದ್ದರು. ಇವತ್ತು ಅದು ಸಾಕ್ಷಾತ್ಕಾರವಾಗಿದೆ. ಬಹಳ ಜನಪ್ರಿಯವಾದ ‘ಹ್ಯಾರಿ ಪಾಟರ್’ ಬರೆದ ಜೆ.ಕೆ.ರೌಲಿಂಗ್ ಕಥೆಯನ್ನು ಕಲ್ಪನೆಮಾಡಿಕೊಂಡು, ಸಂಭಾಷಣೆಗಳನ್ನು ರೂಪಿಸಿಕೊಂಡು, ಆಕರ್ಷಣೀಯ ಶೈಲಿಯಲ್ಲಿ ಟೈಪ್ ಮಾಡಿ ಬರೆದಳೆನಿಸುತ್ತದೆ. ಅಂದರೆ ಹ್ಯಾರಿ ಪಾಟರ್ ಕಥೆಯನ್ನು ಓದಿದವರಿಗೆ ಅಥವಾ ಸಿನಿಮಾ ನೋಡಿದವರಿಗೆ ಅಂತಹ ಕಲ್ಪನೆ ಆಕೆಗೆ ಹೇಗೆ ಸಾಧ್ಯವಾಯಿತು ಎಂಬುದು ವಿಸ್ಮಯಕ್ಕೆ ಕಾರಣವಾಗುತ್ತದೆ. ಮಾಯಾ ಮ್ಯಾಜಿಕ್ ಕಲಿಸುವ ತರಬೇತಿ ಸಂಸ್ಥೆಗೆ ಹೋದ ವಿದ್ಯಾರ್ಥಿಯ ಅನುಭವಗಳನ್ನು ಬರೆಯುತ್ತಾ ಹೋಗುತ್ತಾಳೆ.

    ನಾನು ಹ್ಯಾರಿ ಪಾಟರ್ ಸಿನಿಮಾ ನೋಡಿದ್ದೇನೆ. ವಿದೇಶಗಳಲ್ಲಿ ಡಿಸ್ನಿಲ್ಯಾಂಡ್​ನಂತಹ ಮನೋರಂಜನಾ ಪಾರ್ಕ್​ನಲ್ಲಿ ಹ್ಯಾರಿ ಪಾಟರ್ ಅನ್ನುವಂತಹ ಬೇರೆಯದೇ ವಿಭಾಗವಿದ್ದು, ಅಲ್ಲಿ ಕಥೆಯಲ್ಲಿ ಬರುವಂತಹ ಸಂದರ್ಭಗಳನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸುವ ಅದ್ಭುತ ವ್ಯವಸ್ಥೆ ಮಾಡಿರುತ್ತಾರೆ.

    ಹಿಂದಿನ ಸಾಹಿತಿಗಳು, ವಿದ್ವಾಂಸರು ಮತ್ತು ಚಿಂತಕರಿಗೆ ತಮ್ಮ ಕೈಬರಹದಿಂದ ಆಗಬೇಕಾದ ಲಿಪಿಯಿಂದಾಗಿ ಚಿಂತನೆ, ರಚನೆಗೆ ಹೆಚ್ಚು ಸಮಯ ುಸಿಗುತ್ತಿತ್ತೇನೋ.. ರಾಮಾಯಣ, ಮಹಾಭಾರತದಲ್ಲಿ ಉಪಕಥೆಗಳದ್ದೇ ದೊಡ್ಡ ಸಾಮ್ರಾಜ್ಯವಿದೆ, ಭಂಡಾರವಿದೆ. ಹಿಂದೆ ಯಾವುದೋ ಜನ್ಮದಲ್ಲಿಯೋ ಅಥವಾ ತಲೆಮಾರಿನಲ್ಲಿಯೋ ಪಡೆದ ಶಾಪ ಅಥವಾ ಅವರಿಗೆ ಅಂಟಿದ ಪಾಪ, ಪುಣ್ಯಗಳಿಂದ ಒಂದು ಕಥೆ ರಚನೆ ಆಗುತ್ತದೆ. ಇದೆಲ್ಲಾ ಅರ್ಥೈಸಿಕೊಂಡು ಚಿಂತಿಸಿಕೊಂಡು ಕಲ್ಪನೆ ಮಾಡಿಕೊಂಡು ಬರೆದ ಸಾಹಿತಿಗಳ ಶ್ರಮವನ್ನು ಪ್ರಶಂಸಿಸಬೇಕಾಗುತ್ತದೆ.

    ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಅತೀ ಉದ್ದನೆಯ ತಾಡೋಲೆಯ ಗ್ರಂಥವು 85ಘಿ5 ಸೆಂಟಿಮೀಟರ್ ಗಾತ್ರದಲ್ಲಿದೆ. ಕನ್ನಡ ಭಾಷೆಯಲ್ಲಿರುವ ರಾಮಾಯಣ ಈ ಗ್ರಂಥದ ಗಾತ್ರಕ್ಕೆ ಮತ್ತು ವಸ್ತುವಿನ ಸಂಗ್ರಹಕ್ಕೆ ಕಾರಣವಾಗಿದೆ. ಅಕ್ಷರಗಳು ಕನ್ನಡ ಲಿಪಿಯಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿವೆ. ಪ್ರತಿಷ್ಠಾನದಲ್ಲಿ ಕನ್ನಡ ಲಿಪಿಯಲ್ಲಿರುವ 2265 ಗ್ರಂಥಗಳಿವೆ, ಸಂಗ್ರಹದ ಕ್ಯಾಟಲಾಗ್ ಇದೆ. ಇವೆಲ್ಲವೂ ಮೂಲ ಪ್ರತಿಗಳೇ ಅಲ್ಲ. ಪ್ರತಿಗಳೂ ಇವೆ. ಗ್ರಾಮೀಣ ಪ್ರದೇಶದ ಮನೆಗಳಿಂದ ಹಾಗೂ ಸ್ವಯಂಪ್ರೇರಣೆಯಿಂದ ದಾನವಾಗಿ ಗ್ರಂಥಗಳನ್ನು ಸ್ವೀಕರಿಸಿದಾಗ ಹೀಗೆ ಪ್ರತಿಗಳು ದೊರಕುತ್ತವೆ. ಸಂಸ್ಕೃತ, ನಂದಿನಾಗರಿ, ತೆಲುಗು, ತುಳು, ಮಲೆಯಾಳಿ ಲಿಪಿಗಳಲ್ಲಿದೆ. ಗ್ರಂಥಲಿಪಿಯ ತಾಡೋಲೆ ಪ್ರತಿಗಳಿವೆ. ಈ ತಾಡೋಲೆಗಳಲ್ಲಿ ರೇಖಾಚಿತ್ರಗಳನ್ನೂ, ವರ್ಣಚಿತ್ರಿಕೆಗಳನ್ನೂ ಬರೆದಿದ್ದಾರೆ.

    ಒಮ್ಮೆ ಈಜಿಪ್ಟ್ ದೇಶಕ್ಕೆ ಹೋದಾಗ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಓಲೆಗರಿ ಪ್ರತಿಲಿಪಿಕಾರನ ಶಿಲ್ಪ ಕಂಡಿತು. ಆ ಪ್ರತಿಮೆ ಕೂದಲು ಬೆಳೆಸಿಕೊಂಡು ಕಿವಿಯ ಮೇಲೆ ಮುಚ್ಚಿಕೊಂಡಿತ್ತು. ಕಿವಿಯ ಮೇಲೆ ಕೂದಲು ಅಥವಾ ಕೈಯನ್ನು ಇಟ್ಟುಕೊಂಡರೆ (ನೀವೂ ಪ್ರಯತ್ನಿಸಿ ನೋಡಿ) ಶಬ್ದಗಳು ಇಮ್ಮಡಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಸುತ್ತವೆ ಎಂದು (ಬರ್ವ ದೇಶದ ಮ್ಯೂಸಿಯಂನಲ್ಲೂ ಲಿಪಿಕಾರನ ಮೂರ್ತಿಯಿದೆ) ಅಲ್ಲಿ ಮಾಹಿತಿ ದೊರಕಿತು.

    ‘ಕಷ್ಟೇನ ಲಿಖಿತಂ ಶಾಸ್ತ್ರಂ ಯತ್ನೇನ ಪರಿಪಾಲ್ಯತಾಮ್ ಎಂಬ ಹಿತೋಕ್ತಿಯಂತೆ ನಮ್ಮ ಹಿರಿಯರು ಕಷ್ಟಪಟ್ಟು ಶ್ರದ್ಧೆಯಿಂದ ತಾಳೆಗರಿಯಲ್ಲಿ ಸೂಕ್ಷ್ಮವಾಗಿ ಜ್ಞಾನವನ್ನು ಸಂಗ್ರಹಿಸಿದ್ದಾರೆ. ಅಂತಹ ಗ್ರಂಥಗಳು ಇಂದು ಹಲವರ ಮನೆಗಳಲ್ಲಿ ಅನಾಥವಾಗಿ ಅಟ್ಟದಮೇಲೆ ಬಿದ್ದಿವೆ. ತಾವೂ ಓದದೆ(ಓದಲು ಬಾರದೇ) ಬಲ್ಲವರಿಗೂ ಕೊಡದೆ (ಹಿರಿಯರ ಸಂಪಾದನೆಯೆಂಬ ಆದರ) ಹುಳಹುಪ್ಪಡಿ ಹಿಡಿದು ನಾಶವಾಗುತ್ತಿವೆ. ನಾವು ಶ್ರೀಕ್ಷೇತ್ರದಲ್ಲಿ ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ, ಸಂಪಾದಿಸಿ ಕಾಪಾಡುತ್ತಿದ್ದೇವೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ನಮಗಂತೂ ಈ ಕಾರ್ಯ ಸಖೇದಾಶ್ಚರ್ಯವನ್ನೂ ಮತ್ತು ಮುದವನ್ನೂ ನೀಡುತ್ತಿದೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts