More

    ಹಡಿಲು ಗದ್ದೆಯಲ್ಲಿ ನಾರಿ ಶಕ್ತಿ

    ಅನ್ಸಾರ್ ಇನೋಳಿ ಉಳ್ಳಾಲ

    ಲಾಕ್‌ಡೌನ್ ಸಂದರ್ಭ ಸ್ವ ಉದ್ಯೋಗ ಅರಸಿ ನಾಲೆಗಳ ಹೂಳು ತೆಗೆದು ಸೈ ಎನಿಸಿದ್ದ ಮಹಿಳೆಯರ ತಂಡ, ಹಡಿಲು ಗದ್ದೆಯಲ್ಲಿ ನಾಟಿ ಕೆಲಸ ಮಾಡಿ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಕುರ್ನಾಡು ಗ್ರಾಮದ ಬರಿಮಾರ್ ಎಂಬಲ್ಲಿ ವನಸುಮ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಇಂಥ ಸಾಹಸಕ್ಕೆ ಕೈಹಾಕಿ ಯಶಸ್ಸು ಪಡೆದಿದೆ.

    ಲಾಕ್‌ಡೌನ್ ಸಂದರ್ಭ ಒಕ್ಕೂಟದ ಮುಖ್ಯ ಪುಸ್ತಕ ನಿರ್ವಾಹಕಿ ಮಮತಾ ತೆಕ್ಕುಂಜ ಹಾಗೂ ಸಂಪನ್ಮೂಲ ವ್ಯಕ್ತಿ ಸುನೀತಾ ಪ್ರೇರಣೆಯಿಂದ ಸದಸ್ಯೆಯರು ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು 15 ಕಡೆ ನಾಲೆಗಳ ಹೂಳು ತೆಗೆದಿದ್ದರು. ಮುಂದಿನ ಭಾಗವಾಗಿ ಹಡಿಲು ಗದ್ದೆಯಲ್ಲಿ ಭತ್ತ ನಾಟಿಯ ಕೆಲಸ ನಡೆದಿದೆ.

    ಕಠಿಣ ಗದ್ದೆಯಲ್ಲಿ ಸಾಹಸ: ಪ್ರಸ್ತುತ ಹಡಿಲು ಗದ್ದೆ ನಾಟಿ ಸರ್ಕಾರದ ಕಾರ್ಯಕ್ರಮವಾಗಿಯೂ ಮಾರ್ಪಟ್ಟಿದೆ. ಇದೇ ಯೋಚನೆಯೊಂದಿಗೆ ಮಮತಾ ಮತ್ತು ಸುನೀತಾ ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾದರು. ಇದಕ್ಕೆ ಬರಿಮಾರಿನ ದಿ.ನಾರಾಯಣ ದೇವಸ್ಯರ ಗದ್ದೆಯನ್ನು ಆರಿಸಿದರು. ಆವರೆಗೆ ಇವರಿಬ್ಬರು ಮಾತ್ರವಲ್ಲದೆ ಗದ್ದೆ ಕೆಲಸದ ಕಿಂಚಿತ್ ಜ್ಞಾನವೂ ಇಲ್ಲದ 10 ಮಹಿಳೆಯರನ್ನು ಆಯ್ಕೆ ಮಾಡಿ ಸ್ಫೂರ್ತಿ ತುಂಬಿ ಯೋಜನೆ ಯಶಸ್ವಿಗೊಳಿಸಿದರು.

    60 ಸೆಂಟ್ಸ್‌ನ ಎರಡು ಗದ್ದೆ ಏಳು ವರ್ಷಗಳಿಂದ ಪಾಳು ಬಿದ್ದು ವಿಪರೀತ ಕಳೆ ತುಂಬಿಕೊಂಡಿತ್ತು. ಅದರಲ್ಲಿ ನಾಟಿ ಮಾಡುವುದು ಕಠಿಣ ಕೆಲಸ ಆಗಿದ್ದರಿಂದ ಭತ್ತ ಬೇಸಾಯದಲ್ಲಿ ನುರಿತವರೇ ಕೈಚೆಲ್ಲಿದ್ದರಲ್ಲದೆ, ಬೇರೆ ಗದ್ದೆ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದರು ಕೂಡ. ಆದರೂ ಹಠಕ್ಕೆ ಬಿದ್ದ ಮಹಿಳೆಯರಿಗೆ ಮನೆಯ ಪುರುಷರು ಜೊತೆಯಾದರು. ಕಳೆ ತೆಗೆಯಲು ಬಂದಿದ್ದ ಯಂತ್ರವೂ ಹಿಂದಕ್ಕೆ ಹೋಗಲು ಮುಂದಾದಾಗ ಇವರೇ ನಿಂತು ಧೈರ್ಯ ತುಂಬಿ ಕಳೆ ತೆಗೆಯಲು ಕೈ ಜೋಡಿಸಿದ್ದರು.

    ವೇತನದೊಂದಿಗೆ ಗದ್ದೆ ಕೆಲಸದ ಅನುಭವ: ಎರಡು ಗದ್ದೆ ಉಳುಮೆ, ಕಳೆ ತೆಗೆಯುವಿಕೆ, ವೇತನಕ್ಕೆ 60 ಸಾವಿರ ರೂ. ಖರ್ಚಾಗಿದೆ. ನಾಟಿ ಸಂದರ್ಭ ಪ್ರತಿಯೊಬ್ಬರಿಗೂ ತಲಾ 350 ರೂ.ನಂತೆ ವೇತನ ನೀಡಲಾಗಿದೆ. ಕಳೆ ನಿರ್ಮೂಲನೆ ಮತ್ತು ಉಳುಮೆ ಯಂತ್ರದಲ್ಲಿ ಮಾಡಲಾಗಿದೆ. ಈ ಖರ್ಚನ್ನೂ ಮಮತಾ ಮತ್ತು ಸುನೀತಾ ಅವರೇ ಭರಿಸಿದ್ದಾರೆ. ಸಂಜೀವ ಶೆಟ್ಟಿ ಎಂಬುವರು ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯರು ಅಗತ್ಯ ನೀರಿನ ವ್ಯವಸ್ಥೆಯೊಂದಿಗೆ ಪ್ರೋತ್ಸಾಹ ನೀಡಿದ್ದಾರೆ.

    ಅಕ್ಕಿ, ಲಾಭಾಂಶ ಬಡವರಿಗೆ: ಸದ್ಯ ಗದ್ದೆ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆ ತುಂಬಿದ್ದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಮಹಿಳಾ ಸಂಘದ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಇಷ್ಟೆಲ್ಲ ಖರ್ಚು, ಶ್ರಮ ಮಾಡಿದ್ದರೂ ಗದ್ದೆಯಲ್ಲಿ ಬಂದ ಬೆಳೆ ಮತ್ತು ಲಾಭಾಂಶ ಸ್ವಂತಕ್ಕೆ ಬಳಸಲು ಮುಂದಾಗದೆ ಮಹಿಳಾ ಪ್ರಧಾನ ಕುಟುಂಬ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಬಳಸಲು ಯೋಚಿಸಲಾಗಿದೆ.

    ಲಾಕ್‌ಡೌನ್ ಸಂದರ್ಭ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರೇ ಹೂಳೆತ್ತುವ ಕೆಲಸ ಮಾಡಿದ್ದು, ಹಲವು ಕುಟುಂಬಗಳಿಗೆ ಪ್ರಯೋಜನ ಆಗಿದೆ. ಅದರಂತೆ ಹೊಸಬರನ್ನೇ ಆರಿಸಿ ಸ್ವ ಉದ್ಯೋಗದ ಜತೆ ಗದ್ದೆ ಕೆಲಸದ ಅನುಭವ ನೀಡಲು ಹಡಿಲು ಗದ್ದೆ ನಾಟಿ ಮಾಡಲಾಗಿದೆ.

    ಮಮತಾ ತೆಕ್ಕುಂಜ
    ಮುಖ್ಯ ಪುಸ್ತಕ ನಿರ್ವಾಹಕಿ, ವನಸುಮ ಸಂಜೀವಿನಿ ಒಕ್ಕೂಟ

    ಒಕ್ಕೂಟದಿಂದ ಏನಾದರೂ ಚಟುವಟಿಕೆ ನಡೆಸಬೇಕೆಂದು ತಾಲೂಕು ಕಚೇರಿಯಿಂದ ಸೂಚನೆ ನೀಡಲಾಗಿತ್ತು, ಅದರಂತೆ ತರಕಾರಿ ಬೆಳೆಯಲು ಯೋಚಿಸಿದರೂ ಅದಾಗಲೇ ಹಲವರು ಬೆಳೆಸಿದ್ದರಿಂದ ಹಡಿಲು ಗದ್ದೆಯ ಬಗ್ಗೆ ಯೋಚಿಸಿದೆವು. ಪಂಚಾಯಿತಿ ಸಹಕಾರ ನೀಡಿದೆ. ಮುಂದಕ್ಕೆ ಸುಗ್ಗಿಯ ಬಗೆಯೂ ಯೋಚನೆ ಇದೆ.

    ಸುನೀತಾ
    ಸಂಪನ್ಮೂಲ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts