More

    ವೈದ್ಯಕೀಯ ನಿರ್ಲಕ್ಷೃದಿಂದ ಮಹಿಳೆ ಸಾವು ಆರೋಪ

    ಉಡುಪಿ: ತಲೆನೋವಿನ ಕಾರಣಕ್ಕೆ ನಗರದ ಖಾಸಗಿ ಆಸ್ಪತ್ರೆಗೆ ಹೋದ ಮಹಿಳೆ ಔಷಧ ಪಡೆದು ಒಂದು ಗಂಟೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

    ಇಂದಿರನಗರ ಕುಕ್ಕಿಕಟ್ಟೆ ನಿವಾಸಿ ರಕ್ಷಾ (26)ಮೃತಪಟ್ಟವರು. ಇವರು ಬಿಜೆಪಿ ನಗರ ಯುವಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಅವರ ಪತ್ನಿ. ಮೈಗ್ರೇನ್‌ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಸಮೀಪದ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಬಂದು ಮಲಗಿದ್ದ ರಕ್ಷಾ, ಬೆಳಗ್ಗೆ 8.45ಕ್ಕೆ ಬಾಯಲ್ಲಿ ನೊರೆ ಬರುವ ಸ್ಥಿತಿಯಲ್ಲಿ ಮಲಗಿದ್ದರು. ತಕ್ಷಣ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಲ್ಲಿನ ವೈದ್ಯರು ಪರೀಕ್ಷಿಸಿ, ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಶವಾಗಾರದ ಮುಂದೆ ಪ್ರತಿಭಟನೆ: ಖಾಸಗಿ ಆಸ್ಪತ್ರೆ ವೈದ್ಯರು ಇಂಜೆಕ್ಷನ್ ನೀಡುವಲ್ಲಿ ನಿರ್ಲಕ್ಷೃ ವಹಿಸಿದ್ದೇ ಮಹಿಳೆಯ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು, ಸ್ಥಳೀಯರು ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡು, ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಯಿತು. ಮೃತಪಟ್ಟ ಬಳಿಕ ನಡೆಸಿದ ರ‌್ಯಾಪಿಡ್ ಟೆಸ್ಟ್‌ನಲ್ಲಿ ಮಹಿಳೆಯ ಕರೊನಾ ನೆಗೆಟಿವ್ ವರದಿ ಬಂದಿತ್ತು. ನಂತರದ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಸ್ಪತ್ರೆ ವೈದ್ಯರು ಹೇಳಿದರು. ಸೀಲು, ಸಹಿ ಇಲ್ಲದ ಪ್ರತಿಯನ್ನು ವರದಿ ಎಂದಿದ್ದಾರೆ. ಆಕ್ರೋಶದ ಬಳಿಕ ಇನ್ನೊಂದು ವರದಿ ನೀಡಿದ್ದಾರೆ. ಒಟ್ಟಾರೆ ಖಾಸಗಿ ಆಸ್ಪತ್ರೆ ರಕ್ಷಿಸಲು ಲಾಬಿ ನಡೆಯುತ್ತಿದೆ. ನಮಗೆ ಮೃತದೇಹ ಬಿಟ್ಟುಕೊಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಶಾಸಕ ಕೆ.ರಘುಪತಿ ಭಟ್, ಪೊಲೀಸ್ ಅಧಿಕಾರಿಗಳು ಸಮಾಧಾನಪಡಿಸಲು ಮುಂದಾದರೂ ಪ್ರತಿಭಟನಾಕಾರರು ಕೇಳಲಿಲ್ಲ. ಸಾಯಂಕಾಲ ರಕ್ಷಾ ಅವರ ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಮರಣೋತ್ತರ ಪರೀಕ್ಷೆ ಮುನ್ನ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರ‌್ಯಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿದ್ದು, ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದೆ. ವರದಿ ಪ್ರಿಂಟ್ ತೆಗೆದುಕೊಡುವಾಗ ದಿನಾಂಕ ತಪ್ಪಾಗಿದೆ. ಸೀಲು, ಸಹಿ ಇರುವ ವರದಿಯನ್ನೇ ಕೇಳಿದಾಗ ಇನ್ನೊಂದು ಫಾರ್ಮಾಟ್‌ನಲ್ಲಿ ಕೋವಿಡ್ ವರದಿ ಕೊಟ್ಟಿದ್ದೇವೆ. ಮಹಿಳೆ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷಾ ವರದಿ, ವಿಧಿವಿಜ್ಞಾನ ಲ್ಯಾಬ್ ವರದಿ ನಿರೀಕ್ಷೆಯಲ್ಲಿದ್ದೇವೆ.
    – ಡಾ.ಮಧುಸೂದನ್ ನಾಯಕ್ ಸರ್ಜನ್, ಜಿಲ್ಲಾಸ್ಪತ್ರೆ.

    ಮಹಿಳೆಯ ಸಾವಿನ ಕುರಿತು ತನಿಖೆ ನಡೆಸಿ 4 ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
     ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts