More

    20 ಕೋಟಿ ರೂ. ಮೋಸ ಮಾಡಿದ್ದ ಮಹಾವಂಚಕಿಯ ಬಂಧನ; ಮಾತಲ್ಲೇ ಮರುಳು ಮಾಡುವ ಚಾಲಾಕಿಯಿಂದ 40 ಮಂದಿಗೆ ಧೋಖಾ

    ಬೆಂಗಳೂರು: ಎಸ್‌ಡಿಎ ಸೇರಿ ಇತರ ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಲವು ಮಂದಿಯಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಖತರ್ನಾಕ್ ಮಹಿಳೆಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

    ಮಂಡ್ಯ ಮೂಲದ ಹಾಗೂ ಜಯನಗರ ನಿವಾಸಿ ಆರ್.ಪಿ ಉಮಾದೇವಿ (44) ಬಂಧಿತ ಮಹಿಳೆ. ಸಿದ್ದಾಪುರ ನಿವಾಸಿ ಸತೀಶ್ ಎಂಬುವರು ನೀಡಿದ ದೂರನ್ನು ಆಧರಿಸಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ತಾನು ಎಸ್.ಜೆ.ಪಿ ಕಾಲೇಜಿನ ಪ್ರಿನ್ಸಿಪಾಲ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ ಉಮಾದೇವಿ, ನನಗೆ ತುಂಬಾ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಉದ್ಯೋಗ ಆಕಾಂಕ್ಷಿಗಳನ್ನು ನಂಬಿಸಿ ಲಕ್ಷಾಂತರ ರೂ. ಪಡೆದು ಅತ್ತ ಕೆಲಸ ಕೊಡಿಸದೆ, ಇತ್ತ ಹಣ ವಾಪಸ್ ನೀಡದೆ ವಂಚಿಸುತ್ತಿದ್ದಳು.

    ಸುಮಾರು 20 ಕೋಟಿ ವಂಚನೆ:: ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಯನ್ನು ಕೊಡಿಸುವುದಾಗಿ ಹೇಳಿ ಸುಮಾರು 40 ಜನರಿಂದ ಬರೋಬರಿ 20 ಕೋಟಿ ರೂ. ವಂಚಿಸಿದ್ದಾಳೆ. ಈಕೆ ಮಾತಲ್ಲೇ ಮರುಳು ಮಾಡಿ ವಂಚಿಸುವ ಮಹಾನ್ ಚತುರೆಯಾಗಿದ್ದು, ಈಕೆಯ ಮಾತಿಗೆ ಮರುಳಾಗಿರುವ ಹಲವು ಮಂದಿ ಕೋಟ್ಯಂತರ ರೂ. ಹಣ ನೀಡಿ ಮೋಸ ಹೋಗಿದ್ದಾರೆ.
    ಆರೋಪಿತೆಯು ಸಿದ್ದಾಪುರ, ಜಯನಗರ, ಗಿರಿನಗರ, ಬನಶಂಕರಿ, ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಸುಮಾರು 30 ರಿಂದ 40 ಮಂದಿಗೆ ವಂಚಿಸಿದ್ದಾಳೆ. ಈ ಸಂಬಂಧ ವಂಚನೆಗೊಳಗಾದವರ ಹೇಳಿಕೆಯನ್ನು ಪಡೆಯಲಾಗಿದೆ. ಎಷ್ಟು ಮೊತ್ತದ ವಂಚನೆ ಆಗಿದೆ ಎಂಬುದರ ಬಗ್ಗೆ ಆಡಿಟ್ ಮಾಡಲು ಕೊಟ್ಟಿದ್ದೇವೆ. ಅದರ ವರದಿ ಬಂದ ಮೇಲೆ ಎಷ್ಟು ಮೊತ್ತದ ವಂಚನೆಯಾಗಿದೆ ಎಂಬುದು ನಿಖರವಾಗಿ ತಿಳಿದುಬರಲಿದೆ. ವಂಚನೆಗೊಳಗಾದವರು ಆಯಾ ಠಾಣಾಗಳಿಗೆ ತೆರಳಿ ದೂರು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?: ಸಿದ್ದಾಪುರ ನಿವಾಸಿಯಾದ ಸತೀಶ್ ತಮ್ಮ 22 ವರ್ಷದ ಮಗನಿಗೆ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನಿಸುತ್ತಿದ್ದರು. ಆತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಾಫ್ಟ್​​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸಿದ್ದಾಪುರ ನಿವಾಸಿಯಾದ ರಾಮಣ್ಣ ಎಂಬುವವರ ಮೂಲಕ ಪರಿಚಯವಾದ ಉಮಾದೇವಿ, ತಾನು ಎಸ್.ಜೆ.ಪಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡಿಕೊಂಡಿದ್ದು ನನಗೆ ತುಂಬಾ ಅಧಿಕಾರಿಗಳ ಪರಿಚಯವಿದೆ. ನಾನು ನಿಮ್ಮ ಮಗನಿಗೆ ಸರ್ಕಾರಿ ಕಾಲೇಜಿನಲ್ಲಿ ಎಫ್​ಡಿಸಿ ಕೆಲಸ ಕೊಡಿಸುತ್ತೇನೆ. ಆದರೆ ಅದಕ್ಕೆಲ್ಲ ತುಂಬಾ ಖರ್ಚಾಗುತ್ತದೆ ಎಂದು ಹೇಳಿದ್ದಾಳೆ. ಆಗ ಸತೀಶ್ ನನ್ನ ಮಗನಿಗೂ ಒಂದು ಕೆಲಸ ಕೊಡಿಸಿ, ಅದಕ್ಕೆ ಆಗುವ ಖರ್ಚನ್ನು ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಉಮಾದೇವಿ ನಿಮ್ಮ ಮಗನಿಗೆ ಕೆಲಸ ಕೊಡಿಸಲು 8 ಲಕ್ಷ ರೂ. ಖರ್ಚಾಗುತ್ತದೆ. ಕೆಲಸದ ಪ್ರೊಸೆಸ್​ ಮಾಡಬೇಕು, ಆದ್ದರಿಂದ ಹಣವನ್ನು ಬೇಗ ಹೊಂದಿಸಿ ಕೊಡಿ ಎಂದಿದ್ದಾರೆ.

    ಇವರ ಮಾತನ್ನು ನಂಬಿದ ಸತೀಶ್ 6.55 ಲಕ್ಷ ರೂಪಾಯಿ ಹಣವನ್ನು ಹೊಂದಿಸಿಕೊಂಡು ಬಂದು ಉಮಾದೇವಿಗೆ ನೀಡಿದ್ದಾರೆ. ಹೀಗೆ ಹಂತ ಹಂತವಾಗಿ 8.5 ಲಕ್ಷ ರೂ. ನೀಡಿದ್ದಾರೆ. ಆದರೆ ಕೆಲಸವನ್ನು ಕೊಡಿಸದೇ ಹಣವನ್ನು ವಾಪಸ್ ನೀಡದೇ ವಂಚಿಸಿದ್ದಾರೆ. ಇದರಿಂದ ಬೇಸತ್ತ ಸತೀಶ್ ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಆರೋಪಿತೆಯ ವೃತ್ತಾಂತ ಬೆಳಕಿಗೆ ಬಂದಿದೆ. ಇನ್ನು ಈ ಹಿಂದೆ ಕೆಂಗೇರಿ ಠಾಣೆಯಲ್ಲಿ ವಂಚನೆ ಪ್ರಕರಣದ ಸಂಬಂಧ ಈಕೆಯ ಮೇಲೆ ದೂರು ದಾಖಲಾಗಿ ಸಿಸಿಬಿ ಪೊಲೀಸರ ವಿಚಾರಣೆಯನ್ನು ನಡೆಸಿದ್ದರು.

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ನಾನು ಮೂರ್ಖನಾಗಲೂ ಸಿದ್ಧ ಎಂದ ಇಮೇಲ್ ಕಂಡುಹಿಡಿದಾತ!; ಮಸ್ಕ್​ ಹೊಸ ಟಾಸ್ಕ್​ಗೆ ಹೀಗೊಂದು ಟಾಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts