More

    40 ವರ್ಷಗಳ ನಂತರ ತನ್ನ ಮನೆಗೆ ಮರಳಿದ ಮಹಿಳೆಯ ಕಣ್ಣೀರ ಕಥೆಯಿದು…

    ಭೋಪಾಲ್: ಇದು ಕಟ್ಟುಕಥೆಯಲ್ಲ. 1979ರಲ್ಲಿ ಕಾಣೆಯಾಗಿದ್ದ ಒಬ್ಬ ಮಹಿಳೆ 2020ರಲ್ಲಿ ಪತ್ತೆಯಾದ ನೈಜ ಸ್ಟೋರಿ. ಟ್ರಕ್ ಚಾಲಕ ನೂರ್ ಮೊಹಮದ್ ಒಮ್ಮೆ ಮಧ್ಯಪ್ರದೇಶದ ತನ್ನ ಗ್ರಾಮದ ಹೊರವಲಯದಲ್ಲಿ ಹೋಗುತ್ತಿದ್ದ. ರಸ್ತೆ ಬದಿಯಲ್ಲಿ ಒಬ್ಬ ಮಹಿಳೆ ಎಚ್ಚರ ತಪ್ಪಿ ಬಿದ್ದಿದ್ದಳು. ಆಕೆಗೆ ಜೇನ್ನೊಣಗಳು ಕಚ್ಚುತ್ತಿದ್ದವು. ನೂರ್ ಕೂಡಲೇ ಆಕೆಯನ್ನು ರಕ್ಷಿಸಿ ವೈದ್ಯರ ಬಳಿ ಕರೆದುಕೊಂಡು ಹೋದ. ಆಕೆ ಹುಷಾರಾದ ಮೇಲೆ ತನ್ನ ಮನೆಗೆ ಕರೆದುಕೊಂಡು ಹೋದ. ಅವಳ ಬಾಯಿಂದಲೇ ಪೂರ್ವಾಪರ ತಿಳಿಯಲು ಪ್ರಯತ್ನಿಸಿದ. ಆದರೆ ಅವಳ ನೆನಪಿನ ಶಕ್ತಿ ಕುಂದಿ ಹೋಗಿತ್ತು. ‘ಖಾಮಿಯಾ ನಗರ, ನಾಗಪುರ, ಮೆಡಿಕಲ್’ ಎಂಬ ಕೆಲವು ಪದಗಳನ್ನು ಬಿಟ್ಟರೆ ಬೇರೇನೂ ಅವಳ ಬಾಯಿಂದ ಹೊರಡುತ್ತಿರಲಿಲ್ಲ. ನೂರ್ ನಾಗಪುರಕ್ಕೂ ಹೋಗಿ ವಿಚಾರಿಸಿದ. ಪೊಲೀಸರನ್ನೂ ಕೇಳಿದ. ಏನೂ ಪ್ರಯೋಜನವಾಗಲಿಲ್ಲ. ಆಗಿನಿಂದ ಆಕೆ ನೂರ್‌ನ ದೊಡ್ಡ ಕುಟುಂಬದ ಹಿರಿಯ ಸದಸ್ಯಳೇ ಆಗಿಬಿಟ್ಟಳು. ಎಲ್ಲರೂ ಆಕೆಯನ್ನು ಪ್ರೀತಿಯಿಂದ ಮಾವ್ಸಿ ಎಂದು ಕರೆಯುತ್ತಿದ್ದರು. ಆಕೆಯೂ ನೂರ್‌ನನ್ನು ಚತುರ್ಭುಜ ಭಯ್ಯ ಎನ್ನುತ್ತಿದ್ದಳು. ಊಟ ಮಾಡುವಾಗಲೆಲ್ಲ ತನ್ನ ತಟ್ಟೆಯಿಂದ ಒಂದು ರೋಟಿ ತೆಗೆದಿಡುತ್ತಿದ್ದಳು. ‘ಇದು ನನ್ನ ಭೈಯಾಲಾಲ್‌ಗೆ, ಚತುರ್ಭುಜನಿಗೆ’ ಎನ್ನುತ್ತಿದ್ದಳು.

    ಅದಾಗಿ ಈಗ ನಲವತ್ತು ವರ್ಷಗಳೇ ಕಳೆದುಹೋಗಿವೆ. ಆಕೆ ಯಾರು, ಎಲ್ಲಿಯವಳು ಎಂಬುದು ಪತ್ತೆಯೇ ಆಗಿರಲಿಲ್ಲ. ಆದರೆ ಕಳೆದ ತಿಂಗಳು ನೂರ್‌ನ ಮಗ ಎಸ್ರಾರ್ ಖಾನ್, ಈಕೆಯ ಬಾಯಿಂದ ‘ಪಂಚ್‌ಫುಲಾ’ ‘ಪರ್ಸಾಪುರ’ ಎಂಬ ಪದಗಳು ಬಂದಿದ್ದನ್ನು ಗಮನಿಸಿದ. ತಕ್ಷಣ ಗೂಗಲ್‌ನಲ್ಲಿ ಆ ಪದಗಳನ್ನು ಹಾಕಿ ಸರ್ಚ್ ಮಾಡಿದ. ಪರ್ಸಾಪುರ ಎಂಬುದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿದೆ ಎಂದು ಗೊತ್ತಾಯಿತು. ಮತ್ತಷ್ಟು ಹುಡುಕಿದಾಗ ಆ ಪ್ರದೇಶದಲ್ಲಿರುವ ‘ಕನಿಷ್ಕಾ ಆನ್‌ಲೈನ್’ ಎಂಬ ಅಂಗಡಿಯ ಫೋನ್ ನಂಬರ್ ಸಿಕ್ಕಿತು. ಕರೆ ಮಾಡಿಯೇಬಿಟ್ಟ. ಅತ್ತ ಅಭಿಷೇಕ್ ಎಂಬಾತ ಕರೆ ಸ್ವೀಕರಿದ. ‘ನಿಮ್ಮ ಸಮೀಪದಲ್ಲಿ ಎಲ್ಲಾದರೂ ಖಾಮಿಯಾ ನಗರ ಎಂಬ ಸ್ಥಳ ಇದೆಯೇ’ ಎಂದು ಎಸ್ರಾರ್‌ಖಾನ್ ವಿಚಾರಿಸಿದ. ಆತ ‘ಹೌದು ಇದೆ’ ಎಂದ. ಅವನಿಗೆ ಎಸ್ರಾರ್ ಆ ಮಹಿಳೆಯ ಕುರಿತು ವಿವರಿಸಿ ಆಕೆಯ ಕೆಲವು ಫೋಟೋ, ವಿಡಿಯೋ ಕಳಿಸಿದ. ‘ಅವಳ ಹೆಸರು ಪಂಚ್‌ಫುಲಾ ಇರಬಹುದು. ಆಕೆಯ ಸಂಬಂಧಿಕರ‌್ಯಾರಾದರೂ ಅಲ್ಲಿ ಸಿಗುತ್ತಾರಾ ನೋಡಿ’ ಎಂದು ವಿನಂತಿಸಿದ.

    ಇದನ್ನೂ ಓದಿ ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

    ಕೆಲವೇ ದಿನಗಳಲ್ಲಿ ಎಸ್ರಾರ್‌ಗೆ ಅಭಿಷೇಕ್‌ನಿಂದ ಕರೆ ಬಂತು. ‘ಆ ಮಹಿಳೆ ಅಮರಾವತಿಯ ಒಂದು ಗ್ರಾಮದವಳು. ಅಲ್ಲಿ ಆಕೆಯ ದೂರದ ಸಂಬಂಧಿಕರಿದ್ದಾರೆ. ಆಕೆಯ ಸಮೀಪಬಂಧುಗಳು ನಾಗಪುರಕ್ಕೆ ಸ್ಥಳಾಂತರಗೊಂಡಿದ್ದಾರೆ’ ಎಂದು ವಿಳಾಸ, ಫೋನ್ ನಂಬರ್ ಎಲ್ಲವನ್ನೂ ನೀಡಿದ. ಎಸ್ರಾರ್ ತಡಮಾಡದೆ ಆ ಕುಟುಂಬದವರಿಗೆ ಸುದ್ದಿ ಮುಟ್ಟಿಸಿದ. ಮೊನ್ನೆ, ಜೂನ್ 17ರಂದು ಆ ಅಜ್ಜಿಯ ಮೊಮ್ಮಗ ಪೃಥ್ವಿ (ಭೈಯಾಲಾಲ್‌ನ ಪುತ್ರ) ಮಧ್ಯಪ್ರದೇಶದಲ್ಲಿರುವ ಎಸ್ರಾರ್‌ಖಾನ್‌ನ ಮನೆಗೆ ಬಂದೇಬಿಟ್ಟ. ಅದು ಎಲ್ಲರ ಕಣ್ಣಲ್ಲೂ ನೀರುಕ್ಕಿಸುವ ಕ್ಷಣವಾಗಿತ್ತು. ‘ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ’ ಎಂದು ಪೃಥ್ವಿ ಹಠ ಹಿಡಿದ. ಆದರೆ ಆಕೆಯನ್ನು 40 ವರ್ಷಗಳ ಕಾಲ ತಮ್ಮದೇ ತಾಯಿ ಎಂಬಂತೆ ಸಲುಹಿದ ಖಾನ್ ಕುಟುಂಬದವರು ಒಪ್ಪಬೇಕಲ್ಲ? ಬಹಳ ಹೊತ್ತಿನ ಚರ್ಚೆಯ ನಂತರ, ‘ಅಜ್ಜಿ ಮೃತಪಟ್ಟಾಗ ನಮ್ಮ ಗ್ರಾಮಕ್ಕೇ ತಂದು ಅಂತ್ಯಕ್ರಿಯೆ ಮಾಡಬೇಕು’ ಎಂದು ಖಾನ್ ಕುಟುಂಬದವರು ಷರತ್ತು ವಿಧಿಸಿದರು. ಪೃಥ್ವಿಗೆ ಅಜ್ಜಿ ಬೇಕಾಗಿದ್ದಳು, ಆದ್ದರಿಂದ ಆ ಷರತ್ತಿಗೆ ತಕ್ಷಣ ಒಪ್ಪಿಕೊಂಡ. ಅಜ್ಜಿ ಕೊನೆಗೂ ತನ್ನ ಮೂಲ ಮನೆಗೆ ಹೊರಟು ನಿಂತಾಗ ಇಡೀ ಗ್ರಾಮದ ಜನ ಸೇರಿದ್ದರು. ಖಾನ್ ಕುಟುಂಬದ ಸದಸ್ಯರು ಕಣ್ಣೀರಿಟ್ಟರು.

    ಮಾನಸಿಕ ಅಸ್ವಸ್ಥೆಯಾದರೂ ಅಜ್ಜಿಗೆ ತನ್ನ ಮನೆಗೆ ಹೋಗುತ್ತಿದ್ದೇನೆಂಬ ಹಿಗ್ಗು. ಕರೆದುಕೊಂಡು ಹೋಗಲು ತನ್ನ ಮಗ ಭೈಯಾಲಾಲನೇ ಬಂದಿದ್ದಾನೆ ಅಂತ ಖುಷಿ. ಆದರೆ ಅವಳ ಒಬ್ಬನೇ ಮಗ ಭೈಯಾಲಾಲ್ 2017ರಲ್ಲಿ ಮೃತಪಟ್ಟಿದ್ದಾನೆ. ಆಕೆಯ ಪತಿ ತೇಜ್‌ಪಾಲ್ ಕೂಡ 1995ರಲ್ಲಿ ತೀರಿಕೊಂಡಿದ್ದಾನೆ. ಆಕೆ ಆಗಾಗ ನೆನಪಿಸಿಕೊಳ್ಳುತ್ತಿದ್ದ ಮಗ ಚತುರ್ಭುಜ ಕೂಡ ಆರು ತಿಂಗಳ ಹಿಂದೆ ತೀರಿಹೋಗಿದ್ದಾನೆ. ಇತ್ತ ಅವಳನ್ನು ರಕ್ಷಣೆ ಮಾಡಿ ಮನೆಗೆ ಕರೆತಂದು ಸಲುಹಿದ ಡ್ರೈವರ್ ನೂರ್ ಕೂಡ 2007ರಲ್ಲಿ ಹೃದಯ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥೆಯಾಗಿರುವ ಅವಳಿಗೆ ಇದ್ಯಾವುದೂ ತಿಳಿಯದು. ಅವಳ ಕಾಲ 1979ರಲ್ಲೇ ನಿಂತುಹೋಗಿದೆ. ಕೊನೆಗಾಲದಲ್ಲಿಯಾದರೂ ಆಕೆ ತನ್ನ ಮನೆ ಸೇರಿದ್ದಾಳೆ.

    ಇದನ್ನೂ ಓದಿ ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಅವಳ ಹೆಸರು ಪಂಚಫುಲಾ ಶಿಂಗಣೆ. 1979ರಲ್ಲಿ ನಾಪತ್ತೆಯಾದಾಗ ಅವಳಿಗೆ 53 ವರ್ಷ ವಯಸ್ಸು. ಶಿಂಗಣೆ ಕುಟುಂಬ ಆಕೆಯನ್ನು 2 ವರ್ಷಗಳ ಕಾಲ ಹುಡುಕಿತು. ನಂತರ ಪ್ರಯೋಜನವಿಲ್ಲವೆಂದು ಕೈಚೆಲ್ಲಿತು. ಆದರೆ ಅವಳು 500 ಕಿಮೀ ಒಳಗೇ ಇದ್ದಳು. ತನ್ನನ್ನು ಮನೆಯಲ್ಲಿಟ್ಟುಕೊಂಡು ಸಲುಹಿದ ಮುಸ್ಲಿಂ ಕುಟುಂಬಕ್ಕೆ ತನ್ನ ವಿವರಗಳನ್ನು ಹೇಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಳು. ಕಳೆದ ತಿಂಗಳು ಇದ್ದಕ್ಕಿದ್ದಂತೆ ಆಕೆಗೆ ತನ್ನ ಹೆಸರು, ಊರು ನೆನಪಾಗಿಬಿಟ್ಟಿತು. ಜತೆಗಿದ್ದವರು ಗೂಗಲ್‌ಸರ್ಚ್ ಮಾಡಿ, ಫೋಟೋ- ವಿಡಿಯೋ ಷೇರ್ ಮಾಡಿದ ಪರಿಣಾಮ 94 ವರ್ಷದ ಆ ವೃದ್ಧೆ ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ. ಖಾನ್ ಕುಟುಂಬದವರ ಬಗ್ಗೆ ಶಿಂಗಣೆ ಕುಟುಂಬದವರು ಮಾತ್ರವಲ್ಲ, ಇಡೀ ಊರು ಹೆಮ್ಮೆ ಪಡುವಂತಾಗಿದೆ. ‘‘ಒಬ್ಬ ಮಾನಸಿಕ ಅಸ್ವಸ್ಥ ಹೆಣ್ಣು ಮಗಳನ್ನು ನಲವತ್ತು ವರ್ಷಗಳ ಕಾಲ ಯಾರು ಇಷ್ಟು ತಾಳ್ಮೆಯಿಂದ ಸಾಕಿ ಸಲಹುತ್ತಾರೆ?’’ ಎನ್ನುತ್ತ ಶಿಂಗಣೆ ಕುಟುಂಬಸ್ಥರು ಗದ್ಗದಿತರಾಗುತ್ತಾರೆ.

    ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts