More

    ಸ್ತ್ರೀಶಕ್ತಿ ಕೈಲಿದೆ ಸುಭದ್ರ ರಾಷ್ಟ್ರ ನಿರ್ಮಾಣ -ಲೇಖಕಿ ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿಕೆ -ನಾರಿ ಶಕ್ತಿ ಸಂಗಮ ಮಹಿಳಾ ಸಮಾವೇಶ

    ದಾವಣಗೆರೆ: ಸ್ವಂತ ಬಲದಿಂದ ಸುಭದ್ರ ರಾಷ್ಟ್ರ ನಿರ್ಮಾಣದ ಜತೆಗೆ ದೇಶಕ್ಕೆ ಸತ್ಪ್ರಜೆಗಳನ್ನು ಕೊಡುಗೆಯಾಗಿ ನೀಡುವುದು ನಾರಿ ಶಕ್ತಿಯ ಪ್ರಮುಖ ಕಾರ್ಯವಾಗಬೇಕು ಎಂದು ಬರಹಗಾರ್ತಿ ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.
    ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ ಮಹಿಳಾ ಸಮನ್ವಯದಿಂದ ಸೇವಾ ಭಾರತಿ ಟ್ರಸ್ಟ್ ಸಹಯೋಗದಲ್ಲಿ ನಗರದ ಶ್ರೀ ಅಭಿನವ ರೇಣುಕ ಮಂದಿರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾರಿ ಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಾರಿ ಶಕ್ತಿ ಎಂದರೆ ಭಿಕ್ಷುಕರಲ್ಲ. ಮಹಿಳೆಯರ ಕೈಯಲ್ಲೇ ಶಕ್ತಿಯಿದೆ, ಸರಸ್ವತಿ, ಲಕ್ಷ್ಮಿ ಹಾಗೂ ದೇವಿ ನೆಲೆಸಿದ್ದಾರೆ. ಯಾರು ಶ್ರಮಪಟ್ಟು ಕೆಲಸ ಮಾಡುತ್ತಾರೋ ಅವರು ಮಾತ್ರ ಶಕ್ತಿವಂತರಾಗಲು ಸಾಧ್ಯ. ಬಿಟ್ಟಿ ಭಾಗ್ಯಗಳಿಗೆ ಯಾರೂ ಕೈಯೊಡ್ಡಬಾರದು. ಇದರಿಂದ ಕಲ್ಯಾಣ ಕರ್ನಾಟಕ ಸಾಧ್ಯವಿಲ್ಲ ಎಂದು ತಿಳಿಸಿದರು.
    ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕದೇವಿ, ಅಕ್ಕ ನಾಗಮ್ಮ, ಆಯ್ದಕ್ಕಿ ಲಕ್ಕಮ್ಮ ಮೊದಲಾದ ವೀರ ಮಹಿಳೆಯರ ಸಾಹಸಗಾಥೆ ಹಾಗೂ ಸರಳ ಜೀವನ ಅನಾವರಣಗೊಳಿಸಿ ಭಾರತೀಯ ನಾರಿ ಶಕ್ತಿ ಎಂದರೆ ಸಂಹಾರ ಹಾಗೂ ಸಂರಕ್ಷಣೆ ಎರಡೂ ಆಗಿದೆ. ನಾರಿ ಕೇವಲ ಕುಟುಂಬಕ್ಕೆ ಮಾತ್ರವಲ್ಲ, ದೇಶಕ್ಕಾಗಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ಶಕ್ತಿಗಳನ್ನು ನೆನೆಪಿಟ್ಟುಕೊಳ್ಳದಿದ್ದರೆ ಯಾವುದೇ ಸಾಧನೆ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
    ದೈವಿ ಸ್ವರೂಪ ಎನಿಸಿದ ಮಹಿಳೆಯರು ಹುಟ್ಟುವ ಮೊದಲೇ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ. ಪ್ರಧಾನಿ ಮೋದಿ ಬರುವ ಮೊದಲು ಸುಮಾರು 10 ಕೋಟಿ ಹೆಣ್ಣು ಭ್ರೂಣಹತ್ಯೆ ನಡೆದಿರುವುದು ದೇಶದ ದುರಂತ. ದೇಶದಲ್ಲಿ ಬೇಟಿ ಬಚಾವೋ, ಬೇಟಿ ಪಢಾವೋ ಪ್ರಾರಂಭಿಸಿದ ಮೇಲೆ ಲಿಂಗಾನುಪಾತ ಸಮಸ್ಥಿತಿಗೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು.
    ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಆದರೆ, ಆತ್ಮಬಲದ ಕೊರತೆ ಇದೆ. ಇದು ಮೊದಲು ಹೋಗಬೇಕು ಎಂದು ಕವಿತೆಯೊಂದನ್ನು ವಾಚಿಸಿದರು.
    ಹಿರಿಯ ಪ್ರಸೂತಿ ತಜ್ಞೆ ಡಾ.ಶಾಂತಾಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಹಿಳೆಯರಿಗೆ ವಿದ್ಯೆ, ಉದ್ಯೋಗ ಎಲ್ಲವೂ ಸಿಕ್ಕಿದೆ. ಆರ್ಥಿಕ ಸಬಲರೂ ಹಾಗೂ ಸ್ವತಂತ್ರರೂ ಆಗಿದ್ದಾರೆ. ಆದರೆ, ತಮಗೆ ತಾವೇ ಸರಪಳಿ ಹಾಕಿಕೊಳ್ಳುವ ಮೂಲಕ ಒಂದು ಚೌಕಟ್ಟಿನಲ್ಲಿದ್ದಾರೆ. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಮುಖ್ಯವಾಹಿನಿಗೆ ಬರುವ ಅಗತ್ಯವಿದೆ ಎಂದು ತಿಳಿಸಿದರು.
    ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ತಾಯಂದಿರು ಇದ್ದ ಮನೆಗಳಲ್ಲಿ ಮಕ್ಕಳು ಸುಸಂಸ್ಕೃತರಾಗುವ ಜತೆಗೆ ಸಾಧನೆ ಕೈಗೊಳ್ಳಲು ಸಾಧ್ಯವಾಗಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬದಲಾವಣೆಯ ಬಗ್ಗೆ ಚಿಂತನೆ ನಡೆಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
    ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ಅರುಣ್ ಗುಡ್ಡನಕೆರೆ, ಸಮ್ಮೇಳನ ಸಂಚಾಲಕರಾದ ಸುಧಾ ಜಯರುದ್ರೇಶ್, ಶೋಭಾ ಕೊಟ್ರೇಶ್, ಪಿಎಸ್‌ಐ ಎಂ.ಆರ್. ಚೌಬೆ ಇತರರು ಇದ್ದರು.
    ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ದೇಶಕ್ಕೆ ಕೊಡುಗೆ ನೀಡಿದ ಸಾವಿರಾರು ಮಹಿಳೆಯರ ಜೀವನ ಹಾಗೂ ಸಾಧನೆ ಕುರಿತು ಭಿತ್ತಿ ಚಿತ್ರ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts