More

    ತಾರಸಿಯಲ್ಲೇ ಮೀನು ಸಾಕಣೆ ಮಾಡಿ, ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಮಹಿಳೆ

    ನವದೆಹಲಿ: ಎಲ್ಲೆಲ್ಲೂ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿರುವುದರಿಂದ ಈಗೆಲ್ಲ ಮನೆಯ ತಾರಸಿಯಲ್ಲೇ ಹೂವು ತರಕಾರಿ ಬೆಳೆಯುವುದು ಟ್ರೆಂಡ್ ಆಗಿದೆ. ಇದರ ಸಾಲಿಗೆ ಈಗ ಮೀನು ಸಾಕಣೆಯೂ ಸೇರಿದೆ. ಹೌದು, ಮೀನು ಸಾಕಣೆ ಮಾಡಲು ಈಗ ವಿಶಾಲವಾದ ಭೂಮಿಯೇ ಬೇಕೆಂದೇನಿಲ್ಲ. ಮನೆಯ ತಾರಸಿ ವಿಶಾಲವಾಗಿದ್ದರಷ್ಟೇ ಸಾಕು. ಅದೇ ಮೀನು ಸಾಕಣೆಗೆ ಯೋಗ್ಯ ಸ್ಥಳ. ಹೀಗೆ ತಮ್ಮ ಮನೆಯ ತಾರಸಿಯಲ್ಲಿಯೇ ಮಹಿಳೆಯೊಬ್ಬರು ಮೀನು ಸಾಕಣೆ ಮಾಡಿ ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ.

    ಇವರ ಹೆಸರು ರಂಜಿತಾ ಸೈಕಿಯಾ ದೇಕಾ. ಅಸ್ಸಾಂನವರು. ರಿಸರ್ಕ್ಯುಲೇಟಿಂಗ್ ಅಕ್ವಾಕಲ್ಚರ್ ಸಿಸ್ಟಮ್ (ಆರ್‌ಎಎಸ್- ಮರುಬಳಕೆಯ ಜಲಕೃಷಿ ವ್ಯವಸ್ಥೆ) ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಮೀನು ಸಾಕಣೆಯನ್ನು ಪ್ರಾರಂಭಿಸಿದ ಅಸ್ಸಾಂನ ಮೊದಲ ಮಹಿಳೆ ಇವರು. ಇದಕ್ಕೆ ಆಳುಗಳನ್ನು ಇಟ್ಟುಕೊಳ್ಳುವ ಅವಶ್ಯಕತೆಯೂ ಇಲ್ಲ. ಒಬ್ಬರೇ ನಿರ್ವಹಿಸಬಹುದು. ಏನಿದು ತಂತ್ರಜ್ಞಾನ, ಬಳಸುವುದು ಹೇಗೆ, ಲಾಭ ಹೇಗೆ ಬರುತ್ತದೆ ಎಂಬುದರ ವಿವರ ಇಲ್ಲಿದೆ.

    ಸವಾಲುಗಳ ಬೆನ್ನತ್ತಿ: ರಂಜಿತಾ ಹದಿಹರೆಯದಿಂದಲೂ ಹೊಸ ಸವಾಲುಗಳಿಗೆ ಎದೆಯೊಡ್ಡುವ ಮಹಿಳೆ. 2005ರಲ್ಲಿ ಆಗಿನ್ನೂ ಇಂಟರ್‌ನೆಟ್ ಬಳಕೆ ಆರಂಭಿಕ ಹಂತದಲ್ಲಿತ್ತು. ಆಗಲೇ ಅದರ ಹಾಗೂ ಇತರ ಆಧುನಿಕ ತಂತ್ರಜ್ಞಾನಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಅವರು ಆರಂಭಿಸಿದರು. ಧೆಮಾಜಿ ಜಿಲ್ಲೆಯಲ್ಲಿ ಆನ್‌ಲೈನ್ ಸರ್ವಿಸ್ ಶಾಪ್ ಆರಂಭಿಸಿದ್ದರು. 2020ರಲ್ಲಿ ಕರೊನಾ ಕಾರ್ಮೋಡ ಆವರಿಸಿ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ರಂಜಿತಾ ಅವರ ಅಂಗಡಿ ಬಂದ್ ಆಯಿತು. ಆದರೆ ಮೊದಲಿನಿಂದಲೂ ಒಂದೇ ಆದಾಯಕ್ಕೆ ಜೋತು ಬೀಳದ ರಂಜಿತಾ, 2018ರಲ್ಲೇ ಮೀನುಗಾರಿಕೆಯ ಪ್ರಯೋಗಕ್ಕೆ ನಾಂದಿ ಹಾಡಿದ್ದರು. ಒಮ್ಮೆ ಯೂಟ್ಯೂಬ್ ಮೇಲೆ ಕಣ್ಣಾಡಿಸುವಾಗ ಜಲಕೃಷಿ ಕುರಿತ ವಿಡಿಯೋ ನೋಡಿ ಅವರ ಮನಸ್ಸಿಗೆ ಒಂದು ಆಲೋಚನೆ ಬಂತು. ಸಾವಯವ ತರಕಾರಿ ಮತ್ತು ಮೀನುಗಳನ್ನು ಒಂದೇ ಪರಿಸರದಲ್ಲಿ ಬೆಳೆಯುವ ತಂತ್ರಜ್ಞಾನ ಅವರನ್ನು ಆಕರ್ಷಿಸಿತು.

    ತಾರಸಿಯಲ್ಲೇ ಮೀನು ಸಾಕಣೆ ಮಾಡಿ, ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಮಹಿಳೆ

    ಜಲಕೃಷಿಯಲ್ಲಿ ಯಶಸ್ಸು: ರಂಜಿತಾ ಕೈಗೊಂಡ ಜಲಕೃಷಿ ವ್ಯವಹಾರದ ಪ್ರಯತ್ನ ದೊಡ್ಡ ಯಶಸ್ಸನ್ನು ಸಾಧಿಸಿತು. ಇದನ್ನು ಗಮನಿಸಿದ ಅಲ್ಲಿನ ಮೀನುಗಾರಿಕೆ ಇಲಾಖೆ 2017-18ರಲ್ಲಿ ಭಾರತದ ನೀಲಿಕ್ರಾಂತಿ ಯೋಜನೆಯಡಿ ಈ ಹೈಟೆಕ್ ಯೋಜನೆಯನ್ನು ಸ್ಥಾಪಿಸಲು ರಂಜಿತಾ ಅವರನ್ನು ಸಂಪರ್ಕಿಸಿತು. ಅಸ್ಸಾಂನ ಮೂಲೆಮೂಲೆಗಳಿಂದ ಅನೇಕರು ರಂಜಿತಾ ಅವರನ್ನು ಸಂಪರ್ಕಿಸಿ, ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿಸಿದರು. ತಾವೂ ಅದನ್ನು ಅಳವಡಿಸಿಕೊಂಡು ಲಾಭ ಮಾಡಿಕೊಂಡರು.

    ಏನಿದು ತಂತ್ರಜ್ಞಾನ?: ಮರುಬಳಕೆಯ ಜಲಚರ ಸಾಕಣೆ ವ್ಯವಸ್ಥೆಯನ್ನು ಇಸ್ರೇಲ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಉನ್ನತ ತಂತ್ರಜ್ಞಾನದಡಿ ಭೂ ಆಧರಿತ ಮೀನು ಸಾಕಣೆ ಮಾಡುವ ಈ ವಿಧಾನವು, ಕಡಿಮೆ ಜಾಗದಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದು ನೀರಿನ ಮರುಬಳಕೆ ಮತ್ತು ಸಂರಕ್ಷಣೆಗೂ ಸಹಾಯಕವಾಗುತ್ತದೆ. ಭಾರತದಲ್ಲಿ ಇದನ್ನು 2015-16ರಲ್ಲಿ ನೀಲಿ ಕ್ರಾಂತಿ ಯೋಜನೆಯಡಿ ಜಾರಿಗೆ ತರಲಾಯಿತು.

    ಮೀನು ಸಾಕಣೆ ಮಾಡುವ ತೊಟ್ಟಿಗಳಿಗೆ ಸುಮಾರು 50 ಸಾವಿರ ರೂ.ನಿಂದ 50 ಲಕ್ಷ ರೂ.ವರೆಗೆ ವೆಚ್ಚ ತಗಲುತ್ತದೆ. ಆದರೆ ಆರ್‌ಎಎಸ್ ತಂತ್ರಜ್ಞಾನದ ಬಳಕೆಯಿಂದಾಗಿ ಕಡಿಮೆ ಸ್ಥಳದಲ್ಲಿ, ಕೆಲವೇ ಕಾರ್ಮಿಕರೊಂದಿಗೆ ಸಂಪೂರ್ಣ ಸಾವಯವ ಮೀನುಗಳನ್ನು ಹೆಚ್ಚಾಗಿ ಉತ್ಪಾದಿಸಬಹುದು. ಸಾಮಾನ್ಯವಾಗಿ 100 ಲೀಟರ್ ತೊಟ್ಟಿಯಲ್ಲಿ 1 ಕೆಜಿ ಮೀನುಗಳನ್ನು ಸಾಕಲಾಗುತ್ತದೆ. ಆದರೆ ಆರ್​ಎಎಸ್ ತಂತ್ರಜ್ಞಾನದ ಮೂಲಕ 10 ಲೀಟರ್ ತೊಟ್ಟಿಯಲ್ಲಿ 1 ಕೆಜಿ ಮೀನುಗಳನ್ನು ಸುಲಭವಾಗಿ ಸಾಕಬಹುದು. ಹೀಗಾಗಿ ರಂಜಿತಾ 2020ರ ಸೆಪ್ಟೆಂಬರ್‌ನಲ್ಲಿ ಆರ್‌ಎಎಸ್‌ನೊಂದಿಗೆ ಅಧಿಕೃತವಾಗಿ ಮೀನು ಸಾಕಣೆಯನ್ನು ಪ್ರಾರಂಭಿಸಿದರು. ಪ್ರಸ್ತುತ ಅವರ ಬಳಿ 8 ಅಡಿ ಉದ್ದ, 5 ಅಡಿ ಆಳದ 8 ತೊಟ್ಟಿಗಳಿದ್ದು, ಇದರಲ್ಲಿ 6 ಲಕ್ಷ ಲೀಟರ್ ನೀರನ್ನು ಶೇಖರಿಸಿ ಕ್ವಿಂಟಾಲ್‌ಗಟ್ಟಲೇ ಮೀನುಗಳನ್ನು ಸಾಕಣೆ ಮಾಡುತ್ತಿದ್ದಾರೆ.

    ತಾರಸಿಯಲ್ಲೇ ಮೀನು ಸಾಕಣೆ ಮಾಡಿ, ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಮಹಿಳೆ

    ಉತ್ತಮ ಬೇಡಿಕೆ: ‘‘ಸಂಪೂರ್ಣ ಸಾವಯವ ಮೀನುಗಳು ಹೆಚ್ಚು ಔಷಧೀಯ ಮೌಲ್ಯ ಹೊಂದಿರುವ ಕಾರಣ ಗ್ರಾಹಕರಿಂದ ಉತ್ತಮ ಬೇಡಿಕೆಯೂ ವ್ಯಕ್ತವಾಗುತ್ತಿದೆ. ಅಸ್ಸಾಂನ ಜಾಗಿರೋಡ್, ಸೋನಾಪುರ್ ಮತ್ತು ಗುವಾಹಟಿಯಲ್ಲಿನ ಕೆಲವು ಮೀನು ಮಾರುಕಟ್ಟೆಗಳಲ್ಲಿ ನಮ್ಮ ಮೀನು ಮಾರಾಟ ಮಾರಾಟವಾಗುತ್ತಿದೆ. 2021ರಲ್ಲಿ ತಮ್ಮ ಈ ಜಲಕೃಷಿಯ ವಹಿವಾಟು 11.25 ಲಕ್ಷ ರೂ.ಗಳಷ್ಟಿತ್ತು. ಜೂನ್ 2022ರಲ್ಲಿ 14.8 ಲಕ್ಷ ರೂ.ಗಳಷ್ಟಿದ್ದು, ಈ ವರ್ಷಾಂತ್ಯಕ್ಕೆ 20 ಲಕ್ಷ ರೂ.ಗೆ ತಲುಪುವ ಭರವಸೆ ಇದೆ’’ ಎನ್ನುತ್ತಾರೆ ರಂಜಿತಾ.

    ಇವರ ಜಲಕೃಷಿಯಲ್ಲಿ ಭಾರತದ ಮುಖ್ಯ ಮೀನು ತಳಿಗಳಾದ ರೋಹೋ, ಕ್ಯಾಡ್ಲಾ ಕ್ಯಾಟ್ ಫಿಶ್, ಫಾಸಿಲ್ ಕ್ಯಾಟ್, ಪೊಂಗಾಸ್ ಕ್ಯಾಟ್ ಫಿಶ್, ಚೈನೀಸ್ ಪಾಂಫೆಟ್ (ರೂಪ್ ಚಂದಾ) ಮೀನುಗಳನ್ನು ಸಾಕಣೆ ಮಾಡಲಾಗುತ್ತಿದೆ. ಗುವಾಹಟಿಯಲ್ಲಿ ಸಂಪೂರ್ಣ ಸಾವಯವ ಜೀವಂತ ಮೀನು ಮಾರುಕಟ್ಟೆ ಸ್ಥಾಪಿಸುವುದು ರಂಜಿತಾ ಅವರ ಕನಸಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

    ತಮ್ಮ ಕಾರ್ಯನಿರ್ವಹಣೆ ಬಗ್ಗೆ ಸ್ವತಃ ರಂಜಿತಾ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ವಿವರಣೆ ಅಸ್ಸಾಮೀ ಭಾಷೆಯಲ್ಲಿದ್ದು, ಇತರ ಪ್ರದೇಶದವರಿಗೆ ಅರ್ಥವಾಗಲೆಂದು ಇಂಗ್ಲಿಷ್ ಭಾಷೆಯಲ್ಲಿ ಅರ್ಥವಿವರಣೆಯನ್ನು ಅದರಲ್ಲಿ ನೀಡಲಾಗಿದೆ.

    ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts