More

    ಕಾನೂನಿನೊಂದಿಗೆ ತಂತ್ರಜ್ಞಾನ ಅರಿತುಕೊಳ್ಳಿ

    ಬೆಳಗಾವಿ: ಇಂದು ತಂತ್ರಜ್ಞಾನ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಯುವ ವಕೀಲರು ಕಾನೂನು ಅಧ್ಯಯನದೊಂದಿಗೆ ತಂತ್ರಜ್ಞಾನ ಬಳಕೆಯನ್ನೂ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದ್ದಾರೆ.
    ಕರ್ನಾಟಕ ಕಾನೂನು ಸಮಿತಿಯ ರಾಜಾ ಲಖಮಗೌಡ ಕಾನೂನು ಕಾಲೇಜ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಆನ್‌ಲೈನ್ ಅರ್ಜಿ: ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿದೆ. ವಕೀಲರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಲು ಸುಪ್ರೀಂಕೋರ್ಟ್ ಚಿಂತನೆ ನಡೆಸುತ್ತಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನ ಅನುಸರಿಸಿ, ಬೆಳಗಾವಿಯ ನ್ಯಾಯಾಲಯಗಳು ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಹ ಅವಕಾಶ ನೀಡುವ ತಯಾರಿಯಲ್ಲಿವೆ. ಶಿಕ್ಷಣ ವ್ಯವಸ್ಥೆ ಮತ್ತು ಕಾನೂನು ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಭಾವ ಹೆಚ್ಚಾಗುತ್ತಲಿದೆ ಎಂದು ಕೆಲವರು ಹೇಳುತ್ತಾರೆ. ಎಲ್ಲ ಯುವ ಪದವೀಧರರು ಕಾನೂನು ತಾಂತ್ರಿಕ ಬೆಳವಣಿಗೆಗಳನ್ನು ತಿಳಿದಿರಬೇಕು ಎಂದರು.

    ಮೂಲ ಪಠ್ಯ ಗಮನಿಸಿ: ನಾವೆಲ್ಲರೂ ಸಮಾಲೋಚನೆ ಮತ್ತು ಮಧ್ಯಸ್ಥಿಕೆಯಂತಹ ಪರ್ಯಾಯ ವಿವಾದ ಪರಿಹಾರದ ಕಾರ್ಯ ವಿಧಾನಗಳ ಕುರಿತು ಇಂದು ಮಾತನಾಡುತ್ತೇವೆ. ಭಗವಾನ್ ಶ್ರೀಕೃಷ್ಣನು ಮಹಾಭಾರತದಲ್ಲಿ ಮಾತುಕತೆ ಮತ್ತು ಮಧ್ಯಸ್ಥಿಕೆಯಲ್ಲಿ ತೊಡಗಿದ್ದನ್ನು ನಾವು ನೆನಪಿನಲ್ಲಿಡಬೇಕು. ನಾವು ಈಗ ಲಿಂಗ ನ್ಯಾಯದ ಕುರಿತು ಮಾತನಾಡುತ್ತಿದ್ದೇವೆ. ಮನು ಸ್ಮತಿ ಮತ್ತು ಯಾಜ್ಞವಲ್ಕ್ಯ ಸ್ಮತಿಯಂತಹ ಪಠ್ಯಗಳು ಲಿಂಗ ನ್ಯಾಯ ಮತ್ತು ಲಿಂಗ ಸಮಾನತೆಗೆ ಹಲವಾರು ತತ್ತ್ವಗಳನ್ನು ನೀಡಿವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು ಮೂಲ ಪಠ್ಯಗಳಿಗೆ ಹೋಗಬೇಕು. ಬ್ರಿಟಿಷ್ ಆಡಳಿತ ಮತ್ತು ಸ್ವತಂತ್ರ ಭಾರತದ ಅವಧಿಯಲ್ಲಿ ತಂದ ಹೊಸ ಮತ್ತು ಆಧುನಿಕ ಕಾನೂನುಗಳ ಹಿನ್ನೆಲೆಯಲ್ಲಿ ನಮ್ಮಲ್ಲಿ ವಿಸ್ಮತಿ ಆಗಿದೆ ಎಂದು ನ್ಯಾ. ಜೋಶಿ ಅಭಿಪ್ರಾಯಪಟ್ಟರು.

    ಕಾಲೇಜ್ ಆಡಳಿತ ಮಂಡಳಿ ಸದಸ್ಯ ವಿವೇಕ ಕುಲಕರ್ಣಿ ಮಾತನಾಡಿ, ಆರ್.ಎಲ್.ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಎಂ ಕೋರ್ಸ್ ಪ್ರಾರಂಭಿಸಲು ಕರ್ನಾಟಕ ಕಾನೂನು ಸಮಾಜ ನಿರ್ಧರಿಸಿದೆ ಎಂದು ತಿಳಿಸಿದರು. ಎಂ.ಕೆ. ನಂಬಿಯಾರ ಸ್ಮಾರಕ ಚಿನ್ನದ ಪದಕವನ್ನು ಸಾಂವಿಧಾನಿಕ ಕಾನೂನಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ವಿಜಯಕುಮಾರ ಬುದರಿ ಅವರಿಗೆ ನೀಡಲಾಯಿತು. ವಿದ್ಯಾರ್ಥಿಗಳಾದ ಸಚಿದಾನಂದ ಪಾಟೀಲ, ತೃಪ್ತಿ ಸಡೇಕರ, ಮೇಘಾ ಸೋಮಣ್ಣನವರ, ಅಂಕಿತಾ ಪಾಟೀಲ, ಸಚಿನ ಚವ್ಹಾಣ, ಇತರರು ಅನುಭವ ಹಂಚಿಕೊಂಡರು. ಮಹಿಳಾ ಪ್ರತಿನಿಧಿ ಅನುಜಾ ಬೆಳ್ಗಾಂವ್ಕರ್ ವಂದಿಸಿದರು. ಪ್ರಾಂಶುಪಾಲ ಡಾ.ಅನಿಲ ಹವಾಲ್ದಾರ್, ಪ್ರೊ.ಪಿ.ಎ. ಯಜುರ್ವೇದಿ ಹಾಗೂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts