More

    ವೋಟರ್ ಐಡಿಗೆ ಆಧಾರ್ ಜೋಡಣೆ ಬಗ್ಗೆ ಪರಿಶೀಲನೆ: ಜನರ ಡೇಟಾ ದುರ್ಬಳಕೆ ಆಗದಂತೆ ಸುರಕ್ಷತಾ ಕ್ರಮದ ಭರವಸೆ

    ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ಚುನಾವಣಾ ಆಯೋಗ ಸಲ್ಲಿಸಿರುವ ಪ್ರಸ್ತಾವನೆ ಪರಿಶೀಲನೆಯಲ್ಲಿ ಇದೆ ಎಂದು ಸರ್ಕಾರ ಲೋಕಸಭೆಯಲ್ಲಿ ಬುಧವಾರ ತಿಳಿಸಿದೆ.

    ಮತದಾರರ ಮಾಹಿತಿ ವ್ಯವಸ್ಥೆ ಮತ್ತು ಆಧಾರ್ ವ್ಯವಸ್ಥೆಗಳನ್ನು ಪರಸ್ಪರ ಸಂರ್ಪಸಿಲ್ಲ. ಆಯೋಗದ ಪ್ರಸ್ತಾವನೆ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜತೆಗೆ ಜನರ ಡೇಟಾ ದುರ್ಬಳಕೆ ಆಗದಂತೆ ಸುರಕ್ಷತಾ ಕ್ರಮಗಳ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

    ಆಧಾರ್ ಸಂಖ್ಯೆಯನ್ನು ವೋಟರ್ ಐಡಿಗೆ ಲಿಂಕ್ ಮಾಡುವುದರಿಂದ ನಕಲಿ ಮತದಾರರನ್ನು ತಡೆಯಬಹುದು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವಂತೆ ಆಯೋಗ ಮನವಿ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ರಾಷ್ಟ್ರವ್ಯಾಪಿ ಎನ್​ಆರ್​ಸಿ ಜಾರಿಗೆ ಇನ್ನೂ ನಿರ್ಧರಿಸಿಲ್ಲ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್​ಆರ್​ಸಿ) ದೇಶವ್ಯಾಪಿ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಸುಪ್ರೀಂಕೋರ್ಟ್ ನಿಗಾವಣೆಯಲ್ಲಿ ಅಸ್ಸಾಂನಲ್ಲಿ ಎನ್​ಆರ್​ಸಿ ಸಂಪನ್ನವಾಗಿದೆ. 2019ರ ಆಗಸ್ಟ್ 31ರಂದು ಪ್ರಕಟವಾದ ಅಂತಿಮ ಪಟ್ಟಿಯ ಪ್ರಕಾರ ಅಸ್ಸಾಂನಲ್ಲಿ 19.06 ಲಕ್ಷ ಜನರು ಈ ಪಟ್ಟಿಯಿಂದ ಹೊರಗಿದ್ದಾರೆ. ಆದರೆ, ಎನ್​ಆರ್​ಜಿಯನ್ನು ದೇಶವ್ಯಾಪಿ ಜಾರಿ ಮಾಡುವ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಎನ್​ಆರ್​ಸಿ ಮತ್ತು ಪೌರತ್ವ ಕಾಯ್ದೆ ಅಡಿಯಲ್ಲಿ ವಶದಲ್ಲಿ ಇರಿಸುವ (ಡಿಟೆನ್ಷನ್) ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಬಂಧನ ಕೇಂದ್ರಗಳನ್ನು ರಾಜ್ಯ ಸರ್ಕಾರಗಳು ತೆರೆಯಬೇಕು. ಅಕ್ರಮ ವಲಸಿಗರು ಮತ್ತು ಶಿಕ್ಷೆ ಮುಗಿಸಿದ ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸು ಕಳುಹಿಸುವವರೆಗೆ ಅವರನ್ನು ಈ ಡಿಟೆನ್ಷನ್ ಕೇಂದ್ರಗಳಲ್ಲಿ ಇರಿಸಬೇಕು ಎಂದು ಹೇಳಿದ್ದಾರೆ.

    ಸಾಮಾಜಿಕ ಮಾಧ್ಯಮಗಳಿಗೆ ನಿಯಂತ್ರಕರನ್ನು ನೇಮಿಸಿಲ್ಲ: ಸಾಮಾಜಿಕ ಮಾಧ್ಯಮಗಳಿಗೆ ನಿಯಂತ್ರಕರನ್ನು ನೇಮಿಸುವ ಯಾವುದೇ ಪ್ರಸ್ತಾವನೆ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯದ ಮುಂದಿಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಐಟಿ ಕಾಯ್ದೆ ಅನ್ವಯ ಡಿಜಿಟಲ್ ಮೀಡಿಯಾ ನೀತಿ ಸಂಹಿತೆಯನ್ನು ಸರ್ಕಾರ ಪ್ರಕಟಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸುಧಾರಿಸುವಂತೆ ಸೂಚಿಸಲಾಗಿದೆ. ಆದರೆ ನಿಯಂತ್ರಕರನ್ನು ನೇಮಿಸಿಲ್ಲ ಎಂದು ಐಟಿ ಮತ್ತು ಸಂಹವನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts