More

    ನಕಲಿ ಶ್ಯೂರಿಟಿ ಗ್ಯಾಂಗ್ ಸಿಸಿಬಿ ಬಲೆಗೆ;ಆಧಾರ್,ಪಹಣಿ,ಮ್ಯುಟೇಷನ್ ತಿದ್ದಿ ಕೋರ್ಟ್‌ಗೆ ಸಲ್ಲಿಕೆ

    ಬೆಂಗಳೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಗೆ ಶ್ಯೂರಿಟಿ ನೀಡುತ್ತಿದ್ದ ಮಹಿಳೆ ಸೇರಿ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾಯಚೂರಿನ ಮಾನ್ವಿ ತಾಲೂಕಿನ ವೀರೇಶ್ (37), ಅಮರೇಶ್ (38), ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಉಮೇಶ್ ಕುಮಾರ್ (48), ಸಂತೋಷ್ (29), ಬೆಂಗಳೂರು ಗ್ರಾಮಾಂತರ ಮಾದವಾರದ ಪ್ರಕಾಶ್ (42), ಮೈಸೂರು ಜಿಲ್ಲೆ ನಂಜನಗೂಡಿನ ಉಮೇಶ್ (49), ಕೋಲಾರದ ಜಿ. ನಾಗರಾಜು ಅಲಿಯಾಸ್ ಸೋಡಾ (46), ಮಂಜುನಾಥ (48) ಮತ್ತು ಆರ್.ಟಿ.ನಗರದ ದಿನ್ನೂರು ಮುಖ್ಯ ರಸ್ತೆಯ ತಬಸುಂ (38) ಬಂಧಿತರು. ಆರೋಪಿಗಳಿಂದ 35 ನಕಲಿ ಆಧಾರ್ ಕಾರ್ಡ್ ಮತ್ತು 7 ಭೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಧಾರ್ ಕಾರ್ಡ್, ಸೇಲ್ ಡೀಡ್, ಮ್ಯೂಟೇಷನ್, ಪಹಣಿಯಲ್ಲಿ ಹೆಸರು ಎಡಿಟ್ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿಗಳು, ಆರೋಪಿಗಳ ಜಾಮೀನಿಗೆ ಶ್ಯೂರಿಟಿ ಕೊಡಲು ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ(ಪೂರ್ವ) ಇನ್‌ಸ್ಪೆಕ್ಟರ್ ವಿ. ಬಾಲಾಜಿ ನೇತೃತ್ವದ ತಂಡ ಮಂಗಳವಾರ ಕಾರ್ಯಾಚರಣೆ ನಡೆಸಿ ಎಲ್ಲ ಆರೋಪಿಗಳನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ನಡೆಸಿದಾಗ ನಕಲಿ ಆಧಾರ್ ಕಾರ್ಡ್ ಮತ್ತು ಭೂಮಿ ಸಂಬಂಧ ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿದ್ದು, ಬಂಧಿಸಲಾಗಿದೆ.

    ಅಪರಾಧ ಪ್ರಕರಣಗಳಲ್ಲಿ 1 ಆಧಾರ್ ಕಾರ್ಡ್ ಬಳಸಿ ಇಬ್ಬರು ಆರೋಪಿಗಳ ಜಾಮೀನಿಗೆ ಶ್ಯೂರಿಟಿ ನೀಡಬಹುದಾಗಿದೆ.ಆದರೆ, ಆರೋಪಿಗಳು ಹಣ ಪಡೆದು ನಾಲ್ಕೈದು ಮಂದಿಗೆ ಶ್ಯೂರಿಟಿ ನೀಡಿದ್ದಾರೆ. ಒಂದೇ ಆಧಾರ್, ಪಹಣಿ ಮತ್ತು ಮ್ಯೂಟೇಷನ್‌ಗಳನ್ನು ಈ ತಂಡ ಬಳಸಿದೆ. ಈ ದಂಧೆ ಹಲವು ವರ್ಷಗಳಿಂದ ತೊಡಗಿದ್ದರು. ನಕಲಿ ದಾಖಲೆ ಸಲ್ಲಿಸಿ ಶ್ಯೂರಿಟಿ ನೀಡಿರುವ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಯಾವ ಪ್ರಕರಣಗಳಲ್ಲಿ ಯಾರ್ಯಾರಿಗೆ ಆರೋಪಿಗಳು ಶ್ಯೂರಿಟಿ ನೀಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts