More

    ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡಿ

    ಗದಗ: ಸಕಾಲದಡಿ ಒಟ್ಟು 258 ಸೇವೆಗಳನ್ನು ವಿವಿಧ ಇಲಾಖೆಗಳಲ್ಲಿ ಒದಗಿಸಲಾಗುತ್ತಿದೆ. ಇವುಗಳಲ್ಲಿ 178 ಸೇವೆಗಳಿಗೆ ಮಾತ್ರ ಜಿಲ್ಲೆಯಲ್ಲಿ ಅರ್ಜಿಗಳು ಸ್ವೀಕೃತವಾಗಿದ್ದು, ಬಾಕಿ ಉಳಿದ ಸೇವೆಗಳಿಗೂ ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ಇಲಾಖೆಗಳ ವಿವಿಧ ಹಂತದ ಒಟ್ಟು 528 ಕಚೇರಿಗಳ ಪೈಕಿ 125 ಕಚೇರಿಗಳಲ್ಲಿ ಸಕಾಲದಡಿ ಅರ್ಜಿ ಸ್ವೀಕರಿಸದಿರುವುದು ಗಮನಕ್ಕೆ ಬಂದಿದೆ. ಅಂತಹ ಇಲಾಖೆಗಳ ಮುಖ್ಯಸ್ಥರು ಸಕಾಲದಡಿ ಅರ್ಜಿಗಳ ಸ್ವೀಕಾರಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ವಾಕರಸಾಸಂ ಗದಗ ವಿಭಾಗದಲ್ಲಿ ಅರ್ಜಿ ಸ್ವೀಕರಿಸಿ ನಿಗದಿತ ಕಾಲಮಿತಿಯೊಳಗೆ ವಿಲೇ ಮಾಡದೇ ಇರುವ ಐದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿವೆ. ಇದರಿಂದ ಜಿಲ್ಲೆಯ ಸಕಾಲ ಪ್ರಗತಿ ಕುಂಠಿತವಾಗಿದ್ದು, ಇನ್ನೆರಡು ದಿನದಲ್ಲಿ ಅರ್ಜಿಗಳ ವಿಲೇಗೆ ಸೂಕ್ತ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

    ಆರೋಗ್ಯ ಇಲಾಖೆಯಲ್ಲಿರುವ 59 ಕಚೇರಿಗಳ ಪೈಕಿ 35 ಕಚೇರಿಗಳಲ್ಲಿ ಮಾತ್ರ ಸಕಾಲದಡಿ ಅರ್ಜಿ ಸ್ವೀಕೃತವಾಗಿದ್ದು, ಉಳಿದ ಕಚೇರಿಗಳಲ್ಲಿಯೂ ಸಕಾಲದಡಿ ಅರ್ಜಿ ಸ್ವೀಕರಿಸಬೇಕು. ಶಿಕ್ಷಣ ಇಲಾಖೆಯ 30 ಕಚೇರಿಗಳ ಪೈಕಿ 21 ಕಚೇರಿಗಳಲ್ಲಿ ಈವರೆಗೂ ಅರ್ಜಿ ಸ್ವೀಕೃತವಾಗಿದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇದೇ ನಿರ್ಲಕ್ಷ್ಯ ಮುಂದುವರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

    ಸಕಾಲ ಯೋಜನೆಯಡಿ ಇಲಾಖೆಗಳಿಗೆ ನಿಗದಿಪಡಿಸಿದ ಯೋಜನೆಗಳಲ್ಲಿ ಕಡ್ಡಾಯವಾಗಿ ಅರ್ಜಿಗಳನ್ನು ಸ್ವೀಕರಿಸಬೇಕು. ವಿನಾಕಾರಣ ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕರಿಸಬಾರದು. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆ, ವಿಳಂಬವಿಲ್ಲದೇ ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದರು.

    ಸಕಾಲ ಯೋಜನೆಗೆ ಸಂಬಂಧಿತ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆಗಳ ಇಲಾಖಾ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಎಲ್ಲ ಇಲಾಖೆಗಳ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಮಾಹಿತಿಗಾಗಿ ಸಕಾಲ ಯೋಜನೆಯ ಸೂಚನಾ ಫಲಕ ಅಳವಡಿಸಬೇಕು. ಜಿಲ್ಲೆಯ ಸಂಬಂಧಿಸಿದ ಇಲಾಖೆಗಳ ಕಾರ್ಯಾಲಯಗಳಿಗೆ ಯಾವುದೇ ಸಮಯದಲ್ಲಿ ಭೇಟಿ ನೀಡಿ ಸಕಾಲ ಯೋಜನೆಯಡಿ ಪ್ರಗತಿಯ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

    ಪ್ರಗತಿ ಸಾಧಿಸದಿದ್ದರೆ ಶಿಸ್ತುಕ್ರಮ

    ಪ.ಜಾ, ಪ.ಪಂ. ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಈ ಯೋಜನೆಯಡಿ ಬಿಡುಗಡೆಯಾದ ಅನುದಾನದಿಂದ ಆರ್ಥಿಕ ಹಾಗೂ ಭೌತಿಕ ಪ್ರಗತಿ ಸಾಧಿಸಬೇಕು ಎಂದರು. ಈ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ದುರುಪಯೋಗ ಹಾಗೂ ಅನುದಾನ ಖರ್ಚಾಗದಿದ್ದರೆ ಅಂತಹ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಮಾತನಾಡಿ, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಯಾವುದೇ ಕಾಮಗಾರಿ, ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಬೇಕು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಗೆ ಅವಕಾಶ ನೀಡದಂತೆ ಸೂಚಿಸಿದರು. ಒಂದು ವೇಳೆ ಶಿಷ್ಟಾಚಾರ ಉಲ್ಲಂಘನೆ ಕುರಿತು ದೂರಗಳು ಬಂದಲ್ಲಿ ಸಂಬಂಧಿಸಿದ ಇಲಾಖಾ ಮುಖ್ಯಸ್ಥರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

    ಸಭೆಯಲ್ಲಿ ಜಿಪಂ ಸಿಇಒ ಭರತ್ ಎಸ್, ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ರಮೇಶ ಜಾಧವ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ ಮುದ್ದಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts