More

    ಚಿಪ್ಪುಹಂದಿ ಕಳ್ಳರಿಗೆ ಚೈನಾ ನಂಟು?

    ಚಿಪ್ಪುಹಂದಿ ಕಳ್ಳರಿಗೆ ಚೈನಾ ನಂಟು?

    ಚಿಕ್ಕಮಗಳೂರು: ಚಿಪ್ಪು ಹಂದಿಗಳ ಬೇಟೆ ಮತ್ತು ಚಿಪ್ಪುಗಳ ಮಾರಾಟ ಪ್ರಕರಣ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ್ದು, ಆರೋಪಿಗಳಿಗೆ ಚೈನಾ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮತ್ತು ಚೆನ್ನೈ ಮೂಲದ ವ್ಯಕ್ತಿಗಳು ಈ ಜಾಲದಲ್ಲಿದ್ದು, ಬಂಧಿತ ಕೆಲ ಆರೋಪಿಗಳು ವನ್ಯಜೀವಿ ಅಂಗಾಂಗಗಳ ವೃತ್ತಿಪರ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

    ಈಗ ಸೆರೆ ಸಿಕ್ಕಿರುವ ಹತ್ತೂ ಆರೋಪಿಗಳು ಕೇವಲ ಮಧ್ಯವರ್ತಿಗಳು ಮಾತ್ರ. ಈ ಜಾಲದ ಸೂತ್ರದಾರ ತೆರೆಮರೆಯಲ್ಲಿದ್ದು, ಎಲ್ಲ ವ್ಯವಹಾರ ಕೋಡ್​ವರ್ಡ್​ನಲ್ಲೇ ನಡೆಯುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಚಿಪ್ಪಿಗೆ 350 ಡಾಲರ್ ಬೆಲೆ ಇದ್ದು, ಈ ಜಾಲದ ಕಿಂಗ್​ಪಿನ್ ವಿದೇಶದಲ್ಲೂ ಸಂಪರ್ಕ ಹೊಂದಿರುವ ಸಂಶಯ ವ್ಯಕ್ತವಾಗಿದೆ ಎಂದು ಡಿಸಿಎಫ್ ಜಗನ್ನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.

    ಮೂಲ ಇನ್ನೂ ಸಿಕ್ಕಿಲ್ಲ. ಈಗ ಸೆರೆ ಸಿಕ್ಕಿರುವ ಎಲ್ಲ ಆರೋಪಿಗಳನ್ನು ಕೇವಲ ಮಾಂಸ ಮತ್ತು ಚಿಪ್ಪು ಮಾರಾಟಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಫೋನ್​ನಲ್ಲೇ ವ್ಯವಹಾರ ನಡೆದಿದೆ.

    ಸೆರೆ ಸಿಕ್ಕಿದ್ದು ಹೇಗೆ?: ಮತ್ತೋಡಿ ಭದ್ರಾ ವನ್ಯಜೀವಿ ವ್ಯಾಪ್ತಿಯ ಹೊಸಂಬಳ ಬಳಿ ಹಾಗೂ ಬೇಲೂರು ಬಳಿ ದಬ್ಬೆಯಲ್ಲಿ ಚಿಪ್ಪು ಹಂದಿ ಶಿಕಾರಿ ಮಾಡಿ ಮಾಂಸ ಸೇವಿಸಿದ ನಂತರ ಚಿಪ್ಪನ್ನು ಮಾರಾಟ ಮಾಡಲೆತ್ನಿದ್ದು, ಡಿಸಿಎಫ್ ಜಗನ್ನಾಥ್ ನೇತೃತ್ವದ ತಂಡ ಮಾಂಸ ಮತ್ತು ಚಿಪ್ಪು ಖರೀದಿ ನೆಪದಲ್ಲಿ ಮಾರುವೇಷದಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರ ಜಾಲ ಬೆನ್ನತ್ತಿ ತನಿಖೆ ಕೈಗೊಂಡಾಗ 11 ಜನರ ಲಿಂಕ್ ಪತ್ತೆಯಾಗಿದೆ.

    ಬಂಧಿತ ಆರೋಪಿಗಳು: 1. ಅಬ್ದುಲ್ ರೆಹಮಾನ್, ಉಪ್ಪಳ್ಳಿ, ಚಿಕ್ಕಮಗಳೂರು, 2. ಸುಂದರೇಶ್, ಮಳಲೂರು ಚಿಕ್ಕಮಗಳೂರು, 3. ಮಹೇಂದ್ರ, ನಾಗರಹಳ್ಳಿ, ಚಿಕ್ಕಮಗಳೂರು, 4. ವಿಶ್ವನಾಥ, ನಾಗರಹಳ್ಳಿ, ಚಿಕ್ಕಮಗಳೂರು 5. ನವೀದ್ ಬಾಷಾ, ಕಳಸಾಪುರ, ಚಿಕ್ಕಮಗಳೂರು 6. ಪ್ರದೀಪ್, ಸಖರಾಯಪಟ್ಟಣ, ಕಡೂರು 7. ಶ್ರೀನಿವಾಸ್, ಮಠದಗುತ್ತಿ ಕಡೂರು 8. ಮಲ್ಲೇಶ್, ಹೊಸಂಬಳ, ಚಿಕ್ಕಮಗಳೂರು 9. ಧಮೇಶ್, ಹೊಸಂಬಳ, ಚಿಕ್ಕಮಗಳೂರು 10. ಮೋಹನ್​ಕುಮಾರ್, ಜಾವಗಲ್, ಅರಸೀಕೆರೆ

    ಚಿಪ್ಪು ಹಂದಿಗೆ ಏಕೆ ಬೇಡಿಕೆ: ಚಿಪ್ಪು ಹಂದಿಯ ಮಾಂಸ ಮತ್ತು ಚಿಪ್ಪಿಗೆ ಅಪಾರ ಬೇಡಿಕೆ ಇದೆ. ಮಾಂಸ ತಿನ್ನುವುದರಿಂದ ಶಕ್ತಿವರ್ಧನೆಯಾಗಲಿದೆ. ನರರೋಗಕ್ಕೆ ಒಳ್ಳೆಯ ಮದ್ದು, ಪುರಷತ್ವ ವೃದ್ಧಿಯಾಗಲಿದೆ ಎನ್ನುವ ನಂಬಿಕೆ ಕೂಡಾ ಇದೆ. ಚಿಪ್ಪಿನಿಂದ ಚೈನಾದಲ್ಲಿ ಸಾಂಪ್ರದಾಯಿಕ ಔಷಧ ತಯಾರು ಮಾಡಲಾಗುತ್ತದೆ. ವಿಶೇಷವಾಗಿ ಚಿಪ್ಪಿಗೆ ಚೈನಾದಿಂದಲೇ ಹೆಚ್ಚಿನ ಬೇಡಿಕೆ ಇದೆ.

    ಮಾಂಸಕ್ಕೆ ಇಷ್ಟೇ ಎಂದು ಬೆಲೆ ನಿಗದಿಪಡಿಸಲು ಸಾಧ್ಯವಿಲ್ಲ. ಇದು ಖರೀದಿದಾರರು ಮತ್ತು ಪರಿಸ್ಥಿತಿ ಮೇಲೆ ನಿರ್ಧಾರವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಚಿಪ್ಪು ಹಂದಿ ಮಾಂಸ ತಿನ್ನಬೇಕು ಎಂದು ಬಯಕೆಯಾದಾಗ ಎಷ್ಟೇ ಹಣ ಕೇಳಿದರೂ ಕೊಡಲು ತಯಾರು ಇರುವವರಿಗೆ ಕೊರತೆ ಇಲ್ಲ. ಹಂದಿಯ ಚಿಪ್ಪಿನ ಬೆಲೆ ಸ್ಥಳೀಯವಾಗಿ ಒಂದು ಕೆ.ಜಿಗೆ 1.5 ಲಕ್ಷ ರೂ.ನಿಂದ ಆರಂಭವಾಗುತ್ತದೆ ಎಂದು ಹೇಳಲಾಗಿದೆ.

    ಟ್ರಾಫಿಕ್ ವರದಿಯಲ್ಲಿ ಬಹಿರಂಗ: ಅರಣ್ಯ ಪ್ರಾಣಿಗಳ ಕಳ್ಳಸಾಗಾಟಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ದಿಲ್ಲಿಯ ಎನ್​ಜಿಒ, ಪಶ್ಚಿಮ ಘಟ್ಟ ಪ್ರದೇಶದಿಂದ ಅತಿ ಹೆಚ್ಚು ಕಾಡು ಪ್ರಾಣಿಗಳನ್ನು ವಿದೇಶಗಳಿಗೆ ಸಾಗಾಟ ಮಾಡುತ್ತಿರುವುದನ್ನು ಸ್ಪಷ್ಟಪಡಿಸಿದೆ. ಚಿಪ್ಪುಹಂದಿ, ಹುಲಿ, ಎರಡು ತಲೆಯ ಹಾವು ಮತ್ತಿತರ ಪ್ರಾಣಿಗಳನ್ನು ಅತಿ ಹೆಚ್ಚು ಕಳ್ಳ ಸಾಗಾಟ ಮಾಡಲಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲೇ ಅತಿ ಹೆಚ್ಚು ಕಾಡು ಪ್ರಾಣಿಗಳ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

    ವ್ಯವಹಾರ ಕೋಡ್​ವರ್ಡ್​ನಲ್ಲೇ: ಚಿಪ್ಪು ಹಂದಿ ಸೇರಿದಂತೆ ಕಾಡು ಪ್ರಾಣಿಗಳ ಅಂಗಾಂಗಗಳ ಮಾರಾಟ ಎಲ್ಲವೂ ಕೋಡ್​ವರ್ಡ್​ಗಳಲ್ಲೇ ನಡೆಯುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಎರಡು ತಲೆ ಹಾವಿಗೆ ಡಬಲ್ ಇಂಜಿನ್ ಎಂಬ ಕೋಡ್​ವರ್ಡ್ ಇಟ್ಟುಕೊಂಡಿದ್ದಾರೆ. ಅದೇ ರೀತಿ ಒಂದೊಂದು ಪ್ರಾಣಿಗೆ ಒಂದೊಂದು ಕೋಡ್​ವರ್ಡ್ ಇರುವುದು ಬಂಧಿತ ಆರೋಪಿಗಳ ಮೊಬೈಲ್ ದಾಖಲೆಗಳಿಂದ ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts