More

    ಕಾಡ್ಗಿಚ್ಚು ಮಾಹಿತಿಗೆ ಸ್ಯಾಟಲೈಟ್ ವ್ಯವಸ್ಥೆ, ಬೆಂಕಿ ನಿಯಂತ್ರಣಕ್ಕೆ ಸರ್ಕಾರದ ಕ್ರಮ

    ಉಡುಪಿ: ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡ್ಗಿಚ್ಚಿನ ಆತಂಕವೂ ಶುರುವಾಗಿದೆ. ಅರಣ್ಯ ಪ್ರದೇಶದಲ್ಲಿ ಎಲ್ಲಿಯಾದರೂ ಹೊಗೆ ಕಂಡುಬಂದರೆ ಕ್ಷಿಪ್ರ ಮಾಹಿತಿ ಪಡೆಯುವ ಸಲುವಾಗಿ ಉಪಗ್ರಹ ಆಧರಿತ ವ್ಯವಸ್ಥೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.
    ಈ ಬಾರಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ನಿಗಾ ವಹಿಸಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಅರಣ್ಯ ಇಲಾಖೆಯ ಎರಡು ವಿಭಾಗಗಳು ತಮ್ಮ ವ್ಯಾಪ್ತಿಯಲ್ಲಿ ಸಂಭಾವ್ಯ ಬೆಂಕಿ ನಿಯಂತ್ರಣಕ್ಕೆ ಸನ್ನದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಅರಣ್ಯ ಭಾಗದಲ್ಲಿ ಎಲ್ಲಿಯಾದರೂ ಹೊಗೆ ಕಂಡುಬಂದರೆ ಎರಡು ಗಂಟೆಗಳಿಗೊಮ್ಮೆ ಉಪಗ್ರಹ ಆಧಾರಿತವಾಗಿ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಇಲಾಖೆ ಅಧಿಕಾರಿಗಳ ಮೊಬೈಲ್‌ಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

    ವಿಶೇಷ ಕಾರ್ಯಪಡೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,300 ಚ.ಕಿ.ಮೀ.ವ್ಯಾಪ್ತಿಯ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಬೇಸಿಗೆ ವೇಳೆ ಅಲ್ಪಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಕುಂದಾಪುರ ಅರಣ್ಯ ವಿಭಾಗ ಮತ್ತು ಕುದುರೆಮುಖ ವನ್ಯಜೀವಿ ವಿಭಾಗ ನಾಲ್ಕು ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿದೆ. ವರ್ಷಂಪ್ರತಿ ಸಾಮಾನ್ಯವಾಗಿ ನೆಮ್ಮಾರು, ಮಲ್ಲೇಶ್ವರ, ಶಿರಾಲು, ವಾಲಿಕುಂಜ ಹಾಗು ಕುದುರೆಮುಖ ಅದಿರು ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ 17 ಪ್ರದೇಶಗಳನ್ನು ಗುರುತಿಸಿ, ವೀಕ್ಷಣಾ ಗೋಪುರ ನಿರ್ಮಿಸಿ, ಎರಡು ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದೆ.

    51 ಕಣ್ಗಾವಲು ಸಿಬ್ಬಂದಿ
    ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ಕುಂದಾಪುರ ಅರಣ್ಯ ವಿಭಾಗ, 359.853 ಚದರ ಕಿ.ಮೀ.ವಿಸ್ತೀರ್ಣ ಹೊಂದಿದೆ. ಸೂಕ್ಷ್ಮಪ್ರದೇಶಗಳಾದ ಬೈಂದೂರು, ಉಡುಪಿ, ಕುಂದಾಪುರಗಳಲ್ಲಿ ಹಾಗೂ ಶಂಕರನಾರಾಯಣ, ಹೆಬ್ರಿ, ಕಾರ್ಕಳ ವಲಯದ ಕೆಲ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸುತ್ತದೆ. ಬೈಂದೂರು ಮತ್ತು ಶಂಕರನಾರಾಯಣದಲ್ಲಿ ವೀಕ್ಷಣಾ ಗೋಪುರಗಳಿವೆ. ಎಲ್ಲ 8 ವಲಯಗಳಲ್ಲಿ ನಾಲ್ಕೈದು ಮಂದಿಯ ತಂಡ ರಚಿಸಲಾಗಿದ್ದು 51 ಮಂದಿ ಕಣ್ಗಾವಲು ಸಿಬ್ಬಂದಿ ಇದ್ದಾರೆ.

    ಸಾಕಷ್ಟು ಮುಂಜಾಗರೂಕತೆ
    ಅರಣ್ಯ ವಿಭಾಗದ ಎಲ್ಲ ವಲಯಗಳಲ್ಲಿ ನಾಲ್ಕೈದು ಮಂದಿಯ ತಂಡ ನಿಯೋಜಿಸಲಾಗಿದೆ ಎಂದು ಕುಂದಾಪುರ ಅರಣ್ಯ ವಿಭಾಗ ಡಿಸಿಎಫ್ ಅಶೀಶ್ ರೆಡ್ಡಿ ಎಂ.ವಿ ತಿಳಿಸಿದ್ದಾರೆ. ಗ್ರಾಮ ಅರಣ್ಯ ಸಮಿತಿಯ 51 ಮಂದಿಯನ್ನು ಕಣ್ಗಾವಲು ಸಮಿತಿಗೆ ಸೇರಿಸಲಾಗಿದೆ. ಕಳೆದ ವರ್ಷ 5 ಎಕರೆ ವಿಸ್ತೀರ್ಣದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಈ ಬಾರಿ ಕಾಡ್ಗಿಚ್ಚು ಕಾಣಿಸಿಕೊಳ್ಳದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಕುದುರೆಮುಖದಲ್ಲಿ ಹುಲ್ಲುಗಾವಲು ಪ್ರದೇಶ ಹೆಚ್ಚಿರುವ ಕಾರಣ, ಕಾಡ್ಗಿಚ್ಚು ಸಾಮಾನ್ಯ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಕಾಡ್ಗಿಚ್ಚು ಪ್ರಮಾಣ ಕಡಿಮೆ. ಕಾಡ್ಗಿಚ್ಚಿಗೆ ಮನುಷ್ಯರೇ ಕಾರಣ. ಈ ಹಿನ್ನೆಲೆ ಬೇಸಿಗೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಜನರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜನಸಂಪರ್ಕ ಸಭೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ.
    ಪಿ.ರುದ್ರನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts