More

    ಆತಂಕ ಸೃಷ್ಟಿಸಿದೆ ಕಾಡಾನೆಗಳ ಹಾವಳಿ

    ಕಡಬ: ಕಾಡುಪ್ರಾಣಿಗಳು ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಬಂದು ಸಮಸ್ಯೆಗಳು ಎದುರಾಗಿರುವುದು ಕಾಡಂಚಿನ ಜನರಿಗೆ ನಿತ್ಯ ನಿರಂತರ. ದ.ಕ. ಜಿಲ್ಲೆಯ ಕಡಬ, ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿಯ ಕೆಲವು ಪ್ರದೇಶಗಳಲ್ಲಿ ಕಾಡಾನೆಗಳ ಸಮಸ್ಯೆ ಮಿತಿ ಮೀರಿದ್ದು, ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳ ಜನರು ಆತಂಕದಿಂದಲೇ ಬದುಕುವಂತಾಗಿದೆ.

    ಆನೆಗಳನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಆನೆ ನಿರೋಧಕ ಕಂದಕ, ಕಾಂಕ್ರೀಟ್ ಅಡೆತಡೆಗಳು, ಕಲ್ಲುಮಣ್ಣು ಗೋಡೆಗಳು, ಬಳಸಿದ ರೈಲು ಹಳಿಗಳನ್ನು ಉಪಯೋಗಿಸಿ ನಿರ್ಮಿಸುವ ರೈಲು ಬೇಲಿ, ಸೌರಶಕ್ತಿ ಚಾಲಿತ ಉನ್ನತ ವಿದ್ಯುತ್ ಬೇಲಿಗಳು ಇತ್ಯಾದಿ ಕ್ರಮಗಳನ್ನು ಈಗಾಗಲೇ ಆನೆಗಳು ನಾಡಿಗೆ ಬಾರದಂತೆ ತಡೆಯಲು ಬಳಸಲಾಗಿದೆ. ಆದರೆ ಈ ತಂತ್ರಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಆದ್ದರಿಂದ ಆನೆಗಳನ್ನು ಹಿಮ್ಮೆಟ್ಟಿಸಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಗಂಭೀರ ಚಿಂತನೆ ನಡೆಸಬೇಕಿದೆ ಎನ್ನುವುದು ಸಂತ್ರಸ್ತರ ಆಗ್ರಹ.

    ಆನೆ ಕಂದಕಗಳೂ ವಿಫಲ: ಅರಣ್ಯ ಇಲಾಖೆಯು ಆನೆಗಳು ಅರಣ್ಯದಿಂದ ಜನವಸತಿ ಪ್ರದೇಶಗಳಿಗೆ ಬಾರದಂತೆ ಕಾಡಂಚಿನಲ್ಲಿ ಆನೆ ಕಂದಕ(ಎಲಿಫೆಂಟ್ ಪ್ರೂಫ್ ಟ್ರೆಂಚಸ್)ಗಳನ್ನು ನಿರ್ಮಿಸುತ್ತಿದೆ. ಈ ಆನೆ ಕಂದಕಗಳೂ ಆನೆಗಳನ್ನು ತಡೆಯುಲ್ಲಿ ವಿಫಲವಾಗಿವೆ. ಕಂದಕಗಳಲ್ಲಿ ಒಂದೇ ವರ್ಷದಲ್ಲಿ ಹೂಳು ತುಂಬುವುದು ಅಥವಾ ಮೇಲಕ್ಕೆ ಅಗೆದು ಹಾಕಿದ ಮಣ್ಣು ಮತ್ತೆ ಕಂದಕಕ್ಕೆ ಬೀಳುವುದರಿಂದ ಆನೆಗಳು ಸುಲಭವಾಗಿ ಕಂದಕಗಳನ್ನು ದಾಟುತ್ತಿವೆ. ಮಾತ್ರವಲ್ಲದೇ ಕಾಡುಹಂದಿಗಳು ಕಂದಕ ದಾಟಿ ಹೊಲ ಮತ್ತು ಹಳ್ಳಿಗಳನ್ನು ಪ್ರವೇಶಿಸಲು ಬಳಸುವ ದಾರಿಗಳನ್ನು ಕಂಡುಹಿಡಿದು ಆನೆಗಳೂ ಅದೇ ದಾರಿಗಳಲ್ಲಿ ನಾಡು ಪ್ರವೇಶಿಸುತ್ತಿವೆ. ಕೆಲವು ಕಡೆ ನಿಗದಿತ ಅಳತೆಯಲ್ಲಿ ಆನೆ ಕಂದಕ ನಿರ್ಮಿಸದಿರುವುದೂ ಸಮಸ್ಯೆಗೆ ಕಾರಣವಾಗಿದೆ. ಕೆಲವು ಕಡೆ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ಮತ್ತು ಅರಣ್ಯ ಪ್ರವೇಶಿಸಲು ಆನೆ ಕಂದಕಗಳಿಗೆ ಮಣ್ಣು ತುಂಬಿ ದಾರಿ ಮಾಡುತ್ತಿರುವುದು ಕಂಡುಬರುತ್ತಿದೆ.

    ಆನೆ ಹಾಗೂ ಇತರ ಕಾಡು ಪ್ರಾಣಿಗಳ ಉಪಟಳದಿಂದ ಕಂಗೆಟ್ಟಿರುವ ಅರಣ್ಯದಂಚಿನ ಗ್ರಾಮಸ್ಥರ ಅಳಲನ್ನು ಕೇಳುವವರು ಯಾರೂ ಇಲ್ಲ. ಕಾಡು ಪ್ರಾಣಿಗಳಿಂದ ನಮ್ಮನ್ನು ಮತ್ತು ನಮ್ಮ ಕೃಷಿಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾವುದೇ ರಚನಾತ್ಮಕ ಕೆಲಸ ಆಗಿಲ್ಲ. ಜನಪ್ರತಿನಿಧಿಗಳು ಹಾಗೂ ಅರಣ್ಯಾಧಿಕಾರಿಗಳು ನಮ್ಮ ಕೂಗಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಆನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ನಮಗೆ ರಕ್ಷಣೆ ನೀಡಬೇಕಿದೆ.
    – ದಾಮೋದರ ಗುಂಡ್ಯ, ಅಧ್ಯಕ್ಷರು, ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

    ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುವುದರೊಂದಿಗೆ ಸರ್ಕಾರದ ನೆರವಿನಿಂದ ಹಳೆಯ ತಂತ್ರಗಳನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು.
    – ಡಾ.ವಿ.ಕರಿಕಳನ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts