More

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೇಕಿದೆ ಇಷ್ಟೊಂದು ಪ್ರಾಮುಖ್ಯತೆ?

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೇಕಿದೆ ಇಷ್ಟೊಂದು ಪ್ರಾಮುಖ್ಯತೆ?| ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
    ಒಂದು ಕಾಲದಲ್ಲಿ ಚಳ್ಳಕೆರೆ ಎಂದರೆ ಚಿತ್ರದುರ್ಗ ಜಿಲ್ಲೆಯ, ಅತ್ಯಂತ ಸಾಮಾನ್ಯವಾದ ತಾಲೂಕಾಗಿತ್ತು. ಆದರೆ ಇಂದು ಚಳ್ಳಕೆರೆ ಅಸಾಮಾನ್ಯವಾದ, ಅಸಾಧಾರಣವಾದ ಬದಲಾವಣೆಗಳನ್ನು ಕಾಣುತ್ತಿದೆ. ಈ ಪ್ರಾಂತ್ಯವು ಈಗ ಭಾರತದ ಕಾರ್ಯತಂತ್ರದಲ್ಲಿ ಪ್ರಮುಖವಾದ ಸಂಸ್ಥೆಗಳ ತಾಣವಾಗಿ ರೂಪುಗೊಳ್ಳುತ್ತಿದ್ದು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಅಟಾಮಿಕ್ ಎನರ್ಜಿ ಕಮಿಷನ್ (ಎಇಸಿ) ಸಂಸ್ಥೆಗಳು ಚಳ್ಳಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

    ಸಣ್ಣ ಪಟ್ಟಣದಂತಿದ್ದ ಚಳ್ಳಕೆರೆಯಲ್ಲಿ ಇಂತಹ ಬದಲಾವಣೆಗಳನ್ನು ಎದುರು ನೋಡಲು ಸಾಧ್ಯವಿರಲಿಲ್ಲ. ಚಳ್ಳಕೆರೆಯನ್ನು ‘ತೈಲ ನಗರಿ’ ಎಂದು, ಭಾರತದ ಎರಡನೇ ಮುಂಬೈ ಎಂದೂ ಕರೆಯಲಾಗುತ್ತಿತ್ತು. ಮುಂಬೈಯ ಬಳಿಕ, ಭಾರತದಲ್ಲಿ ಎರಡನೇ ಅತಿಹೆಚ್ಚು ಖಾದ್ಯತೈಲ ಉತ್ಪಾದಿಸುವ ಸ್ಥಳ ಇದಾಗಿದ್ದು, ಖಾದ್ಯ ತೈಲ ಉತ್ಪಾದಿಸುವ 60ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ. ಅದರೊಡನೆ, ಚಳ್ಳಕೆರೆ ಕಾರ್ಪೆಟ್ ಉತ್ಪಾದನೆಗೂ ಖ್ಯಾತವಾಗಿತ್ತು. ಚಳ್ಳಕೆರೆ ವೇದಾವತಿ ನದಿಯ ಪೂರ್ವ ಪ್ರದೇಶದಲ್ಲಿದ್ದು, ಸಮತಟ್ಟಾದ ಭೂಪ್ರದೇಶವನ್ನು ಹೊಂದಿದೆ. ಆದರೆ ಇಡೀ ಜಿಲ್ಲೆ ಬೆಟ್ಟಗುಡ್ಡಗಳು ಮತ್ತು ತುಂಗಭದ್ರಾ ನದಿಯಿಂದಾಗಿ ಪ್ರಸಿದ್ಧವಾಗಿವೆ. 

    ಚಳ್ಳಕೆರೆಯ ಹುಲ್ಲುಗಾವಲು ಪ್ರದೇಶವನ್ನು ಐತಿಹಾಸಿಕವಾಗಿ ಉಳಿಸಿಕೊಂಡು ಬರಲಾಗಿದ್ದು, ಇದು ಜಾನುವಾರುಗಳು ಹುಲ್ಲು ಮೇಯುವ ತಾಣವೂ ಆಗಿದೆ. ಈ ಪ್ರದೇಶ ಆಹಾರ, ಔಷಧೀಯ ಗಿಡಮೂಲಿಕೆ, ಕೃಷಿ ಉತ್ಪನ್ನಗಳಿಗೆ ಕಚ್ಚಾವಸ್ತುಗಳು ಹಾಗೂ ಸೌದೆಯನ್ನು ಸುತ್ತಲಿನ 70 ಹಳ್ಳಿಗಳಿಗೆ ಒದಗಿಸುತ್ತದೆ. ಈ ಪ್ರದೇಶ ಹಲವು ದುರ್ಬಲವಾದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ವನ್ಯಜೀವಿಗಳ ತಾಣವಾಗಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಕೃಷ್ಣಮೃಗ, ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಬ್ಬಕ) ಪಕ್ಷಿ, ಮತ್ತು ಲೆಸ್ಸರ್ ಫ್ಲೋರಿಕನ್ ಪಕ್ಷಿಗಳೂ ವಾಸಿಸುತ್ತವೆ.

    ಚಳ್ಳಕೆರೆಗೆ ಬೆಂಗಳೂರು, ಬಳ್ಳಾರಿ, ಪಾವಗಡ ಹಾಗೂ ಚಿತ್ರದುರ್ಗಗಳಿಂದ ಉತ್ತಮ ರಸ್ತೆ ವ್ಯವಸ್ಥೆ ಇದೆ. ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150ಎ ಜೇವರ್ಗಿ ಮತ್ತು ಚಾಮರಾಜನಗರವನ್ನು ಸಂಪರ್ಕಿಸುತ್ತದೆ. ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ಈ ಹೆದ್ದಾರಿಯನ್ನು ಹಿರಿಯೂರಿನ ಮೂಲಕ‌ ಸಂಪರ್ಕಿಸುತ್ತದೆ. ಚಳ್ಳಕೆರೆಯಿಂದ ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕರ್ನಾಟಕ ಭಾಗಗಳು ಮತ್ತು ಇತರ ಪ್ರಮುಖ ನಗರಗಳಿಗೆ ಬಸ್ ಸೌಲಭ್ಯವಿದೆ. ಬೆಂಗಳೂರಿನಿಂದ ಚಳ್ಳಕೆರೆ 200 ಕಿಲೋಮೀಟರ್ ದೂರದಲ್ಲಿದ್ದು, ರಸ್ತೆಯಲ್ಲಿ ಐದು ಗಂಟೆಗಳ ಪ್ರಯಾಣದಲ್ಲಿ ತಲುಪಬಹುದು. ಸಮತಟ್ಟು ನೆಲ, ನದಿ ನೀರು ಮತ್ತು ಪರ್ವತಗಳ ಜತೆ, ಈ ಸಂಪರ್ಕ ಜಾಲವೂ ಚಳ್ಳಕೆರೆಗೆ ಧನಾತ್ಮಕ ಅಂಶವಾಗಿದೆ. ಐಐಎಸ್‌ಸಿ, ಇಸ್ರೋ, ಡಿಆರ್‌ಡಿಒ ಹಾಗೂ ಅಟಾಮಿಕ್ ಮಿನರಲ್ಸ್ ಡೈರೆಕ್ಟೊರೇಟ್ ಫಾರ್ ಎಕ್ಸ್‌ಪ್ಲೋರೇಷನ್ ಆ್ಯಂಡ್ ರಿಸರ್ಚ್ (ಎಎಂಡಿ) ಸಂಸ್ಥೆಗಳು ಬೆಂಗಳೂರು ಮೂಲದ ಸಂಸ್ಥೆಗಳಾಗಿವೆ.

    ತೈಲ ನಗರಿಯಿಂದ ವಿಜ್ಞಾನ ನಗರಿ: ಐಐಎಸ್‌ಸಿ, ಇಸ್ರೋ, ಡಿಆರ್‌ಡಿಒ ಹಾಗೂ ಬಿಎಆರ್‌ಸಿ ಸಂಸ್ಥೆಗಳು ಚಳ್ಳಕೆರೆಯಲ್ಲಿ 8,000 ಎಕರೆ ಭೂಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಾಣ ಕಾರ್ಯ ಕೈಗೊಂಡಿವೆ. ಇದೇ ಮೊದಲ ಬಾರಿಗೆ ಭಾರತದ ಪ್ರಮುಖ ವಿಜ್ಞಾನ ಸಂಸ್ಥೆಗಳು ಸೇರಿ ಒಂದು ವಿಜ್ಞಾನ ಕೇಂದ್ರದ ನಿರ್ಮಾಣ ಕೈಗೊಳ್ಳುತ್ತಿವೆ. ಬೆಂಗಳೂರು ನಗರ ಈಗಾಗಲೇ ಮಿತಿಮೀರಿ ಬೆಳೆದಿರುವುದರಿಂದ, ಸ್ಥಳಾವಕಾಶದ ಕೊರತೆಯ ಕಾರಣ ಸರ್ಕಾರ ಇದನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವುದು ಬೇಡ ಎಂದು ನಿರ್ಧರಿಸಿತ್ತು.

    ಡಿಆರ್‌ಡಿಒ ಈಗಾಗಲೇ ತನ್ನ ಅತ್ಯುತ್ಕೃಷ್ಟ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಕಾರ್ಯಕ್ರಮ, ಏರೋನಾಟಿಕಲ್ ಟೆಸ್ಟ್ ರೇಂಜ್ (ಏಟಿಆರ್) ಯೋಜನೆಗಳಲ್ಲಿ ಕಾರ್ಯನಿರತವಾಗಿದ್ದು, ಭಾರತದ ರಕ್ಷಣಾ ಕಾರ್ಯಗಳಿಗಾಗಿ ಅತ್ಯಂತ ಆಧುನಿಕ ಯುಎವಿಗಳನ್ನು ನಿರ್ಮಾಣಗೊಳಿಸಲಿದೆ. ಯುಎವಿಗಳು ಹಾಗೂ ಸಣ್ಣ, ಮಾನವ ಚಾಲಿತ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸಣ್ಣ ಏರ್ ಸ್ಟ್ರಿಪ್ ನಿರ್ಮಾಣಕ್ಕೂ ಡಿಆರ್‌ಡಿಒ ಯೋಜಿಸಿದೆ.

    ಎಇಸಿ ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ತನ್ನ ಮೆಟಿರಿಯಲ್ ಎನ್‌ರಿಚ್‌ಮೆಂಟ್ ಸ್ಥಾಪನೆಗೆ ಕಾರ್ಯ ನಿರತವಾಗಿದೆ. ಕೈಗಾದ ಬಳಿಕ, ಚಿತ್ರದುರ್ಗ ಬಿಎಆರ್‌ಸಿ ಘಟಕ ರಾಜ್ಯದ ಎರಡನೇ ಪ್ರಮುಖ ಪರಮಾಣು ಕೇಂದ್ರ ಎನಿಸಿಕೊಳ್ಳಲಿದೆ.

    ಐಐಎಸ್‌ಸಿ ಒಂದು ಬೃಹತ್, ವೃತ್ತಾಕಾರದ ಕಾಂತೀಯ ವ್ಯವಸ್ಥೆಯ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದು, ಅದನ್ನು ಸಿಂಕ್ರೋಟ್ರಾನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಇಲೆಕ್ಟ್ರಾನ್‌ಗಳು ಬೆಳಕಿನ ವೇಗದಲ್ಲಿ ಚಲಿಸುತ್ತಿರುತ್ತವೆ. ಸಿಂಕ್ರೋಟ್ರಾನ್ ಒಂದು ವೃತ್ತಾಕಾರದ ವ್ಯವಸ್ಥೆಯಾಗಿದ್ದು, ಇಲ್ಲಿ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ, ಔಷಧಗಳ ಅಭಿವೃದ್ಧಿಗೆ ಉತ್ತೇಜನ ಹಾಗೂ ಸಂಶೋಧನಾ ಕಾರ್ಯಗಳು, ಕ್ಯಾನ್ಸರ್ ಔಷಧ ಸಂಶೋಧನೆ ಹಾಗೂ ಔಷಧಗಳಿಗೆ ಜೀವಕೋಶಗಳ ಪ್ರತಿಕ್ರಿಯೆಗಳನ್ನು ಅಭ್ಯಾಸ ಮಾಡಲು, ಮತ್ತಿತರ ಸಂಶೋಧನೆಗಳಿಗೆ ಸಹಾಯಕವಾಗಿದೆ.

    ಇಸ್ರೋದ ಪ್ರಾಥಮಿಕ ಉದ್ದೇಶ ರಿಮೋಟ್ ಸೆನ್ಸಿಂಗ್ ಹಾಗೂ ಸಂವಹನ ಕಾರ್ಯವಾಗಿದ್ದು, ಇದು ಹೈದರಾಬಾದ್‌ನಲ್ಲಿರುವ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರವು ಅಮೆರಿಕದ ಹಲವು ಬಾಹ್ಯಾಕಾಶ ಕೇಂದ್ರಗಳೊಡನೆ ಸಂಪರ್ಕ ಹೊಂದಿರಲಿದ್ದು, ಅವುಗಳ ಜತೆ ಅಪಾರ ಪ್ರಮಾಣದ ಮಾಹಿತಿ ವಿನಿಮಯ ನಡೆಯಲಿದೆ. ಚಳ್ಳಕೆರೆಯಲ್ಲಿ ಲಭ್ಯವಿರುವ ಭೂಮಿ ಮತ್ತು ಇತರ ಸಂಪನ್ಮೂಲಗಳ ಕಾರಣದಿಂದ ಇದು ಇನ್ನೂ ಸಾಕಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳನ್ನು ಆಕರ್ಷಿಸುವ ಸಾಧ್ಯತೆಯಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೇಕಿದೆ ಇಷ್ಟೊಂದು ಪ್ರಾಮುಖ್ಯತೆ?

    ಪೂರಕ ಚಟುವಟಿಕೆಗಳು: ಈ ಎಲ್ಲಾ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಕೇಂದ್ರಗಳಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಸರ್ಕಾರ ಇಲ್ಲಿ ಕಮ್ಯಾಂಡೋ ಟ್ರೈನಿಂಗ್ ಸೆಂಟರ್ (ಸಿಟಿಸಿ) ನಿರ್ಮಾಣವನ್ನೂ ಆರಂಭಿಸಲಿದೆ. 9,000 ಎಕರೆ ಪ್ರದೇಶದಲ್ಲಿ ಈ ಯೋಜನೆಗಾಗಿ ಕೆಲವು ನೂರು ಎಕರೆಗಳನ್ನೂ ಮೀಸಲಿಡಲಾಗಿದೆ.

    ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೂ (ಕೆಎಸ್‌ಎಸ್‌ಐಡಿಸಿ) ಇಲ್ಲಿ ಭೂಮಿ ಹಂಚಿಕೆಯಾಗಿದ್ದು, ಸಾಗಿತಾರ್ ವೆಂಚರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಲ್ಲಿ ಒಂದು ಸೋಲಾರ್ ಪಾರ್ಕನ್ನೂ ನಿರ್ಮಿಸಲಿದೆ.

    ರಾಜ್ಯ ಗೃಹ ನಿರ್ಮಾಣ ಸಂಸ್ಥೆಯೂ ಇಲ್ಲಿ ಒಂದು ಆಧುನಿಕ ವಸತಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, 5,000 ಕೋಟಿ ರೂ.ಗಳ ವೆಚ್ಚದಲ್ಲಿ ವೇದಾವತಿ ನಗರ ಎಂಬ ಹೆಸರಿನ ವಸತಿ ಯೋಜನೆಯನ್ನು ನಿರ್ಮಾಣಗೊಳಿಸಲಿದೆ. ಇನ್ನೂ ಆಸಕ್ತಿದಾಯಕ ವಿಚಾರವೆಂದರೆ, ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹ ಇಲ್ಲಿ ತನ್ನ ಸಂಸ್ಥೆಯನ್ನು ಸ್ಥಾಪಿಸುತ್ತಿದೆ.

    ಚಳ್ಳಕೆರೆಯಲ್ಲಿ ಉದ್ಯಮಗಳ ಅಭಿವೃದ್ಧಿ: ಇಂತಹ ಅತ್ಯುನ್ನತ ಸಂಸ್ಥೆಗಳು ಚಳ್ಳಕೆರೆಯಲ್ಲಿ ಸ್ಥಾಪನೆಗೊಳ್ಳುತ್ತಿರುವುದರಿಂದ ಚಳ್ಳಕೆರೆಯೆಡೆಗೆ ಮುಂದಿನ ದಿನಗಳಲ್ಲಿ ಇಂಜಿನೀಯರಿಂಗ್, ಸರಕು ಸಾಗಾಟ, ಗೃಹ ನಿರ್ಮಾಣ ಸಂಸ್ಥೆಗಳು ಸಹ ಆಕರ್ಷಿತವಾಗುವ ಸಾಧ್ಯತೆಗಳಿವೆ. ಮೇಲೆ ಹೆಸರಿಸಿರುವ ಸರ್ಕಾರಿ ಯೋಜನೆಗಳ ಮೂಲಭೂತ ಅಭಿವೃದ್ಧಿ ಅಷ್ಟೇ ಅಲ್ಲದೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳೂ ಹೆಚ್ಚಿನ ಉದ್ಯಮಗಳನ್ನು ಚಳ್ಳಕೆರೆಯೆಡೆಗೆ ಸೆಳೆಯಲಿವೆ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಈ ಅಭಿವೃದ್ಧಿಯ ಪ್ರಯೋಜನ ಪಡೆದುಕೊಳ್ಳಲಿವೆ.

    ಪ್ರಸ್ತುತ ಈ ಪ್ರಾಂತ್ಯದಲ್ಲಿ ಕೃಷಿ ಮತ್ತು ಕೃಷಿ ಆಧಾರಿತ ಉದ್ದಿಮೆಗಳು ಪ್ರಮುಖವಾಗಿವೆ. ಮುಂದಿನ ದಶಕಗಳಲ್ಲಿ ಕೃಷಿಯೊಡನೆಯೇ ಇತರ ಉದ್ಯಮಗಳೂ ಇಲ್ಲಿ ಅಭಿವೃದ್ಧಿ ಕಾಣಲಿವೆ. ಚಳ್ಳಕೆರೆಯಲ್ಲಿ ಉದ್ಯಮ ಅಭಿವೃದ್ಧಿ ಸರ್ಕಾರ ಆಯೋಜಿಸಿರುವ ಚಿಕ್ಕಮಗಳೂರು ಅಭಿವೃದ್ಧಿ ಯೋಜನೆ ಎಂಬ ದೊಡ್ಡ ಯೋಜನೆಯ ಒಂದು ಭಾಗವಾಗಿದೆ. ಈ ಪ್ರದೇಶ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಉತ್ತಮ ಬದಲಿ ಆಯ್ಕೆಯಾಗಿದೆ. ಆದ್ದರಿಂದ ಚಳ್ಳಕೆರೆಯಲ್ಲಿ ಖಾಸಗಿ ಉದ್ದಿಮೆಗಳೂ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ.

    ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts