More

    ಅವಧಿ ಪೂರ್ಣಗೊಂಡರೂ ಕೆಲಸ ಮುಗಿದಿಲ್ಲ ಏಕೆ?

    ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್್ಸ) ಬಳಿ ನಿರ್ವಣಗೊಳ್ಳುತ್ತಿರುವ 350 ಹಾಸಿಗೆಗಳ ಆಸ್ಪತ್ರೆ ಕಾಮಗಾರಿಗೆ ನಿಧಾನಗತಿಯಲ್ಲಿದ್ದು, ವಿಳಂಬಕ್ಕೆ ಕಾರಣ ಏನು ಎಂದು ಆರೋಗ್ಯ ಸಚಿವ ಸುಧಾಕರ ಪ್ರಶ್ನಿಸಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, 2020ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅವಧಿ ಪೂರ್ಣಗೊಂಡರೂ ಕೆಲಸ ಏಕೆ ಮುಗಿದಿಲ್ಲ. ಬೇಗನೆ ಕಾಮಗಾರಿ ಪೂರ್ಣಗೊಂಡಿದ್ದರೆ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಮತ್ತಷ್ಟು ಅನುಕೂಲ ಆಗುತ್ತಿತ್ತಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದ್ಯ ಕೋವಿಡ್ ನಿರ್ವಹಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿರುವ 450 ಬೆಡ್​ಗಳ ಆಸ್ಪತ್ರೆ ಕಟ್ಟಡ ಬಳಕೆ ಮಾಡಲಾಗುತ್ತಿದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಉತ್ತರಿಸಲು ಮುಂದಾದರು. ಆದರೆ, ಹೊಸ ಕಟ್ಟಡ ಕಾಮಗಾರಿ ವಿಳಂಬ ಆಗಿದ್ದೇಕೆ ಎಂದು ಸಚಿವ ಸುಧಾಕರ ಮರುಪ್ರಶ್ನಿಸಿದರು.

    ಕಳೆದ ವರ್ಷ ಕರೊನಾ ಸೋಂಕು ವ್ಯಾಪಿಸಿತು. ಇದರಿಂದ ಲಾಕ್​ಡೌನ್ ಹೇರಲಾಯಿತು. ಕಾರ್ವಿುಕರ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಎದುರಾಗಿದ್ದರಿಂದ 350 ಬೆಡ್​ಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ತಡವಾಯಿತು. ಆಗಸ್ಟ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಜಗನ್ನಾಥ ಜಾಧವ ಸಭೆಗೆ ತಿಳಿಸಿದರು. ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಎಂದು ಸಚಿವರು ತಾಕೀತು ಮಾಡಿ ಚರ್ಚೆ ಪೂರ್ಣಗೊಳಿಸಿದರು.

    ಕೇರ್ ಸೆಂಟರ್​ಗೆ ದಾಖಲಿಸಿ: ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್ ಸೆಂಟರ್​ಗೆ ಸೋಂಕಿತರು ಬರುತ್ತಿಲ್ಲ. ಹೋಂ ಐಸೋಲೇಷನ್ ಆಗುತ್ತೇವೆ ಎಂದು ಹೇಳುತ್ತಿದ್ದಾರೆ. ಹೋಂ ಐಸೋಲೇಷನ್ ಆದರೆ ಸೋಂಕು ಆ ವ್ಯಕ್ತಿಯ ಕುಟುಂಬದವರಿಗೆ ತಗುಲುವ ಸಾಧ್ಯತೆ ಇದೆ. ಹೀಗಾಗಿ, ಸೋಂಕಿತರನ್ನು ಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ಕರೆದುಕೊಂಡು ಬರಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುಂದರೇಶಬಾಬು, ಗ್ರಾಮೀಣ ಭಾಗದಲ್ಲಿ ಸೋಂಕು ತಗುಲಿದ ವ್ಯಕ್ತಿಯನ್ನು ಮೊದಲು ಹೋಂ ಐಸೋಲೇಷನ್​ನಲ್ಲಿ ಇರಿಸಲಾಗುತ್ತಿತ್ತು. ಇದೀಗ ಕಡ್ಡಾಯವಾಗಿ ಸೋಂಕಿತ ವ್ಯಕ್ತಿಯನ್ನು ಕೇರ್ ಸೆಂಟರ್ ದಾಖಲಿಸಲಾಗುತ್ತದೆ. ಆಯಾ ತಾಲೂಕು ಪ್ರದೇಶದಲ್ಲಿ ಕೋವಿಡ್ ಸೆಂಟರ್ ಆರಂಭಿಸಲಾಗಿದೆ ಎಂದು ತಿಳಿಸಿದರು.

    ರಾಜ್ಯದ 1.15 ಕೋಟಿ ಜನರಿಗೆ ಉಚಿತ ಲಸಿಕೆ: ಕೇಂದ್ರ ಸರ್ಕಾರ ನಿಯಮಿತವಾಗಿ ಲಸಿಕೆ ನೀಡುತ್ತ ಬಂದಿದ್ದರಿಂದ ಇಲ್ಲಿವರೆಗೆ ರಾಜ್ಯದ 1.15 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಹೇಳಿದರು. ಗದಗ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಶನಿವಾರ ರಾಜ್ಯದಲ್ಲಿ 31 ಸಾವಿರ ಸೋಂಕಿತರು ಪತ್ತೆಯಾಗಿದ್ದು, 61 ಸಾವಿರ ಜನರು ಗುಣವಾಗಿರುವುದು ಆಶಾಭಾವನೆ ಮೂಡಿಸಿದೆ ಎಂದರು. ಈವರೆಗೆ ರಾಜ್ಯದಲ್ಲಿ 4ರಿಂದ 5 ಸಾವಿರ ಟನ್​ವರೆಗೆ ಮಾತ್ರ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಇದೀಗ ರಾಜ್ಯದಲ್ಲಿ 10 ಸಾವಿರ ಟನ್​ವರೆಗೆ ಉತ್ಪಾದನೆ ಮಾಡಲಾಗುತ್ತಿದೆ. 35 ಸಾವಿರಕ್ಕೂ ಅಧಿಕ ಆಕ್ಸಿಜನ್ ಬೆಡ್ ಸ್ಥಾಪಿಸಲಾಗಿದೆ ಎಂದು ಹೇಳಿದರು.

    ರಾಮಣ್ಣ ಲಮಾಣಿ ಸಿಡಿಮಿಡಿ: ಲಕ್ಷೆ್ಮೕಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರೇ ಬರುತ್ತಿಲ್ಲ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ನಾನೇ ಅನೇಕ ಸಲ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರಾಮಣ್ಣ ಲಮಾಣಿ ಅವರು ಡಿಎಚ್​ಒ ವಿರುದ್ಧ ವಾಗ್ದಾಳಿ ನಡೆಸಿದರು. ವೈದ್ಯರನ್ನು ಕಳಿಸಿ ಎಂದು ನಿಮಗೆ ಎಷ್ಟು ಸಲ ಹೇಳಬೇಕು, ವೈದ್ಯರು ಆಸ್ಪತ್ರೆಗೆ ಬರಲ್ಲ. ವಾರಕ್ಕೊಮ್ಮೆ ಬಂದರೆ ಪುಣ್ಯ. ವೈದ್ಯರು ಮುಂಚಿತವಾಗಿ ವಾರದ ಎಲ್ಲ ದಿನಗಳ ಸಹಿ ಹಾಕುತ್ತಾರೆ ಎಂದು ದಾಖಲೆ ಸಮೇತ ಸಭೆಗೆ ಗಮನಕ್ಕೆ ತಂದರು. ‘ಡಿಎಚ್​ಒ ಅವರೇ ಶಾಸಕರು ದಾಖಲೆ ಸಮೇತ ನಿಮ್ಮ ಕಾರ್ಯವೈಖರಿ ಪ್ರಶ್ನಿಸುತ್ತಿದ್ದಾರೆ. ಯಾಕೆ ಹೀಗಾಯ್ತು?’ ಎಂದು ಸಚಿವ ಸುಧಾಕರ ಅವರು ಡಿಎಚ್​ಒ ಡಾ. ಸತೀಶ ಬಸರೀಗಿಡದ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಸಮಯದಲ್ಲಿ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಲಕ್ಷೆ್ಮೕಶ್ವರಕ್ಕೆ ಕಾಯಂ ವೈದ್ಯರನ್ನು ನೇಮಿಸಿ ಎಂದು ಸೂಚಿಸಿದರು.

    ವಾರದಲ್ಲಿ ವೈದ್ಯರ ನೇಮಕಾತಿ: ಗದಗ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಯ ಸೌಲಭ್ಯದ ಕೊರತೆ ಇದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶೇ.70ರಷ್ಟು ವೈದ್ಯರ ಹುದ್ದೆಗಳು ಖಾಲಿ ಇವೆ. ಗದಗ ಜಿಮ್ಸ್​ನಲ್ಲಿ 75 ವೈದ್ಯರ ಕೊರತೆ ಇದ್ದು, ಒಂದು ವಾರದಲ್ಲಿ ನೇಮಕಾತಿ ಮಾಡಲಾಗುವುದು. ಕೋವಿಡ್-19 ನಿಯಂತ್ರಣದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಹೇಳಿದರು.

    ಡಿಎಚ್​ಒ ಮೇಲೆ ಕಿಡಿ: ಆಂಬುಲೆನ್ಸ್ ಕುರಿತು ಸಭೆಗೆ ತಪ್ಪು ಮಾಹಿತಿ ನೀಡಿದ ಡಿಎಚ್​ಒ ಡಾ. ಸತೀಶ ಬಸರೀಗಿಡದ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಎಷ್ಟು ಆಂಬುಲೆನ್ಸ್​ಗಳಿವೆ ಎಂದು ಸಚಿವರು ಪ್ರಶ್ನಿಸಿದಾಗ 23 ಆಂಬುಲೆನ್ಸ್​ಗಳಿವೆ ಎಂದು ಹೇಳುವ ಬದಲು ಮೂರು ಎಂದು ಡಿಎಚ್​ಒ ತಪ್ಪಾಗಿ ಉತ್ತರಿಸಿದರು. ಇದರಿಂದ ಕೋಪಗೊಂಡ ಸಚಿವ ಸಿ.ಸಿ. ಪಾಟೀಲ, ‘ಕೈ ಮುಗಿತೀನಿ.. ದನ ಕಾಯಲು ಹೋಗು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    42 ಲಕ್ಷ ರೂಪಾಯಿ ಅನುದಾನ: ಗದಗ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಜಿಮ್್ಸ) 20 ಕೆಎಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ಖರೀದಿಗಾಗಿ ಶಾಸಕ ಎಚ್.ಕೆ. ಪಾಟೀಲ ಅವರು ತಮ್ಮ ಶಾಸಕರ ನಿಧಿಯಡಿ 42 ಲಕ್ಷ ರೂ. ಅನುದಾನ ನೀಡಿದ್ದಾರೆ. ಈ ಕುರಿತು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಅವರಿಗೆ ಪತ್ರವನ್ನು ನೀಡಿದ್ದಾರೆ.

    ಕಾಂಗ್ರೆಸ್ ನಾಯಕರು ವಸ್ತುಸ್ಥಿತಿ ಅರಿಯಲಿ: ದೇಶದ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ವಸ್ತುಸ್ಥಿತಿಯನ್ನು ಅರಿತುಕೊಂಡು ಕಾಂಗ್ರೆಸ್ ನಾಯಕರು ಮಾತನಾಡಬೇಕು. ಕಾಂಗ್ರೆಸ್ ಹಾಗೂ ಮೋದಿ ಅವಧಿಯಲ್ಲಿ ಆಗಿರುವ ಸುಧಾರಣೆಯನ್ನು ತುಲನೆ ಮಾಡಬೇಕು. ಇಲ್ಲವಾದರೆ, ಈಗಾಗಲೇ ವಿರೋಧ ಪಕ್ಷ ಸ್ಥಾನವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮತ್ತಷ್ಟು ಅವನತಿ ಕಾಣಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಆರಂಭದಲ್ಲಿ ಕಾಂಗ್ರೆಸ್ ಸಾಥ್ ನೀಡಿದ್ದರೆ ಈಗಾಗಲೇ 45 ವರ್ಷ ಮೇಲ್ಪಟ್ಟವರ ಲಸಿಕಾಕರಣ ಮುಗಿದಿರುತ್ತಿತ್ತು. ಕೋವಿಡ್ ಲಸಿಕೆ ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಜನರಲ್ಲಿ ಸಂಶಯ ಮೂಡಿಸಿದ್ದ ಕಾಂಗ್ರೆಸ್ ನಾಯಕರು, ಇದೀಗ ವ್ಯಾಕ್ಸಿನ್ ಹಾಕಿಸಿಕೊಂಡು ಫೋಟೋಗೆ ಪೋಸ್ ನೀಡುತ್ತಿದ್ದಾರೆ. ವಿರೋಧ ಪಕ್ಷಗಳೂ ಸ್ವಸ್ಥ, ಸದೃಢವಾಗಿರಬೇಕು ಎಂಬುದು ನಮ್ಮ ಆಶಯ. ಆದರೆ, ಕಾಂಗ್ರೆಸ್ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರಸ್ಸಿಗರಿಗೆ ಜನಸಾಮಾನ್ಯರಿಗಿಂತ ಗಾಂಧಿ ಕುಟುಂಬದ ಬಗ್ಗೆ ಹೆಚ್ಚು ಕಳಕಳಿ ಎಂದು ಟಾಂಗ್ ನೀಡಿದರು. ಕಾಂಗ್ರೆಸ್ ಕಾಲದಲ್ಲಿ ದೇಶದಲ್ಲಿ ಕೇವಲ 381 ಮೆಡಿಕಲ್ ಕಾಲೇಜ್​ಗಳಿದ್ದವು. ಈಗ 562 ಕಾಲೇಜುಗಳಾಗಿವೆ. ರಾಜ್ಯದಲ್ಲಿ ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಸೇರಿದಂತೆ ಹೊಸದಾಗಿ 6 ಮೆಡಿಕಲ್ ಕಾಲೇಜು ಆರಂಭವಾಗುತ್ತಿವೆ. ಮೆಡಿಕಲ್ ಕಾಲೇಜ್​ಗಳ ಸೀಟುಗಳ ಸಂಖ್ಯೆ 54 ಸಾವಿರದಿಂದ 80 ಸಾವಿರಕ್ಕೇರಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಿಎಂ ಕೇರ್ಸ್ ನಿಧಿಯಡಿ 50 ಸಾವಿರ ವೆಂಟಿಲೇಟರ್​ಗಳನ್ನು ಖರೀದಿಸಲಾಗಿದೆ. ಎಲ್ಲವೂ ಉತ್ಕೃಷ್ಟ ಗುಣಮಟ್ಟದ್ದಾಗಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆರ್ವಿು ಆಸ್ಪತ್ರೆಗಳಲ್ಲಿ ಇಂಥದ್ದೇ ವೆಂಟಿಲೇಟರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲದೆ ಕೆಲವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ ವಿರುದ್ಧ ಹರಿಹಾಯ್ದರು.

    ಏಕವಚನ ಬಳಕೆಗೆ ವಿಷಾದ: ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಹೆಸರನ್ನು ಕೆಡಿಸಲು ಅಪಪ್ರಚಾರ ನಡೆಸಿರುವುದು ಹಾಗೂ ಪಿಎಂ ಕೇರ್ ಫಂಡ್​ನಿಂದ ಬಂದಿರುವ ವೆಂಟಿಲೇಟರ್​ಗಳು ಡಬ್ಬಾ ಎಂದು ಹೇಳಿಕೆ ನೀಡಿದ್ದ ಶಾಸಕ ಎಚ್.ಕೆ. ಪಾಟೀಲ ಅವರ ಟೀಕೆಗೆ ಉತ್ತರ ನೀಡುವ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಏಕವಚನ ಪ್ರಯೋಗ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts