More

    ಹೊಸ ಜೀವನ ಪ್ರಾರಂಭಿಸಲು ತಡವೇಕೆ?

    ಹೊಸ ಜೀವನ ಪ್ರಾರಂಭಿಸಲು ತಡವೇಕೆ?ಒಳಗಿಳಿಯುವ ಮುನ್ನ ಒಮ್ಮೆ ಗಮನಿಸಿ ನೋಡಿ! ಯಾವುದೇ ವಿಷಯದಲ್ಲಾದರೂ ತೊಡಗಿಸಿಕೊಳ್ಳುವ ಮುನ್ನ ಅದರ ಕುರಿತು ಕೂಲಂಕಷವಾಗಿ ಗಮನ ಹರಿಸಬೇಕು. ಏಕೆಂದರೆ, ಒಮ್ಮೆ ಅದರಲ್ಲಿ ತೊಡಗಿಸಿಕೊಂಡರೆ, ಮತ್ತೆ ಹಿಂದೆ ತಿರುಗಿ ನೋಡಬಾರದು. ಒಂದೇ ಸಮನೆ ಕಾರಿನ ಹಿಂಬದಿ ನೋಟದ ಕನ್ನಡಿಯಲ್ಲಿ ನೋಡುತ್ತಿದ್ದರೆ, ಮುಂದೆ ಹೋಗಲಾರಿರಿ. ಗ್ರಹಿಕೆಯನ್ನು ವರ್ಧಿಸಿಕೊಳ್ಳಿ, ಜೀವನವನ್ನು, ಅದು ಇರುವ ರೀತಿಯಲ್ಲೇ ನೋಡಿ. ವ್ಯಾಪಾರದ ವಿಚಾರದಲ್ಲಿ, ಯಾವುದು ವಿಫಲವಾಗುವುದೋ ಅದನ್ನು ಕೈ ಬಿಡುವುದು ಸುಲಭ ಮತ್ತು ಅನಿವಾರ್ಯವಾಗುತ್ತದೆ. ಆದರೆ ಯಾವುದು ಸಫಲವಾಗುವುದೋ ಅದನ್ನು ತ್ಯಜಿಸಿ ಅದರಿಂದ ಹೊಸದನ್ನು ಮರುಸೃಷ್ಟಿ ಮಾಡಲು ದೂರದೃಷ್ಟಿ, ಧೈರ್ಯ ಬೇಕು.

    ಈಗ ಒಬ್ಬ ವ್ಯಕ್ತಿಯಾಗಿ ಅಥವಾ ಒಂದು ಸಂಸ್ಥೆಯಾಗಿ ಏನಾಗಿರುವಿರೋ ಅದನ್ನು ಬಿಟ್ಟು ಬಿಡಲು ಸಮರ್ಥರಾಗಿರುವಿರೇ ಎನ್ನುವುದು. ‘ಸಂಪೂರ್ಣವಾಗಿ’ ಇಲ್ಲವಾದವರಾಗಿ ಮತ್ತೆ ಪ್ರಾರಂಭಿಸಲು ಬಯಸುವಿರೋ ಅಥವಾ ‘ಭಾಗಶಃ’ ಇಲ್ಲವಾಗಿ ಅದನ್ನು ಮರುಸೃಷ್ಟಿಗೊಳಿಸಲು ಬಯಸುವಿರೋ ಎನ್ನುವುದರ ವಿವೇಚನೆಯನ್ನು ಅ ಸಂದರ್ಭದ ವಾಸ್ತವತೆ ಅರಿತು ಆ ಕ್ಷಣದಲ್ಲಿಯೇ ತೆಗೆದುಕೊಳ್ಳಬೇಕಾಗುತ್ತದೆ.

    ಹೊಸಜನ್ಮ ತಳೆದರೆ, ಯಾವುದರ ಬಗ್ಗೆಯೂ ನಿರ್ಣಯ ಎಂಬುದಿರುವುದಿಲ್ಲ. ನವಜಾತರಂತೆ ಎಲ್ಲವನ್ನೂ ಹೊಸದಾಗಿ ನೋಡಲು ಇಚ್ಛಿಸುವಿರಿ. ಹೀಗೆ ನಡೆದುಕೊಂಡರೆ, ಜೀವನಪೂರ್ತಿ ಯಾವುದಕ್ಕೂ ಅಂಟಿಕೊಳ್ಳದೆ ಮುನ್ನಡೆಯುವಿರಿ. ಚಿಕ್ಕಮಗು ಸಹ ಕೆಲವೇ ದಿನಗಳಲ್ಲಿ ತನ್ನೊಳಗೇ ಎಲ್ಲ ತಿಳಿದಿದೆ ಎಂದು ಯೋಚಿಸುತ್ತದೆ. ಒಮ್ಮೆ ನೀವು, ‘ನನಗೆ ತಿಳಿದಿದೆ’ ಎಂದು ಯೋಚಿಸಿದರೆ, ತಡವರಿಸಲು ಪ್ರಾರಂಭಿಸುವಿರಿ ಮತ್ತು ಏಳುತ್ತ-ಬೀಳುತ್ತ ನಡೆಯುವಿರಿ. ಜೀವನದ ಪ್ರತಿಯೊಂದು ಕ್ಷಣವನ್ನೂ, ಎಲ್ಲವನ್ನೂ ನವಜಾತರಂತೆ ಅವಲೋಕಿಸಿದರೆ, ಎಲ್ಲವನ್ನೂ ಸ್ಪಟಿಕದಂತೆ ಸ್ಪಷ್ಟವಾಗಿ ಕಾಣುವಿರಿ. ಎಲ್ಲವನ್ನೂ ಸ್ಪಷ್ಟವಾಗಿ ಕಂಡಾಗ, ಸಂದರ್ಭಗಳನ್ನು ಅನಾಯಾಸವಾಗಿ ನಿಭಾಯಿಸುವಿರಿ. ಬದುಕನ್ನು ಅದು ಇರುವ ಹಾಗೆಯೇ ನೋಡಿದರೆ ಮಾತ್ರ ಬದುಕಿನ ಎಲ್ಲ ಅಂಶಗಳನ್ನು ಯಶಸ್ವಿಯಾಗಿ ದಾಟಬಹುದು. ಯಾವುದನ್ನೇ ಆಗಲಿ ಯಶಸ್ವಿಯಾಗಿ ಮಾಡಬೇಕೆಂದು ಇಚ್ಛಿಸಿದರೆ, ಅಲ್ಲಿ ವಿದ್ಯಾರ್ಹತೆ ಪರಿಗಣನೆಗೆ ಬರುವುದಿಲ್ಲ, ಗ್ರಹಿಕೆಯ ಸ್ಪಷ್ಟತೆ ಮಾತ್ರ ಮುಖ್ಯ.

    ಗಮನಕೊಡುವ ಸಾಮರ್ಥ್ಯವೇ ಕೀಲಿಕೈ: ಬದುಕಿನ ಪ್ರಕ್ರಿಯೆ ಬಹಳ ಸರಳ. ಜನಿಸುವುದು ನಿಮ್ಮ ಕೆಲಸವಲ್ಲ. ನಿಮಗಾಗಿ ಅದನ್ನು ಯಾರೋ ಮಾಡುತ್ತಾರೆ. ಆಹಾರ ಸೇವಿಸಿದರೆ ಶಾರೀರಕವಾಗಿ ಬೆಳೆಯುವಿರಿ. ಮಾನಸಿಕವಾಗಿ ನಿಮ್ಮನ್ನು ಬೆಳೆಸಲು ಸುತ್ತಲೂ ಹಲವು ಪ್ರಕ್ರಿಯೆಗಳಿವೆ; ಆದರೆ ವ್ಯಕ್ತಿ ಯಾವುದರೊಂದಿ ಗಾದರೂ ತೊಡಕಿನಲ್ಲಿ ಸಿಕ್ಕಿ ಹಾಕಿಕೊಳ್ಳದೆ, ಕೇವಲ ಬದುಕಿನತ್ತ ಅವಲೋಕಿಸಿದರೆ, ಎಲ್ಲವೂ ವ್ಯಾಪಕವಾಗಿ ತೆರೆದುಕೊಳ್ಳುತ್ತವೆ. ವಾಸ್ತವದಲ್ಲಿ ಯಾವುದೂ ನಿಗೂಢವಾಗಿಲ್ಲ. ಬದುಕಿನ ಗೌಪ್ಯತೆಗಳು ಎಂದು ಹೇಳುವುದು ನಿಜವಲ್ಲ. ಏಕೆಂದರೆ ಅಲ್ಲಿ ಅಂತಹುದೇನೂ ಇಲ್ಲ. ಎಲ್ಲವೂ ವ್ಯಾಪಕವಾಗಿ ತೆರೆದುಕೊಂಡಿದೆ. ಜನರು ಕಣ್ಮುಚ್ಚಿ ತಿರುಗಾಡುವುದರಿಂದಲೇ ಇವೆಲ್ಲವೂ ನಿಗೂಢ ಎನಿಸುತ್ತದೆ.

    ಮನುಷ್ಯರು ಮಿತಿಗಳನ್ನು ಮೀರಬೇಕಾದರೆ, ಪ್ರಮುಖವಾದ ಗುಣವೆಂದರೆ ಸ್ಥಿರವಾದ ಗಮನ. ಯಾವುದನ್ನಾದರೂ ನಿರ್ವಹಿಸುವ ಸಾಮರ್ಥ್ಯ, ಗಮನದ ಮಟ್ಟ ಮತ್ತು ಅವಲೋಕನವನ್ನು ನೇರವಾಗಿ ಅವಲಂಬಿಸಿರುತ್ತದೆ.

    ಹಾರ್ವರ್ಡ್​ನ ಹಳೆಯ ವಿದ್ಯಾರ್ಥಿ ಸಂಘದ ಒಂದು ಗುಂಪಿನೊಡನೆ ಮಾತನಾಡುತ್ತಿದ್ದೆ. ಅವರೆಲ್ಲ ಬಹುವಾಗಿ ಯಶಸ್ವಿಯಾದವರು. ಅವರು, ‘ನಾವು ಕಾಲೇಜಿನಲ್ಲಿರುವಾಗ, ಯಾವ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುವರೆಂದು ಎಣಿಸಿದ್ದೆವೋ, ಅವರು ಯಶಸ್ಸನ್ನು ಗಳಿಸಲಿಲ್ಲ. ನಮ್ಮಲ್ಲಿ ಯಾರು ಗಲಿಬಿಲಿಗೊಂಡಿದ್ದೆವೋ ಕಾಲೇಜಿನಿಂದ ಉತ್ತೀರ್ಣರಾಗಿ ಹೊರಬಂದ ನಂತರ ಬದುಕಿನಲ್ಲಿ ಏನು ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದೆವೋ, ಬಹಳ ಕಷ್ಟಪಟ್ಟೆವೋ, ಅಂಥವರೇ ಯಶಸ್ಸನ್ನು ಕಂಡೆವು. ಅವರುಗಳು ಯಶಸ್ವಿಯಾಗಲಿಲ್ಲ’ ಎಂದು ಹೇಳಿದರು. ಇಲ್ಲಿ ಮುಖ್ಯವಾದ ವಿಷಯವೆಂದರೆ, ಚುರುಕು ಬುದ್ಧಿಯಿರುವವರು ಎಂದೆನಿಸಿಕೊಂಡಿದ್ದ ಕೆಲವರನ್ನು ದೊಡ್ಡ ಸಂಸ್ಥೆಗಳು ಕೆಲಸಕ್ಕೆ ಆಯ್ದುಕೊಂಡವು. ಅವರಿಗೆಲ್ಲ ಒಳ್ಳೆಯ ಅನುಕೂಲಕರವಾದ ಕೆಲಸ ಸಿಕ್ಕಿ ಒಳ್ಳೆಯ ಸಂಬಳವೂ ದೊರೆಯಿತು ಹಾಗೂ ಅಲ್ಲಿ ಅವರು ನೆಲೆಗೊಂಡರು. ಏನು ಮಾಡಬೇಕೆಂದು ತೋರದ ಈ ಹುಡುಗರು ಹೊರಹೋಗಿ ಎಲ್ಲವನ್ನೂ ಅವಲೋಕಿಸಿದರು. ಕೆಲವರಿಗೆ ಒಳ್ಳೆಯ ಪ್ರಗತಿಪರ ಯೋಚನೆ ಹೊಳೆದು, ಅವರದ್ದೇ ಆದ ಕಂಪನಿಗಳನ್ನು ಸ್ಥಾಪಿಸಿದರು ಅಥವಾ ಕಷ್ಟದ ದುಡಿಮೆಯಿಂದ ಮುಂದೆ ಬಂದರು. ಅವರಿಗೆ ಏನೂ ಖಚಿತವಾಗಿಲ್ಲದೇ ಇದ್ದುದರಿಂದ, ಅವರು ಎಲ್ಲ ವಿಷಯಗಳನ್ನು ಕುರಿತು ಗಮನ ಹರಿಸಬೇಕಾಗಿತ್ತು; ಇಡೀ ಪ್ರಪಂಚವನ್ನು ಅವಲೋಕಿಸಿದರು, ಅನುಕೂಲಕರವಾಗಿದ್ದ ಕೆಲಸದಲ್ಲಿದ್ದು ನೆಲೆಗೊಂಡು ಆರಾಮವಾಗಿದ್ದ ಜನರಿಗಿಂತಲೂ ಇವರುಗಳು ನೂರುಪಟ್ಟು ಮುಂದೆ ಹೋಗಿದ್ದರು. ಯಾವುದೇ ವಿಚಾರದಲ್ಲಿ ಆಗಲಿ ಎಷ್ಟು ಆಳಕ್ಕೆ ಹೊಕ್ಕು ಅವಲೋಕಿಸುವ ಸಾಮರ್ಥ್ಯವಿದೆಯೋ ಅದುವೇ ನಿಮ್ಮ ಕೀಲಿಕೈ. ಗಮನವು ಎಷ್ಟು ಗಾಢವಾಗಿ ಇರಬೇಕೆಂದರೆ, ಅದರೊಳಗೆ ಆಳವಾಗಿ ಇಳಿದು ತಲುಪುವಂತಿರಬೇಕು. ಮಾನವನ ಪ್ರಜ್ಞೆ ಹೇಗಿದೆಯೆಂದರೆ, ಸಾಕಷ್ಟು ಗಮನ ಹರಿಸಿದರೆ, ಈ ಪರಿಪೂರ್ಣ ಅಸ್ತಿತ್ವವೇ ಮಣಿಯಬೇಕು, ಬೇರೆ ದಾರಿಯೇ ಇಲ್ಲ. ಏನೇ ಮಾಡಿದರೂ ಶ್ರದ್ಧೆಯಿಂದ ತೊಡಗಿಸಿಕೊಳ್ಳಿ. ಈ ಪ್ರಪಂಚದಲ್ಲಿ ಅತ್ಯುತ್ತಮವಾದದ್ದು ಎಂಬುದನ್ನು ಎಂದಿಗೂ ಮಾಡಲಾರಿರಿ. ಯಾವುದರ ವಿಚಾರವಾಗಿ ಮುನ್ನುಗ್ಗುವಿರೋ, ಅದರೊಡನೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ, ಅದೊಂದು ಅದ್ಭುತ ವಿಷಯವಾಗಬಹುದು. ಅತ್ಯುತ್ತಮ ಕೆಲಸವನ್ನು ಮಾಡಲು ಪ್ರಯತ್ನಿಸಬೇಡಿ. ಏಕೆಂದರೆ ಹಾಗೆ ಮಾಡಿದಲ್ಲಿ ಬೇರೆಯವರಿ ಗಿಂತಲೂ ಉತ್ತಮವಾಗಿರಲು ಪ್ರಯತ್ನಿಸುವುದರಲ್ಲಿಯೇ ಜೀವನವನ್ನು ವ್ಯರ್ಥಮಾಡಿಕೊಳ್ಳುವಿರಿ.

    ಅದು ಒಳ್ಳೆಯ ಹಾದಿಯಲ್ಲ, ಏಕೆಂದರೆ ಯಾವ ವ್ಯಕ್ತಿಯ ಜೊತೆ ಹೋಲಿಸಿ ಕೊಳ್ಳುವಿರೋ, ಆ ವ್ಯಕ್ತಿ ಹೆಳವನಾಗಿರಬಹುದು, ಆಗ ನೀವೇ ವೀರಾಗ್ರಣಿ ಎಂದು ಯೋಚಿಸುವಿರಿ. ಆ ಹೆಳವನಿಗಿಂತಲೂ ಸ್ವಲ್ಪ ವೇಗವಾಗಿ ಓಡುವಿರಷ್ಟೆ. ಬೇರೆಯವರಿಗಿಂತಲೂ ಉತ್ತಮರೋ ಅಥವಾ ಕೀಳ್ತರದವರೋ ಎನ್ನುವುದು ಮನಸ್ಸಿನಲ್ಲಿಯೂ ಸುಳಿಯಕೂಡದು. ನೀವು ಯಾರೆಂದು ಅರಿತುಕೊಂಡು ಸಾಮರ್ಥ್ಯವನ್ನು ಉಪಯೋಗಿಸಿ ಕೊಳ್ಳಬೇಕು. ನಿಮ್ಮಲ್ಲಿ ಏನೇ ಇರಲಿ, ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಮರ್ಥರಾಗಬೇಕು. ಯೋಗವೆಂದರೆ ಇದೇ ಆಗಿದೆ. ಭೌತಿಕತ್ವ, ಮಾನಸಿಕ ವಾಸ್ತವಗಳು ಹಾಗೂ ಆಂತರಿಕ ಶಕ್ತಿಗಳು- ಇವುಗಳನ್ನು ನಿಮ್ಮ ಇಚ್ಛಾನುಸಾರ ಬಳಸಿಕೊಳ್ಳಲು ಸಮರ್ಥರಾಗುವುದು.

    ಆಂತರಿಕ ಸ್ಥಿತಿಯನ್ನು ವಶದಲ್ಲಿಟ್ಟುಕೊಳ್ಳಿ: ವಿಧಿಯನ್ನು ಇಚ್ಛಾನುಸಾರ ಸೃಷ್ಟಿಸಿಕೊಳ್ಳಿ ಅಥವಾ ಅದನ್ನು ಒಂದು ಆಕಸ್ಮಿಕ ಎಂದುಕೊಳ್ಳಿ- ಇದು ನಿಮ್ಮ ಮುಂದಿರುವ ಆಯ್ಕೆ. ಸನ್ನಿವೇಶಗಳು ಏನೋ ಒಂದನ್ನಾಗಿ ಮಾಡಲು ಅನುವು ಮಾಡಿಕೊಡುವುದು ಅಥವಾ ಸನ್ನಿವೇಶಗಳನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಸೃಷ್ಟಿಸಿಕೊಳ್ಳುವುದು. ‘ನನ್ನ ಕುಟುಂಬದ ಸನ್ನಿವೇಶಗಳನ್ನು ನನ್ನ ಇಚ್ಛೆಗೆ ತಕ್ಕಂತೆ ಸೃಷ್ಟಿಸಿಕೊಳ್ಳಲು ಇಷ್ಟಪಡುತ್ತೇನೆ, ಆದರೆ, ಮಿಕ್ಕವರು ಸಹಕಾರ ನೀಡುತ್ತಿಲ್ಲ’ ಎಂದು ನೀವು ಅಂದುಕೊಳ್ಳಬಹುದು. ಆದರೆ ಮೊದಲಿಗೆ ನಿಮ್ಮದೇ ಆದ ಆಂತರಿಕ ಪರಿಸ್ಥಿತಿಯಿಂದ ಪ್ರಾರಂಭಿಸಿ. ನಿಮ್ಮ ಇಚ್ಛೆಗನುಸಾರವಾಗಿ ಆಂತರಿಕ ಸನ್ನಿವೇಶವನ್ನೇ ಸೃಷ್ಟಿಸಿಕೊಂಡಿಲ್ಲ. ಹಾಗಿರುವಾಗ ಬಾಹ್ಯ ಸನ್ನಿವೇಶಗಳನ್ನು ಇಚ್ಛೆಯಂತೆ ಹೇಗೆ ಸೃಷ್ಟಿಸುವಿರಿ? ಬಾಹ್ಯ ಸನ್ನಿವೇಶಗಳನ್ನು ನೂರಾರು ವಿವಿಧ ಅಂಶಗಳು ಹಾಗೂ ಶಕ್ತಿಗಳು ನಿಯಂತ್ರಿಸುತ್ತವೆ- ಇವೆಲ್ಲವೂ ನಿಮ್ಮ ಕೈಗಳಲ್ಲಿಲ್ಲ. ಆದರೆ ಆಂತರಿಕ ಸನ್ನಿವೇಶದಲ್ಲಿ, ನೀವೊಬ್ಬರೇ ಅದರ ಅಂಶ. ಮೊದಲಿಗೆ ನಿಮ್ಮ ಇಚ್ಛೆಗೆ ತಕ್ಕಂತೆ ಆಂತರಿಕ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವುದನ್ನು ಕಲಿಯಿರಿ. ಆ ನಂತರ, ಬಾಹ್ಯ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಅಸಾಧಾರಣವಾಗಿ ವೃದ್ಧಿಸಿಕೊಳ್ಳಬಹುದು.

    ಬಹುತೇಕ ಜನರ ಸಮಸ್ಯೆಯೆಂದರೆ, ಅವರ ಆಲೋಚನೆಗಳು ಮತ್ತು ಭಾವನೆಗಳೇ ಅವರ ದೊಡ್ಡ ಶತ್ರು. ನಿಮಗೆ ನೀವೇ ಸಮಸ್ಯೆಯಾದಾಗ, ಬೇರೆ ಸಮಸ್ಯೆಗಳನ್ನು ಹೇಗೆ ಎದುರಿಸುವಿರಿ? ನಿಮ್ಮ ಮಾನಸಿಕ ನಾಟಕ ಇಂಥ ದೊಡ್ಡ ಹಾನಿಯನ್ನುಂಟು ಮಾಡುತ್ತಿದೆ. ಹತ್ತು ವರ್ಷದ ಹಿಂದೆ ನಡೆದ ಯಾವುದೋ ಘಟನೆ ಬಗ್ಗೆ ಜನರು ಇಂದಿಗೂ ಸಂಕಟಪಡಲು ಸಮರ್ಥರಾಗಿದ್ದಾರೆ. ಅವರು ನಾಡಿದ್ದು ನಡೆಯಬಹುದಾದ ಯಾವುದೋ ವಿಷಯದ ಬಗ್ಗೆ ಈಗಲೇ ಸಂಕಟಪಡುತ್ತಾರೆ. ಅವರು ತಮ್ಮ ಭೂತ ಮತ್ತು ಭವಿಷ್ಯತ್​ಕಾಲವನ್ನು ಕುರಿತು ಸಂಕಟಪಡುತ್ತಿದ್ದೇವೆ ಎಂದು ಯೋಚಿಸುತ್ತಾರೆ. ಆದರೆ ಈ ಭೂಮಿಯ ಮೇಲೆ ಮಾನವರಿಗೇ ಪ್ರತ್ಯೇಕವಾಗಿರುವ ಕೇವಲ ಎರಡು ಸಾಮರ್ಥ್ಯಗಳನ್ನು ಕುರಿತು ಸಂಕಟಪಡುತ್ತಿದ್ದಾರೆ- ನೆನಪು ಮತ್ತು ಕಲ್ಪನೆ.

    ಬಹುತೇಕ ಜನರಿಗೆ ಅವರ ನೆನಪು ಮತ್ತು ಕಲ್ಪನೆಗಳನ್ನು ಹೇಗೆ ನಿರ್ವಹಿಸ ಬೇಕೆಂಬುದೇ ತಿಳಿದಿಲ್ಲ. ನಿನ್ನೆ ಅಥವಾ ಹತ್ತು ವರುಷದ ಹಿಂದೆ ಸಂಭವಿಸಿದುದು ಈಗ ಅಸ್ತಿತ್ವದಲ್ಲಿದೆಯೇ? ಇಲ್ಲ. ನಾಡಿದ್ದು ಸಂಭವಿಸಬಹುದಾದ್ದಂತಹುದು ಇಂದು ಅಸ್ತಿತ್ವದಲ್ಲಿದೆಯೇ? ಇಲ್ಲ. ಆದ್ದರಿಂದ, ಈ ಕ್ಷಣದಲ್ಲಿ ಯಾವುದು ಇಲ್ಲವೋ ಅದನ್ನು ಕುರಿತು ಸಂಕಟಪಡುತ್ತಿದ್ದೀರಿ. ಇದನ್ನೇ ಮತಿಭ್ರಮೆ ಎನ್ನುತ್ತಾರೆ. ಇದು ಮಾನವ ಸಹಜ ಗುಣ ಎಂದು ಜನರು ಹೇಳುತ್ತಾರೆ. ಇದು ಮಾನವ ಗುಣವಲ್ಲ, ಇದು ಮಾನವ ಗುಣವನ್ನು ನಿರ್ವಹಿಸಲಾರದೆ ಇರುವವರ ಗುಣವಾಗಿದೆ. ಮಾನವ ವ್ಯವಸ್ಥೆ ಈ ಗ್ರಹದ ಜಟಿಲವಾದ ರಚನೆಯಾಗಿದೆ. ಇದೊಂದು ಅತ್ಯಾಧುನಿಕ ಕಂಪ್ಯೂಟರ್. ನೀವು ಬಳಕೆದಾರರ ಕೈಪಿಡಿಯನ್ನು ಓದುವುದನ್ನು ಕಲಿಯಬೇಕಾಗಿದೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts