More

    ಸಿ.ಎಂ. ಉದಾಸಿ ಸ್ಥಾನ ತುಂಬುವವರಾರು?

    ಹಾವೇರಿ: ಮಾಜಿ ಸಚಿವರು, ಹಾಲಿ ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ಲ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದು ನಿಶ್ಚಿತವಾಗಿದ್ದು, ವಿರೋಧ ಪಕ್ಷಗಳಲ್ಲಿ ಈಗಲೇ ಉಪಚುನಾವಣೆಗೆ ಸಿದ್ಧತೆ ಚುರುಕುಗೊಂಡಿದೆ.

    ಬಿಜೆಪಿ ವಶದಲ್ಲಿದ್ದ ಈ ಕ್ಷೇತ್ರದಲ್ಲಿ ಸಿ.ಎಂ. ಉದಾಸಿ ಅವರ ಸ್ಥಾನವನ್ನು ತುಂಬಲು ಅವರ ಪುತ್ರ, ಸಂಸದ ಶಿವಕುಮಾರ ಉದಾಸಿಯವರತ್ತಲೇ ಕ್ಷೇತ್ರದ ಜನರ ಚಿತ್ತ ಹರಿದಿದೆ. ಆದರೆ, ಶಿವಕುಮಾರ ಉದಾಸಿ ಅವರು ಸದ್ಯ ಸಂಸದರಾಗಿದ್ದಾರೆ. ಮೇಲಾಗಿ ಕೇಂದ್ರದ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ, ಅವರು ರಾಜ್ಯ ರಾಜಕಾರಣದತ್ತ ಮನಸ್ಸು ಮಾಡುವ ಸಾಧ್ಯತೆಗಳು ಕ್ಷೀಣಿಸಿವೆ. ಮೇಲಾಗಿ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯ ರಾಜಕಾರಣಕ್ಕೆ ಬಂದರೆ ರಾಜ್ಯ ಸಂಪುಟದಲ್ಲಿ ಉನ್ನತ ದರ್ಜೆಯ ಸಚಿವ ಸ್ಥಾನ ನೀಡುವುದು ಅನಿವಾರ್ಯವಾಗಲಿದೆ. ಈಗಾಗಲೇ ಜಿಲ್ಲೆಯ ಮೂವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಇಂತಹ ಸಮಯದಲ್ಲಿ ಶಿವಕುಮಾರ ಅವರಿಗೂ ಸಚಿವ ಸ್ಥಾನ ನೀಡುವುದು ಸ್ವಲ್ಪ ಸಂಕಷ್ಟದ ವಿಚಾರ. ಅಲ್ಲದೆ, ವಿಧಾನಸಭೆ ಉಪಚುನಾವಣೆಯ ನಂತರ ಲೋಕಸಭೆಗೂ ಉಪಚುನಾವಣೆ ಎದುರಿಸಬೇಕಾಗುತ್ತದೆ. ಅದಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು? ಕರೊನಾ ಸಂಕಷ್ಟದ ಸಮಯದಲ್ಲಿ ಎರಡೆರಡು ಉಪಚುನಾವಣೆಗಳನ್ನು ಎದುರಿಸುವುದು ಸಾಧ್ಯವೇ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಹೀಗಾಗಿ, ಶಿವಕುಮಾರ ಉದಾಸಿ ಅವರು ಕೇಂದ್ರದಲ್ಲಿಯೇ ಮುಂದುವರಿಯುತ್ತಾರೆ ಎಂಬ ಮಾತುಗಳು ಬಿಜೆಪಿಯ ಉನ್ನತ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ಸದ್ಯಕ್ಕೆ ಬಿಜೆಪಿಯಲ್ಲಿ ಉಪಚುನಾವಣೆಯ ಕುರಿತು ಬಹಿರಂಗವಾಗಿ ಯಾವುದೇ ಚರ್ಚೆ ನಡೆದಿಲ್ಲ.

    ಯಾರಾಗಲಿದ್ದಾರೆ ಬಿಜೆಪಿ ಅಭ್ಯರ್ಥಿ?: ಶಿವಕುಮಾರ ಉದಾಸಿ ಅವರು ರಾಜ್ಯ ರಾಜಕಾರಣಕ್ಕೆ ಬರಲು ನಿರಾಕರಿಸಿದರೆ ಸಿ.ಎಂ. ಉದಾಸಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಯೂ ಎಲ್ಲರಲ್ಲಿ ಸಹಜವಾಗಿದೆ. ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಅಥವಾ ಅವರ ಸಹೋದರಿ ರಾಣೆಬೆನ್ನೂರ ಮಾಜಿ ಶಾಸಕ ಜಿ. ಶಿವಣ್ಣ ಅವರ ಸೊಸೆ ಜಯಶ್ರೀ ತಿಳವಳ್ಳಿ ಅವರು ಉಪಚುನಾವಣೆಯ ಅಖಾಡಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

    ಇನ್ನೊಂದು ಲೆಕ್ಕಾಚಾರದ ಪ್ರಕಾರ ಸಿ.ಎಂ. ಉದಾಸಿ ಹಾಗೂ ಶಿವಕುಮಾರ ಉದಾಸಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿದ್ದವರು. ಸದ್ಯ ರಾಜ್ಯದಲ್ಲಿಯೂ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿಯವರ ಪುತ್ರ ವಿಜಯೇಂದ್ರ ಅವರನ್ನು ವಿಧಾನಸಭೆಗೆ ಕಳುಹಿಸಲು ಈ ಉಪಚುನಾವಣೆ ಅಖಾಡವನ್ನು ವೇದಿಕೆ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಉದಾಸಿ ಕುಟುಂಬದವರನ್ನು ಹೊರತುಪಡಿಸಿದರೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಾಯಕರಿಗೆ ಟಿಕೆಟ್ ನೀಡಲು ಮುಂದಾದರೆ ಅನೇಕ ಆಕಾಂಕ್ಷಿಗಳು ಹುಟ್ಟಿಕೊಳ್ಳಲಿದ್ದಾರೆ. ಅದರಲ್ಲಿ ಟಿಕೆಟ್ ವಂಚಿತರು ರೆಬೆಲ್ ಆಗುವ ಸಾಧ್ಯತೆಗಳು ಹೆಚ್ಚಿವೆ.

    ಕೈ ಪಾಳೆಯಕ್ಕೆ ಮಾನೆಯವರೇ ಗಟ್ಟಿ?: ಇನ್ನು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾನಗಲ್ಲ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರೇ ಉಪಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂಬ ವಾತಾವರಣ ಸದ್ಯಕ್ಕೆ ಜಿಲ್ಲೆಯಲ್ಲಿ ಕಂಡುಬರುತ್ತಿದೆ.

    ಮಾನೆ ಅವರು ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಇವರಿಗೆ ಸಾಥ್ ನೀಡಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಈ ಬಾರಿ ಬಹಿರಂಗವಾಗಿಯೇ, ‘ಸ್ಥಳೀಯರಿಗೆ ಅವಕಾಶ ನೀಡಿ, ನೀವು ಕ್ಷೇತ್ರ ಬಿಟ್ಟು ಹೊರಡಿ’ ಎಂಬ ಸಂದೇಶ ಸಾರಿದ್ದಾರೆ. ಮಾನೆ ಹಾಗೂ ತಹಶೀಲ್ದಾರ ನಡುವಿನ ಸಂಬಂಧ ಹಳಸಿದ್ದು, ಅದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿಲ್ಲ. ಉಪಚುನಾವಣೆ ವೇಳೆಯಲ್ಲಿ ಇವರಿಬ್ಬರ ನಡುವಿನ ವೈಮನಸ್ಸನ್ನು ಸರಿಪಡಿಸುವ ಸಮಯದಲ್ಲಿ ಅಭ್ಯರ್ಥಿ ಬದಲಾವಣೆಯಾದರೂ ಆಗಬಹುದು. ವೈಮನಸ್ಸು ಸರಿಪಡಿಸದೇ ಚುನಾವಣೆಗೆ ಹೋದರೆ ತಹಶೀಲ್ದಾರ್ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅದಕ್ಕಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಲಾಮು ಹಚ್ಚುವ ಕೆಲಸ ಶೀಘ್ರದಲ್ಲಿಯೇ ನಡೆಯಲಿದೆ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿಬರತೊಡಗಿವೆ.

    ಸದ್ಯ ಚುನಾವಣೆ ನಡೆದರೆ ಬಿಜೆಪಿಗೆ ಹೆಚ್ಚು ಅನುಕೂಲಕರವಾದ ವಾತಾವರಣವಿದೆ. ಉದಾಸಿ ಕುಟುಂಬದವರ ಬದಲಿಗೆ ಬೇರೆಯವರಿಗೆ ಟಿಕೆಟ್ ಕೊಟ್ಟರೆ, ಅನುಕಂಪದ ಲಾಭ ಅಷ್ಟೇನೂ ಆಗುವ ಸಾಧ್ಯತೆಗಳಿಲ್ಲ. ಕ್ಷೇತ್ರದ ಜನರ ಮನಸ್ಸಿನಲ್ಲಿರುವ ಸಿ.ಎಂ. ಉದಾಸಿ ಅವರ ಸ್ಥಾನವನ್ನು ತುಂಬಲು ಯಾರಿಗೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲ. ಅವರಂತೆ ಎಲ್ಲರೊಂದಿಗೆ ಹೊಂದಾಣಿಕೆ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಮರ್ಥ ನಾಯಕತ್ವ ಗುಣ ಸದ್ಯ ಅವರ ಮಗನನ್ನು ಹೊರತುಪಡಿಸಿ ಬೇರೆಯವರಲ್ಲಿ ಲಭಿಸುವುದು ಕಷ್ಟ. ಹೀಗಾಗಿ, ಬಹುತೇಕ ಕಾರ್ಯಕರ್ತರು ಉಪಚುನಾವಣೆಯಲ್ಲಿ ಶಿವಕುಮಾರ ಉದಾಸಿ ಅವರೇ ಸ್ಪರ್ಧಿಸಲಿ ಎಂಬ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ, ಶ್ರೀನಿವಾಸ ಮಾನೆ ಈಗಾಗಲೇ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಉದಾಸಿ ಕುಟುಂಬದವರನ್ನು ಬಿಟ್ಟು ಅನ್ಯರು ಬಿಜೆಪಿಯಿಂದ ಕಣಕ್ಕಿಳಿದರೆ ಸ್ವಲ್ಪ ಕಷ್ಟಕರ ಎಂಬಂತಹ ವಾತಾವರಣವಂತೂ ಇದೆ.

    ಜೆಡಿಎಸ್​ನಲ್ಲಿ ಕಚ್ಚಾಟ: ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟೇನೂ ಪ್ರಭಾವಶಾಲಿಯಾಗಿಲ್ಲ. ಆದರೂ ಈಗಲೇ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಕಚ್ಚಾಟ ಆರಂಭಗೊಂಡಿದೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ವಂಚಿತರಾಗಿದ್ದ ನಿಯಾಜ್ ಶೇಖ್ ಎಂಬುವರು ಇತ್ತೀಚೆಗೆ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ಹಾನಗಲ್ಲ ಕ್ಷೇತ್ರಕ್ಕೆ ಇವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇದನ್ನು ಸ್ಥಳೀಯ ಜೆಡಿಎಸ್ ಪದಾಧಿಕಾರಿಗಳು ನಿರಾಕರಿಸಿದ್ದಾರೆ. ಜೆಡಿಎಸ್​ನಿಂದ ಯಾರೇ ಅಭ್ಯರ್ಥಿಯಾದರೂ ಕೈ, ಕಮಲದ ಅಭ್ಯರ್ಥಿಗಳಿಗೆ ಈವರೆಗೆ ಯಾವ ಪರಿಣಾಮವೂ ಆಗಿಲ್ಲ. ಉಪಚುನಾವಣೆ ಆಗಿರುವುದರಿಂದ ಜೆಡಿಎಸ್ ಸಹ ಹೆಚ್ಚಿನ ಆಟವಾಡಲು ಅವಕಾಶವಿರುವುದನ್ನಂತೂ ಅಲ್ಲಗಳೆಯುವಂತಿಲ್ಲ.

    ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ?

    ಸಂಸತ್​ನ ಮುಂಗಾರು ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟದ ಪುನರ್ ರಚನೆಯ ಸುಳಿವು ಸಿಕ್ಕಿದ್ದು, ರಾಜ್ಯದಿಂದ ಹಾವೇರಿ ಸಂಸದ ಶಿವಕುಮಾರ ಉದಾಸಿಯವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಕೇಳಿಬರತೊಡಗಿವೆ. ಒಂದೊಮ್ಮೆ ಉದಾಸಿಯವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆತರೆ ಹಾನಗಲ್ಲ ಕ್ಷೇತ್ರಕ್ಕೆ ಸಿ.ಎಂ. ಉದಾಸಿಯವರ ಪತ್ನಿ ನೀಲಮ್ಮ ಉದಾಸಿ, ಇಲ್ಲವೇ ಸೊಸೆ, ಸಂಸದ ಶಿವಕುಮಾರ ಅವರ ಪತ್ನಿ ರೇವತಿ ಉದಾಸಿಯವರು ಅಖಾಡಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

    ಬಿ.ಕೆ. ಮೋಹನಕುಮಾರ ಸಹ ಆಕಾಂಕ್ಷಿ

    ಕೈ ಪಾಳಯದಲ್ಲಿ ಈಗಾಗಲೇ ಮಾನೆ ವಿರುದ್ಧ ಬಂಡಾಯದ ಕಹಳೆಯನ್ನು ಸ್ಥಳೀಯರು ಮೊಳಗಿಸುತ್ತಿದ್ದಾರೆ. ಒಂದೊಮ್ಮೆ ಮಾನೆ ಅವರನ್ನು ಬದಲಾಯಿಸಲು ಹೈಕಮಾಂಡ್ ಮುಂದಾದರೆ ಕೈ ಟಿಕೆಟ್ ಪಡೆದು ಸ್ಪರ್ಧಿಸುವ ಚಿಂತನೆಯನ್ನು ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿರುವ ಜನಹಿತ ರಕ್ಷಣಾ ವೇದಿಕೆಯ ಬಿ.ಕೆ. ಮೋಹನಕುಮಾರ ನಡೆಸಿದ್ದಾರೆ. ಒಂದೊಮ್ಮೆ ಕೈ ಟಿಕೆಟ್ ಸಿಗದೇ ಇದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಲಕ್ಷಣಗಳು ದಟ್ಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts