More

    ಯಾರಿಗೇಳೋಣ ನಮ್ ಪ್ರಾಬ್ಲಮ್ಮು!

    ಸೊರಬ: ರೈತರ ಸಮಸ್ಯೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಸರ್ಕಾರದ ಯೋಜನೆಗಳ ಸದುಪಯೋಗ ಸಾಧ್ಯ ಎಂದು ಹೊಸಬಾಳೆ ಗ್ರಾಪಂ ಅಧ್ಯಕ್ಷ ಭುಜೇಂದ್ರ ಹೇಳಿದರು.

    ತಾಲೂಕಿನ ಹೊಸಬಾಳೆ ಗ್ರಾಪಂ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗತಿ ಮೂಡಿಸಬೇಕು. ಈ ಮೂಲಕ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಸದುಪಯೋಗ ಆಗುತ್ತದೆ. ಗ್ರಾಪಂ ಮಟ್ಟದಲ್ಲಿ ಇಂತಹ ಸಭೆಗಳು ನಡೆದಾಗ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು.
    ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸೌಲಭ್ಯ ಸೂಕ್ತವಾಗಿಲ್ಲ. ಇದರಿಂದ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತೆಯಾಗಿದೆ. ಮೊದಲೇ ಮಾಹಿತಿ ನೀಡಿದ್ದರೂ ಮೆಸ್ಕಾಂ ಅಧಿಕಾರಿಗಳು ಸಭೆಗೆ ಬಂದಿಲ್ಲ. ನಮ್ಮ ಸಮಸ್ಯೆಗೆ ಉತ್ತರ ನೀಡುವವರು ಇಲ್ಲದಂತಾಗಿದೆ. ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದರೆ ಸಭೆಗೆ ಅಬಕಾರಿ ಇಲಾಖೆ ಅಧಿಕಾರಿಗಳೂ ಬಂದಿಲ್ಲ. ಇಷ್ಟು ಮಾತ್ರವಲ್ಲ ತಾಪಂ ಅಧಿಕಾರಿಗಳು ಸೇರಿದಂತೆ ಅನೇಕ ಇಲಾಖೆ ಸಿಬ್ಬಂದಿ ಗೈರಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಹೇಳಿದರು.
    ಕೃಷಿ ಇಲಾಖೆ ಅಧಿಕಾರಿ ಪ್ರಜ್ವಲ್ ಮಾತನಾಡಿ, ರೈತರಿಗೆ ಅನುಕೂಲಕರವಾದ ಸಲಕರಣೆಗಳನ್ನು ಇಲಾಖೆಯಿಂದ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳೆವಿಮೆ, ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ಅಡಕೆ ಬೆಳೆಗೆ ಸಂಬಂಧಿಸಿದ ರೋಗಗಳ ನಿಯಂತ್ರಣಕ್ಕೆ ಔಷಧ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಕಂದಾಯ, ಪಶುಪಾಲನೆ, ಶಿಕ್ಷಣ ಇಲಾಖೆ ಅಧಿಕಾರಗಳು ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
    ಗ್ರಾಪಂ ಉಪಾಧ್ಯಕ್ಷೆ ವಿನೋದಾ, ಸದಸ್ಯರಾದ ರೋಹಿಣಿ, ರವಿ, ಪಿಡಿಒ ಚೂಡಾಮಣಿ, ವಿವಿಧ ಇಲಾಖೆಗಳ ಸಿಬ್ಬಂದಿಗಳಾದ ಲೋಕ್ಯನಾಯಕ್, ನಾಗರಾಜ್, ನೇತ್ರಾವತಿ, ಗುರುರಾಜ್, ರಾಜು, ದುರ್ಗಪ್ಪ, ಸುರೇಶ್, ಭೋಜರಾಜ್, ಸತೀಶ್, ಮಂಜುನಾಥ್, ಶರತ್, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts