More

    ಹೊಸ್ತಿಲ ಹುಣ್ಣಿಮೆ ಬೆಳದಿಂಗಳು ಯಾರಿಗೆ?

    ಹಾವೇರಿ: ಗ್ರಾಪಂ ಚುನಾವಣೆ ಮುಗಿದಿದ್ದು, ಈಗ ಎಲ್ಲರ ಚಿತ್ತ ಬುಧವಾರ ನಡೆಯುವ ಮತ ಎಣಿಕೆಯತ್ತ ನೆಟ್ಟಿದೆ. ಅಂದು ಹೊಸ್ತಿಲ ಹುಣ್ಣಿಮೆಯಿದ್ದು, ಯಾರಿಗೆ ಬೆಳದಿಂಗಳಾಗಲಿದೆ? ಯಾರ ಪಾಲಿಗೆ ಕತ್ತಲಾಗಲಿದೆ ಎಂಬ ಲೆಕ್ಕಾಚಾರ ಜಿಲ್ಲೆಯಲ್ಲಿ ಜೋರಾಗಿದೆ. ಇದು ಅಭ್ಯರ್ಥಿಗಳ ನಿದ್ದೆಗೆಡಿಸಿದೆ.

    ಜಿಲ್ಲೆಯ ಒಟ್ಟು 209 ಗ್ರಾಪಂಗಳ 1,056 ವಾರ್ಡ್​ಗಳ 2,967 ಸ್ಥಾನಗಳಲ್ಲಿ 68 ವಾರ್ಡ್​ಗಳ 224 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 988 ವಾರ್ಡ್​ಗಳ 2,743 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 7,450 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಇವರೆಲ್ಲರ ಭವಿಷ್ಯವನ್ನು ಮತದಾರರು ನಿರ್ಧರಿಸಿ ಮತಪೆಟ್ಟಿಗೆಗೆ ಹಾಕಿದ್ದಾರೆ.

    ಚುನಾವಣೆ ವೇಳೆ ಹಗಲಿರುಳೆನ್ನದೆ ಮನೆ-ಮನೆಗೆ ಹೋಗಿ ಮತಯಾಚಿಸಿದ್ದ ಅಭ್ಯರ್ಥಿಗಳು ಮತದಾನ ನಂತರ ಯಾರು ನಮ್ಮನ್ನು ಬೆಂಬಲಿಸಿದ್ದಾರೆ? ಯಾರು ಕೈಬಿಟ್ಟಿದ್ದಾರೆಂಬ ಲೆಕ್ಕಾಚಾರ ನಡೆಸಿದ್ದರು. ಮತ ಎಣಿಕೆಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಅವರ ಎದೆಯಲ್ಲೀಗ ಢವಢವ ಶುರುವಾಗಿದೆ.

    ಎಲ್ಲ ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ಆರಂಭವಾಗಲಿದೆ. ಒಂದು ಮೇಜಿಗೆ ಇಬ್ಬರು ಮತ ಎಣಿಕೆ ಸಿಬ್ಬಂದಿ, ಒಬ್ಬ ಆರ್​ಒ, ಎಆರ್​ಒ ಹಾಗೂ ಡಿ ದರ್ಜೆ ನೌಕರರು ಇರಲಿದ್ದಾರೆ. ಇವರಿಗೆ ಸ್ಥಳದಲ್ಲೇ ಊಟ, ಉಪಾಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಅಥವಾ ಒಬ್ಬ ಏಜೆಂಟ್​ಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

    ಮೀಸಲು ಅಭ್ಯರ್ಥಿಗಳ ಎಣಿಕೆ ಮೊದಲು: ಮತ ಎಣಿಕೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ, ಸಾಮಾನ್ಯ ವರ್ಗ ಅಭ್ಯರ್ಥಿಗಳು ಎಂದು ನಡೆಸಲಾಗುತ್ತದೆ. ಇದೇ ರೀತಿ ಮಹಿಳಾ ಮೀಸಲಾತಿ ಸ್ಥಾನಗಳು, ನಂತರ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ.

    ಸಿಸಿ ಕ್ಯಾಮರಾ ಕಣ್ಗಾವಲು: ಮತ ಎಣಿಕೆಯ ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾವುದೇ ಗೊಂದಲ, ಗೋಜಲು ಇಲ್ಲದೆ ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆ ಕೊಠಡಿಗೆ ಒಬ್ಬ ಆರ್​ಒ, ಎಆರ್​ಒ, ಸ್ಟ್ರಾಂಗ್ ರೂಮ್ಳಿಂದ ಮತಪೆಟ್ಟಿಗೆಗಳನ್ನು ತರುವ ಪ್ರತಿ ದೃಶ್ಯ ಕ್ಯಾಮರಾ ಕಾವಲಿನಲ್ಲಿ ನಡೆಯಲಿದೆ.

    ಕುತೂಹಲ ಮೂಡಿಸಿದ ಅವಲೋಕನ

    ಮಳೆ ನಿಂತರೂ ಮರದ ಹನಿ ನಿಲ್ಲದೆಂಬಂತೆ ಮತದಾನ ಮುಗಿದರೂ ಲೆಕ್ಕಾಚಾರ ಮಾತ್ರ ನಿಂತಿಲ್ಲ. ಹಣ, ಹೆಂಡದ ಪ್ರಭಾವ ಕೆಲಸ ಮಾಡಿದೆಯೋ ಇಲ್ಲವೋ? ಅವರ ಮತಗಳು ನಮಗೆ ಬಂದಿರಬಹುದೇ? ಬಾರದಿದ್ದರೆ ಫಲಿತಾಂಶ ಏರುಪೇರಾಗಬಹುದೇ? ಬರೀ ಇಂಥ ವಿಷಯಗಳು ಅಲ್ಲಲ್ಲಿ ಗುಂಪು ಚರ್ಚೆಗಳು ಮಂಗಳವಾರ ಸಂಜೆಯವರೆಗೂ ಜೋರಾಗಿ ನಡೆಯಿತು. ಕೆಲವರು ಇಂಥ ಅಭ್ಯರ್ಥಿಯೇ ಗೆಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದೂ ಇದೆ.

    ತಡರಾತ್ರಿಯವರೆಗೂ ಎಣಿಕೆ?

    ಗ್ರಾಪಂಗಳ ಮತ ಎಣಿಕೆ ಪ್ರಕ್ರಿಯೆ ನಿಧಾನವಾಗುವುದರಿಂದ ಜಿಲ್ಲೆಯ 209 ಗ್ರಾಪಂಗಳು ಅದರಲ್ಲೂ ಕೊನೆಯ ಹಂತದಲ್ಲಿರುವ ಗ್ರಾಪಂಗಳ ಫಲಿತಾಂಶ ತಡರಾತ್ರಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಮೊದಲು ಮೀಸಲು ಅಭ್ಯರ್ಥಿಗಳ ಆಯ್ಕೆ ನಂತರ ಸಾಮಾನ್ಯ ಅಭ್ಯರ್ಥಿಗಳ ಆಯ್ಕೆ ಹಾಗೂ ಕೆಲವು ವಾರ್ಡ್​ಗಳಲ್ಲಿ ನಾಲ್ಕು ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳ ಎಣಿಕೆ ಮಾಡಬೇಕಿರುವುದರಿಂದ ತಡರಾತ್ರಿಯವರೆಗೂ ನಡೆಯಲಿದೆ.

    ಹಾವೇರಿ ತಾಲೂಕಿನ 33 ಗ್ರಾಪಂಗಳಲ್ಲಿ ಚುನಾವಣೆ ನಡೆದಿದೆ. ಮತ ಎಣಿಕೆಗೆ ಶಿವಲಿಂಗೇಶ್ವರ ಮಹಿಳಾ ಕಾಲೇಜ್​ನಲ್ಲಿ 10 ಕೊಠಡಿ ಸಿದ್ಧಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 6 ಮೇಜು ಹಾಕಲಾಗಿದೆ. ಮತ ಎಣಿಕೆ ನಂತರ ಆಯಾ ಗ್ರಾಪಂಗಳ ವಾರ್ಡ್​ವಾರು ವಿಜೇತ ಅಭ್ಯರ್ಥಿಗಳ ಹೆಸರನ್ನು ಧ್ವನಿವರ್ಧಕದಲ್ಲಿ ಘೊಷಣೆ ಮಾಡಲು ಸಿಬ್ಬಂದಿ ನಿಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಜನದಟ್ಟಣೆ ನಿಯಂತ್ರಿಸಲು ಮೂರು ಹಂತದಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ.
    | ಶಂಕರ ಜಿ.ಎಸ್. ಹಾವೇರಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts