More

    ರಾಮ ಮಂದಿರ ಗರ್ಭಗುಡಿಗೆ ಯಾರ ಮೂರ್ತಿ? ಟ್ರಸ್ಟ್​ ಹೇಳಿದ್ದಿಷ್ಟು…

    ಅಯೋಧ್ಯಾ ರಾಮಮಂದಿರದಲ್ಲಿ ಜನವರಿ 18ರಿಂದ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಗಳು ಆರಂಭಗೊಳ್ಳಲಿದ್ದು, ಬಾಲರಾಮನನ್ನು ಕೆತ್ತಿರುವ ಮೂವರು ಶಿಲ್ಪಿಗಳಲ್ಲಿ ಯಾರ ಮೂರ್ತಿ ಆಯ್ಕೆಯಾಗಲಿದೆ ಎಂಬ ಕುತೂಹಲ ಹೆಚ್ಚಿದೆ.

    ಮೈಸೂರಿನ ಅರುಣ್ ಯೋಗಿರಾಜ್, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗಣೇಶ್ ಎಲ್. ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕ್ರಮವಾಗಿ ಒಂದೊಂದು ಮೂರ್ತಿಯನ್ನು ಕೆತ್ತಿದ್ದು, ಅವುಗಳನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ. ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ಹಿಂದಿನ ಸಭೆಯಲ್ಲಿ ಮತದಾನದ ಮೂಲಕ ಮೂರ್ತಿ ಆಯ್ಕೆ ಕುರಿತ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ಪಾಲ್ಗೊಂಡಿರಲಿಲ್ಲ. ಹೀಗಾಗಿ ಅವರು ಭಾನುವಾರ ಅಯೋಧ್ಯೆಗೆ ಬಂದು ಟ್ರಸ್ಟ್ ಮುಂದೆ ಮೂರ್ತಿ ಕುರಿತ ತಮ್ಮ ಅಭಿಪ್ರಾಯ ನೀಡಿದ್ದಾರೆ.

    ‘ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಆಯ್ಕೆಯಾಗಿದೆ’ ಎಂಬ ಸುದ್ದಿಗಳು ಸೋಮವಾರ ಹರಿದಾಡಿದರೂ, ಟ್ರಸ್ಟ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ‘ಯಾವ ಮೂರ್ತಿಯೂ ಅಂತಿಮ ಆಗಿಲ್ಲ. ಈ ಬಗ್ಗೆ ತೀರ್ಮಾನ ಪ್ರಕಟವೂ ಆಗಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಾನು ಯಾವುದೇ ಮಾಹಿತಿ ಹಂಚಿಕೊಳ್ಳುವ ಸ್ಥಿತಿಯಲ್ಲಿಲ್ಲ’ ಎಂದು ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಶ್ವ ಹಿಂದು ಪರಿಷತ್ ಜಂಟಿ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಅವರು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಜನವರಿ 10ರೊಳಗೆ ಟ್ರಸ್ಟ್ ಅಧಿಕೃತ ಮಾಹಿತಿ ನೀಡುವ ಸಾಧ್ಯತೆಗಳಿವೆ. ಅಲ್ಲಿವರೆಗೆ ಊಹಾಪೋಹಗಳನ್ನು ನಂಬಬೇಡಿ ಎಂದು ಟ್ರಸ್ಟ್​ನ ಉನ್ನತ ಮೂಲಗಳು ತಿಳಿಸಿವೆ.

    ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆಗೆ ಸಮಯ ನಿಗದಿ
    ನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣಗೊಳ್ಳುತ್ತಿರುವ ಭವ್ಯ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದು 12.20ಕ್ಕೆ ನಡೆಯಲಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ನಂತರ ಆರತಿ ಇರಲಿದ್ದು, ನಂತರ ಪ್ರಸಾದ ವಿತರಣೆ ನಡೆಯಲಿದೆ. ಸೂರ್ಯಾಸ್ತದ ಬಳಿಕ ದೀಪಗಳನ್ನು ಬೆಳಗಿಸಲಾಗುವುದು ಎಂದು ಸೋಮವಾರ ಅಕ್ಷತೆ ವಿತರಣೆ ಕಾರ್ಯಕ್ರಮದ ಬಳಿಕ ರಾಯ್ ಸುದ್ದಿಗಾರರಿಗೆ ತಿಳಿಸಿದರು.

    15 ಸಾವಿರ ಕೊಟ್ರೆ 1 ಗಂಟೆಗೆ 55 ಸಾವಿರ ರೂ.!? ರೀಲ್ಸ್​ ಸ್ಟಾರ್​ ಅಮಲಾಳ ಹಗರಣ ಬಯಲು, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts