More

    ಬಿಎಸ್​ವೈ ಸ್ಥಾನಕ್ಕೆ ಸಿಗದ ಪರ್ಯಾಯ ನಾಯಕ; ಅಧಿಕಾರ ಕಳೆದುಕೊಳ್ಳಲು ಬಯಸದ ಹೈಕಮಾಂಡ್

    ಬೆಂಗಳೂರು; ಬಿಜೆಪಿಯೊಳಗೇ ಉದಯವಾಗಿರುವ ಪ್ರತಿಪಕ್ಷದ ವಾದವನ್ನು ವರಿಷ್ಠರು ಪೂರ್ಣವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಯಡಿಯೂರಪ್ಪ ಅರಂತಹ ಮತ್ತೊಬ್ಬ ಮಹಾನಾಯಕನನ್ನು ಹುಡುಕುವಲ್ಲಿ ಹೈಕಮಾಂಡ್ ವಿಫಲವಾಗಿದೆ. ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಅವರ ನಿರೀಕ್ಷೆ ತಲೆ ಕೆಳಗೆ ಮಾಡಿದ್ದರಿಂದ ಕರ್ನಾಟಕದಲ್ಲಿ ಸೇಫಾಗಿರುವ ಸರ್ಕಾರವನ್ನು ಅನಗತ್ಯ ಕಾರಣಕ್ಕೆ ಕಳೆದುಕೊಳ್ಳುವ ಮನಸ್ಥಿತಿಯಲ್ಲಿ ದೆಹಲಿ ನಾಯಕರಿಲ್ಲ. ಹಾಗೆಂದು, ಬದಲಾವಣೆ ಮಾಡಲು ಅಸಾಧ್ಯವೇ ಎಂದರೆ ಅದೂ ಸುಳ್ಳಾಗುತ್ತದೆ. ಉತ್ತರಾಖಂಡ ಮುಖ್ಯಮಂತ್ರಿಯನ್ನು ಕುಂಭಮೇಳಕ್ಕೆ ಕೆಲವು ದಿನಗಳಿರುವಾಗ ಸದ್ದಿಲ್ಲದೇ ಬದಲು ಮಾಡಿದರು. ಅಸ್ಸಾಂ ನಾಯಕತ್ವ ಬದಲಾವಣೆಯನ್ನೂ ಊಹಿಸಿರಲಿಲ್ಲ. ಆದರೆ ಭಿನ್ನ ರಾಜಕೀಯ ವಾತಾವರಣ ಇರುವ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವ ಕಾಣಿಸುತ್ತಿಲ್ಲ. ಈ ಹಿಂದೆ ವೀರೇಂದ್ರ ಪಾಟೀಲರ ಜತೆಗಿದ್ದ ಲಿಂಗಾಯತ ಸಮುದಾಯ ರಾಜಕೀಯ ದಾಳಕ್ಕೆ ಕಲಿಸಿದ ಪಾಠವನ್ನು ಯಾವೊಬ್ಬ ನಾಯಕರೂ ಮರೆತಿಲ್ಲ.

    ಲಾಕ್​ಡೌನ್ ಬಳಿಕ ಶಾಸಕಾಂಗ ಸಭೆ?: ಜೂನ್ 2ನೇ ವಾರದಲ್ಲಿ ಸಿಎಂ ಬಿಎಸ್​ವೈ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಗಳಿವೆ. ಜಿಂದಾಲ್​ಗೆ ಭೂಮಿ ಹಸ್ತಾಂತರ ಮೇಲ್ನೋಟಕ್ಕೆ ಪ್ರಧಾನ ಕಾರ್ಯಸೂಚಿಯಾಗಿದೆ. ಆದರೆ, ಸರ್ಕಾರದ ಇತ್ತೀಚಿನ ನೀತಿ-ನಿರ್ಧಾರ, ಅನುದಾನ ಹಂಚಿಕೆ, ಸಿಎಂ ನಡೆ ಹಾಗೂ ಸಚಿವರ ಕಾರ್ಯವಿಧಾನ ಚರ್ಚೆಯಾಗುವ ನಿರೀಕ್ಷೆಯಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಪಕ್ಷದ ಮೂಲ ಹಾಗೂ ಸಂಘ ನಿಷ್ಠ ಶಾಸಕರ ತಂಡವೊಂದು ಪದೇಪದೆ ಒತ್ತಡ ಹೇರಿದ್ದು, ವರಿಷ್ಠರಿಗೂ ಅಹವಾಲು ಸಲ್ಲಿಸಿದೆ. ಹೀಗಾಗಿ ವರಿಷ್ಠರ ಸಲಹೆಯಂತೆ ಸಭೆ ಕರೆಯಲು ಬಿಎಸ್​ವೈ ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ. ಇತ್ತ ನಾಯಕತ್ವ ಬದಲಾವಣೆ ಸುದ್ದಿ ತೇಲಿ ಬರುತ್ತಲೇ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ನಿರಂಜನ್, ಎಸ್.ಆರ್.ವಿಶ್ವನಾಥ್, ಶಂಕರಗೌಡ ಪಾಟೀಲ್ ಗುಡುಗಿದ್ದಾರೆ. ಖುದ್ದು ಯಡಿಯೂರಪ್ಪ, ಕೋವಿಡ್ ನಿರ್ವಹಣೆಗೆ ಆದ್ಯತೆ ಕೊಡಿ, ರಾಜಕೀಯ ಬದಿಗಿಡಿ ಎಂದು ಸಲಹೆ ನೀಡಿದ್ದಾರೆ.

    ಬದಲಾವಣೆ ಇಲ್ಲವೆಂದ ನಾಯಕರು: ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆಂಬ ವಿಚಾರ ಬಿಜೆಪಿಯ ಹಲವು ಶಾಸಕರು, ಸಚಿವರನ್ನು ಕೆರಳಿಸಿದೆ. ಕರೊನಾ ಸಂದರ್ಭದಲ್ಲಿ ಇಂಥ ಪ್ರಯತ್ನ ಸರಿಯಲ್ಲ ಎಂದು ಕುಟುಕಿದ್ದಾರೆ. ಜತೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ಮಾಧ್ಯಮದ ಮುಂದೆ ಕಾಣಿಸಿಕೊಂಡ ಸಚಿವರು, ಶಾಸಕರು ನಾಯಕತ್ವ ಬದಲಾವಣೆ ಊಹಾಪೋಹ ಎಂದಿದ್ದಾರೆ. ಕೆಲ ಶಾಸಕರಂತೂ ಬಿಎಸ್​ವೈಗೆ ಕರೆ ಮಾಡಿ, ಇಂತಹ ಬೆಳವಣಿಗೆ ನಡೆದರೆ ನಾವು ರಾಜೀನಾಮೆ ನೀಡಲೂ ಸಿದ್ಧ ಎಂದು ಅಭಿಪ್ರಾಯ ನೀಡಿದ್ದಾರೆಂದು ಗೊತ್ತಾಗಿದೆ.

    ಸರತಿ ಸಾಲಲ್ಲಿ ಹತ್ತು ನಾಯಕರು!: ಸಿಎಂ ಸ್ಥಾನಕ್ಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇವರೊಂದಿಗೆ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅರವಿಂದ ಬೆಲ್ಲದ, ಲಿಂಬಾವಳಿ ಸಹಿತ ಹಲವರ ಹೆಸರು ಚಲಾವಣೆಯಲ್ಲಿದೆ. ಒಟ್ಟಾರೆ ಇವರೆಲ್ಲ ಯಾವ ಆಧಾರದ ಮೇಲೆ ಸಿಎಂ ಗಾದಿ ತಮಗೆ ಸಿಗಬಹುದೆಂದೆಣಿಸಿದ್ದಾರೆಂಬುದು ಕುತೂಹಲದ ಸಂಗತ.

    ಕೋಟ್ಸ್

    ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ ಅಷ್ಟೇ. ಏನೇ ಸರ್ಕಸ್ ಮಾಡಿದರೂ ಬಿಜೆಪಿ ಶಾಸಕರ ಒಗ್ಗಟ್ಟು ಒಡೆಯಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ.

    | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

     

    ಈ ಹಿಂದಿನಿಂದಲೂ ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಕೆಳಗಿಳಿಯುತ್ತಾರೆ. ಬೇರೊಬ್ಬರು ಸಿಎಂ ಆಗುತ್ತಾರೆ ಎಂದೆಲ್ಲ ಹೇಳುತ್ತ ಬರಲಾಗಿದೆ. ಆದರೆ, ಅವು ಯಾವು ನಿಜವಾಗಿಲ್ಲ. ಈಗ ಎದ್ದಿರುವ ಗಾಳಿ ಮಾತು ಸಹ ಠುಸ್ ಆಗಲಿದೆ.

    | ಬಿ.ಸಿ.ಪಾಟೀಲ್ ಕೃಷಿ ಸಚಿವ

     

    ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರ. ಶಾಸಕಾಂಗ ಸಭೆ ಕರೆಯಲು ಸೂಚಿಸಿಲ್ಲ. ಎಲ್ಲ ಊಹಾಪೋಹ

    | ಡಾ.ಸಿ.ಎನ್.ಅಶ್ವತ್ಥ ನಾರಾಯಣ ಡಿಸಿಎಂ

     

    ಯಾವ ನೆಲೆಯಲ್ಲಿ 10 ಮಂದಿ ಅಪೇಕ್ಷೆ?

    1. ಡಾ.ಸಿ.ಎನ್.ಅಶ್ವತ್ಥನಾರಾಯಣ: ಹೊಸ ತಲೆಮಾರಿನ ನಾಯಕ, ನೀಟ್ ಇಮೇಜ್

    2. ಮುರುಗೇಶ್ ನಿರಾಣಿ: ಪಂಚಮಸಾಲಿ ಸಮುದಾಯ, ಉತ್ತರ ಕರ್ನಾಟಕಕ್ಕೆ ನಾಯಕತ್ವ

    3. ಗೋವಿಂದ ಕಾರಜೋಳ: ದಲಿತ ಸಮುದಾಯ, ಹಿರಿಯ ನಾಯಕ, ಅಜಾತಶತ್ರು

    4. ಲಕ್ಷ್ಮಣ ಸವದಿ: ಚುನಾವಣೆ ಸೋತರೂ ಡಿಸಿಎಂ ಪದವಿ, ಸಮುದಾಯದ ಬೆಂಬಲ

    5. ಅರವಿಂದ ಲಿಂಬಾವಳಿ: ಪಕ್ಷ ಸಂಘಟನೆ, ಪರಿಶಿಷ್ಟ

    6. ಅರವಿಂದ ಬೆಲ್ಲದ: ಯುವ ನಾಯಕತ್ವ, ಪಂಚಮಸಾಲಿ

    7. ಜಗದೀಶ ಶೆಟ್ಟರ್: ಹಿಂದೆ ಸಿಎಂ ಆಗಿದ್ದ ಅನುಭವ, ದೊಡ್ಡ ಸಮುದಾಯದ ಪ್ರತಿನಿಧಿ

    8. ಬಸವರಾಜ ಬೊಮ್ಮಾಯಿ: ಎಲ್ಲ ಸರಿದೂಗಿಸುವ ಛಾತಿ, ಪ್ರತಿರೋಧವೂ ಬರಲ್ಲ

    9. ಆರ್.ಅಶೋಕ್: ಹಿರಿತನ, ಪಕ್ಷ ನಿಷ್ಠೆ, ಎಲ್ಲರನ್ನು ಸಂಭಾಳಿಸುವ ಗುಣ

    10. ವಿಶ್ವೇಶ್ವರ ಹೆಗಡೆ ಕಾಗೇರಿ: ಪಕ್ಷ ನಿಷ್ಠೆ, ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts