More

    ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್​! ಮೋದಿ ಮೆಚ್ಚಿದ ಮಾಧವಿ ಲತಾ ಯಾರು?

    ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಸತತ 4 ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂಸದ ಅಸಾದುದ್ದೀನ್​ ಓವೈಸಿಗೆ ಈ ಬಾರಿ ತೀವ್ರ ಪೈಪೋಟಿ ನೀಡಲು ಬಿಜೆಪಿ ಪ್ರಬಲ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪ್ರಧಾನಿ ಮೋದಿಯಿಂದಲೇ ಮೆಚ್ಚುಗೆ ಪಡೆದಿರುವ ಮಾಧವಿ ಲತಾ, ಓವೈಸಿಗೆ ದೊಡ್ಡ ಸವಾಲಾಗಿ ನಿಂತಿದ್ದಾರೆ. ತನ್ನ ಖಡಕ್​ ಮಾತುಗಳಿಂದಲೇ ಎಲ್ಲರ ಗಮನ ಸೆಳೆಯುತ್ತಿರುವ ಮಾಧವಿ ಕುರಿತಾದ ಆಸಕ್ತಿರ ಮಾಹಿತಿ ಇಲ್ಲಿದೆ.

    ಮಾಧವಿ ಅವರು ತಾನು ಆರ್​ಎಸ್​ಎಸ್​ ಮಗಳೆಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ಮಹಿಳೆಯಾಗಿರುವ ಮಾಧವಿ, ಓರ್ವ ಉದ್ಯಮಿ, ಹಿಂದುತ್ವವಾದಿ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ತರಬೇತಿ ಪಡೆದ ಭರತನಾಟ್ಯ ಡಾನ್ಸರ್​ ಕೂಡ ಹೌದು.

    ಪ್ರಧಾನಿ ಮೋದಿ ಮೆಚ್ಚುಗೆ
    ಹೈದರಾಬಾದ್​ನಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಎಐಎಂಐಎಂ ಪಕ್ಷದ ಅಸಾದುದ್ದೀನ್​ ಓವೈಸಿ ವಿರುದ್ಧ ಚುನಾವಣಾ ರಣಕಹಳೆ ಊದಿರುವ ಮಾಧವಿ ಅವರನ್ನು ಸ್ವತಃ ಪ್ರಧಾನಿ ಮೋದಿ ಪ್ರಸಿದ್ಧ ಟಿವಿ ಶೋನಲ್ಲಿ ಹೊಗಳಿದ್ದಾರೆ. ಮಾಧವಿ ಲತಾ ಜೀ, ನಿಮ್ಮ ‘ಆಪ್ ಕಿ ಅದಾಲತ್’ ಸಂಚಿಕೆ ಅಸಾಧಾರಣವಾಗಿದೆ. ನೀವು ತುಂಬಾ ಗಟ್ಟಿಯಾದ ಅಂಶಗಳನ್ನು ಎತ್ತಿದ್ದೀರಿ ಮತ್ತು ತರ್ಕಬದ್ಧವಾಗಿ ತುಂಬಾ ಉತ್ಸಾಹದಿಂದ ಮಾತನಾಡಿದ್ದೀರಿ. ನಿಮಗೆ ನನ್ನ ಶುಭಾಶಯಗಳು ಎಂದು ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ.

    ಓವೈಸಿ ಭದ್ರಕೋಟೆಯಲ್ಲಿ ಸವಾಲು
    ಮುಂದಿನ ಲೋಕಸಭಾ ಚುನಾವಣೆಗೆ ಮಾರ್ಚ್​ 2ರಂದು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಧವಿ ಹೆಸರನ್ನು ಬಿಜೆಪಿ ಪರಿಚಯಿಸಿದ ಬಳಿಕ ಅವರ ಹೆಸರು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಲ್ಲಿಯವರೆಗೂ ಲತಾ ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಲತಾ ಅವರ ವಯಸ್ಸು 49. ಹೈದರಾಬಾದ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಓವೈಸಿ ಕುಟುಂಬದ ಪಾರುಪತ್ಯವಿದೆ. ಓವೈಸಿ ಕುಟುಂಬದ ಭದ್ರಕೋಟೆ ಎಂದು ಬಿಂಬಿತವಾಗಿರುವ ಹೈದರಾಬಾದ್​ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಲೇಡಿ ಟೈಗರ್​ ಓವೈಸಿಗೆ ಸವಾಲಾಗಿ ನಿಂತಿದ್ದಾರೆ.

    2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಗೆದ್ದ ಅಸಾದುದ್ದೀನ್‌ಗಿಂತ ಮೊದಲು, ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 1984ರಿಂದ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಹೈದರಾಬಾದ್ ಲೋಕಸಭಾ ಕ್ಷೇತ್ರವಲ್ಲದೆ, ಗೋಶಾಮಹಲ್ ಹೊರತುಪಡಿಸಿ ಹೈದರಾಬಾದ್‌ನ ಎಲ್ಲಾ ಅಸೆಂಬ್ಲಿ ಸ್ಥಾನಗಳಲ್ಲಿಯೂ ಎಐಎಂಐಎಂ ವಶದಲ್ಲಿದೆ.

    ಯಾರು ಈ ಮಾಧವಿ ಲತಾ
    ಲತಾ ಅವರು ಸಾಂಸ್ಕೃತಿಕ ಕಾರ್ಯಕರ್ತೆಯಾಗಿದ್ದು, ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪೊಲಿಟಿಕಲ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2019ರಲ್ಲಿ ಸಂಸತ್ತಿನಿಂದ ನಿಷೇಧಕ್ಕೆ ಒಳಗಾದ ತ್ರಿವಳಿ ತಲಾಖ್ ವಿರುದ್ಧದ ಅಭಿಯಾನದಲ್ಲಿ ಲತಾ ಮುಂಚೂಣಿಯಲ್ಲಿದ್ದರು. ತ್ರಿವಳಿ ತಲಾಖ್ ಪದ್ಧತಿ ರದ್ದು ಮಾಡಿ, ಅದನ್ನು ಅಪರಾಧ ಎಂದು ಕೇಂದ್ರ ಸರ್ಕಾರ ಪರಿಗಣಿಸಿದ್ದಕ್ಕೆ ಓವೈಸಿ 2019ರಲ್ಲಿ ತಮ್ಮ ಧ್ವನಿಯೇರಿಸಿದ್ದರು. ಅಲ್ಲದೆ, ಮುಸ್ಲಿಂ ಗುರುತು ಮತ್ತು ಪೌರತ್ವದ ಮೇಲಿನ ಅನೇಕ ದಾಳಿಗಲ್ಲಿ ಇದು ಕೂಡ ಒಂದು ಎಂದು ಟೀಕಿಸಿದ್ದರು.

    ತನ್ನ ಕ್ರಿಯಾಶೀಲತೆಯ ಹೊರತಾಗಿ, ಲತಾ ಒಬ್ಬ ವಾಣಿಜ್ಯೋದ್ಯಮಿ, ಎನ್​ಸಿಸಿ ಕೆಡೆಟ್ ಮತ್ತು ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿ. ಹೈದರಾಬಾದ್ ಮೂಲದ ವಿರಿಂಚಿ ಆಸ್ಪತ್ರೆಗಳ ಅಧ್ಯಕ್ಷರಾಗಿದ್ದಾರೆ. ಲತಾ ಅವರು ತಮ್ಮ ಉಮೇದುವಾರಿಕೆಯನ್ನು ತಮ್ಮ ಎರಡು ದಶಕಗಳ ಸುದೀರ್ಘ ಸಮಾಜ ಸೇವೆಯ ಸ್ವೀಕೃತಿ ಎಂದು ಕರೆದಿದ್ದಾರೆ. ಸಮಾಜಮುಖಿ ಕೆಲಸಗಳಿಂದ ಮಾಧವಿ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಓವೈಸಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಅಂತಾನೇ ಹೇಳಬಹುದು.

    ನನಗೆ ಕೊಲೆ ಬೆದರಿಕೆ ಇದೆ ಎಂದು ಕಳೆದ ವಾರ ಓವೈಸಿ ಹೇಳಿದ್ದಕ್ಕೆ, ಪ್ರತಿಕ್ರಿಯೆ ನೀಡಿದ ಲತಾ, ಹೈದರಾಬಾದ್​ ಸಂಸದರು ಐಸಿಸ್​ ಸಂಘಟನೆಯ ಸ್ನೇಹಿತರು ಎಂದು ಗೇಲಿ ಮಾಡಿದರು. ಓವೈಸಿಗೆ ಯಾರು ತಾನೇ ಜೀವ ಬೆದರಿಕೆ ಹಾಕುತ್ತಾರೆ? ಅವರ ಸ್ನೇಹದ ಮಟ್ಟವನ್ನು ನೋಡಿ. ಐಸಿಸ್​ ಜನರೊಂದಿಗೆ ಅವರ ಸ್ನೇಹವಿದೆ. ತನ್ನ ಭದ್ರಕೋಟೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಇದೇ ಸಂದರ್ಭದಲ್ಲಿ ತನಗೆ ಕೊಲೆ ಬೆದರಿಕೆ ಇದೆ ಅಂತಾನೂ ಹೇಳುತ್ತಾರೆ ಎನ್ನುವ ಮೂಲಕ ಓವೈಸಿಯನ್ನು ವ್ಯಂಗ್ಯವಾಡಿದ್ದರು.

    ಓವೈಸಿ ಎದುರು ಮೊದಲ ಬಾರಿಗೆ ಲೇಡಿ ಟೈಗರ್​ ಸ್ಪರ್ಧೆಗೆ ಇಳಿದಿರುವುದರಿಂದ ಹೈದರಾಬಾದ್​ ಚುನಾವಣಾ ಕಣ ಬಹಳ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್​)

    ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ದೋಸ್ತಿಗಳ ‘ಹೊಸ ತೊಡಕು’; ಹೆಚ್‍ಡಿಕೆ ತೋಟದ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟ ರದ್ದು

    ವಿಜಯ್ ದೇವರಕೊಂಡ ಹೆಸರೇಳದ ಜೂ.ಎನ್ಟಿಆರ್! ‘ಫ್ಯಾಮಿಲಿ ಸ್ಟಾರ್’​ ಬಗ್ಗೆಯೂ ಒಂದು ಮಾತಾಡಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts