More

    ಯಾರು ಹಿತವರು ನಿನಗೆ?; ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ

    ಕಾಲ ಬದಲಾಗಿದೆ. ವಿವಾಹದ ವ್ಯಾಖ್ಯಾನವೂ ನಿರೀಕ್ಷೆಗಳೂ ಪರಿಷ್ಕರಣೆಗೊಂಡಿದೆ. ಆದರೆ ಸಾಂಸಾರಿಕ ಬದುಕೆನ್ನುವುದು ಹೊಂದಾಣಿಕೆಯ ತಳಹದಿ ಮೇಲೆ ನಿಂತಿದೆ. ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ. ಹಾಗೆಂದು ಕೇವಲ ಒಬ್ಬರ ಹೊಂದಾಣಿಕೆಯೇ ಬದುಕಾಗಬಾರದಲ್ಲ!

    | ಅರ್ಚನಾ ಜಿ ಬೊಮ್ನಳ್ಳಿ ಶಿರಸಿ

    ಭಾರತೀಯ ಸಂಪ್ರದಾಯದಲ್ಲಿ ವಿವಾಹಕ್ಕೆ ಬಹಳ ಮಹತ್ವವಿದೆ. ಒಂದು ಆರೋಗ್ಯವಂತ ಕುಟುಂಬ ವ್ಯವಸ್ಥೆ ನಿಂತಿರುವುದೆ ಮದುವೆಯೆಂಬ ಮೂರಕ್ಷರದ ಮೇಲೆಯೆ. ಹೀಗಿರುವಾಗ ಒಂದು ಕುಟುಂಬದಲ್ಲಿ ಮಕ್ಕಳು ವಯಸ್ಸಿಗೆ ಬಂದ ಮೇಲೆ ಅವರಿಗೆ ಮದುವೆ ಮಾಡುವುದು ಹೆತ್ತವರಿಗೆ ಕರ್ತವ್ಯವಾದರೆ, ಅದರ ಸಂಪೂರ್ಣ ಜವಾಬ್ದಾರಿ, ಹೊಂದಾಣಿಕೆ ಇಬ್ಬರದ್ದೂ ಆಗಿರುತ್ತದೆ. ಮದುವೆ ಎಂದ ಕೂಡಲೆ ತಕ್ಷಣಕ್ಕೆ ನೆನಪಾಗುವುದು ‘ಕನ್ಯಾವರಯತೆ ರೂಪಂ ಮಾತಾ ವಿತ್ತಂ ಪಿತಾ ಶ್ರುತಂ, ಬಾಂಧವಾಃ ಕುಲಮಿಚ್ಛಂತಿ ಮಿಷ್ಟಾನ್ನಂ ಇತರೆ ಜನಾಃ’ ಎಂಬ ಸಂಸ್ಕೃತ ಶ್ಲೋಕ. ಅಂದರೆ ವರನು ಸುಂದರನಾಗಿರಬೇಕೆಂದು ವರಿಸುವ ಕನ್ಯೆ ಬಯಸುತ್ತಾಳೆ, ಅವಳ ತಾಯಿ ವರನ ಕಡೆಯವರ ಸಂಪತ್ತನ್ನೂ, ತಂದೆಯು ವರನ ವಿದ್ಯೆಯನ್ನೂ, ಬಂಧುಗಳು ಉತ್ತಮವಾದ ಕುಲವನ್ನೂ ಹಾಗೂ ಇತರರು ಸೊಗಸಾದ ಊಟವನ್ನು ಬಯಸುತ್ತಾರಂತೆ! ಇದು ಶ್ಲೋಕದ ತಾತ್ಪರ್ಯವಷ್ಟೆ, ಆದರೆ ಇಂದಿನ ಪರಿಸ್ಥಿತಿಗೆ ಈ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗುವುದಿಲ್ಲ.

    ‘ನಮ್ಮನೆ ಮಗಳಿಗೆ ಈ ವರ್ಷ ಮದುವೆ ಮಾಡಬೇಕೆಂದಿದ್ದೇವೆ, ಎಲ್ಲಿಯಾದರೂ ಒಳ್ಳೆಯ ಸಂಬಂಧವಿದ್ದರೆ ತಿಳಿಸಿ’ ಎನ್ನುವ ಪೋಷಕರು ಮೊದಲು ಹೇಳುವುದು ‘ಒಳ್ಳೆಯ ಹುಡುಗನಾಗಿ, ಒಳ್ಳೆಯ ಜನರಾದರೆ ಸಾಕು’ ಎಂದು ಜಾತಕ ಕೊಡುತ್ತಾರೆ. ಈಗ ಉತ್ತರ ಕೊಡುವ ಸರದಿ ಗಂಡಿನ ಕಡೆಯವರದ್ದು. ‘ನಿಮ್ಮ ಮಗಳ ಜಾತಕ ನಮ್ಮ ಮಗನಿಗೆ ಹೊಂದಾಣಿಕೆಯಾಗಿದೆ, ನಿಮ್ಮ ಅಭಿಪ್ರಾಯ ತಿಳಿಸಿ’ ಎಂದಾಗ ಕನ್ಯೆಯಾದವಳು ‘ವರನ ಬ್ಯಾಂಕ್ ಬ್ಯಾಲೆನ್ಸ್, ಅವನ ಕುಟುಂಬ ವಿಭಕ್ತವೆ, ಅವಿಭಕ್ತವೆ? ಅಪ್ಪ, ಅಮ್ಮ ಅವನ ಜೊತೆಯಲ್ಲಿಯೆ ಇರುತ್ತಾರೊ ಅಥವಾ ಬೇರೆಯಿರುತ್ತಾರೊ? ವರ್ಕ್ ಫ್ರಂ ಹೋಂ ಅಂತಾದರೆ ಮನೆ ಹೇಗಿದೆ? ಹಳ್ಳಿ ಮನೆ ಅಂತಾದರೆ ಎಲ್ಲ ಕಡೆಗೂ ನೆಟ್ ವರ್ಕ್ ಸರಿಯಾಗಿ ಸಿಗುತ್ತದಾ, ಆ ಮನೆಯಲ್ಲಿ ಆಕಳಿನ ಕೊಟ್ಟಿಗೆ ಇದೆಯಾ? ಇದ್ದರೆ ಆ ಕೆಲಸ ಯಾರು ಮಾಡುತ್ತಾರೆ? ಮನೆಗೆ ಪೇಟೆ ಹತ್ತಿರ ಇದೆಯಾ?’ ಅಬ್ಬಬ್ಬಾ ಒಂದೆ ಎರಡೆ, ಕೊನೆಗೆ ಏನಾದರೂ ಒಂದು ಕಾರಣ ಹೇಳಿ, ಯಾಕೋ ಋಣಾನುಬಂಧ ಇಲ್ಲವೇನೊ ಎಂದು ಒಂದು ಫೋನಾಯಿಸಿದರೆ ಮುಗಿಯಿತು. ಮತ್ತೆ ಬೇರೆ ಎಲ್ಲಿಯಾದರೂ ಒಳ್ಳೆಯ ಕಡೆ ಜಾತಕ ಕೊಡುವ ಕೆಲಸ ಮುಂದುವರೆಯುತ್ತದೆ.

    ಮತ್ತೆ ಗಂಡಿನ ಕಡೆಯವರು ‘ನಮಗೆ ಜಾತಕ ಹೊಂದಾಣಿಕೆಯಾಗಿದೆ, ನಿಮ್ಮ ಅಭಿಪ್ರಾಯ ತಿಳಿಸಿ’ ಎಂದಾಗ, ‘ಅಯ್ಯೋ ನಿಮ್ಮ ಮಗನಿಗೂ, ನಮ್ಮ ಮಗಳಿಗೂ ಸುಮಾರು ಐದು ವರ್ಷಗಳಷ್ಟು ಅಂತರವಿದೆ, ಅದಕ್ಕೆ ಬೇಡ ಅಂದುಕೊಂಡಿದ್ದೇವೆ’ ಎಂಬ ಉತ್ತರ ಸಿದ್ಧವಾಗಿರುತ್ತದೆ. ಮತ್ತೂ ಒಂದು ಕಡೆ, ‘ನಿಮ್ಮ ಅಭಿಪ್ರಾಯ ತಿಳಿಸಿ’ ಎಂದಾಗ ‘ನಿಮ್ಮ ಮನೆ ತುಂಬ ಹಳೆಯದಂತೆ, ಮನೆಗೊಂದು ಕಾಂಪೌಂಡೂ ಇಲ್ಲವಂತೆ, ಮೂಲೆ ಊರು ಬೇರೆ, ಹಾಗಾಗಿ ಸಂಬಂಧ ಮುಂದುವರಿಸೋದು ಬೇಡ ಎಂದು ಮಾಡಿದ್ದೇವೆ’ ಎಂಬ ಮಾರುದ್ದ ಉತ್ತರ ಬಂತು. ಮತ್ತೂ ಒಂದು ಕಡೆ ‘ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ಮನೆಗೇ ಬಂದಾಗ, ‘ನಮಗೆ ಇರುವುದು ಒಬ್ಬಳೆ ಮಗಳು, ನಮ್ಮನ್ನೂ ನೋಡಿಕೊಳ್ಳಬೇಕಾಗುತ್ತೆ’ ಎಂದಾಗ, ಇವರಾಗೇ ಬೇಡ ಎನ್ನುವ ಸರದಿ ಗಂಡಿನವರದ್ದು. ಮತ್ತೊಂದು ಕಡೆ ಒಬ್ಬ ತಾಯಿ, ‘ತನ್ನ ಮಗಳನ್ನು ಮದುವೆ ಮಾಡಬೇಕು. ಎಲ್ಲಾದರೂ ಒಳ್ಳೆಯ ಸಂಬಂಧವಿದ್ದರೆ ಹೇಳಿ’ ಎಂದಾಗ ಅಲ್ಲಿದ್ದ ಒಬ್ಬರು ‘ಹುಡುಗ ಹೇಗಿರಬೇಕು’ ಎಂದಾಗ, ‘ನಮಗೆ ತುಂಬ ದೂರದಲ್ಲಿ ಇರುವವರು ಬೇಡ, ತಾಲೂಕು ಕೇಂದ್ರದಲ್ಲಿಯೆ ಇದ್ದರೆ ಒಳ್ಳೆಯದು, ಏನಾದರೂ ಉದ್ಯೋಗ ಮಾಡಿಕೊಂಡು ಪೇಟೆಯಲ್ಲಿದ್ದರೆ ಸಾಕು, ಅಪ್ಪ-ಅಮ್ಮ ಜತೆಯಲ್ಲಿರಬೇಕಂತೇನೂ ಇಲ್ಲ, ಆಗಾಗ ಬಂದರೆ ಅಡ್ಡಿಯಿಲ್ಲ’ ಎಂದಾಗ ಕೇಳಿದ ಆ ಹೆಂಗಸು ತಡವರಿಸುತ್ತಲೆ ‘ನಿಮಗೂ ಒಂದು ಮಗ ಇದ್ದ ಅಲ್ದಾ’, ಅಂದಾಗ ಏನೂ ಅರಿವಿಲ್ಲದವರಂತೆ ‘ಹೌದು’ ಎನ್ನುವ ಈ ತಾಯಿಯ ಮಾತುಗಳನ್ನು ದೂರದಿಂದ ಕೇಳುತ್ತಿದ್ದ ನಾನು ದಂಗಾಗಿ ಹೋದೆ.

    ಅಂದರೆ ಹೆಣ್ಣು ಹೆತ್ತವರು ಹೇಗೆ ಆಯ್ಕೆಗಳನ್ನು ಮಾಡುತ್ತಾರೋ, ಹಾಗೆಯೇ ಗಂಡು ಮಕ್ಕಳೂ ಕೂಡ ಆಯ್ಕೆ ಮಾಡುತ್ತಾರೆ. ಅದಕ್ಕೆ ಇವರು ಒಪ್ಪಿದ ವರನನ್ನು ಆ ವರನೇ ಒಪ್ಪುವುದಿಲ್ಲ! ಅಂದರೆ ಇವರು ಹೇಗೆ ಅವರಲ್ಲಿ ನ್ಯೂನತೆಯನ್ನು ಹುಡುಕುತ್ತಾರೊ, ಅವರೂ ಹಾಗೆಯೆ ನೋಡುತ್ತಾರೆ. ಈ ಅರಿವು ಇಬ್ಬರಿಗೂ ಇದ್ದರೆ ಒಳಿತು. ಮದುವೆಗೆ ಸಿದ್ಧರಾದ ಹೆಣ್ಣು, ಗಂಡು ಇಬ್ಬರೂ ಹೊಂದಾಣಿಕೆ ಮತ್ತು ಜವಾಬ್ದಾರಿ ಎನ್ನುವ ಎರಡು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹುಡುಕಾಟ ಆರಂಭಿಸುವುದು ಒಳ್ಳೆಯದು. ಇದನ್ನು ಪೋಷಕರಾದವರು ಮಕ್ಕಳಿಗೆ ಅರ್ಥ ಮಾಡಿಸುವುದು ಸೂಕ್ತ. ಆಯ್ಕೆಗಳು ಹೆಚ್ಚಾದಂತೆಲ್ಲ ಮುಂದಿನ ಬದುಕು ಕೂಡ ಕಷ್ಟವಾಗುತ್ತದೆ. ಮದುವೆ ಆಗುತ್ತೇವೆ ಜವಾಬ್ದಾರಿ ಬೇಡ, ಅಂದರೆ ಆಗುವುದಿಲ್ಲ. ಮದುವೆ ಆಗುವುದು ಹುಡುಗನನ್ನೆ, ಅವನ ಸಂಬಳವನ್ನೇ ಅಥವಾ ಅವನ ಮನೆಯನ್ನೆ? ಈಗಿನ ಕಾಲದಲ್ಲಿ ಎಲ್ಲಾ ಮನೆಗಳಲ್ಲೂ ಒಂದು ಅಥವಾ ಇಬ್ಬರು ಮಕ್ಕಳಿರುತ್ತಾರೆ. ಇವರು ಹೇಗೆ ನಮಗೊಬ್ಬಳೆ ಮಗಳು, ನಮ್ಮನ್ನೂ ನೋಡಿಕೊಳ್ಳಬೇಕಾಗುತ್ತದೆ ಎಂಬ ಬಯಕೆ ಮುಂದಿಡುತ್ತಾರೋ ಹಾಗೆಯೆ ಮಗಳೂ ಕೂಡ, ಅಳಿಯನಾದವನು ಹೊರುವ ಜವಾಬ್ದಾರಿಯಲ್ಲಿ ಪಾಲುದಾರಳಾಗಿರುತ್ತಾಳೆ, ಅಂದರೆ ಅವನ ಪೋಷಕರೂ ಕೂಡ ಇದನ್ನೇ ತಾನೆ ಬಯಸುವುದು? ಇದಕ್ಕೆ ಹೇಳುವುದು ಪರಸ್ಪರ ಹೊಂದಾಣಿಕೆ ಎಂದು.

    ಪಾಶ್ವಿಮಾತ್ಯ ಬದುಕಿನ ಜೀವನ ಶೈಲಿಗೆ ತೀರ ಹತ್ತಿರವಾಗಿರುವ ಇಂದಿನ ಯುವಪೀಳಿಗೆ ನಮ್ಮ ಭಾರತೀಯತೆ, ಕುಟುಂಬದ ಪರಿಕಲ್ಪನೆಯನ್ನೇ ಮರೆತಂತಿದೆ! ಕುಟುಂಬವೆ ಅಡಿಪಾಯವಾಗಿರುವ ನಮ್ಮ ಸಮಾಜ ವ್ಯವಸ್ಥೆಯಲ್ಲಿ ಸಂಸ್ಕಾರ-ಸಂಸ್ಕೃತಿ ಎರಡೂ ಅಳಿವಿನ ಅಂಚಿನಲ್ಲಿದೆಯೇನೊ ಅನಿಸುತ್ತಿದೆ. ಇದಕ್ಕೆ ನಮ್ಮ ಮನೋಬುದ್ಧಿ, ನಮ್ಮ ತಿಳುವಳಿಕೆಗಳೆ ಕಾರಣವೇನೊ ಎಂದೆನಿಸುತ್ತದೆ. ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ. ಹಾಗೆಂದು ಕೇವಲ ಒಬ್ಬರ ಹೊಂದಾಣಿಕೆಯೇ ಬದುಕಾಗಬಾರದು. ಮಕ್ಕಳಿಗೆ ತಿಳಿವಳಿಕೆ ಇಲ್ಲವೆಂದಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ತಪ್ಪು ತಿಳುವಳಿಕೆಯಿಂದಾಗಿ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪಾಲಕರೆನಿಸಿಕೊಂಡವರು ಸ್ವಾರ್ಥಿಗಳಾಗದೆ ಸಮಯಕ್ಕೆ ಸರಿಯಾದ ಬುದ್ಧಿ ಹೇಳುವುದು ಸೂಕ್ತವೆನಿಸುವುದಿಲ್ಲವೆ?

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts