More

    ಬೆಳ್ತಂಗಡಿ: ಬಿಜೆಪಿಯಿಂದ ಹರೀಶ್ ಪೂಂಜ ಪಕ್ಕಾ, ಕಾಂಗ್ರೆಸ್‌ನದ್ದೇ ಕುತೂಹಲ

    | ಭುವನ್ ಪುದುವೆಟ್ಟು ಮಂಗಳೂರು
    ಕಳೆದ ಚುನಾವಣೆ ಸಂದರ್ಭ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವವರು ಯಾರು ಎಂಬ ಪ್ರಶ್ನೆ ಇತ್ತು. ಪೈಪೋಟಿಗೆ ಹಲವು ಮುಖಗಳಿದ್ದವು. ಈ ಬಾರಿ ಗೊಂದಲಗಳಿಲ್ಲ. ದೆಹಲಿವರೆಗೂ ವರ್ಚಸ್ಸು ವಿಸ್ತರಿಸಿಕೊಂಡು ಸ್ಥಾನ ಗಟ್ಟಿ ಮಾಡಿಕೊಂಡಿರುವ ಶಾಸಕ ಹರೀಶ್ ಪೂಂಜ ಮತ್ತೆ ಕಣಕ್ಕಿಳಿಯುವುದು ಖಚಿತ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಕದನ ಶುರುವಾಗಿದೆ. ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವ ವಸಂತ ಬಂಗೇರ, ಗಂಗಾಧರ ಗೌಡ ಮತ್ತು ರಕ್ಷಿತ್ ಶಿವರಾಂ ನಡುವೆ ಹೈಕಮಾಂಡ್ ಒಲವು ಯಾರ ಮೇಲಿದೆ ಎಂಬುದು ಕುತೂಹಲ.

    2018ರಿಂದೀಚೆಗೆ ಬೆಳ್ತಂಗಡಿ ರಾಜಕೀಯದಲ್ಲಿ ಹಲವು ಸ್ಥಿತ್ಯಂತರಗಳು ಘಟಿಸಿವೆ. ಹಲವು ಚುನಾವಣೆಗಳಲ್ಲಿ ಎದುರಾಳಿಗಳಾಗಿ ಇದ್ದವರು ಈಗ ಒಂದೇ ಪಾಳಯ ಸೇರಿದ್ದಾರೆ. ಬಿಜೆಪಿಯಲ್ಲಿದ್ದ ಮಾಜಿ ಸಚಿವ ಗಂಗಾಧರ ಗೌಡ ಅವರು ಪುತ್ರ ರಂಜನ್ ಗೌಡರಿಗೆ ಕಳೆದ ಚುನಾವಣೆ ವೇಳೆ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾಂಗ್ರೆಸ್‌ಗೆ ಮರಳಿದ್ದರು. ಹೆಚ್ಚು ಕಡಿಮೆ ವರ್ಷದ ಕಾಲ ಬಿಜೆಪಿ ತಾಲೂಕು ಅಧ್ಯಕ್ಷರಾಗಿದ್ದೇ ಮೌನವಾಗಿದ್ದ ರಂಜನ್ ಕೂಡ ಬಳಿಕ ಪಕ್ಷಾಂತರ ಮಾಡಿದ್ದರು.

    ಬಿಜೆಪಿಯಲ್ಲಿ ಎರಡು, ಜನತಾ ದಳದಲ್ಲಿ ಒಮ್ಮೆ ಹಾಗೂ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಸಹಿತ ಐದು ಬಾರಿ ಶಾಸಕರಾಗಿರುವ ವಸಂತ ಬಂಗೇರ ಪಕ್ಷದ ಹೊರತಾಗಿಯೂ ವೈಯಕ್ತಿಕ ವರ್ಚಸ್ಸು ಹೊಂದಿರುವವರು. 2018ರಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಸ್ಪರ್ಧಿಸಲು ಹಿಂದೇಟು ಹಾಕಿದಾಗ ಸ್ವತಃ ಸಿದ್ದರಾಮಯ್ಯ ಹುರಿದುಂಬಿಸಿ ಕಣಕ್ಕಿಳಿಸಿದ್ದರು. ಈ ಬಾರಿಯೂ ‘ವಸಂತ ವಿನ್ಯಾಸ’ ಪುಸ್ತಕ ಬಿಡುಗಡೆ ನೆಪದಲ್ಲಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಬಂದು ಹೋಗಿದ್ದಾರೆ. ಇದರೊಂದಿಗೆ ಬಂಗೇರ ಮತ್ತೆ ಸ್ಪರ್ಧೆಗೆ ಸಿದ್ಧ ಎಂಬ ಸಂದೇಶಕ್ಕೆ ಬಲ ಸಿಕ್ಕಿದೆ.

    ಇನ್ನು ಗಂಗಾಧರ ಗೌಡ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದವರು. 2008ರ ಚುನಾವಣೆ ವೇಳೆ ವಸಂತ ಬಂಗೇರರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಾಗ ಗೌಡರು ಜೆಡಿಎಸ್‌ಗೆ ಹೋಗಿದ್ದರು. ಆಗ ವಸಂತ ಬಂಗೇರರ ಎದುರು ಸ್ಪರ್ಧಿಸಿ ಸೋತದ್ದೇ ಕೊನೆ. ನಂತರ ಸ್ಪರ್ಧಿಸಿಲ್ಲ. ಈ ನಡುವೆ, ರಂಜನ್ ಗೌಡ ತೆರೆಮರೆಗೆ ಸರಿದಂತೆ ಕಾಣುತ್ತಿದೆ.

    ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಸಹೋದರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರ ರಕ್ಷಿತ್ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಇನ್ನೊಂದು ಹೆಸರು. ಇದಕ್ಕೆ ಪಕ್ಷದ ಇಬ್ಬರೂ ಮಾಜಿ ಶಾಸಕರಿಂದ ವಿರೋಧ ವ್ಯಕ್ತವಾಗಿದೆ. ‘ಹೊರಗಿನಿಂದ ಬಂದವರಿಗೆ ಟಿಕೆಟ್ ಬೇಡ, ನಮ್ಮಿಬ್ಬರಲ್ಲಿ ಒಬ್ಬರಿಗೆ ಕೊಡಿ’ ಎಂದು ಪಟ್ಟು ಹಿಡಿದಿದ್ದಾರೆ. ‘ನಾನು ಹೊರಗಿನವನಲ್ಲ, ಇಲ್ಲೇ ಹುಟ್ಟಿದವನು. ಜನರ ಒಲವು ನನ್ನ ಕಡೆಗೇ ಇದೆ’ ಎನ್ನುತ್ತಿದ್ದಾರೆ ರಕ್ಷಿತ್. ವರಿಷ್ಠರಿಂದ ಮಾತುಕತೆ ನಡೆದರೂ ಇದುವರೆಗೆ ಸಮಸ್ಯೆ ಪರಿಹಾರವಾದಂತೆ ಕಾಣುತ್ತಿಲ್ಲ.

    ಬಿಜೆಪಿಯಲ್ಲಿ ಒಗ್ಗಟ್ಟು: ಬಿಜೆಪಿಯಲ್ಲಿ ಕಳೆದ ಚುನಾವಣೆ ವೇಳೆ ರಂಜನ್ ಗೌಡ, ಪ್ರಭಾಕರ ಬಂಗೇರ, ಸಂಪತ್ ಸುವರ್ಣ ಮತ್ತಿತರರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು. ಹರೀಶ್ ಪೂಂಜ ಶಾಸಕರಾದ ಬಳಿಕ ಸಂಪತ್ ಸುವರ್ಣ ಮೌನವಾಗಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಪ್ರಭಾಕರ ಬಂಗೇರ ಸ್ಪರ್ಧೆಯ ಉಮೇದಿನಲ್ಲಿಲ್ಲ. ಶಾಸಕರಾಗಿ ಪೂಂಜ ಉತ್ತಮ ಹೆಸರು ಗಳಿಸಿರುವುದರಿಂದ ಭಿನ್ನಸ್ವರಗಳಿಲ್ಲ. ಸಂಸದ ಸ್ಥಾನಕ್ಕೆ ಸ್ಪರ್ಧೆಯ ಅವಕಾಶ ಸಿಗಬಹುದೆಂಬ ಲೆಕ್ಕಾಚಾರಗಳು ಕೆಲಸ ಮಾಡಿದರಷ್ಟೇ ಕ್ಷೇತ್ರದಲ್ಲಿ ಹೊಸ ಮುಖದ ಪ್ರಯೋಗ ನಡೆಯಬಹುದು.

    ಇನ್ನು, ಒಂದೊಮ್ಮೆ ಅಧಿಕಾರದಲ್ಲಿದ್ದ ಜೆಡಿಎಸ್ ಈಗ ಕ್ಷೇತ್ರದಲ್ಲಿ ನಗಣ್ಯವಾಗಿದೆ. ಸಿಪಿಎಂ ಕೂಡ ಅದೇ ಸಾಲಿಗೆ ಸೇರುತ್ತದೆ. ಎಸ್‌ಡಿಪಿಐ ಸ್ಪರ್ಧೆಗಿಳಿದರೆ ಒಂದಷ್ಟು ‘ಕೈ’ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ನಿರೀಕ್ಷೆಗಳಿವೆ.

    ಯುವಕರ ನಡುವಿನ ಜಿದ್ದಾಜಿದ್ದಿ: ಹರೀಶ್ ಪೂಂಜ- ರಕ್ಷಿತ್ ಶಿವರಾಂ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಯುವಕರು. ಹೈಕೋರ್ಟ್ ವಕೀಲರಾಗಿದ್ದ ಹರೀಶ್ ಪೂಂಜ 2018ರ ವಿಧಾನಸಭಾ ಚುನಾವಣೆಗಿಂತ ಕೆಲವರ್ಷ ಮೊದಲು ಕ್ಷೇತ್ರದಲ್ಲಿ ತಿರುಗಾಟ ಆರಂಭಿಸಿ ಯುವಕರ ಕಣ್ಮಣಿಯಾದವರು. ದೇವಸ್ಥಾನ ಬ್ರಹ್ಮಕಲಶೋತ್ಸವಗಳು, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಹಲವು ಹೋರಾಟ ಸಂಘಟಿಸಿದ್ದರು. ರಕ್ಷಿತ್ ಶಿವರಾಂ ಕೂಡ ಹೈಕೋರ್ಟ್ ವಕೀಲ. ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಶಿಕ್ಷಣ, ಸಮಾಜ ಸೇವೆ, ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಮತ್ತಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಹಲವು ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ.

    ಪಕ್ಷಾಂತರದ ಕ್ಷೇತ್ರ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ವರ್ಣರಂಜಿತವಾದುದು. ವಸಂತ ಬಂಗೇರ ಮತ್ತು ಗಂಗಾಧರ ಗೌಡ ಇಬ್ಬರೂ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಉಂಡವರು. ಗಂಗಾಧರ ಗೌಡ – ಬಂಗೇರ 5 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಬಂಗೇರರ ವಿರುದ್ಧ ಗಂಗಾಧರ ಗೌಡರ ಪುತ್ರ ರಂಜನ್ ಗೌಡ ಕೂಡ ಸ್ಪರ್ಧಿಸಿದ್ದರು. ಬಂಗೇರರು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ನಿಂದ ಹರೀಶ್ ಕುಮಾರ್ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಆಗ ಎದುರಾಳಿಯಾಗಿದ್ದ ಈ ಎಲ್ಲರೂ ಈಗ ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ.

    ಕಾಂಗ್ರೆಸ್ 8, ಬಿಜೆಪಿ 5, ದಳ 1: 1957ರಿಂದ 78ರವರೆಗಿನ ಐದು ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಜಯ ಸಾಧಿಸಿತ್ತು. 1983, 1985ರಲ್ಲಿ ಎರಡು ಬಾರಿ ಬಿಜೆಪಿಗೆ ವಿಜಯಮಾಲೆ. 1989ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಗೆಲುವು. 1994ರಲ್ಲಿ ಜನತಾದಳ. 1999, 2004ರಲ್ಲಿ ಮತ್ತೆ ಬಿಜೆಪಿ. 2008, 2013ರಲ್ಲಿ ಕಾಂಗ್ರೆಸ್. 2018ರಲ್ಲಿ ಮತ್ತೆ ಬಿಜೆಪಿ ಗೆಲುವು. ಇದರೊಂದಿಗೆ ಕಾಂಗ್ರೆಸ್ 8, ಬಿಜೆಪಿ 5, ಜನತಾ ದಳ 1 ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts