More

    ಅಬಕಾರಿ ಇಲಾಖೆಗೆ ವೈಟ್​ಬೋರ್ಡ್ ವಾಹನ ! ಸರ್ಕಾರಿ ಅಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ

    ಹಿರೇಕೆರೂರ: ಪಟ್ಟಣದ ಅಬಕಾರಿ ಇಲಾಖೆಯ ವಾಹನ ಸ್ಕ್ರ್ಯಾಪ್ ಆಗಿ ಮೂರು ತಿಂಗಳು ಕಳೆದಿದ್ದು, ಇದಕ್ಕೆ ಪರ್ಯಾಯವಾಗಿ ಟ್ಯಾಕ್ಸಿ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕಿದ್ದ ಅಧಿಕಾರಿಗಳು ವೈಟ್ ಬೋರ್ಡ್ ವಾಹನ ಪಡೆದುಕೊಂಡಿರುವುದು ಬಾಡಿಗೆ ಟ್ಯಾಕ್ಸಿ ಮಾಲೀಕರ ಸಂಘದ ಆಕ್ರೋಶಕ್ಕೆ ಕಾರಣವಾಗಿದೆ.

    ಇಲ್ಲಿಯ ಅಬಕಾರಿ ಇಲಾಖೆಯ ಸ್ವಂತ ವಾಹನ ಚಲಿಸಲು ಅಸಮರ್ಥವಾಗಿದ್ದರಿಂದ ಕಳೆದ ಮಾರ್ಚ್​ನಲ್ಲಿ ಸ್ಕ್ರ್ಯಾಪ್ ಎಂದು ಪರಿಗಣಿಸಿ ನಿಲ್ಲಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ವಾಹನ ಪಡೆಯಲು ಮೇಲಧಿಕಾರಿಗಳು ಸೂಚಿಸಿದ್ದರು. ಅದರಂತೆ ವಾಹನ ಬಾಡಿಗೆ ಪಡೆಯಲು ತಿಂಗಳಿಗೆ 25 ಸಾವಿರ ರೂ.ನಂತೆ ಟೆಂಡರ್ ಕರೆಯಲಾಗಿದ್ದು, ಖಾಸಗಿ ಟ್ರಾವೆಲ್ ಏಜೆನ್ಸಿಯೊಂದಕ್ಕೆ ಟೆಂಡರ್ ಮುಗಿದಿದೆ ಎನ್ನಲಾಗಿದೆ. ಆದರೆ, ಮೂರು ತಿಂಗಳಿನಿಂದ ಅಬಕಾರಿ ಇಲಾಖೆಯಲ್ಲಿ ಬಿಳಿ ಫಲಕದ, ಅಂದರೆ ಖಾಸಗಿಯವರು ಸ್ವಂತಕ್ಕೆ ಉಪಯೋಗಿಸುವ ವಾಹನ ಬಳಸುತ್ತಿರುವುದು ಕಂಡುಬಂದಿದೆ. ಖಾಸಗಿ ಹಳದಿ ಬೋರ್ಡ್(ಟ್ಯಾಕ್ಸಿ) ವಾಹನ ಬಾಡಿಗೆ ಪಡೆಯುವ ಬದಲು ವೈಟ್ ಬೋರ್ಡ್ ಹೊಂದಿರುವ ವಾಹನ ಬಳಸುತ್ತಿರುವುದು ಸರಿಯೆ ಎಂದು ಟ್ಯಾಕ್ಸಿ ಮಾಲೀಕರು ಪ್ರಶ್ನಿಸಿದ್ದಾರೆ.

    ಈ ಕುರಿತು ಅಬಕಾರಿ ಇಲಾಖೆ ಸಬ್ ಇನ್​ಸ್ಪೆಕ್ಟರ್ ಸುಧಾ ಎಚ್.ಆರ್. ಅವರನ್ನು ಕೇಳಿದಾಗ, ‘ರಾಣೆಬೆನ್ನೂರಿನ ಟ್ಯಾಕ್ಸಿ ಏಜೆನ್ಸಿಯವರಿಗೆ ಟೆಂಡರ್ ಆಗಿದ್ದು, ಅವರು ನಮಗೆ ವಾಹನ ನೀಡಿದ್ದರು. ಟ್ಯಾಕ್ಸಿ ವಾಹನದ ಟೆಂಡರ್ ಅಥವಾ ಯಾವುದೇ ವಾಹನ ಬಾಡಿಗೆ ಪಡೆಯಲು ನಮಗೆ ಅಧಿಕಾರವಿಲ್ಲ. ಈ ಪ್ರಕ್ರಿಯೆ ಮೇಲಧಿಕಾರಿಗಳಿಗೆ ಬಿಟ್ಟಿದ್ದು, ನಾವು ಡೀಸೆಲ್ ಹಣ ಮಾತ್ರ ಭರಿಸಬಹುದು. ಅವರು ವ್ಯವಸ್ಥೆ ಮಾಡಿಕೊಟ್ಟ ವಾಹನವನ್ನು ನಾವು ಬಳಸುತ್ತಿದ್ದೇವೆ’ ಎಂದರು.

    ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಸಂಚಾರ ಆರಂಭಿಸಿದ್ದು, ನಮಗೆ ಬಾಡಿಗೆ ಇಲ್ಲದಂತಾಗಿದೆ. ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಟ್ಯಾಕ್ಸಿ ವಾಹನಗಳನ್ನು ಬಾಡಿಗೆ ಪಡೆಯಲು ಅವಕಾಶವಿದೆ. ಆದರೆ, ಮೂರು ತಿಂಗಳಿನಿಂದ ಪಟ್ಟಣದ ಅಬಕಾರಿ ಇಲಾಖೆಯಲ್ಲಿ ವೈಟ್ ಬೋರ್ಡ್ (ಸ್ವಂತಕ್ಕೆ ಬಳಸುವ) ವಾಹನವನ್ನು ಬಳಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ?

    | ಸಂತೋಷ ವಾಲಿ, ಟ್ಯಾಕ್ಸಿ ವಾಹನದ ಮಾಲೀಕ

    ನಾನು ದೂರು ಕೊಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಇಂತಹ ಮೂರು ವಾಹನಗಳನ್ನು ರಾಣೆಬೆನ್ನೂರ ಎಆರ್​ಟಿಓ ಅವರು ಸೀಜ್ ಮಾಡಿದ್ದಾರೆ. ಕಾಲ ಕಾಲಕ್ಕೆ ತೆರಿಗೆ ಕಟ್ಟುವ ಟ್ಯಾಕ್ಸಿ ವಾಹನಗಳ ಮಾಲೀಕರು, ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯವರು ಸ್ವಂತ ವಾಹನ ಬಳಕೆ ಮಾಡುತ್ತಿರುವುದು ನಮಗೆ ಗಾಯದ ಮೇಲೆ ಬರೆ ಎಳೆದಂತೆ.

    | ನೂರಹ್ಮದ್ ಅಬ್ದುಲಸಾಬ್ ಮಾದಾಪುರ, ದುರ್ಗಾದೇವಿ ಟ್ಯಾಕ್ಸಿ ವಾಹನ ಮಾಲೀಕರ ಸಂಘದ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts