More

    2006ರಲ್ಲೇ ಕ್ರಿಕೆಟ್​ನಿಂದ ನಿವೃತ್ತಿಗೆ ಮುಂದಾಗಿದ್ದ ಎಂಎಸ್​ ಧೋನಿ!

    ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಅವರ ನಿವೃತ್ತಿಯ ಬಗ್ಗೆ ಕಳೆದ ಕೆಲ ಸಮಯಗಳಿಂದ ಸುದ್ದಿ ಹರಿದಾಡುತ್ತಲೇ ಇದ್ದರೂ, ಕಳೆದ ಶನಿವಾರ ಅವರು ದಿಢೀರ್​ ವಿದಾಯ ಪ್ರಕಟಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆದರೆ ಇದೇ ಧೋನಿ 2006ರಲ್ಲೇ ನಿವೃತ್ತಿಗೆ ಮುಂದಾಗಿದ್ದರು ಎಂಬ ವಿಷಯ ನಿಮಗೆ ಗೊತ್ತೇ? ಧೋನಿ ಅವರ ಮಾಜಿ ಸಹ-ಆಟಗಾರ ವಿವಿಎಸ್​ ಲಕ್ಷ್ಮಣ್​ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಹಾಗಾದರೆ ಧೋನಿ ಅವರು ಆಗಲೇ ಅಂಥದ್ದೊಂದು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಕ್ಕೆ ಕಾರಣವೇನೆಂದು ಗೊತ್ತೇ? ಅದುವೇ ಟೆಸ್ಟ್​ ಕ್ರಿಕೆಟ್​ ಶತಕ!

    ಹೌದು, 2006 ಧೋನಿ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಂಬೆಗಾಲಿಡುತ್ತಿದ್ದ ವರ್ಷವಾಗಿತ್ತು. ಆ ವರ್ಷ ಭಾರತ ತಂಡದ ಜತೆಗೆ ಪಾಕಿಸ್ತಾನ ಪ್ರವಾಸ ತೆರಳಿದ್ದ ಧೋನಿ, ಫೈಸಲಾಬಾದ್​ ಟೆಸ್ಟ್​ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸಿ ಗಮನ ಸೆಳೆದಿದ್ದರು. ಆ ಶತಕ ಪೂರೈಸಿದ ಬಳಿಕ ಡ್ರೆಸ್ಸಿಂಗ್​ ರೂಂಗೆ ಮರಳಿದ ಧೋನಿ, ‘ನಾನು ಈಗಲೇ ನನ್ನ ವಿದಾಯವನ್ನು ಪ್ರಕಟಿಸುವೆ. ನಾನು ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಬಾರಿಸಿರುವೆ. ನನಗಿದುವೇ ಸಾಕು. ಟೆಸ್ಟ್​ ಕ್ರಿಕೆಟ್​ನಲ್ಲಿ ನನಗೆ ಇದಕ್ಕಿಂತ ಹೆಚ್ಚಿನದು ಏನೂ ಬೇಡ’ ಎಂದಿದ್ದರು ಎಂದು ವಿವಿಎಸ್​ ಲಕ್ಷ್ಮಣ್​ ಅವರು ಸ್ಟಾರ್​ ಸ್ಪೋರ್ಟ್ಸ್​ನ ಚಾಟ್​ ಶೋನಲ್ಲಿ ಮೆಲುಕು ಹಾಕಿದ್ದಾರೆ.

    ಆ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಪಾಕಿಸ್ತಾನ ತಂಡ 588 ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು. ಪಾಕ್​ ನಾಯಕ ಇಂಜಮಾಮ್​ ಉಲ್​ ಹಕ್​ ಮತ್ತು ಶಾಹಿದ್​ ಅಫ್ರಿದಿ ಶತಕ ಸಿಡಿಸಿ ಮಿಂಚಿದ್ದರು. ಪ್ರತಿಯಾಗಿ ಭಾರತ ತಂಡದ ಪರ ಧೋನಿ ಮತ್ತು ಇರ್ಫಾನ್​ ಪಠಾಣ್​ 6ನೇ ವಿಕೆಟ್​ಗೆ ಭರ್ಜರಿ ಜತೆಯಾಟವಾಡಿ ಪಂದ್ಯವನ್ನು ಡ್ರಾ ಸಾಧಿಸಲು ನೆರವಾಗಿದ್ದರು. ಧೋನಿ 148 ರನ್​ ಬಾರಿಸಿ ಸ್ಪಿನ್ನರ್​ ಡ್ಯಾನಿಶ್​ ಕನೇರಿಯಾ ಎಸೆತದಲ್ಲಿ ಔಟಾಗಿದ್ದರು. ಆ ಇನಿಂಗ್ಸ್​ನ ಬಳಿಕ ಧೋನಿ ಡ್ರೆಸ್ಸಿಂಗ್​ ರೂಂಗೆ ಮರಳಿ ಹೇಳಿದ ಮಾತಿನಿಂದ ಇಡೀ ತಂಡಕ್ಕೆ ಅಚ್ಚರಿಯಾಗಿತ್ತು. ಆದರೆ ಧೋನಿ ಯಾವಾಗಲೂ ಹಾಗೆಯೇ ಇರುವುದು ಎಂದು ವಿವಿಎಸ್​ ಲಕ್ಷ್ಮಣ್​ ಹೇಳಿದ್ದಾರೆ.

    ಇದನ್ನೂ ಓದಿ: ನನ್ನ ಮೊದಲ ಕಾರು ಹುಡುಕಲು ನೆರವಾಗಿ, ಅಭಿಮಾನಿಗಳಿಗೆ ಸಚಿನ್​ ತೆಂಡುಲ್ಕರ್​ ಮೊರೆ!

    ಫಲಿತಾಂಶಗಳಿಂದ ಭಾವನಾತ್ಮಕವಾಗಿ ಪ್ರತ್ಯೇಕವಾಗಿರುತ್ತಿದ್ದರು
    ಧೋನಿ ಯಾವಾಗಲೂ ಪಂದ್ಯದ ಫಲಿತಾಂಶಗಳಿಂದ ಭಾವನಾತ್ಮಕವಾಗಿ ಪ್ರತ್ಯೇಕವಾಗಿರುತ್ತಿದ್ದರು. ಅದುವೇ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಲಕ್ಷ್ಮಣ್​ ಅಭಿಪ್ರಾಯಪಟ್ಟಿದ್ದಾರೆ.

    ‘ಭಾರತ ತಂಡದ ನಾಯಕತ್ವ ಅತ್ಯಂತ ಕಠಿಣವಾದ ಸವಾಲು ಎಂದು ನಾನು ಯಾವಾಗಲೂ ತಿಳಿದುಕೊಂಡಿರುವೆ. ಯಾಕೆಂದರೆ ಅದರಿಂದ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ ಧೋನಿ ಯಾವಾಗಲೂ ಫಲಿತಾಂಶಗಳಿಂದ ಭಾವನಾತ್ಮಕವಾಗಿ ದೂರ ಇರುತ್ತಿದ್ದ ಕಾರಣ ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು. ಅವರು ಕ್ರಿಕೆಟ್​ ಪ್ರೇಮಿಗಳು ಮಾತ್ರವಲ್ಲ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ನಮ್ಮ ದೇಶದ ರಾಯಭಾರಿಯೂ ಆಗಿದ್ದಾರೆ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಅವರು ಅಷ್ಟೊಂದು ಗೌರವಿಸಲ್ಪಡುತ್ತಾರೆ’ ಎಂದು ವಿವಿಎಸ್​ ಲಕ್ಷ್ಮಣ್​ ವಿವರಿಸಿದ್ದಾರೆ.

    ಭವಿಷ್ಯದಲ್ಲಿ ಯಾವಾಗಲೂ ಧೋನಿ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ಗಳಿಗೆ ಮಾದರಿಯಾಗಿರುತ್ತಾರೆ. ಅವರ ಕೊಡುಗೆ ಭಾರತೀಯ ಕ್ರಿಕೆಟ್​ಗೆ ಮಾತ್ರವಲ್ಲ ವಿಶ್ವ ಕ್ರಿಕೆಟ್​ಗೂ ಸಾಕಷ್ಟಿದೆ ಎಂದು ಲಕ್ಷ್ಮಣ್​ ಹೇಳಿದ್ದಾರೆ. ಎಲ್ಲ ಐಸಿಸಿ ಟ್ರೋಫಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಧೋನಿ ಅವರದಾಗಿದೆ.

    ಅಥಿಯಾ ಶೆಟ್ಟಿ ಈಜುಡುಪು ಚಿತ್ರಕ್ಕೆ ಕೆಎಲ್​ ರಾಹುಲ್​ ಕಮೆಂಟ್​ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts