More

    ಧಾರವಾಡದಲ್ಲಿ ಅತಿಕ್ರಮಣ ತೆರವು ಯಾವಾಗ?

    ಧಾರವಾಡ: ರಸ್ತೆ, ಕೆರೆ, ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಅದರ ಅನುಷ್ಠಾನಕ್ಕೆ ಮುಂದಾಗಿರುವ ಜಿಲ್ಲಾಡಳಿತ ಒತ್ತುವರಿಯಾದ ಕಟ್ಟಡಗಳು, ಇತರ ಸರ್ಕಾರಿ ಆಸ್ತಿಯನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲು ಯೋಜಿಸಿದೆ. ಅದಕ್ಕೂ ಮೊದಲು ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರೂ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.

    ನಗರದಲ್ಲಿ ಒತ್ತುವರಿದಾರರದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಅಧಿಕಾರಿಗಳ ಆಡಳಿತವಿರುವ ಪಾಲಿಕೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುವಂತೆ ಅತಿಕ್ರಮಿಸಿದ್ದರೂ ಕೇಳುವವರಿಲ್ಲ.

    ಕಳೆದ ತಿಂಗಳು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ನಡೆಸಿ, ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲ ದಿನ ಕಾಲಾವಕಾಶ ನೀಡಿ ಸ್ವಯಂಪ್ರೇರಣೆಯಿಂದ ಒತ್ತುವರಿ ತೆರವು ಮಾಡುವಂತೆ ವ್ಯಾಪಾರಸ್ಥರಿಗೆ ಗಡುವು ನೀಡಿದ್ದರು. ಆದರೆ, ನಗರದಲ್ಲಿ ಸ್ವಯಂಪ್ರೇರಿತ ತೆರವು ನಡೆದ ಉದಾಹರಣೆ ಇಲ್ಲ.

    ಕಳೆದ ಕೆಲ ದಿನಗಳಿಂದ ಪಾಲಿಕೆಯಿಂದ ಹುಬ್ಬಳ್ಳಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಜೆಸಿಬಿಗಳು ಗರ್ಜಿಸುತ್ತಿದ್ದು, ಅಧಿಕಾರಿಗಳು ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ, ಧಾರವಾಡದಲ್ಲಿ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ.

    ನಗರದ ವಿಜಯಾ ರಸ್ತೆ, ಮಾರುಕಟ್ಟೆ, ಸುಭಾಸ ರಸ್ತೆ, ಸಿಬಿಟಿ ಪ್ರದೇಶ, ಟಿಕಾರೆ ರಸ್ತೆ, ಗಾಂಧಿ ಚೌಕ್, ನೆಹರೂ ಮಾರುಕಟ್ಟೆ, ಅಕ್ಕಿಪೇಟೆ, ಸಂಗಮ ವೃತ್ತ, ಸೇರಿದಂತೆ ಪ್ರಮುಖ ರಸ್ತೆಗಳ ಅಕ್ಕಪಕ್ಕ ಅಂಗಡಿಕಾರರು ಒತ್ತುವರಿ ಮಾಡಿಕೊಂಡಿದ್ದಾರೆ. ಫುಟ್​ಪಾತ್​ಗಳನ್ನು ಅತಿಕ್ರಮಿಸಿ ಸಾರ್ವಜನಿಕರು ನಡೆದಾಡಲೂ ಆಗದಂತೆ ಅಡ್ಡಿ ಉಂಟು ಮಾಡಿದ್ದಾರೆ. ಫುಟ್​ಪಾತ್​ಗಳಲ್ಲಿ ಮೆಟ್ಟಿಲುಗಳನ್ನು, ಕಬ್ಬಿಣದ ಗ್ರಿಲ್​ಗಳನ್ನು ಅಳವಡಿಸಿಕೊಂಡಿದ್ದಾರೆ.

    ಮಣಿವಣ್ಣನ್ ಅವಧಿಯಲ್ಲಿ ಆಪರೇಷನ್

    ಐಎಎಸ್ ಅಧಿಕಾರಿ ಮಣಿವಣ್ಣನ್ ಪಾಲಿಕೆ ಆಯುಕ್ತರಾಗಿದ್ದಾಗ ನಡೆದ ತೆರವು ಧಾರವಾಡದ ಮಟ್ಟಿಗೆ ಐತಿಹಾಸಿಕ ಕಾರ್ಯಾಚರಣೆ. ಲಂಗುಲಗಾಮಿಲ್ಲದೆ ರಸ್ತೆ, ಫುಟ್​ಪಾತ್​ಗಳನ್ನು ಅತಿಕ್ರಮಿಸಿದ್ದ ವ್ಯಾಪಾರಸ್ಥರಿಗೆ ದೊಡ್ಡ ಶಾಕ್ ಕೊಟ್ಟಿದ್ದರು. ನಗರದ ಬಹುತೇಕ ರಸ್ತೆಗಳು 5-6 ಅಡಿಗಳಷ್ಟು ಅತಿಕ್ರಮಣವಾಗಿದ್ದ ಸಂದರ್ಭದಲ್ಲಿ ಜೆಸಿಬಿಗಳೊಂದಿಗೆ ರಸ್ತೆಗಿಳಿದು ತೆರವುಗೊಳಿಸಿದ್ದರು.

    ‘ಮೇಜರ್’ ತೆರವು ಕಾರ್ಯಾಚರಣೆ

    ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಧಾರವಾಡದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿತ್ತು. ಸುಭಾಸ ರಸ್ತೆ, ತರಕಾರಿ ಮಾರುಕಟ್ಟೆ, ವಿಜಯಾ ರಸ್ತೆ, ಸಿಬಿಟಿ ಸುತ್ತಮುತ್ತ, ಹಳೇ ಬಸ್ ನಿಲ್ದಾಣದ ಹತ್ತಿರ ಕಾರ್ಯಾಚರಣೆ ನಡೆಸಿದ್ದರು. ಸಾಕಷ್ಟು ಒತ್ತಡ ಬಂದರೂ ಪರಿಗಣಿಸದ ಮೇಜರ್, ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದ್ದರು. ಜೆಸಿಬಿಗಳನ್ನು ಬಳಸಿ ಅತಿಕ್ರಮಣ ತೆರವು ಮಾಡಿಸಿದ್ದರು. ತೆರವಾಗಿದ್ದ ಜಾಗ ಮತ್ತೆ ಒತ್ತುವರಿಯಾಗಿದ್ದು, ಈಗ ಯಾರೂ ಕೇಳುವವರಿಲ್ಲದಂತಾಗಿದೆ.

    ಮಣಿವಣ್ಣನ್ ಅವರು ಒತ್ತಡಕ್ಕೆ ಮಣಿಯದೆ, ಗಟ್ಟಿತನದಿಂದ ತೆರವು ಕಾರ್ಯಾಚರಣೆ ನಡೆಸಿದ್ದರು. ನಂತರ ಬಂದ ಆಯುಕ್ತರಿಂದ ನಡೆದ ಸಣ್ಣಪುಟ್ಟ ಕಾರ್ಯಾಚರಣೆ ತೋರಿಕೆಗೆ ಸೀಮಿತವಾಗಿವೆ. ನಗರದಲ್ಲಿ ರಸ್ತೆ, ಫುಟ್​ಪಾತ್ ಅತಿಕ್ರಮಣ ಬಹಳ ಆಗಿದ್ದು, ಶಾಸಕರಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ಗಟ್ಟಿತನ ತೋರಿ ಕಾರ್ಯಾಚರಣೆ ನಡೆಸುತ್ತಿಲ್ಲ.
    | ಲಲಿತ್ ಭಂಡಾರಿ, ವ್ಯಾಪಾರಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts