More

    ಐಪಿಎಲ್ 14ನೇ ಆವೃತ್ತಿಯಲ್ಲಿ ಹೊಸದೇನಿದೆ ಗೊತ್ತೇ?

    ಬೆಂಗಳೂರು: ಐಪಿಎಲ್ ಎಂಬ ಟಿ20 ಲೀಗ್ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಉನ್ನತ ಗುಣಮಟ್ಟದ ಈ ಟೂರ್ನಿ ಕ್ರಿಕೆಟಿಗರ ಆಟ ಮತ್ತು ಆರ್ಥಿಕತೆಯನ್ನು ಸಾಕಷ್ಟು ಶ್ರೀಮಂತಗೊಳಿಸಿದೆ. ಕಳೆದ 13 ವರ್ಷಗಳಿಂದ ನಡೆಯುತ್ತ ಬಂದಿರುವ ಈ ಕ್ರಿಕೆಟ್ ಹಬ್ಬ, ಸದಾ ಹೊಸತನದ ಮೂಲಕವೂ ಗಮನಸೆಳೆದಿದೆ. ಕ್ರಿಕೆಟ್ ನಿಯಮದ ಹಲವು ಹೊಸ ಪ್ರಯೋಗಗಳಿಗೂ ಐಪಿಎಲ್ ವೇದಿಕೆಯಾಗಿದೆ. ಕರೊನಾ ಕಾಲದಲ್ಲಿ ಬಯೋಬಬಲ್, ಆರ್‌ಟಿ-ಪಿಸಿಆರ್ ಟೆಸ್ಟ್, ಖಾಲಿ ಕ್ರೀಡಾಂಗಣದ ಪಂದ್ಯಗಳು ಈಗಾಗಲೆ ಆಟಗಾರರಿಗೆ ಅಭ್ಯಾಸವಾಗಿಬಿಟ್ಟಿದೆ. ಇದರ ಹೊರತಾಗಿ ಶುಕ್ರವಾರ ಆರಂಭಗೊಂಡ ಐಪಿಎಲ್ 14ನೇ ಆವೃತ್ತಿ ಇನ್ನೂ ಹಲವು ಹೊಸತನಗಳಿಂದ ಕೂಡಿದೆ.

    ತವರಲ್ಲಿದ್ದರೂ, ತಟಸ್ಥ ಸ್ಥಳದಲ್ಲಿ ಪಂದ್ಯ
    ಐಪಿಎಲ್ ತಂಡಗಳಿಗೆ ತವರಿನಿಂದ ಹೊರಗೆ ಆಡುವ ಅನುಭವ ಹೊಸದಲ್ಲ. 2009 (ದಕ್ಷಿಣ ಆಫ್ರಿಕಾ), 2014ರಲ್ಲಿ (ಯುಎಇಯಲ್ಲಿ ಮೊದಲಾರ್ಧ) ಸಾರ್ವತ್ರಿಕ ಚುನಾವಣೆಯಿಂದ ವಿದೇಶದಲ್ಲಿ ಪಂದ್ಯಗಳು ನಡೆದಿದ್ದರೆ, ಕಳೆದ ವರ್ಷ ಕರೊನಾ ಕಾರಣದಿಂದ ಯುಎಇಯಲ್ಲಿ ಪಂದ್ಯಗಳನ್ನು ಆಡಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಯುತ್ತಿದ್ದರೂ, ಯಾವುದೇ ತಂಡಕ್ಕೆ ತವರಿನಲ್ಲಿ ಪಂದ್ಯಗಳನ್ನು ಆಡುವ ಅದೃಷ್ಟವಿಲ್ಲ. ಕರೊನಾ ಕಾರಣದಿಂದಾಗಿ ದೇಶದ 6 ನಗರಗಳಲ್ಲಷ್ಟೇ ಪಂದ್ಯಗಳು ನಿಗದಿಯಾಗಿರುವುದರಿಂದ, ಬಿಸಿಸಿಐ ಎಲ್ಲ ತಂಡಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸುತ್ತಿದೆ.

    ಇದನ್ನೂ ಓದಿ: ಐಪಿಎಲ್ ಪದಾರ್ಪಣೆಗೆ ಸಜ್ಜಾದ ಹೊಸಮುಖಗಳು ಇವರು…

    2ನೇ ಸೂಪರ್ ಓವರ್ ಅನುಮಾನ
    2019ರ ವಿಶ್ವಕಪ್ ಫೈನಲ್ ಪಂದ್ಯ ಮತ್ತು ಸೂಪರ್ ಓವರ್ ಟೈ ಆಗಿದ್ದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಐಸಿಸಿ, ಸ್ಪಷ್ಟ ಫಲಿತಾಂಶ ಬರುವವರೆಗೆ ಸೂಪರ್ ಓವರ್ ಮುಂದುವರಿಸುವ ಹೊಸ ನಿಯಮ ಜಾರಿಗೆ ತಂದಿತ್ತು. ಇದರಿಂದ ಕಳೆದ ಐಪಿಎಲ್‌ನಲ್ಲಿ ಮುಂಬೈ-ಪಂಜಾಬ್ ನಡುವಿನ ಪಂದ್ಯ 2 ಸೂಪರ್ ಓವರ್ ಕಂಡಿತ್ತು. ಈ ಪಂದ್ಯ ಮುಗಿದಾಗ ತಡರಾತ್ರಿಯಾಗಿತ್ತು. ಈ ಬಾರಿ ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಿರುವ ಬಿಸಿಸಿಐ, ಪಂದ್ಯ ಮುಗಿಯುವ ನಿಗದಿತ ಸಮಯಕ್ಕಿಂತ 1 ಗಂಟೆ ನಂತರದೊಳಗಾದರೆ ಮಾತ್ರ 2ನೇ ಸೂಪರ್ ಓವರ್ ಆಡಿಸಬಹುದೆಂದು ಹೇಳಿದೆ. ಇಲ್ಲದಿದ್ದರೆ ಮೊದಲ ಸೂಪರ್ ಓವರ್‌ನಲ್ಲಿ ಟೈ ಆದಾಗ ಪಂದ್ಯವನ್ನು ಅಲ್ಲಿಗೆ ಸ್ಥಗಿತಗೊಳಿಸಿ, ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲು ನಿರ್ಧರಿಸಲಾಗಿದೆ.

    ಇಬ್ಬರು ಹೊಸ ನಾಯಕರು
    ಐಪಿಎಲ್‌ನಲ್ಲಿ ಈ ಬಾರಿ 2 ತಂಡಗಳ ನಾಯಕರು ಬದಲಾಗಿದ್ದಾರೆ. ಅವರಿಬ್ಬರೂ, ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳೆಂಬುದು ವಿಶೇಷವಾಗಿದೆ. ಕೇರಳದ ಸಂಜು ಸ್ಯಾಮ್ಸನ್ ಅಚ್ಚರಿಯ ರೀತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ಬಹುತೇಕ ವಿದೇಶಿ ಸ್ಟಾರ್ ಆಟಗಾರರಿಂದಲೇ ಕೂಡಿರುವ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಕಳೆದ ಆಸೀಸ್ ಪ್ರವಾಸದಿಂದಲೂ ಭರ್ಜರಿ ಫಾರ್ಮ್‌ನಲ್ಲಿರುವ ರಿಷಭ್ ಪಂತ್, ಗಾಯಾಳು ಶ್ರೇಯಸ್ ಅಯ್ಯರ್ ಗೈರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಬಡ್ತಿ ಪಡೆದಿದ್ದಾರೆ. 23 ವರ್ಷದ ಪಂತ್ ನಾಯಕರಾಗಿಯೂ ಮಿಂಚಿದರೆ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನೂ ಮುನ್ನಡೆಸುವ ಅದೃಷ್ಟ ಒಲಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

    ವಿವೋ ವಾಪಸ್
    ಭಾರತದ ಜತೆಗಿನ ಗಡಿ ವಿವಾದದ ಬಳಿಕ ಚೀನಾ ವಿರುದ್ಧ ವ್ಯಕ್ತವಾದ ಜನಾಕ್ರೋಶದಿಂದಾಗಿ ಮೊಬೈಲ್ ಕಂಪನಿ ‘ವಿವೋ’ ಕಳೆದ ವರ್ಷದ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಹೀಗಾಗಿ ಬಿಸಿಸಿಐ 2020ರ ಆವೃತ್ತಿಗೆ ‘ಡ್ರೀಮ್ ಇಲೆವೆನ್’ ಜತೆಗೆ 222 ಕೋಟಿ ರೂ.ಗೆ ಮಧ್ಯಂತರ ಒಪ್ಪಂದ ಮಾಡಿಕೊಂಡಿತ್ತು. ವಿವೋ ಹಿಂದಿನ ಒಪ್ಪಂದದಂತೆ ಈ ವರ್ಷವೂ 440 ಕೋಟಿ ರೂ. ಮೊತ್ತವನ್ನು ಪಾವತಿಸಲಿದೆ. ಹೀಗಾಗಿ ಬಿಸಿಸಿಐ ಈ ಬಾರಿ, ಕಳೆದ ವರ್ಷದ 4 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ.

    ಸಮಯ ತಪ್ಪಿದರೆ ದಂಡ
    ಟಿ20 ಪಂದ್ಯಗಳೆಂದರೆ 3 ಗಂಟೆಯ ಆಟ ಎನ್ನಲಾಗುತ್ತದೆ. ಆದರೆ ಐಪಿಎಲ್ ಪಂದ್ಯಗಳು ಕೆಲವೊಮ್ಮೆ ನಾಲ್ಕು ಅಥವಾ ನಾಲ್ಕೂವರೆ ಗಂಟೆಗಳ ಕಾಲವೂ ಸಾಗುತ್ತದೆ. ಇದರಿಂದ ಕೆಲ ಪಂದ್ಯಗಳು ಮುಗಿಯುವಾಗ ತಡರಾತ್ರಿಯಾಗುತ್ತವೆ. ಹೀಗಾಗಿ ಬಿಸಿಸಿಐ ಈ ಬಾರಿ ಪಂದ್ಯಗಳಲ್ಲಿ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಓವರ್‌ಗತಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. 90 ನಿಮಿಷಗಳಲ್ಲೇ 20 ಓವರ್‌ಗಳ ಇನಿಂಗ್ಸ್ ಮುಗಿಯಬೇಕೆಂದು ಕಟ್ಟಾಜ್ಞೆ ಮಾಡಲಾಗಿದೆ. ಓವರ್‌ರೇಟ್ ಪಾಲನೆಯ ಹೊಣೆಯನ್ನು 4ನೇ ಅಂಪೈರ್‌ಗೆ ಒಪ್ಪಿಸಲಾಗಿದ್ದು, ತಪ್ಪಿದರೆ ತಂಡದ ನಾಯಕನಿಗೆ 12ರಿಂ 30 ಲಕ್ಷ ರೂ.ವರೆಗೆ ದಂಡ ಮತ್ತು ಒಂದು ಲೀಗ್ ಪಂದ್ಯ ನಿಷೇಧದ ನಿಯಮವನ್ನೂ ಸೇರಿಸಿಕೊಂಡಿದೆ.

    ತೃತೀಯ ಅಂಪೈರ್‌ಗೆ ಹೆಚ್ಚಿನ ಅಧಿಕಾರ
    ಕಳೆದ ಐಪಿಎಲ್‌ನಲ್ಲಿ ‘ಶಾರ್ಟ್ ರನ್’ ಮತ್ತು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ‘ಸಾಫ್ಟ್​ ಸಿಗ್ನಲ್’ಗಳಿಂದ ಸಾಕಷ್ಟು ವಿವಾದವೆದ್ದಿತ್ತು. ಮೈದಾನದ ಅಂಪೈರ್‌ಗಳ ಈ ಎಡವಟ್ಟುಗಳನ್ನು ತಪ್ಪಿಸಲು ಐಪಿಎಲ್‌ನಲ್ಲಿ ಈ ಬಾರಿ ತೃತೀಯ ಅಂಪೈರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಕಳೆದ ಬಾರಿಯೇ ನೋಬಾಲ್ ನೀಡುವ ಅಧಿಕಾರವನ್ನು ಟಿವಿ ಅಂಪೈರ್‌ಗೆ ನೀಡಲಾಗಿದ್ದರೆ, ಈ ಬಾರಿ ವಿವಾದಾತ್ಮಕ ಕ್ಯಾಚ್ ವೇಳೆ ಮೈದಾನದ ಅಂಪೈರ್ ‘ಸಾಫ್ಟ್​ ಸಿಗ್ನಲ್’ ನೀಡದಿರುವಂತೆ ಸೂಚಿಸಲಾಗಿದೆ. ಇದರಿಂದ ತೃತೀಯ ಅಂಪೈರ್ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ. ಶಾರ್ಟ್ ರನ್ ವಿಚಾರದಲ್ಲೂ ತೃತೀಯ ಅಂಪೈರ್‌ಗೆ ಮಧ್ಯಪ್ರವೇಶದ ಅಧಿಕಾರ ನೀಡಲಾಗಿದೆ.

    ಸಂಗಕ್ಕರ ಈಗ ಮಾರ್ಗದರ್ಶಕ
    ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಕ್ರಿಕೆಟಿಗರು ಆಡುತ್ತಿಲ್ಲ. ಆದರೆ ತಂಡಗಳ ಮಾರ್ಗದರ್ಶಕರ ಬಳಗದಲ್ಲಿ ಲಂಕಾದ ದಿಗ್ಗಜ ಕ್ರಿಕೆಟಿಗರಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮಹೇಲ ಜಯವರ್ಧನೆ ಈಗಾಗಲೆ ಕೋಚ್ ಆಗಿದ್ದರೆ, ಲಂಕಾದ ಮತ್ತೋರ್ವ ಮಾಜಿ ನಾಯಕ ಕುಮಾರ ಸಂಗಕ್ಕರ ಈ ಬಾರಿ ‘ಕ್ರಿಕೆಟ್ ಡೈರೆಕ್ಟರ್’ ಆಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.

    ಪಂಜಾಬ್ ಹೆಸರು ಬದಲು
    ಡೆಲ್ಲಿ ಡೇರ್‌ಡೆವಿಲ್ಸ್ ತಂಡ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಗಿ ಬದಲಾದ ಬಳಿಕ ಕಳೆದ ವರ್ಷ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೂ ಈ ಬಾರಿ ಅದೃಷ್ಟದ ಹುಡುಕಾಟದಲ್ಲಿ ಹೆಸರು ಬದಲಾಯಿಸಿಕೊಂಡಿದ್ದು, ಪಂಜಾಬ್ ಕಿಂಗ್ಸ್ ಎಂಬ ಹೊಸ ಹೆಸರು ಪಡೆದುಕೊಂಡಿದೆ. ಲಾಂಛನವೂ ಬದಲಾಗಿದೆ.

    ಐಪಿಎಲ್​ ಕಮಾಲ್​: ಹೇಗಿದೆ 8 ತಂಡಗಳ ಬಲಾಬಲ? ವೇಳಾಪಟ್ಟಿ ಒಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts