More

    ಐಪಿಎಲ್ ಪದಾರ್ಪಣೆಗೆ ಸಜ್ಜಾದ ಹೊಸಮುಖಗಳು ಇವರು…

    ಬೆಂಗಳೂರು: ‘ಪ್ರತಿಭೆಗೆ ಅವಕಾಶ ಸಿಗುವ ವೇದಿಕೆ’ ಎಂದು ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ದೊಡ್ಡದಾಗಿ ಬರೆಯಲಾಗಿದೆ. ಅದಕ್ಕೆ ತಕ್ಕಂತೆ ಈ ಬಾರಿಯೂ ಐಪಿಎಲ್‌ನಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಅನುಭವಿ, ಸ್ಟಾರ್ ಕ್ರಿಕೆಟಿಗರ ನಡುವೆ ಈ ಹೊಸ ಕ್ರಿಕೆಟಿಗರೂ ಐಪಿಎಲ್ 14ನೇ ಆವೃತ್ತಿಯಲ್ಲಿ ಗಮನ ಸೆಳೆಯಲು ಸಜ್ಜಾಗುತ್ತಿದ್ದಾರೆ. ಈ ಪೈಕಿ ಕೆಲವರು ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ ಅವಕಾಶ ಪಡೆದುಕೊಂಡಿದ್ದರೆ, ಕೆಲ ವಿದೇಶಿ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ದೇಶದ ಪರ ತೋರಿದ ಉತ್ತಮ ನಿರ್ವಹಣೆಯಿಂದ ಐಪಿಎಲ್‌ನಲ್ಲೂ ದೊಡ್ಡ ಮೊತ್ತದ ಆರ್ ಪಡೆದುಕೊಂಡಿದ್ದಾರೆ. ಅಂಥ ಕೆಲ ಹೊಸ ಆಟಗಾರರ ಸಂಕ್ಷಿಪ್ತ ವಿವರ ಇಲ್ಲಿದೆ.

    ಅರ್ಜುನ್ ತೆಂಡುಲ್ಕರ್
    ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದರೆ, ಈ ಬಾರಿ 20 ಲಕ್ಷ ರೂ. ಮೂಲಬೆಲೆಗೆ ತಂಡದ ಸದಸ್ಯರಾಗಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ 21 ವರ್ಷದ ಅರ್ಜುನ್ ಕಳೆದ ಹರಾಜಿನಲ್ಲಿ ಕೊನೇಕ್ಷಣದಲ್ಲಿ ಆಲ್ರೌಂಡರ್ ಕೆಟಗರಿಯಲ್ಲಿ ಮುಂಬೈ ತಂಡಕ್ಕೆ ಎಂಟ್ರಿ ಪಡೆದಿದ್ದರು. ಈ ಮೂಲಕ ಸಚಿನ್-ಅರ್ಜುನ್‌ಗೆ ಐಪಿಎಲ್‌ನಲ್ಲಿ ಆಡಿದ ಮೊದಲ ತಂದೆ-ಮಗ ಎನಿಸುವ ವಿಶೇಷ ಅವಕಾಶ ಲಭಿಸಿದೆ.

    ರಿಲೀ ಮೆರಿಡಿತ್
    ಆಸ್ಟ್ರೇಲಿಯಾದ ಎಡಗೈ ವೇಗಿ ರಿಲೀ ಮೆರಿಡಿತ್ ಕಳೆದ ಹರಾಜಿನಲ್ಲಿ 40 ಲಕ್ಷ ರೂ. ಮೂಲಬೆಲೆಯಿಂದ 8 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್‌ಗೆ ಬಿಕರಿಯಾಗಿದ್ದರು. ಬಿಗ್ ಬಾಷ್‌ನಲ್ಲಿ ಹೋಬರ್ಟ್ ಹರಿಕೇನ್ ಪರ ಮಾರಕ ದಾಳಿ ನಡೆಸುತ್ತ ಬಂದಿರುವ 24 ವರ್ಷದ ಮೆರಿಡಿತ್ ಈ ಬಾರಿ ಐಪಿಎಲ್‌ನಲ್ಲೂ ಎದುರಾಳಿ ತಂಡಗಳನ್ನು ಕಾಡಲು ಸಜ್ಜಾಗಿದ್ದಾರೆ. ಆಸೀಸ್ ಪರ ಇದುವರೆಗೆ 3 ಟಿ20 ಪಂದ್ಯವಾಡಿದ್ದು 4 ವಿಕೆಟ್ ಕಬಳಿಸಿದ್ದಾರೆ.

    ಶಾರುಖ್ ಖಾನ್
    ‘ಈ ಬಾರಿ ಐಪಿಎಲ್‌ನಲ್ಲಿ ಪ್ರೀತಿ ಝಿಂಟಾ ಟೀಮ್‌ನಲ್ಲಿ ಶಾರುಖ್ ಖಾನ್ ಆಡಲಿದ್ದಾರೆ’ ಎಂಬ ಸುದ್ದಿಯೇ ಕಳೆದ ಹರಾಜಿನ ವೇಳೆ ಸಾಕಷ್ಟು ಸದ್ದು ಮಾಡಿತ್ತು. ಈ ಶಾರುಖ್ ಖಾನ್ ತಮಿಳುನಾಡಿನ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದು, 5.25 ಕೋಟಿ ರೂ. ಬೆಲೆಗೆ ಪಂಜಾಬ್ ಕಿಂಗ್ಸ್ ಸೇರಿದ್ದರು. 20 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶಾರುಖ್ ಖರೀದಿಗೆ ಡೆಲ್ಲಿ, ಆರ್‌ಸಿಬಿ ತಂಡಗಳೂ ಪೈಪೋಟಿ ನಡೆಸಿದ್ದವು. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮ್ಯಾಚ್ ಫಿನಿಷರ್ ಪಾತ್ರದ ಮೂಲಕ ಗಮನಸೆಳೆದಿದ್ದ 25 ವರ್ಷದ ಶಾರುಖ್ ಖಾನ್, ಬಾಲಿವುಡ್ ಬಾದ್‌ಶಾನಂತೆ ಕ್ರಿಕೆಟ್‌ನಲ್ಲೂ ಮಿಂಚುವ ಹಂಬಲದಲ್ಲಿದ್ದಾರೆ. ವಿಂಡೀಸ್ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಅವರಂತೆ ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಶಾರುಖ್ ಅವರಲ್ಲಿದೆ ಎಂದು ಪಂಜಾಬ್ ಕಿಂಗ್ಸ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

    ಕೈಲ್ ಜೇಮಿಸನ್
    ಈ ವರ್ಷ ಮೊದಲ ಬಾರಿ ಐಪಿಎಲ್ ಆಡಲಿರುವ ಆಟಗಾರರ ಪೈಕಿ ಅತ್ಯಧಿಕ ಸಂಭಾವನೆ ಹೊಂದಿರುವವರು ನ್ಯೂಜಿಲೆಂಡ್‌ನ ಲಂಬೂ ವೇಗದ ಬೌಲಿಂಗ್ ಆಲ್ರೌಂಡರ್ ಕೈಲ್ ಜೇಮಿಸನ್. ಕಳೆದ ಹರಾಜಿನಲ್ಲಿ 15 ಕೋಟಿ ರೂ.ಗೆ ಆರ್‌ಸಿಬಿ ತಂಡ ಸೇರಿದ್ದಾರೆ. 6.8 ಅಡಿ ಎತ್ತರದ ಜೇಮಿಸನ್, ನ್ಯೂಜಿಲೆಂಡ್‌ನ ಸೂಪರ್ ಸ್ಮ್ಯಾಷ್ ಟಿ20 ಟೂರ್ನಿಯಲ್ಲಿ 4 ಓವರ್‌ಗಳ ದಾಳಿಯಲ್ಲಿ 7 ರನ್‌ಗೆ 6 ವಿಕೆಟ್ ಕಬಳಿಸಿದ್ದರು. 26 ವರ್ಷದ ಜೇಮಿಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಆಡಿರುವ 18 ಪಂದ್ಯಗಳಲ್ಲಿ 44 ವಿಕೆಟ್ ಕಬಳಿಸಿದ್ದು, ಆರ್‌ಸಿಬಿಗೂ ‘ಮ್ಯಾಚ್ ವಿನ್ನರ್’ ಆಗುವ ನಿರೀಕ್ಷೆ ಇಡಲಾಗಿದೆ.

    ಜೇ ರಿಚರ್ಡ್‌ಸನ್
    ಬಿಗ್ ಬಾಷ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ ತಂಡದ ಪ್ರಮುಖ ಅಸವಾಗಿದ್ದ ಜೇ ರಿಚರ್ಡ್‌ಸನ್ ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಅಂಥದ್ದೇ ಮಾರಕ ದಾಳಿ ಸಂಘಟಿಸುವ ಹಂಬಲದಲ್ಲಿದ್ದಾರೆ. 1.5 ಕೋಟಿ ರೂ. ಮೂಲಬೆಲೆಯಿಂದ ಸರಿಸುಮಾರು 10 ಪಟ್ಟು ಅಧಿಕ ಅಂದರೆ, 14 ಕೋಟಿ ರೂ.ಗೆ ಪಂಜಾಬ್ ಸೇರಿರುವ ಬಲಗೈ ವೇಗಿ ಜೇ ರಿಚರ್ಡ್‌ಸನ್, 2019ರಲ್ಲಿ ಆಸೀಸ್ ತಂಡದ ಭಾರತ ಪ್ರವಾಸದಲ್ಲಿ ಸಾಕಷ್ಟು ಗಮನಾರ್ಹ ನಿರ್ವಹಣೆ ತೋರಿದ್ದರು. ಆಸೀಸ್ ಪರ ಆಡಿದ 29 ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸಿದ ಬಲಿಷ್ಠ ದಾಖಲೆಯನ್ನೂ ಹೊಂದಿದ್ದಾರೆ.

    ಮೊಹಮದ್ ಅಜರುದ್ದೀನ್
    ಈ ಕ್ರಿಕೆಟಿಗನ ಹೆಸರು ಕೇಳಿದರೆ ತಟ್ಟನೆ ನೆನಪಾಗುವುದು ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮದ್ ಅಜರುದ್ದೀನ್. ಅದೇ ಹೆಸರಿದ್ದರೂ, ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಹೆಸರು ಮಾಡಲು ಹೊರಟಿರುವವರು ಕೇರಳದ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಮೊಹಮದ್ ಅಜರುದ್ದೀನ್. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಲಿಷ್ಠ ಮುಂಬೈ ವಿರುದ್ಧ 54 ಎಸೆತಗಳಲ್ಲೇ 137 ರನ್ ಸಿಡಿಸಿದ ಬೆನ್ನಲ್ಲೇ 27 ವರ್ಷದ ಅಜರುದ್ದೀನ್ 20 ಲಕ್ಷ ರೂ. ಮೂಲಬೆಲೆಗೆ ಆರ್‌ಸಿಬಿ ಪಾಲಾಗಿದ್ದರು. ಕಾಸರಗೋಡಿನ ಈ ಕ್ರಿಕೆಟಿಗ ಐಪಿಎಲ್‌ನಲ್ಲಿ ಕನ್ನಡಿಗರ ಮನಗೆಲ್ಲುವ ಹಂಬಲದಲ್ಲಿದ್ದಾರೆ..

    ಈ ಸ್ಟಾರ್ ಕ್ರಿಕೆಟಿಗರಿಗೆ ಇದುವೇ ಕೊನೆಯ ಐಪಿಎಲ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts