More

    ಬಾಕ್ಸ್‌ಗಳಲ್ಲಿದ್ದಿದ್ದು ಸ್ಫೋಟಕವಲ್ಲ, ಅಡುಗೆ ಉಪ್ಪು !

    ಶಿವಮೊಗ್ಗ: ನಗರದ ಮುಖ್ಯ ರೈಲ್ವೆ ನಿಲ್ದಾಣದ ಕಂಪೌಂಡ್ ಬಳಿ ಭಾನುವಾರ ಮಧ್ಯಾಹ್ನ ಅನುಮಾಸ್ಪಾದವಾಗಿ ಪತ್ತೆಯಾಗಿದ್ದ ಎರಡು ಬಾಕ್ಸ್ (ಟ್ರಂಕ್)ಗಳನ್ನು ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳ ತಡರಾತ್ರಿ ತೆರೆಯುವಲ್ಲಿ ಯಶಸ್ವಿಯಾಗಿದ್ದು ಅವುಗಳಲ್ಲಿ ಯಾವುದೇ ಸ್ಫೋಟಕ ವಸ್ತುಗಳಿರಲಿಲ್ಲ. ಬದಲಿಗೆ ಅಡುಗೆಗೆ ಬಳಸುವ ಉಪ್ಪು ಇತ್ತೆಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ನಡುವೆ ಬಾಕ್ಸ್‌ಗಳನ್ನಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಬೆಂಗಳೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ದಳದ ಆರು ಸಿಬ್ಬಂದಿ ವಿಶೇಷ ಸ್ಫೋಟ ನಿರೋಧಕ ಸೂಟ್ ಧರಿಸಿ ಪರಿಶೀಲನೆಗೆ ಮುಂದಾದರು. ಈ ವೇಳೆಗೆ ಮಳೆ ಶುರುವಾದ ಕಾರಣ ಪರಿಶೀಲನೆಗೆ ಅಡ್ಡಿಯಾಯಿತು. ಬೆಳಗಿನಜಾವದವರೆಗೂ ಸುರಿಯುವ ಮಳೆ ಲೆಕ್ಕಿಸದೇ ಬಾಕ್ಸ್‌ಗಳಲ್ಲಿ ಸ್ಫೋಟಕ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಬಾಕ್ಸ್ ಲಾಕ್‌ಗಳ ಮೇಲೆ ಸಣ್ಣ ಪ್ರಮಾಣದ ಸ್ಫೋಟಕಗಳನ್ನು ಇರಿಸಿ ಸ್ಫೋಟಿಸಲಾಯಿತು.
    ಅನುಮಾನಾಸ್ಪದ ಬಾಕ್ಸ್‌ಗಳ ಕುರಿತು ತಜ್ಞರ ತಂಡ ಪರಿಶೀಲಿಸಿದಾಗ ಕೆಲವು ರದ್ದಿ ವಸ್ತುಗಳು ಪತ್ತೆಯಾಗಿವೆ. ಬಾಕ್ಸ್‌ಗಳಲ್ಲಿ ಯಾವುದೇ ಸ್ಪೋಟಕ ವಸ್ತು ಇರಲಿಲ್ಲ. ಅವುಗಳನ್ನು ಸ್ಥಳದಿಂದ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅದು ಅಡುಗೆಗೆ ಬಳಸುವ ಉಪ್ಪು ಎಂದು ತಿಳಿದುಬಂದಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
    ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್‌ಗಳನ್ನು ತೆರೆಯಲು ಬಾಂಬ್ ನಿಷ್ಕ್ರಿಯ ದಳ ಸ್ಫೋಟಕ ಬಳಕೆ ಮಾಡಿತು. ಬಾಕ್ಸ್‌ಗಳನ್ನು ತೆರೆಯಲು ಪ್ರತ್ಯೇಕವಾಗಿ ಸ್ಫೋಟ ನಡೆಸಲಾಯಿತು. ಬಾಕ್ಸ್‌ಗಳ ಕುರಿತು ತೀವ್ರ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಬಾಕ್ಸ್‌ಗಳಿಗೆ ಹಾಕಿದ್ದ ಬೀಗಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ಫೋಟಿಸಿ ತೆರೆಯಲಾಗಿದೆ ಎಂದಿದ್ದಾರೆ.
    ಸ್ಫೋಟಕ ಅಳವಡಿಸಿ ರಾತ್ರಿ 2.40ಕ್ಕೆ ಮೊದಲ ಬಾರಿ ಸ್ಫೋಟಿಸಿ ಒಂದು ಬಾಕ್ಸ್ ತೆರೆಯಲಾಯಿತು. ಅದರಲ್ಲಿ ಕೆಲವು ನ್ಯೂಸ್ ಪೇಪರ್‌ಗಳು, ಬಿಳಿ ಬಣ್ಣದ ಪೌಡರ್ ಇರುವ ಪ್ಯಾಕೆಟ್ ದೊರೆತಿದೆ. ರಾತ್ರಿ 3.24ಕ್ಕೆ ಎರಡನೇ ಬಾರಿ ಸ್ಫೋಟಿಸಿ ಮತ್ತೊಂದು ಬಾಕ್ಸ್ ತೆಗೆಯಲಾಯಿತು. ಅದರಲ್ಲಿಯೂ ನ್ಯೂಸ್ ಪೇಪರ್ ಮತ್ತು ಬಿಳಿ ಬಣ್ಣದ ಪೌಡರ್ ದೊರೆತಿದೆ. ಟ್ರಂಕ್ ಮತ್ತು ಬಿಳಿ ಬಣ್ಣದ ಪೌಡರ್ ಇರುವ ಚೀಲಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದಿದೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts