More

    ಆರೋಗ್ಯಕ್ಕೆ ಯಾವ ಊಟದ ಪಾತ್ರೆ ಉತ್ತಮ?

    ಆರೋಗ್ಯಕ್ಕೆ ಯಾವ ಊಟದ ಪಾತ್ರೆ ಉತ್ತಮ?ಜಗತ್ತು ವೇಗವಾಗಿ ಮುನ್ನುಗ್ಗುತ್ತಿದೆ. ಪ್ರತಿನಿತ್ಯ ಸೇವಿಸುವ ಆಹಾರದ ವಿಷಯದಲ್ಲಿ ಸಮಗ್ರ ವಿವೇಚನೆ ನಡೆಸಲೂ ಸಮಯ ಇಲ್ಲದಾಗಿದೆ. ಹಲವು ಪದಾರ್ಥಗಳನ್ನು ಒಟ್ಟಾಗಿ ಬೇಯಿಸಿದಾಕ್ಷಣ ಅದೊಂದು ಉತ್ತಮ ಆಹಾರದ್ರವ್ಯ ಎನಿಸುವುದಿಲ್ಲ. ಆಹಾರವ್ಯಂಜನದ ತಯಾರಿಯಲ್ಲಿ ಅನೇಕ ಆಯಾಮಗಳಿವೆ. ಅವನ್ನು ಅರಿತು ಅರಗಿಸಿಕೊಂಡರಷ್ಟೇ ನಮ್ಮಿಂದಲೂ ನಳಪಾಕ ಸಾಧ್ಯ. ಅಂತೆಯೇ ಸಿದ್ಧವಾದ ಆಹಾರವನ್ನು ಬಾಯಿಗೆ ತುರುಕಿದಾಕ್ಷಣ ಅದು ಉತ್ತಮ ಭೋಜನವೆನಿಸದು. ಆಯುರ್ವೆದದಲ್ಲಿ ಆಹಾರಸೇವನಾವಿಧಿಯನ್ನು ಹೇಳಲಾಗಿದೆ. ಆಹಾರ ಸೇವಿಸಲು ಬಳಸುವ ಬಟ್ಟಲು, ತಟ್ಟೆ, ಪಾತ್ರೆಗಳೂ ಅವುಗಳದೇ ಆದ ಗುಣಗಳಿಂದ ಆಹಾರದ ಗುಣದ ಮೇಲೆ ಪ್ರಭಾವ ಬೀರುತ್ತವೆ! ಆಹಾರ ಸಿದ್ಧಪಡಿಸುವಾಗ ಪಾತ್ರೆಗಳು ಬಿಸಿಯಾಗುವುದೂ ಸೇರಿದಂತೆ ಅನೇಕ ವಿಚಾರಗಳು ಒಳಗೊಳ್ಳುವುದರಿಂದ ಹಾಗೂ ಆಹಾರದ್ರವ್ಯದ ತಯಾರಿಯ ಅವಧಿಯೂ ತುಸು ಹೆಚ್ಚಾಗಿರುವುದರಿಂದ ಪಾತ್ರೆಯ ಗುಣಮಟ್ಟ ಆಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ಅಷ್ಟೇನೂ ಸೋಜಿಗ ಎನಿಸುವುದಿಲ್ಲ. ಕ್ಷಣಕಾಲ ಮಾತ್ರ ಬಟ್ಟಲಿಗೆ ಬಡಿಸಿಟ್ಟು ಆಹಾರ ಸೇವಿಸುವುದರಿಂದ ಆ ಸಮಯದಲ್ಲೂ ಪಾತ್ರೆಯ ಗುಣಗಳಿಂದಾಗಿ ಆಹಾರದ ಗುಣವೇ ಬದಲಾಗುತ್ತದೆ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

    ಇಂದು ಎಲ್ಲೆಡೆ ಸ್ಟೀಲ್, ಅಲ್ಯೂಮಿನಿಯಂ, ಪಿಂಗಾಣಿ, ಪ್ಲಾಸ್ಟಿಕ್, ಸಿರಾಮಿಕ್, ಗಾಜು, ಕಂಚು, ಹಿಂಡಾಲಿಯಂ, ಹಲವು ಮರಗಳ ಎಲೆಗಳು ಹಾಗೂ ಮಣ್ಣಿನ ತಟ್ಟೆಗಳನ್ನು ಊಟ ಅಥವಾ ತಿಂಡಿ ಸೇವನೆಗೆ ಬಳಸುವುದು ರೂಢಿಯಲ್ಲಿದೆ. ನೀರು, ಪಾನೀಯ, ಹಣ್ಣಿನ ರಸ, ಕಾಫಿ, ಟೀ ಹಾಗೂ ಕಷಾಯ ಸೇವನೆಗೂ ಇವುಗಳಿಂದಲೇ ತಯಾರಿಸಿದ ಲೋಟಗಳು ಅಥವಾ ಎಲೆಯಿಂದ ಮಾಡಿದ ದೊನ್ನೆಯ ಬಳಕೆಯೂ ನಾನಾ ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ. ಜೀವನಪರ್ಯಂತ ಪ್ರತಿನಿತ್ಯ ಇವುಗಳ ಬಳಕೆ ಮಾಡುವುದರಿಂದ ಆರೋಗ್ಯದ ವಿಚಾರದಲ್ಲಿ ಯಾವುದನ್ನು ಬಳಸಿದರೆ ಉತ್ತಮ ಎಂದು ವಿಮಶಿಸುವುದೂ ಅನಿವಾರ್ಯವಾಗುತ್ತದೆ. ಪ್ರಚಲಿತದಲ್ಲಿದೆ ಎಂಬ ಕಾರಣಕ್ಕಾಗಿಯೇ ಅವುಗಳನ್ನು ಉಪಯೋಗಿಸುವುದು ಅವೈಜ್ಞಾನಿಕ ಎಂಬುದು ಪ್ಲಾಸ್ಟಿಕ್ ಬಳಕೆಯಿಂದ ಜಗಜ್ಜಾಹೀರಾಗಿದೆ. ಆಯುರ್ವೆದವನ್ನು ಮನನ ಮಾಡಿಕೊಂಡರೆ ಮೂಲ ಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರಗಳ ತಟ್ಟೆ-ಲೋಟಗಳ ಉಪಯೋಗಕ್ಕೆ ಪ್ರಾಶಸ್ತ್ಯ ನೀಡಲಾಗಿದೆ! ಚಿನ್ನವು ದೇಹಕ್ಕೆ ತಂಪನ್ನುಂಟುಮಾಡುತ್ತದೆ. ಬಾಯಿರುಚಿ ಹೆಚ್ಚಿಸುತ್ತದೆ, ಬಲಪ್ರದವಾಗಿದೆ, ಗುರುಗುಣ ಹೊಂದಿದ್ದು ರೋಗನಿರೋಧಕ ಶಕ್ತಿ ವರ್ಧಿಸುವ ರಸಾಯನವಾಗಿದೆ. ತ್ವಚೆಗೆ ಕಾಂತಿ ತರುವುದಲ್ಲದೆ ವಿಷ, ಉನ್ಮಾದ, ತ್ರಿದೋಷಗಳಿಂದ ಉಂಟಾಗುವ ಜ್ವರವನ್ನೂ ಗುಣಪಡಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸುವ ಹಾಗೂ ಉಲ್ಲಾಸಗೊಳಿಸುವ ಶಕ್ತಿಯೂ ಚಿನ್ನಕ್ಕಿದೆ. ಇದು ಕೇವಲ ಅದರ ಭೌತಿಕ ಬೆಲೆಯಿಂದಾಗಿ ಅಲ್ಲ. ಅದರ ಗುಣಧರ್ಮವೇ ಹಾಗೆ. ಏಳು ಧಾತುಗಳ ಪೋಷಣೆಯನ್ನೂ ಮಾಡುತ್ತದೆ. ಬುದ್ಧಿಕಾರಕವಾಗಿದ್ದು ಆಹಾರದ ಗುಣ ಹೆಚ್ಚಿಸುತ್ತದೆ. ಶಾಸ್ತ್ರಗಳ ಪ್ರಕಾರವೂ ಈ ವಿಚಾರದಲ್ಲಿ ಸುವರ್ಣಕ್ಕೇ ಅಗ್ರಸ್ಥಾನ. ಆದರೆ ಚಿನ್ನದ ದುಬಾರಿ ಬೆಲೆಯಿಂದಾಗಿ ಬಹುತೇಕ ಜನರಿಗೆ ಇದನ್ನು ಆಶ್ರಯಿಸುವುದು ದೂರದ ಮಾತಾಗುತ್ತದೆ. ನಂತರದ ದ್ವಿತೀಯ ಸ್ಥಾನ ಬೆಳ್ಳಿಯ ಬಟ್ಟಲಿಗೆ! ಹೃದಯಕ್ಕೆ ಹಿತವಾದ ಲೋಹವಿದು. ಪಚನಕ್ರಿಯೆಯನ್ನು ಸರಿಗೊಳಿಸಿ ಆಹಾರ ರುಚಿ ಹೆಚ್ಚಿಸುತ್ತದೆ. ಮನಸ್ಸನ್ನೂ ಶಾಂತಗೊಳಿಸುತ್ತದೆ. ವಿಶೇಷವಾಗಿ ಪಿತ್ತ, ವಾತಗಳನ್ನು ಶಮನ ಮಾಡುವುದಲ್ಲದೆ ತನ್ನ ಯೋಗವಾಹಿ ಗುಣದಿಂದಾಗಿ ಆಹಾರದ್ರವ್ಯದ ಗುಣವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತದೆ. ಆಹಾರ ಸೇವಿಸಿದಾಗ ಮನಸ್ಸನ್ನು ಪ್ರಸನ್ನಗೊಳಿಸುವ ತಾಮ್ರದ ಪಾತ್ರೆಯು ಪಿತ್ತ ಕಡಿಮೆಮಾಡಿ ತಂಪನ್ನು ಉಂಟುಮಾಡುತ್ತದೆ. ರಕ್ತದ ಪೋಷಕವೂ ಹೌದು. ಜಲಪಾತ್ರೆಯಾಗಿ ಬಳಕೆಗೆ ಅತ್ಯಂತ ಪ್ರಶಸ್ತ. ಪ್ರತಿನಿತ್ಯ ಹುಳಿ ಹಾಕಿ ಶುದ್ಧಗೊಳಿಸದಿದ್ದರೆ ಕಿಲುಬುಗಟ್ಟುತ್ತದೆ. ಸ್ವಚ್ಛಗೊಳಿಸುವ ಕೆಲಸ ಕಷ್ಟವಾಗಿರುವುದರಿಂದ ಇಂದಿನ ದಿನಗಳಲ್ಲಿ ಮೂಲೆಗುಂಪಾಗಿದೆ. ಈ ಮೂರು ಲೋಹಗಳನ್ನಷ್ಟೇ ತಿಳಿದುಕೊಂಡು ಯೋಗ್ಯವಾದ ಬಟ್ಟಲ ನಿರ್ಣಯ ಮಾಡುವುದು ತರವಲ್ಲ. ಏಕೆಂದರೆ ಆಯುರ್ವೆದದ ವಿಚಾರಗಳು ನಿಂತ ನೀರಲ್ಲ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts