More

    ಹಸಿರು ಪಟಾಕಿ ಎಂದರೇನು? ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್

    ಬೆಂಗಳೂರು: ಹಸಿರು ಪಟಾಕಿ ಎಂದರೇನು, ಇತರ ಪಟಾಕಿಗೂ, ಹಸಿರು ಪಟಾಕಿಗೂ ಇರುವ ವ್ಯತ್ಯಾಸವೇನೆಂದು ಸ್ಪಷ್ಟಪಡಿಸದಿದ್ದರೆ ಜನರು ಅದನ್ನು ಹೇಗೆ ಗುರುತಿಸುತ್ತಾರೆ?
    ರಾಜ್ಯದಲ್ಲಿ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿ ಆದೇಶಿಸಿರುವ ಸರ್ಕಾರವನ್ನು ಈ ರೀತಿ ಪ್ರಶ್ನಿಸಿರುವ ಹೈಕೋರ್ಟ್, ಹಸಿರು ಪಟಾಕಿ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.

    ಕರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಬಗೆಯ ಪಟಾಕಿ ಮಾರಾಟ ಹಾಗೂ ಬಳಕೆ ನಿಷೇಧಿಸುವಂತೆ ಕೋರಿ ನಗರದ ಚಾರ್ಟರ್ಡ್ ಅಕೌಂಟೆಂಟ್ ಡಾ. ಎ.ಎಸ್. ಭರತ್ ವಿಷ್ಣು ಹಾಗೂ ಸಮರ್ಪಣ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಪಿಐಎಲ್‌ಗಳನ್ನು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್, ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶ ಗೊಂದಲಮಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

    ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ನ.6 ಮತ್ತು 10ರಂದು ಹೊರಡಿಸಿರುವ ಆದೇಶಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದೆ. ಆದರೆ, ಹಸಿರು ಪಟಾಕಿ ಎಂದರೇನು, ಇತರ ಪಟಾಕಿಗೂ ಹಸಿರು ಪಟಾಕಿಗೂ ಇರುವ ವ್ಯತ್ಯಾಸವೇನು ಎಂಬುದನ್ನೇ ಸ್ಪಷ್ಟಪಡಿಸಿಲ್ಲ. ಜನರು ಹಸಿರು ಪಟಾಕಿ ಯಾವುವು ಎಂಬುದನ್ನು ಹೇಗೆ ಗುರುತಿಸುತ್ತಾರೆ. ಹಸಿರು ಪಟಾಕಿ ಹೆಸರಲ್ಲಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಿದರೆ ಅದನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

    ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಪಟಾಕಿಗಳಿಂದ ವಾಯುಮಾಲಿನ್ಯ ಹೆಚ್ಚಿ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರ ಪಟಾಕಿ ಮಾರಾಟ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪೀಠ, ಹಸಿರು ಪಟಾಕಿಯ ಬಗ್ಗೆ ಶುಕ್ರವಾರದೊಳಗೆ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ನ.13ಕ್ಕೆ ಮುಂದೂಡಿತು. ಇದೇ ವೇಳೆ, ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಅಳೆಯಲು ಮತ್ತು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನಿರ್ದೇಶಿಸಿತು.

    ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಬಿ.ಕೆ. ನರೇಂದ್ರ ಬಾಬು ವಾದ ಮಂಡಿಸಿ, ಕರೊನಾ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪಟಾಕಿ ನಿರ್ಬಂಧಿಸಿಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ಪಟಾಕಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಮತ್ತೊಬ್ಬ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ಪಟಾಕಿ ಮಾರಾಟ ಹಾಗೂ ಬಳಕೆ ನಿಷೇಧಿಸಲು ಕೋರಿ ಆ.31ರಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಈಗಾಗಲೇ ಪಟಾಕಿ ಮಾರಾಟಕ್ಕೆ ಸ್ಟಾಲ್ಗಳು ನಿರ್ಮಾಣವಾಗಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts