More

    ಹೀರೋಗಳು ಏನಂತಾರೆ? … ಓಟಿಟಿಯಲ್ಲಿ ಚಿತ್ರ ಬಿಡುಗಡೆಗೆ ಸ್ಟಾರ್‌ಗಳ ನಿಲುವೇನು?

    ಬೆಂಗಳೂರು: ಕನ್ನಡದ ಕೆಲವು ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರು ಬುಧವಾರ ಸಂಜೆ ಒಂದು ಸಭೆ ನಡೆಸಿ, ಚಿತ್ರರಂಗದ ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಸರ್ಕಾರ ಏನಾದರೂ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಟ್ಟುಬಿಟ್ಟರೆ, ನಿರ್ಮಾಪಕರ ನಡೆ ಹೇಗಿರಬೇಕು, ಪರಸ್ಪರ ಕ್ಲಾಶ್ ಆಗದಂತೆ ಚಿತ್ರಗಳನ್ನು ಹೇಗೆ ಬಿಡುಗಡೆ ಮಾಡಬೇಕು ಎಂಬ ವಿಷಯಗಳಲ್ಲಿ ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗಿದ್ದರೂ, ಬಿಗ್ ಬಜೆಟ್ ಚಿತ್ರಗಳನ್ನು ಓವರ್ ದಿ ಟಾಪ್‌ನಲ್ಲಿ (ಓಟಿಟಿ) ನೇರವಾಗಿ ಬಿಡುಗಡೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ ಎಂಬ ಸುದ್ದಿ ಇದೆ.

    ಇಷ್ಟು ದಿನ ಚಿತ್ರಮಂದಿರಗಳ ಬಾಗಿಲು ತೆಗೆಯಲಿ, ಚಿತ್ರಪ್ರದರ್ಶನ ಅಲ್ಲೇ ಆಗಲಿ ಎಂದು ಕಾಯುತ್ತಿದ್ದ ನಿರ್ಮಾಪಕರೆಲ್ಲ ಈಗ ಯಾಕೆ ಓಟಿಟಿ ಕಡೆ ಕಣ್ಣು ಹಾಯಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಪ್ರಮುಖವಾಗಿ, ಮುಂಚೆಲ್ಲಾ ಚಿತ್ರಮಂದಿರಗಳಲ್ಲಿ ಬಾಡಿಗೆ ವ್ಯವಸ್ಥೆ ಇತ್ತು. ಆದರೆ, ಕರೊನಾದಿಂದಾಗಿ ಬಾಡಿಗೆ ಕಟ್ಟುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ, ಇದೀಗ ಹಲವು ಚಿತ್ರಮಂದಿರಗಳಲ್ಲಿ ಶೇಕಡಾವಾರು ಪದ್ಧತಿ ಶುರುವಾಗಿದೆ. ಪ್ರತಿವಾರ ಚಿತ್ರದಿಂದ ಆಗುವ ಒಟ್ಟಾರೆ ಕಲೆಕ್ಷನ್‌ನಲ್ಲಿ ನಿರ್ಮಾಪಕರು ಮತ್ತು ಚಿತ್ರಮಂದಿರದವರು ಫಿಫ್ಟಿ-ಫಿಫ್ಟಿ ಹಂಚಿಕೊಳ್ಳುತ್ತಾರೆ. ಇದು ಸಣ್ಣ ಚಿತ್ರಗಳಿಗೆ ಮಾತ್ರ ಸೂಕ್ತ.

    ಇದನ್ನೂ ಓದಿ: ‘ಸೂರ್ಯವಂಶಿ’ ದಾಖಲೆ ಮುರಿದ ‘ಕೆಜಿಎಫ್​ 2’

    ದೊಡ್ಡ ಬಜೆಟ್ ಅಥವಾ ದೊಡ್ಡ ಸ್ಟಾರ್‌ಗಳ ಚಿತ್ರಗಳಿಗೆ ಕಲೆಕ್ಷನ್ ಸಹ ಹೆಚ್ಚಿರುತ್ತದೆ ಮತ್ತು ಶೇಕಡಾವಾರು ವ್ಯವಸ್ಥೆಯು, ಬಾಡಿಗೆಗಿಂಥ ದುಬಾರಿಯಾಗುತ್ತದೆ ಎಂಬುದು ಹಲವು ನಿರ್ಮಾಪಕರ ವಾದ. ಹಾಗಾಗಿ ಹಳೆಯ ಬಾಡಿಗೆ ವ್ಯವಸ್ಥೆಯೇ ಸೂಕ್ತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಒಂದು ಪಕ್ಷ ಚಿತ್ರಮಂದಿರದವರು ದೊಡ್ಡ ಬಜೆಟ್ ಚಿತ್ರಗಳಿಗೆ ಬಾಡಿಗೆ ವ್ಯವಸ್ಥೆಗೆ ಒಪ್ಪದಿದ್ದರೆ, ಆಗ ಅನಿವಾರ್ಯವಾಗಿ ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ಓಟಿಟಿ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆ ಹಲವು ನಿರ್ಮಾಪಕರದ್ದು. ಈಗಾಗಲೇ ನಿರ್ಮಾಪಕರು ಮತ್ತು ಪ್ರದರ್ಶಕರ ಮಹಾಮಂಡಲದ ನಡುವೆ ಕೆಲವು ದಿನಗಳ ಹಿಂದೆಯೇ ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಿದೆ. ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. ಪ್ರದರ್ಶಕರು ಒಂದು ಪಕ್ಷ ಈ ವಿಷಯದಲ್ಲಿ ತಮ್ಮ ತೀರ್ಮಾನ ಸಡಿಲಿಸದಿದ್ದರೆ, ಆಗ ಓಟಿಟಿ ಬಗ್ಗೆ ಯೋಚಿಸುವುದು ಅನಿವಾರ್ಯವಾಗುತ್ತದೆ ಎಂಬುದು ಹೆಸರು ಹೇಳಲು ಇಚ್ಛಿಸದ ನಿರ್ಮಾಪಕರ ಮಾತು.

    ಕನ್ನಡ ಚಿತ್ರಗಳ ಬಿಡುಗಡೆಗೆ ಮಹಾಮಂಡಲಕ್ಕೆ ಸೇರಿದ ಚಿತ್ರಮಂದಿರಗಳು ಅನುವು ಮಾಡಿಕೊಡುತ್ತಿಲ್ಲ, ನಿರ್ಮಾಪಕರಿಗೆ ಸ್ಪಂದಿಸುತ್ತಿಲ್ಲ ಎಂಬ ಕೆಲವು ನಿರ್ಮಾಪಕರು ಆರೋಪಿಸುವುದರ ಜತೆಗೆ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಅಧ್ಯಕ್ಷ ಓದುಗೌಡರ್ ಅವರಿಗೆ ನೋಟೀಸ್ ಸಹ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾವು ಚಿತ್ರಮಂದಿರ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ. ನಮ್ಮದು ಒಂದೇ ಬೇಡಿಕೆ. ಒಮ್ಮೆ ಚಿತ್ರಪ್ರದರ್ಶನ ಪ್ರಾರಂಭಿಸಿದರೆ, ಅದು ನಿಲ್ಲಬಾರದು. ಜನರಿಲ್ಲ, ಚಿತ್ರಗಳಿಲ್ಲ ಎಂಬ ಕಾರಣಕ್ಕೆ ಚಿತ್ರಮಂದಿರ ಬಂದ್ ಮಾಡುವಂತಾಗಬಾರದು. ಹಾಗಾಗಿ ಚಿತ್ರಗಳನ್ನು ಸತತವಾಗಿ ಪೂರೈಸಿ ಎಂದು ಕೇಳಿದ್ದೇವೆ. ಇನ್ನು, ಚಿತ್ರಮಂದಿರ ಕೊಡದಿದ್ದರೆ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತೀವಿ ಎಂದರೆ ಅದು ಅವರಿಷ್ಟ. ಅವರ ಚಿತ್ರಗಳನ್ನು ಎಲ್ಲಿ ಹೇಗೆ ತೋರಿಸಬೇಕು ಎಂಬುದು ಅವರ ನಿರ್ಧಾರ. ಓಟಿಟಿಯೇ ಸೂಕ್ತ ಎಂದೆನಿಸಿದರೆ, ಅಲ್ಲೇ ಬಿಡುಗಡೆ ಮಾಡುವ ಎಲ್ಲಾ ಸ್ವಾತಂತ್ರ್ಯ ಅವರಿಗಿದೆ’ ಎನ್ನುತ್ತಾರೆ ಓದುಗೌಡರ್.

    ಇದನ್ನೂ ಓದಿ: ಕೆಜಿಎಫ್ 2 ಟೀಸರ್ ಸರಣಿ ದಾಖಲೆ!

    ಆದರೆ, ಚಿತ್ರಗಳನ್ನು ಬಿಡುಗಡೆ ಮಾಡುವ ವಿಷಯವಾಗಿ ನಿರ್ಮಾಪಕರೇ ಒಮ್ಮತದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಸ್ಟಾರ್ ನಟರು, ನಿರ್ದೇಶಕರ ಅನಿಸಿಕೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಹಾಗಾಗಿ ಸಮಾಲೋಚನೆ ಮಾಡಿ ನಂತರ ತೀರ್ಮಾನಕ್ಕೆ ಬರುವ ಮಾತಾಗಿದೆಯಂತೆ. ಈ ವಿಷಯಕ್ಕೆ ಸ್ಟಾರ್ ನಟರು ಒಪ್ಪುತ್ತಾರಾ? ಆ ಬಗ್ಗೆ ಸಂಶಯವಿದೆ. ಈಗಾಗಲೇ, ದರ್ಶನ್, ಪುನೀತ್, ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರು ಚಿತ್ರಮಂದಿರಗಳು ಎನ್ನುವುದು ಚಿತ್ರಪ್ರದರ್ಶನಕ್ಕೆ ಎಷ್ಟು ಮುಖ್ಯ ಎಂದು ಕೆಲವು ಸಂದರ್ಭಗಳಲ್ಲಿ ಮಾತಾಡಿದ್ದಾರೆ. ಚಿತ್ರಮಂದಿರಗಳೆಂದರೆ ಪ್ರೇಕ್ಷಕರ ಪಾಲಿನ ದೇವಸ್ಥಾನಗಳಿದ್ದಂತೆ ಎಂದು ಹೇಳಿದ್ದಾರೆ. ಹೀಗಿರುವಾಗ ಚಿತ್ರಮಂದಿರಗಳನ್ನು ಬಿಟ್ಟು ಓಟಿಟಿಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಅವರೆಲ್ಲಾ ಒಪ್ಪುತ್ತಾರಾ ಎಂಬುದು ಎಲ್ಲರ ಪ್ರಶ್ನೆ. ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಬಜೆಟ್ ಚಿತ್ರಗಳ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ. ಏಪ್ರಿಲ್ ಒಂದಕ್ಕೆ ‘ಯುವರತ್ನ’ ಬಿಡುಗಡೆಯಾಗಲಿದ್ದು, ಅಲ್ಲಿಂದ ಮೂರು ವಾರಗಳ ಗ್ಯಾಪ್‌ನಲ್ಲಿ ಸ್ಟಾರ್ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನೂ ಸಮಯವಿರುವುದರಿಂದ ನಿರ್ಮಾಪಕರು ಮತ್ತು ಪ್ರದರ್ಶಕರು ಈ ವಿಷಯವನ್ನು ಬಗೆಹರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ.

    ಶಕುಂತಲೆಯಾದ ಸಮಂತಾ ಅಕ್ಕಿನೇನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts